Vehicle Loan: ವಾಹನ ಮಾಲೀಕರಿಗೆ ಗುಡ್‌ನ್ಯೂಸ್: ಸಾಲ ಪ್ರಕ್ರಿಯೆ, ಆರ್‌ಸಿ ಅಪ್ಡೇಟ್‌ಗೆ ಇನ್ಮುಂದೆ ಆನ್‌ಲೈನ್ ವ್ಯವಸ್ಥೆ
Vehicle Loan: ವಾಹನಗಳನ್ನು ಸಾಲದ ಮೇಲೆ / ಇಎಂಐ ಮೂಲಕ ಖರೀದಿ ಮಾಡುವ ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ವಾಹನ ಸಾಲ ತೀರಿಸಿದ ನಂತರ ಆರ್‌ಸಿ ಯಿಂದ ಹೈಪೋಥೆಕೇಶನ್ ಎನ್ನುವ ಅಂಶವನ್ನು ತೆಗೆದುಹಾಕುವ ಪ್ರಕ್ರಿಯೆ ಈಗ ಸ್ವಯಂಚಾಲಿತ ಆನ್‌ಲೈನ್ ವ್ಯವಸ್ಥೆಯ ಮೂಲಕ ನಡೆಯಲಿದೆ. ಇದರಿಂದ ವಾಹನದ ಮಾಲೀಕರು ಬ್ಯಾಂಕ್ ಹಾಗೂ ಆರ್‌ಟಿಒ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಇನ್ಮುಂದೆ ಬ್ಯಾಂಕ್‌ಗಳು ನೇರವಾಗಿ NOC ನೀಡಲಿವೆ. ಅಲ್ಲದೆ Vahan ಅಪ್ಲಿಕೇಷನ್ ವ್ಯವಸ್ಥೆ ಮೂಲಕ ಆರ್‌ಸಿ ವಿವರಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತವೆ. ಈ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಮಾರ್ಚ್ 1ರಿಂದ ಪ್ರಾರಂಭಿಸಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ.
ವಾಹನಗಳ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ನಂತರ ಆರ್‌ಸಿ (Registration Certificate) ಯಿಂದ ಹೈಪೋಥೆಕೇಶನ್ (Hypothecation) ತೆಗೆದುಹಾಕುವ ಪ್ರಕ್ರಿಯೆ ಈಗ ಸ್ವಯಂಚಾಲಿತ ಆನ್‌ಲೈನ್ ವ್ಯವಸ್ಥೆಯ ಮೂಲಕ ನಡೆಯಲಿದೆ. ಇದರಿಂದ ವಾಹನವನ್ನು ಸಾಲದ ಮೇಲೆ ಖರೀದಿ ಮಾಡಿದ್ದ ವಾಹನದ ಮಾಲೀಕರು ಬ್ಯಾಂಕ್ ಮತ್ತು ಆರ್‌ಟಿಒ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ತಪ್ಪಲಿದೆ. ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಹೊಸ ವ್ಯವಸ್ಥೆಯನ್ನು ಮಾರ್ಚ್ 1ರಿಂದ ಜಾರಿಗೆ ತಂದಿದೆ. ಆರಂಭದಲ್ಲಿ ಒಂದು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಐದು ಎನ್‌ಬಿಎಫ್‌ಸಿ (NBFC) ಸಂಸ್ಥೆಗಳೊಂದಿಗೆ ಈ ವ್ಯವಸ್ಥೆಯನ್ನು ಸಂಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿ ಹಲವು ಬ್ಯಾಂಕ್‌ಗಳನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ.

ಈ ಹಿಂದೆ ಹೇಗಿತ್ತು ವ್ಯವಸ್ಥೆ
ಈ ಹಿಂದಿನ ವ್ಯವಸ್ಥೆಯಲ್ಲಿ ವಾಹನ ಸಾಲ ತೀರಿಸಿದ ನಂತರ ಬ್ಯಾಂಕ್‌ನಿಂದ ದಾಖಲೆಗಳನ್ನು ಪಡೆದುಕೊಂಡು ಆ ದಾಖಲೆಗಳನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಬೇಕಾಗಿತ್ತು. ಈ ಹಂತದಲ್ಲಿ ಹಲವು ಬಾರಿ ಕಚೇರಿಗಳಿಗೆ ಭೇಟಿ ನೀಡಬೇಕಾದ ಅವಶ್ಯಕತೆ ಇತ್ತು. ಆದರೆ ಇದೀಗ ಈ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದ್ದು, ಆನ್‌ಲೈನ್‌ನ ಮೂಲಕವೇ ಆಗಲಿದೆ. ಈ ಹೊಸ ವ್ಯವಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್‌ನ Unified Lending Interface (ULI) ಮೂಲಕ ಹಾಗೂ ಸರ್ಕಾರದ ವಾಹನ್ (Vahan) ಪೋರ್ಟಲ್ ಮತ್ತು ಇತರ ವ್ಯವಸ್ಥೆಗಳ ನಡುವೆ ಸುರಕ್ಷಿತ ಡೇಟಾ ವಿನಿಮಯವನ್ನು ಒಳಗೊಂಡಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಹನ ಮಾಲೀಕರಿಗೆ Vahan ಮೂಲಕ ಎಸ್‌ಎಂಎಸ್ ಸಂದೇಶ ಬರಲಿದೆ.
ಎನ್‌ಒಸಿ ಸುಲಭ
ಇನ್ನು ವಾಹನ ಸವಾರರಿಗೆ ಸಾಲದ ಮೇಲೆ ವಾಹನಗಳನ್ನು ಖರೀದಿಸಿ ಹಾಗೂ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ನಂತರ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಸಿಗುವುದು ಅತ್ಯಂತ ಸುಲಭವಾಗಲಿದೆ. ಹೊಸ ವ್ಯವಸ್ಥೆಯ ಪ್ರಕಾರ, ಸಾಲ ತೀರಿಸಿದ ನಂತರ ಬ್ಯಾಂಕ್ ನೇರವಾಗಿ ವಾಹನ ಮಾಲೀಕರಿಗೆ ಎನ್‌ಒಸಿ ನೀಡುತ್ತದೆ. ಅದೇ ಸಮಯದಲ್ಲಿ ವಾಹನದ ನೋಂದಣಿ ವಿವರಗಳಲ್ಲಿ ಹೈಪೋಥೆಕೇಶನ್ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಚೋಳಮಂಡಲಂ, ಶ್ರೀರಾಮ್ ಫೈನಾನ್ಸ್, ಸುಂದರಂ ಫೈನಾನ್ಸ್ ಮುಂತಾದ ಐದು NBFC ಸಂಸ್ಥೆಗಳು ಈ ವ್ಯವಸ್ಥೆಯನ್ನು ಆರಂಭಿಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳನ್ನು ಇದಕ್ಕೆ ಸೇರಿಸುವ ಉದ್ದೇಶ ಇದೆ.












Click it and Unblock the Notifications