ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿಯ ಬೆನ್ನಲ್ಲೇ, ಇರಾನ್ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ 'ಹರ್ಮೂಜ್ ಜಲಸಂಧಿ'ಯನ್ನು (Strait of Hormuz) ಅಧಿಕೃತವಾಗಿ ಬಂದ್ ಮಾಡಿದೆ. ಈ ಬೆಳವಣಿಗೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಭಾರತದಂತಹ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇಸ್ರೇಲ್-ಅಮೆರಿಕದ ದಾಳಿಯ ನಂತರ ಇರಾನ್ ಈ ಜಲಸಂಧಿಯನ್ನು ಅಧಿಕೃತವಾಗಿ ಬಂದ್ ಮಾಡಿದೆ. ಹರ್ಮೂಜ್ ಜಲಸಂಧಿಯ ಬಿಕ್ಕಟ್ಟು ಭಾರತ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಲಿದೆ.
ಹರ್ಮೂಜ್ ಜಲಸಂಧಿ ಏಕೆ ಮುಖ್ಯ?
ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಶೇ 20ರಿಂದ ಶೇ 25ರಷ್ಟು ಭಾಗವು ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುತ್ತದೆ. ಪ್ರಮುಖ ರಫ್ತುದಾರರಾದ ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್ ಮತ್ತು ಕತಾರ್‌ನಂತಹ ದೇಶಗಳು ತಮ್ಮ ತೈಲ ಮತ್ತು ಎಲ್‌ಎನ್‌ಜಿ (LNG) ರಫ್ತಿಗಾಗಿ ಈ ಮಾರ್ಗವನ್ನೇ ಬಳಸುತ್ತಿವೆ. ಇದು ಕೇವಲ 33 ಕಿ.ಮೀ ಅಗಲದ ಕಿರಿದಾದ ಮಾರ್ಗವಾಗಿದ್ದು, ಹಡಗುಗಳು ಸಂಚರಿಸುವ ಹಾದಿ ಕೇವಲ 3 ಕಿ.ಮೀ ಮಾತ್ರ ಇರುತ್ತದೆ. ಹೀಗಾಗಿ ಸೇನಾ ಬಿಕ್ಕಟ್ಟಿನ ಸಮಯದಲ್ಲಿ ಇದನ್ನು ತಡೆಯುವುದು ಸುಲಭವಾಗಿದೆ.

ಭಾರತದ ಮೇಲೆ ಪರಿಣಾಮಗಳು
ಭಾರತವು ತನ್ನ ಕಚ್ಚಾ ತೈಲದ ಶೇಕಡಾ ಶೇ 60ಕ್ಕೂ ಹೆಚ್ಚು ಭಾಗವನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 40-50 ರಷ್ಟು ತೈಲವು ಹರ್ಮೂಜ್ ಜಲಸಂಧಿಯ ಮೂಲಕವೇ ಭಾರತವನ್ನು ತಲುಪುತ್ತದೆ. ಈ ಮಾರ್ಗ ಬಂದ್ ಆಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120-150 ಡಾಲರ್‌ಗಳವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತ ಸರ್ಕಾರವು ತನ್ನ 'ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್' (SPR) ಅಥವಾ ತುರ್ತು ತೈಲ ಸಂಗ್ರಹವನ್ನು ಬಳಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಮತ್ತು ರಷ್ಯಾದಂತಹ ಪರ್ಯಾಯ ಮೂಲಗಳಿಂದ ತೈಲ ಪಡೆಯಲು ಪ್ರಯತ್ನಿಸುತ್ತಿದೆ.
ತೈಲ ಬೆಲೆಯಲ್ಲಿನ ಪ್ರತಿಯೊಂದು 1 ಡಾಲರ್ ಏರಿಕೆಯು ಭಾರತದ ವಾರ್ಷಿಕ ಆಮದು ವೆಚ್ಚವನ್ನು ಸುಮಾರು ಅಂದಾಜು ₹16,500 ಕೋಟಿ ಹೆಚ್ಚಿಸುತ್ತದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಈಗಾಗಲೇ ಹಡಗುಗಳಿಗೆ ರೇಡಿಯೋ ಮೂಲಕ ಎಚ್ಚರಿಕೆ ನೀಡಿದ್ದು, ಯಾವುದೇ ಹಡಗು ಈ ಮಾರ್ಗದಲ್ಲಿ ಸಂಚರಿಸದಂತೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಪ್ರಮುಖ ಹಡಗು ಕಂಪನಿಗಳಾದ 'ಮಾರ್ಸ್ಕ್' (Maersk) ಮತ್ತು 'ಸಿಎಮ್‌ಎ ಸಿಜಿಎಮ್' (CMA CGM) ತಮ್ಮ ಸಂಚಾರ ಮಾರ್ಗಗಳನ್ನು ಬದಲಿಸುತ್ತಿವೆ. ಇದು ಸಾಗಾಣಿಕೆ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ.
ಭಾರತವು ದಿನವೊಂದಕ್ಕೆ ಸುಮಾರು 26 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಈ ಜಲಸಂಧಿಯ ಮೂಲಕವೇ ಪಡೆಯುತ್ತದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಬರುವ ಬಹುಪಾಲು ತೈಲ ಈ ಮಾರ್ಗದ ಮೂಲಕವೇ ಸಾಗುತ್ತದೆ. ಭಾರತವು ತನ್ನ ನೈಸರ್ಗಿಕ ಅನಿಲದ (Gas) ಅವಶ್ಯಕತೆಗಾಗಿ ಕತಾರ್ ದೇಶವನ್ನು ಅವಲಂಬಿಸಿದೆ. ಕತಾರ್‌ನಿಂದ ಬರುವ ಶೇ 100ರಷ್ಟು ಎಲ್‌ಎನ್‌ಜಿ ಈ ಕಿರಿದಾದ ಜಲಸಂಧಿಯ ಮೂಲಕವೇ ಬರಬೇಕು. ಈ ಮಾರ್ಗ ಬಂದ್ ಆದರೆ ಭಾರತದಲ್ಲಿ ಸಿಎನ್‌ಜಿ ಮತ್ತು ಕೈಗಾರಿಕಾ ಅನಿಲ ಪೂರೈಕೆಯೂ ಸ್ಥಗಿತಗೊಳ್ಳಬಹುದು.
ಜಲಸಂಧಿಯು ಬಂದ್ ಆದರೆ ಅಥವಾ ಯುದ್ಧದ ಭೀತಿಯಿಂದ ದರಗಳು ಹೆಚ್ಚಾದರೆ ಭಾರತದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ 10 ಡಾಲರ್ ಏರಿಕೆಯಾದಾಗ, ಭಾರತದ ಚಿಲ್ಲರೆ ಹಣದುಬ್ಬರವು ಸುಮಾರು ಶೇ.0.30ರಷ್ಟು ಹೆಚ್ಚಾಗುತ್ತದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯು ಸಾರಿಗೆ ವೆಚ್ಚವನ್ನು ಹೆಚ್ಚಿಸಿ, ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ತೈಲ ಬೆಲೆ ಏರಿಕೆಯಿಂದ ಭಾರತದ ಆಮದು ವೆಚ್ಚ ವಿಪರೀತವಾಗಿ ಹೆಚ್ಚಾಗುತ್ತದೆ. ಇದು ರೂಪಾಯಿಯ ಮೌಲ್ಯ ಡಾಲರ್ ಎದುರು ಮತ್ತಷ್ಟು ಕುಸಿಯುವಂತೆ ಮಾಡುತ್ತದೆ.
ಇಂಧನ ಬೆಲೆ ಏರಿಕೆಯು ಪೇಂಟ್, ಟೈರ್, ವಿಮಾನಯಾನ ಮತ್ತು ಲಾಜಿಸ್ಟಿಕ್ಸ್ ವಲಯದ ಕಂಪನಿಗಳ ಲಾಭಾಂಶವನ್ನು ಕುಗ್ಗಿಸುತ್ತದೆ, ಇದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಭಾರಿ ನಷ್ಟ ಅನುಭವಿಸಬಹುದು. ಸೌದಿ ಅರೇಬಿಯಾದ 'ಈಸ್ಟ್-ವೆಸ್ಟ್ ಪೈಪ್‌ಲೈನ್' ಮತ್ತು ಯುಎಇಯ ಕೆಲವು ಪೈಪ್‌ಲೈನ್‌ಗಳು ತೈಲವನ್ನು ಹರ್ಮೂಜ್ ಬಿಟ್ಟು ಬೇರೆಡೆಗೆ ಸಾಗಿಸಬಲ್ಲವು. ಆದರೆ, ಇವುಗಳ ಸಾಮರ್ಥ್ಯವು ಒಟ್ಟು ಬೇಡಿಕೆಯ ಅರ್ಧದಷ್ಟು ಮಾತ್ರ ಇದೆ. ಅಲ್ಲದೆ, ಕತಾರ್‌ನ ಅನಿಲಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ.
ಭಾರತವು ವಿಶಾಖಪಟ್ಟಣಂ, ಮಂಗಳೂರು ಮತ್ತು ಪಡೂರುಗಳಲ್ಲಿ ಭೂಗತ ತೈಲ ಸಂಗ್ರಹಾಗಾರಗಳನ್ನು ಹೊಂದಿದೆ. ಇವುಗಳಲ್ಲಿ ಸುಮಾರು 6 ದಿನಗಳವರೆಗೆ ದೇಶಕ್ಕೆ ಸಾಕಾಗುವಷ್ಟು ತೈಲ ಸಂಗ್ರಹವಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ರಷ್ಯಾ, ಅಮೆರಿಕ ಮತ್ತು ಬ್ರೆಜಿಲ್‌ನಿಂದ ಹೆಚ್ಚಿನ ತೈಲ ಆಮದು ಮಾಡಿಕೊಳ್ಳುವ ಮೂಲಕ ಗಲ್ಫ್ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಸಲ್ಪ ಮಟ್ಟಿಗೆ ತಗ್ಗಿಸಿದೆ. ಆದರೂ, ಮಧ್ಯಪ್ರಾಚ್ಯದ ಪೂರೈಕೆ ನಿಂತರೆ ಜಾಗತಿಕವಾಗಿ ಬೆಲೆ ಏರಿಕೆಯನ್ನು ತಡೆಯುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.












Click it and Unblock the Notifications