• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರವಿಚಿತ್ರ ಕನಸುಗಳ ವಿಸ್ಮಯ ಲೋಕ! ನಿಜವೋ ಭ್ರಾಂತಿಯೋ?

By ಪೂಜಾ ಗುಜರನ್
|

ಬೆಳ್ಳಂ ಬೆಳ್ಳಗ್ಗೆನೇ ತಲೆ ಎಲ್ಲ ಧೀಂ ಅನ್ನುತ್ತಿತ್ತು. ರಾತ್ರಿಯೆಲ್ಲ ಯಾವುದೋ ಕನಸುಗಳ ಹಾವಳಿ. ಮುಂಜಾವಿನ ತನಕ ನಿರಂತರವಾಗಿತ್ತು. ಭಯಂಕರವೋ ವಿಚಿತ್ರವೋ ಅನಿಸುವಂತಹ ಕನಸುಗಳವು. ತಟ್ಟನೆ ಎಚ್ಚರವಾದವಳಿಗೆ ಅದಷ್ಟು ಹೊತ್ತು ನಾನು ಕನಸಲ್ಲಿದ್ದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಹೊತ್ತು ಬೇಕಾಯಿತು. ಅರೇ ಇದೆಂತಹ ಕನಸು ಮನಸ್ಸನ್ನೆಲ್ಲ ರಾಡಿ ಮಾಡಿ ನೆಮ್ಮದಿಯ ನಿದ್ದೆಯನ್ನು ಹಾಳು ಮಾಡಿತಲ್ಲ ಅಂತ ಕನಸಿಗೆ ಹಿಡಿ ಶಾಪವನ್ನು ಹಾಕಿದ್ದೆ.

ಕನ್ನಡಿ ಮುಂದೆ ನಿಂತಾಗ ಕಣ್ಣುಗಳು ಕೂಡ ಬಳಲಿದಂತೆ ಕಾಣುತ್ತಿತ್ತು. ಅಂದರೆ ಈ ಕನಸು ಬಿದ್ದಾಗ ನಾನು ಮಾನಸಿಕವಾಗಿ ಮಾತ್ರ ಅಲ್ಲ ದೈಹಿಕವಾಗಿ ಕೂಡ ನರಳಿದ್ದೆ ಅನ್ನುವುದನ್ನು ತೋರಿಸುತ್ತಿತ್ತು. ಈ ಕನಸುಗಳೇಕೆ ಇಷ್ಟೊಂದು ಕಾಡುತ್ತವೆ ಅನ್ನುವುದೇ ಕೆಲವೊಮ್ಮೆ ನನಗೆ ಯಕ್ಷಪ್ರಶ್ನೆಯಾಗಿ ಉಳಿದುಬಿಡುತ್ತದೆ.

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

ಕನಸುಗಳು ವಿಚಿತ್ರವಾಗಿರುತ್ತೆ ನಿಜಾ. ಆದರೆ ಕನಸುಗಳಂತೆ ವಾಸ್ತವವೂ ಘಟಿಸಿದರೆ...? ಆಗ ಈ ಕನಸಿನ ಬಗ್ಗೆ ಚಿಂತಿಸಲೇಬೇಕಾಗುತ್ತದೆ. ಸಾಮಾನ್ಯವಾಗಿ ಕನಸುಗಳು ಎಲ್ಲರಿಗೂ ಬೀಳುತ್ತದೆ. ಒಂದತ್ತು ನಿಮಿಷ ಮಲಗಿದರೂ ಆ ಅರೆಬರೆ ನಿದ್ರೆಯಲ್ಲಿಯೂ ಏನೇನೋ ಕನಸುಗಳು ನಮ್ಮ ಸುಪ್ತಮನಸ್ಸುಗಳಲ್ಲಿ ಮೂಡಿರುತ್ತವೆ.

ಕನಸುಗಳು ಹಲವಾರು ಇರಬಹುದು. ಎಲ್ಲರಿಗೂ ಒಂದೇ ರೀತಿಯ ಕನಸುಗಳು ಬೀಳುತ್ತವೆ ಎಂದು ಹೇಳಲು ಸಾಧ್ಯವಾಗದು. ಕನಸುಗಳು ಅಂಧರ ಪಾಲಿಗೂ ಇರುತ್ತವೆ, ಆದರೂ ಎಷ್ಟೋ ಸಲ ಆದಷ್ಟು ಕನಸುಗಳ ಚಿತ್ರಣ ನಮಗೆ ಎಚ್ಚರ ಆದಮೇಲು ಪುನರಾವರ್ತನೆ ಆದಾಗ ಮಾತ್ರ ಮನಸ್ಸು ಚಿಂತೆಯ ಗೂಡಾಗುತ್ತದೆ.

ಮುಂಜಾನೆಯ ಕನಸುಗಳು ನಿಜಾವಾಗುವುದಿಲ್ಲ, ಅದೆಲ್ಲ ಬರೀ ಮೂಢನಂಬಿಕೆ ಅನ್ನುವವರು ಇದ್ದಾರೆ. ಬರೀ ಮೂಢನಂಬಿಕೆಯೇ ಆಗಿದ್ದರೆ ಇವತ್ತು ಎಲ್ಲವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಯಾರು ಹೋಗುತ್ತಿದ್ದರು? ಬೆಳಗಿನ ಕನಸನ್ನು ನಂಬಿ ಕೊರಗುವುದನ್ನು ಮೌಢ್ಯ ಎಂದು ವಾದಿಸುವವರೂ ಇದ್ದಾರೆ.

ಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರ

ನನ್ನ ಪ್ರಕಾರ ಕನಸೆಂಬುದು ಸುಪ್ತ ಮನಸ್ಸಿಗೆ ಹಿಡಿದ ಕನ್ನಡಿ, ಕೆಲವೊಂದು ಸಾರಿ ನಮಗೆ ಬೀಳುವ ಕನಸು ಭವಿಷ್ಯದ ಮುನ್ಸೂಚನೆಯೂ ಆಗಿರಬಹುದು. ಇನ್ನು ಕೆಲವು ಕನಸುಗಳು ನಮ್ಮ ಮಾನಸಿಕ ಸ್ಥಿತಿಯನ್ನು ಸೂಚಿಸಬಹುದು. ಅದಕ್ಕೆ ನಮಗೆ ಕೆಲವೊಂದು ಕನಸುಗಳು ನೆನಪಿರುವುದಿಲ್ಲ. ಇನ್ನು ಕೆಲವೊಂದು ಕನಸುಗಳು ಗಂಭೀರವಾಗಿ ಕಾಡುತ್ತವೆ.

ಅಂದ್ರೆ ಅದೆಷ್ಟೋ ಜನರ ಸುಪ್ತ ಮನಸ್ಸಿನಲ್ಲಿ ಬಂದ ಕನಸುಗಳು ನಿಜವಾಗಿಯೂ ಘಟಿಸಿರಬಹುದು ಅಲ್ಲವೇ? ಎಲ್ಲ ಕನಸುಗಳು ನಿಜ ಆಗಲೇಬೇಕು ಅಂತಿಲ್ಲ. ಕೆಲವೊಂದು ಘಟನೆಗಳು ನಮ್ಮನ್ನು ಮೊದಲೆ ಎಚ್ಚರಿಸುತ್ತವೆ ಅನ್ನುವುದನ್ನು ನಾನು ಇಲ್ಲಿ ಹೇಳುತ್ತಿದ್ದೇನೆ. ಕೆಲವೊಂದು ಕನಸುಗಳ ವ್ಯಾಖ್ಯಾನ ಒಗಟಾಗಿ ಬಿಡಿಸಲಾಗದ ಯಕ್ಷಪ್ರಶ್ನೆಯಂತೆ ಉಳಿದು ಹೋಗಿರುತ್ತದೆ.

ಉದಾಹರಣೆಗೆ, ಈ ಕನಸಿನಲ್ಲಿ ನಾವು ಎಂದೂ ನೋಡಿರದ ವ್ಯಕ್ತಿಗಳನ್ನು ಕಾಣುತ್ತೇವೆ. ಎಲ್ಲಿಯೂ ಇರದಂತಹ ಜಾಗ ದೇವಸ್ಥಾನ, ಬೆಟ್ಟ ಗುಡ್ಡ, ಉಕ್ಕಿ ಹರಿಯುವ ನೀರು, ವಿಚಿತ್ರವಾಗಿ ಕಾಣುವ ಜನರು, ನಮ್ಮನ್ನೇ ಯಾರೋ ಅಟ್ಟಿಸಿಕೊಂಡು ಬರುವವರು, ನಮಗೆ ಓಡಲು ಆಗದೆ ಅಸಹಾಯಕರಾಗಿ ಬಿದ್ದಂತೆ ಆಗುವ ಅನುಭವಗಳು... ಅಬ್ಬಬ್ಬ ಅನಿಸಿ ಹೃದಯದ ಬಡಿತ ಹೆಚ್ಚಾಗಿ ಬೆಚ್ಚಿ ಬೀಳಿಸುವ ಕನಸುಗಳನ್ನು ಕಾಣುತ್ತೇವೆ. ಇದೆಲ್ಲ ದೀರ್ಘ ಸಮಯದ ಕನಸುಗಳು ಅಸಲಿಗೆ ನಮಗೆ ಎಚ್ಚರ ಆದಾಗ ಮಾತ್ರ ಹೃದಯ ಸಾಮನ್ಯ ಸ್ಥಿತಿಯಲ್ಲಿಯೇ ಇರುತ್ತವೆ.

ಡಬ್ಬ ಮಲ್ಕೊಂಡರ ಕೆಟ್ಟ ಕೆಟ್ಟ ಕನಸ ಬಿಳ್ತಾವ, ಬೆತ್ತಲೆ ಮಲ್ಕೊಂಡರ ದೊಡ್ಡ ಕನಸ ಬೀಳ್ತಾವ! ಡಬ್ಬ ಮಲ್ಕೊಂಡರ ಕೆಟ್ಟ ಕೆಟ್ಟ ಕನಸ ಬಿಳ್ತಾವ, ಬೆತ್ತಲೆ ಮಲ್ಕೊಂಡರ ದೊಡ್ಡ ಕನಸ ಬೀಳ್ತಾವ!

ಈ ಕನಸುಗಳ ಭಾವಾರ್ಥದ ಕುರಿತಾಗಿ ಸುಪ್ರಸಿದ್ದ ಮನಶಾಸ್ತ್ರಜ್ಞರು ಆದ ಸಿಗ್ಮಂಡ್ ಫ್ರಾಯ್ಡ್ ಅವರು ತುಂಬಾ ವ್ಯಾಪಕವಾದ ಅಧ್ಯಯನವನ್ನೇ ಮಾಡಿದ್ದಾರೆ. ಅವರ ಪ್ರಕಾರ ನಾವು ಕಾಣುವ ಕನಸುಗಳು ವಾಸ್ತವವಾಗಿ ನಮ್ಮ ಸುಪ್ತ ಮನಸ್ಸಿಗೆ ಹಾಗೂ ನಮ್ಮೊಳಗಿರುವ ಸುಪ್ತ ಬಯಕೆಗಳ ದೃಶ್ಯರೂಪವಾಗಿರುತ್ತವೆ. ಕನಸುಗಳು ನಮ್ಮ ಮನಸ್ಸಿನ ಸಮತೋಲನವನ್ನು ಕಾಪಾಡಲು ಸಹಾಯವಾಗುತ್ತದೆ ಅನ್ನುವುದು ಅವರ ವಾದ.

ಮನಸ್ಸಿನ ಅತಂಕ ಕನಸುಗಳಲ್ಲಿ ಕಂಡ ನಂತರವೂ ಸುಪ್ತ ಮನಸ್ಸಿನ ಒತ್ತಡವನ್ನು ಕಮ್ಮಿ ಮಾಡದಿದ್ದರೆ ನಾವೂ ನಮ್ಮ ಮಾನಸಿಕ ಸ್ಥಿತಿಯನ್ನು ಕಳೆದುಕೊಂಡು ಕೆಲವೊಮ್ಮೆ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತೇವೆ ಅನ್ನುತ್ತಾರೆ ಫ್ರಾಯ್ಡ್‌. ಅವರು ಬರೆದ ಪುಸ್ತಕ The interpretation of dreams ಈ ಪುಸ್ತಕವೂ ಪ್ರಕಟವಾದ ಎಂಟು ವರುಷಗಳ ನಂತರ ಜನಪ್ರಿಯತೆಯನ್ನು ಗಳಿಸಿತ್ತು.

ಜ್ಯೋತಿಷಿಗಳು ಕನಸುಗಳ ಬಗ್ಗೆ ತಮ್ಮದೇ ಆದ ವಿವರಣೆಗಳನ್ನು ನೀಡುತ್ತಾರೆ. ನಾವೂ ಕನಸಲ್ಲಿ ಕಾಣುವ ಪ್ರತಿಯೊಂದಕ್ಕೂ ಅದರದೇ ಆದ ಅರ್ಥವನ್ನು ಕೊಡುತ್ತಾರೆ.

ತಾತಾ, ಆ ಸಾಫ್ಟ್ ಕರ್ಚೀಫು ನನಗೆ ಮಾರ್ತೀರಾ?ತಾತಾ, ಆ ಸಾಫ್ಟ್ ಕರ್ಚೀಫು ನನಗೆ ಮಾರ್ತೀರಾ?

ಹಾವನ್ನು ಕಂಡರೆ ಅಪಮೃತ್ಯುವಿನ ಭಯವೆಂದು ಹೇಳುತ್ತಾರೆ. ಪ್ರೇತ ಪಿಶಾಚಿಯ ಕನಸು ಬಿದ್ದರೆ ಆ ವ್ಯಕ್ತಿಯೂ ಬಲುಬೇಗನೆ ಇನ್ನೊಂದು ಹೊಸ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾನೆ ಎನ್ನುತ್ತಾರೆ. ಇನ್ನು ಮುಂಗುಸಿಯ ಕನಸು ಬಿದ್ದರೆ ಅದು ಶುಭ ಶಕುನವಂತೆ! ಹೆಣವನ್ನು ಕಂಡರೆ, ಇಲ್ಲ ನಾವೇ ಸತ್ತಂತೆ ಕನಸು ಬಿದ್ದರೆ ನಮಗೆ ಆಯುಷ್ಯ ವೃದ್ಧಿಸುತ್ತದೆ ಎಂದು ವ್ಯಾಖ್ಯಾನಿಸುವವರೂ ಇದ್ದಾರೆ.

ಇನ್ನು ನಾವು ದೇವಸ್ಥಾನದ ಕನಸು ಕಂಡರೆ ನಾವು ಹೇಳಿದ ಯಾವುದೋ ಹರಕೆ ಬಾಕಿ ಇದ್ದು ಇದನ್ನು ನೆನಪಿಸುವ ಸಲುವಾಗಿ ಇಂತಹ ಕನಸುಗಳು ಬೀಳುತ್ತದೆಯಂತೆ.
ಹೀಗೆ ಒಂದೊಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ನಾವು ಕಾಣುವ ಒಂದೊಂದು ಕನಸುಗಳಿಗೆ ಒಂದೊಂದು ಕತೆಯಿರುತ್ತದೆಯಂತೆ.

ನಾನು ಯಾವತ್ತು ಇದನ್ನು ವೈಜ್ಞಾನಿಕವಾಗಿ ಆಗಲಿ, ಜ್ಯೋತಿಷ್ಯದ ದೃಷ್ಟಿಯಿಂದಲಾಗಲಿ ನೋಡಿಲ್ಲ. ನನಗೂ ಗೊತ್ತು ಮುಂದುವರಿದಿರುವ ಈ ವಿಜ್ಞಾನ ಯುಗದಲ್ಲಿ ಏನೇ ಹೇಳಿದರೂ ನಂಬುವವರು ಕಮ್ಮಿ. ನನ್ನ ಪ್ರಕಾರ, ಎಲ್ಲವನ್ನೂ ವೈಜ್ಞಾನಿಕವಾಗಿ ನೋಡಲು ಸಾಧ್ಯವಿಲ್ಲ. ನಮಗೆ ವಿರುದ್ಧವಾಗಿ ಅದೆಷ್ಟೋ ಪ್ರಕೃತಿ ವಿಕೋಪಗಳು ಇವತ್ತಿಗೂ ಈ ಕ್ಷಣಕ್ಕೂ ನಡೆಯುತ್ತಿದೆ ಅನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಕನಸುಗಳು ಬೇಕು, ಇದು ನಮ್ಮ ನಿದ್ದೆಯ ಒಂದು ಅವಿಭಾಜ್ಯ ಅಂಗ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಕನಸನ್ನು ಕಾಣುತ್ತಾರೆ. ನಾವು ಕಾಣುವ ಕೆಲವೊಂದು ಕನಸುಗಳು ನಮಗೆ ಈಡೇರಿಸಲು ಆಗದ ಆಸೆಗಳನ್ನು ಕಲ್ಪನೆಗೆ ಇಳಿಸುವ ಒಂದು ದಾರಿಯಿದ್ದಂತೆ. ಕೆಲವೊಂದು ಸಾರಿ ನಾವು ನಮ್ಮ ಕನಸಿನಲ್ಲಿ ಅದೆಷ್ಟೋ ಸಮಸ್ಯೆಗಳಿಗೆ ಸಮಧಾನವನ್ನು ಪಡೆದಿರುತ್ತೇವೆ.

ಪ್ರತಿದಿನವೂ ನಾವು ಒಂದಲ್ಲ ಒಂದು ವಿಚಾರದ ಕುರಿತು ಕನಸು ಕಾಣುತ್ತೇವೆ. ಕೆಲವೊಂದು ಅರ್ಥವಾದರೆ ಇನ್ನು ಕೆಲವು ಅಸ್ಪಷ್ಟವಾಗಿರುತ್ತದೆ. ಹಾಗೆ ಅದು ಅಷ್ಟೇ ಬೇಗ ನಮ್ಮ ಸ್ಮೃತಿ ಪಟಲದಿಂದ ಮಾಸಿಹೋಗಿರುತ್ತದೆ. ಸುಂದರ ಕನಸುಗಳನ್ನು ನಾವೂ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತೇವೆ. ಅದೇ ವಿಚಿತ್ರವಾದ ಕನಸುಗಳು ನಮ್ಮನ್ನು ಮತ್ತೆ ಮತ್ತೆ ಯೋಚಿಸಿ ಚಿಂತಿಸುವಂತೆ ಮಾಡಿಬಿಡುತ್ತವೆ. ಅತಿಯಾಗಿ ಕಾಡುವ ಭಯಾನಕ ಕನಸುಗಳು ನಮ್ಮನ್ನು ಇನ್ನಷ್ಟು ಹಿಂಸಿಸುತ್ತದೆ. ಸಾವಿನ ಕನಸುಗಳು ಬಿದ್ದಾಗ ಅದು ನಿಜವಾಗದಿರಲಿ ಅಂತ ನಮ್ಮನ್ನು ನಾವು ಸಂಭಾಳಿಸುತ್ತೇವೆ.

ಬಹುಶಃ ಕೆಲವೊಮ್ಮೆ ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಲಾರದು ನಿಜ, ಆದರೆ ಪ್ರಶ್ನೆಗಳು ಇನ್ನಿಲ್ಲದಂತೆ ಕಾಡುವುದು ಸುಳ್ಳಲ್ಲ. ಕನಸಿನ ಸುತ್ತ ಇರುವ ಅದೆಷ್ಟೋ ರಹಸ್ಯಗಳು ನಮ್ಮನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಅದೇನೆ ಆಗಿರಲಿ ಕನಸುಗಳ ಜೊತೆ ನಮ್ಮ ಮನಸ್ಸಿನ ಸ್ಥಿತಿಯೂ ಲಯ ತಪ್ಪದೇ ಇರಲಿ. ಸುಂದರ ಕನಸುಗಳ ಜೊತೆ ಖುಷಿ ಪಡುವ ನಾವು ಕೆಟ್ಟ ಕನಸುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಚಿಂತೆಯ ಚಿತೆಯಲ್ಲಿ ಬೆಂದು ಹೋಗದಂತೆ ಮನಸ್ಸನ್ನು ಸಮಾಧಾನದಿಂದ ಇಟ್ಟು ನೋಡೋಣ.. ಏನಂತೀರ.

English summary
Why do we dream? Are dreams true or we dream about the incidents happened or do we dream future? Is it possible to interpret dreams? Few interesting facts about dreams by Pooja Gujaran. Keep dreaming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X