Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್
Corporate Company Viral New: ಇಂದಿನ ಖಾಸಗಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳಲ್ಲಿ ಉದ್ಯೋಗ ವಜಾ ಹೊಸದೇನಲ್ಲ ಅನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿವೆ. ಆದರೆ ಕೆಲವು ಬಾರಿ ಪ್ರಾಮಾಣಿಕ ಉದ್ಯೋಗಿಗಳಿಗೆ ಮೋಸವಾಗುತ್ತದೆ. ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಸಮಯದಲ್ಲಿ ಕೆಟ್ಟ ರೀತಿಯಾಗಿ ನಡೆಸಿಕೊಳ್ಳುತ್ತವೆ. ಇದೇ ರೀತಿ ಕಾರ್ಪೋರೇಟ್ ಕಂಪನಿಯ ಬಾಸ್ ಒಬ್ಬರು ನೌಕರಿಯಿಂದ ತೆಗೆದ ಉದ್ಯೋಗಿಯಿಂದ ಮರಳಿ ಸಹಾಯ ಕೇಳಿದ್ದಾರೆ. ಅದಕ್ಕೆ ಆ ಉದ್ಯೋಗ ಕೊಟ್ಟ ಖಡಕ್ ಉತ್ತರ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಾರ್ಪೋರೇಟ್ ಜಗತ್ತಿನಲ್ಲಿ ಉದ್ಯೋಗಿಗಳನ್ನು ಯಂತ್ರಗಳಂತೆ ದುಡಿಸಿಕೊಳ್ಳಲಾಗುತ್ತದೆ. ಕಡಿಮೆ ಸಂಬಳಕ್ಕೆ ಹೆಚ್ಚಿನ ಟಾರ್ಗೆಟ್ ನೀಡುವುದು. ಲಾಭ ಇದ್ದಾಗ ಕೈಚಾಚಿ ಹಣ ನೀಡದೇ, ಸಕಾಲಕ್ಕೆ ವೇತನ ಹೆಚ್ಚಿಸದ ಕಂಪನಿಗಳು ನಷ್ಟವಾಗುತ್ತಿದ್ದಂತೆ ತನ್ನ ಉದ್ಯೋಗಿಗಳನ್ನು ಬೇಕಾಬಿಟ್ಟಿಯಾಗಿ ವಜಾಗೊಳಿಸುತ್ತವೆ. ಕಂಪನಿಗೆ ಸರ್ವವನ್ನು ಮುಡಿಪಿಟ್ಟು, ವೈಯಕ್ತಿಕ ಜೀವನ ಬದಿಗಿರಿಸಿ, ಒತ್ತಡ ಸಹಿಸಿ ಕೆಲಸ ಮಾಡಿದ ಅದೆಷ್ಟೋ ಉದ್ಯೋಗಿಗಳು ವಜಾ ಬಳಿಕ ಅಸಮಾಧಾನ ಹೊರ ಹಾಕುತ್ತಾರೆ. ಇದೀಗ ಇಂಥದ್ದೆ ಕಾರ್ಪೋರೇಟ್ ಸಂಸ್ಥೆಯೊಂದರ ನೌಕರ ತನ್ನ ಮಾಜಿ ಬಾಸ್ ಕೇಳಿದ ಸಹಾಯಕ್ಕೆ ನೀಡಿದ ಉತ್ತರವು ರೆಡ್ಡಿಟ್‌ನಲ್ಲಿ ವೈರಲ್ ಆಗುತ್ತಿದೆ.

ಕ್ರಿಸ್‌ಮಸ್ ವೇಳೆ ನೌಕರನ ವಜಾಗೊಳಿಸಿದ್ದ ಬಾಸ್
ರೆಡ್ಡಿಟ್ 'ಆಂಟಿ ವರ್ಕ್' ಗುಂಪಿನಲ್ಲಿ ಉದ್ಯೋಗಿಯೊಬ್ಬರು ತನ್ನ ಮಾಜಿ ಮಾಲೀಕನ ಬಗ್ಗೆ ಹಂಚಿಕೊಂಡ ಮಾಹಿತಿ ಹರಿದಾಡುತ್ತಿದೆ. ನೆಟ್ಟಿಗರಿಂದ ಶಬ್ಬಾಶ್‌ಗಿರಿ ಸಹ ಪಡೆದಿದೆ. 'ಕಳೆದ ಡಿಸೆಂಬರ್ ನಲ್ಲಿ, ಕ್ರಿಸ್‌ಮಸ್ ಎರಡು ವಾರಕ್ಕೂ ಮುನ್ನ ಈ ನೌಕರರನನ್ನು ಅವರ ಬಾಸ್ ಕಂಪನಿ ನಷ್ಟದಲ್ಲಿದೆ ಎಂದು ಹೇಳಿ ಕೆಲಸದಿಂದ ಕಿತ್ತು ಹಾಕಿದ್ದರು. ನೌಕರರ ಬಗ್ಗೆ ಕನಿಷ್ಠ ಸೌಜನ್ಯವು ತೋರಿರಲಿಲ್ಲ. ಮುಂದೆ ಕಂಪನಿ ಲಾಭದಲ್ಲಿದ್ದಾಗ ನಿಮ್ಮನ್ನು ಪುನಃ ಕರೆಸಿಕೊಳ್ಳುವೆ ಎಂದು ಹಾರಿಕೆ ಉತ್ತರ ನೀಡಿದ್ದ.
ವಜಾಗೊಂಡ ಬಳಿಕ ಬೇಸರದಲ್ಲಿದ್ದ ಉದ್ಯೋಗಿ ಬೇರೆ ಕಡೆ ಕೆಲಸ ಹುಡುಕಲು ಶುರು ಮಾಡಿದರು. ಅವರಿಗೆ ಮೊದಲಿಗಿಂತಲೂ ಉತ್ತಮ ವೇತನದ, ಒಂದೊಳ್ಳೆ ವಾತಾವರಣದ ಕೆಲಸ ಸಿಕ್ಕಿದೆ. ಇತ್ತ ಮಾಜಿ ಬಾಸ್ ಇದ್ದ ಕಂಪನಿ ಉದ್ಯೋಗಿಗಳು ಇಲ್ಲದೇ ಸಂಕಷ್ಟದಲ್ಲಿ ಸಿಲುಕಿದೆ. ಕಂಪನಿಯಲ್ಲಿ ಕೆಲಸಗಾರರ ಪೈಕಿ ಬಾಸ್ ಹೆಂಡತಿ ಒಬ್ಬಳೇ ಉಳಿದಿದ್ದು, ಕೊನೆಗೆ ಅವರು ಪತಿ ಹಾಗೂ ಕಂಪನಿ ಬಿಟ್ಟು ಹೋಗಿದ್ದಾರೆ. ಆಗ ವಿಧಿ ಇಲ್ಲದೇ ಬಾಸ್ ತನ್ನ ಹಳೇಯ ನೌಕರನಿಗೆ ಸಹಾಯ ಬಯಸಿ ಮೂರು ಬಾರಿ ಕರೆ ಮಾಡಿದ್ದಾನೆ. ಬಳಿಕ ವಾಯ್ಸ್ ಮೆಸೆಜ್ ಹಾಕಿ ಪುಕ್ಕಟ್ಟೆ ಸಹಾಯ ಕೇಳಿದ್ದಾನೆ.
'ನನಗೆ ಕಂಪನಿಯ ನಿತ್ಯದ ಕೆಲಸಗಳು ಹೇಗೆ ನಡೆಯುತ್ತವೆ ಎಂಬ ಅರಿವಿಲ್ಲ. ಕೆಲಸದ ತರಬೇತಿ ನೀಡಲು ಯಾರು ಇಲ್ಲ. ದಯವಿಟ್ಟು ಸ್ನೇಹಿತನೆಂದು ಭಾವಿಸಿ ಸಹಾಯ ಮಾಡು. ನನಗೆ ಕೆಲಸ ಗೊತ್ತಿಲ್ಲ. ನಿನ್ನ ಟ್ರೈನಿಂಗ್ ಅವಶ್ಯಕತೆ ಇದೆ. ನೀನು ವೀಕೆಂಡ್‌ನಲ್ಲಿ ಬಿಡುವಿದ್ದಾಗ ನನಗೆ ಹೇಳಿಕೊಡು. ವೀಕೆಂಡ್‌ನಲ್ಲಿ ಬಾ' ಎಂದು ಬಾಸ್ ಕೋರಿದ್ದಾನೆ. ಬಾಸ್ ಮರಳಿ ಕೆಲಸಕ್ಕೆ ಕರೆಯುವ ಮಾತು ಆಡಿಲ್ಲ. ಸಹಾಯಕ್ಕೆ ದುಡ್ಡು ನೀಡುವ ಬಗ್ಗೆ ಪ್ರಸ್ತಾಪಿಸದೇ ಕೇವಲ ಸ್ನೇಹದ ಹೆಸರಿನಲ್ಲಿ ಸಹಾಯ ಕೇಳಿದ್ದಾನೆ.
ನೌಕರನ ಕೊಟ್ಟ ಖಡಕ್ ಉತ್ತರವೇನು? ನೆಟ್ಟಿಗರು ಹೇಳಿದ್ದೇನು?
ಸಹಾಯ ಕೇಳಿದ ಮಾಜಿ ಬಾಸ್‌ಗೆ ನೌಕರರ ಸರಿಯಾಗಿಯೇ ಉತ್ತರಿಸಿದ್ದು,' ನಾವು ಗೆಳೆಯರಲ್ಲ. ಹಬ್ಬದ ಸಮಯದಲ್ಲಿ ನನ್ನನ್ನು ಕೆಲಸದಿಂದ ತೆಗೆಯುವಾಗ ನೀವು ಹೇಗೆ ನಡೆಸಿಕೊಂಡಿದ್ದೀರಿ ಎಂಬುದು ನೆನಪಿದೆ. ನಿಮ್ಮ ಕಂಪನಿ ಸಮಸ್ಯೆ ನಿಮ್ಮದು ಹೊರತು ನನ್ನದಲ್ಲ. ನೀವೇ ನೋಡಿಕೊಳ್ಳ' ಎಂದು ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಒಂದಷ್ಟು ಕಾಮೆಂಟ್ ಹಾಕಿದ್ದಾರೆ.
'ಹಬ್ಬದ ವೇಳೆ ನೌಕರರನ್ನು ಬೀದಿಗೆ ತಳ್ಳಿ ಇದೀಗ ಸ್ನೇಹದ ಹೆಸರಿನಲ್ಲಿ ಸಹಾಯ ಕೇಳಿದರೆ ಹೇಗೆ. ಹಣ ಪಡೆದು ಕೆಲಸ ಮಾಡಿ. ಇಲ್ಲವಾದರೆ ನಿಮ್ಮ ಪಾಡಿಗೆ ನೀವಿರಿ 'ಎಂದಿದ್ದಾರೆ. ಮತ್ತೊಬ್ಬರು 'ಕಷ್ಟದ ಸಮಯದಲ್ಲಿ ಬೀದಿಗೆ ತಳ್ಳುವವರು ಸ್ನೇಹಿತರಾಗಲು ಸಾಧ್ಯವೇ ಇಲ್ಲ' ಎಂದ ಕಾಮೆಂಟ್ ಹಾಕಿದ್ದಾರೆ. ಉದ್ಯೋಗಿಗಳನ್ನು ಮಷಿನ್ ರೀತಿ ಕೆಲಸ ಮಾಡಿಸಲು ಬಯಸುವ ಇಂಥಹ ಬಾಸ್‌ಗಳಿಗೆ ಸಮಯವೇ ಉತ್ತರ ನೀಡುತ್ತೆ ಎಂದು ನೌಕರನ ಪ್ರತಿಕ್ರಿಯೆಯನ್ನು ಮೆಚ್ಚಿ ಬೆಂಬಲಿಸಿದ್ದಾರೆ.












Click it and Unblock the Notifications