ಮಳೆಗಾಲ ಸಮೀಸಿದರೂ ಮುಗಿಯದ ಕಾಮಗಾರಿಗಳು, ಬೆಂಗಳೂರು ಪಾಲಿಕೆ ಆಯುಕ್ತರ ಅಸಮಾಧಾನ, ಮೇ ಡೆಡ್‌ಲೈನ್
ಬೆಂಗಳೂರು: ಮಳೆಗಾಲ ಇನ್ನೇನು ಆರಂಭವಾಗುತ್ತಿದ್ದು, ಈ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಿಧದ ಕಾಮಗಾರಿಗಳನ್ನು ಮೇ ಅಂತ್ಯದ ಹೊತ್ತಿಗೆ ಪೂರ್ಣಗೊಳಿಸುವಂತೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.
ಆಯುಕ್ತರ ನೇತೃತ್ವದಲ್ಲಿ ಇಂದು ಸೋಮವಾರ ಸಭೆ ನಡೆಸಿ SIP ಹಾಗೂ CMIDP ಯೋಜನೆಗಳಡಿ ನಡೆಯುತ್ತಿರುವ 694 ಕೋಟಿ ರೂ. ಅನುದಾನದ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಬಳಿಕ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಡೆಡ್‌ಲೈನ್ ನೀಡಿದರು. ರಸ್ತೆ ಗುಂಡಿ ಮುಚ್ಚುವಿಕೆ, ಆನ್‌ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ, ಟೋಯಿಂಗ್ ವಾಹನಗಳ ಕಾರ್ಯಾಚರಣೆ, ಟ್ರಾನ್ಸ್‌ಫರ್ ಸ್ಟೇಷನ್‌ಗಳ ನಿರ್ವಹಣೆ, ರಸ್ತೆ ಸ್ವೀಪಿಂಗ್ ಯಂತ್ರಗಳ ಕಾರ್ಯಾಚರಣೆ, ಸ್ಕೈವಾಕ್ ಟೆಂಡರ್ ಪ್ರಕ್ರಿಯೆ, ನೀರು ನಿಲುವು ಪ್ರದೇಶಗಳು ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ಅಪಾಯಕಾರಿ ಮರಗಳು ಮತ್ತು ಕೊಂಬೆಗಳ ಪಟ್ಟಿಯ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲಾಯಿತು.

ಮಳೆಗಾಲಕ್ಕೂ ಮುನ್ನ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚುವುದು, ನೀರು ನಿಲುವು ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಚರಂಡಿ ಮತ್ತು ರಸ್ತೆ ನಿರ್ವಹಣಾ ಕಾಮಗಾರಿಗಳನ್ನು ವೇಗಗೊಳಿಸುವಂತೆ ನಿರ್ದೇಶಿಸಿದರು. ಈ ಶನಿವಾರದೊಳಗೆ ಸಾಧ್ಯವಾದಷ್ಟು ಕೆಲಸ ಮುಗಿಸುವಂತೆ ಹೇಳಿದರು.
ಬಾಕಿ ಕಾಮಗಾರಿಗೆ ಅಸಮಾಧಾನ, ತಿಂಗಳಾಂತ್ಯ ಡೆಡ್‌ಲೈನ್
ಮಳೆಗಾಲ ಆರಂಭವಾಗುವ ಮೊದಲು ಈ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿದೆ. ಹೀಗಿದ್ದರೂ ಕೆಲಸಗಳು ಬಾಕಿ ಇರುವುದನ್ನು ಕಂಡು ಆಯುಕ್ತರು ಕಿರಿ ಕಾರಿದರು. ಮಳೆಗಾಲ ಆರಂಭವಾದ ಬಳಿಕ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟವಾಗುವುದರಿಂದ ಈ ತಿಂಗಳ ಅಂತ್ಯದೊಳಗೆ ಆದ್ಯತೆ ಮೇರೆಗೆ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಯಾವುದೇ ಕಾರಣ ಹೇಳದೇ ಕೆಲಸ ಮುಗಿಸಿ
ರಸ್ತೆ ಕೆಲಸಗಳಿಗೆ ಅಗತ್ಯವಿರುವ ಬಿಟುಮಿನ್ ಹಾಗೂ ಅಸ್ಫಾಲ್ಟ್ ಮತ್ತು ಇತರೆ ಸಾಮಗ್ರಿಗಳ ಲಭ್ಯತೆ ಕುರಿತು ಮಾಹಿತಿ ಪಡೆದುಕೊಮಡರು. ಮಟಿರಿಯಲ್ ಇಲ್ಲ ಎಂದು ಹೇಳುವಂತಿಲ್ಲ. ಯಾವುದೇ ಕಾರಣಕ್ಕೂ ಕಾಮಗಾರಿಗಳು ವಿಳಂಬವಾಗದಂತೆ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
ನಗರ ಪಾಲಿಕೆಯ ಆನ್‌ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆಯ ಟೆಂಡರ್ ಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ತಿಳಿಸಿದರು.ನಗರದ ಪ್ರಮುಖ ರಸ್ತೆಗಳಲ್ಲಿ ಸ್ವೀಪಿಂಗ್ ಯಂತ್ರಗಳ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕಿದೆ. ಸ್ಕೈವಾಕ್ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತಿಳಿಸಬೇಕು ಎಂದರು.













Click it and Unblock the Notifications