ಅಮೆರಿಕನ್ನರ ಮನಗೆದ್ದ ಭಾರತೀಯ ಸ್ವಾದದ 'ಮಲೈ' ಐಸ್‌ಕ್ರೀಮ್: 2.8 ಮಿಲಿಯನ್ ಡಾಲರ್ ಉದ್ಯಮ ಕಟ್ಟಿದ ಪೂಜಾ ಬಾವಿಷಿ
ನ್ಯೂಯಾರ್ಕ್: ಆಹಾರ ಉದ್ಯಮದಲ್ಲಿ ಯಾವುದೇ ಪೂರ್ವಾಪರ ಅನುಭವವಿಲ್ಲದಿದ್ದರೂ, ಭಾರತೀಯ ಮೂಲದ ಮಹಿಳಾ ಉದ್ಯಮಿಯೊಬ್ಬರು ಅಮೆರಿಕದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಸ್‌ಕ್ರೀಮ್ ಉದ್ಯಮವನ್ನು ಕಟ್ಟಿ ಬೆಳೆಸಿದ ಸ್ಫೂರ್ತಿದಾಯಕ ಕಥೆ ಈಗ ಬೆಳಕಿಗೆ ಬಂದಿದೆ.
ನ್ಯೂಯಾರ್ಕ್ ಮೂಲದ 'ಮಲೈ' (Malai) ಐಸ್‌ಕ್ರೀಮ್ ಬ್ರ್ಯಾಂಡ್ ಕಟ್ಟಿದ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ 42 ವರ್ಷದ ಪೂಜಾ ಬಾವಿಷಿ ಅವರೇ ಈ ಅದ್ಭುತ ಸಾಧನೆ ಮಾಡಿದವರು. ಇವರು ಮೂಲತಃ ಭಾರತದವರಾಗಿದ್ದು, 2015ರಲ್ಲಿ ಈ ಸ್ಥಾಪನೆಯನ್ನು ಪ್ರಾರಂಭಿಸಿದರು, ನಿರಂತರ ಪ್ರಯೋಗಗಳು ಮತ್ತು ವಿಸ್ತರಣೆಯ ನಂತರ ಇದೀಗ ದೊಡ್ಡ ಮಟ್ಟದ ಲಾಭದಾಯಕ ಉದ್ಯಮವಾಗಿ ಬೆಳೆದಿದೆ.

ಸಿಎನ್‌ಬಿಸಿ ವರದಿಯ ಪ್ರಕಾರ, 2025ರಲ್ಲಿ ಈ ಕಂಪನಿಯು ಬರೋಬ್ಬರಿ 2.8 ಮಿಲಿಯನ್ ಡಾಲರ್ (ಸುಮಾರು 23 ಕೋಟಿ ರೂ.) ವಹಿವಾಟು ನಡೆಸಿದೆ. ಪ್ರಸ್ತುತ, ನ್ಯೂಯಾರ್ಕ್, ಫಿಲಡೆಲ್ಫಿಯಾ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ನಾಲ್ಕು ಮಳಿಗೆಗಳನ್ನು ಹೊಂದಿರುವ 'ಮಲೈ', ಇ-ಕಾಮರ್ಸ್ ಮೂಲಕವೂ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಏಲಕ್ಕಿ, ಕೇಸರಿ, ಗುಲಾಬಿ ಮತ್ತು ಜಾಯಿಕಾಯಿಯಂತಹ ಸಾಂಪ್ರದಾಯಿಕ ಭಾರತೀಯ ಸ್ವಾದಗಳನ್ನು ಐಸ್‌ಕ್ರೀಮ್‌ನಲ್ಲಿ ಬಳಸುವ ಮೂಲಕ ಈ ಬ್ರ್ಯಾಂಡ್ ಪ್ರಸಿದ್ಧಿ ಪಡೆದಿದೆ. "ನಮ್ಮ ಐಸ್‌ಕ್ರೀಮ್‌ಗಳು ಕೇವಲ ಚಾಕೊಲೇಟ್ ಮತ್ತು ವೆನಿಲ್ಲಾ ಫ್ಲೇವರ್‌ಗಳಿಗೆ ಸೀಮಿತವಾಗಿಲ್ಲ. ವಿಶ್ವದಾದ್ಯಂತ ಜನಪ್ರಿಯವಾಗಿರುವ ಏಲಕ್ಕಿ, ಗುಲಾಬಿಯಂತಹ ಸ್ವಾದಗಳನ್ನು ಅಮೆರಿಕದ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶ ನಮ್ಮದಾಗಿತ್ತು" ಎಂದು ಪೂಜಾ ಬಾವಿಷಿ ತಿಳಿಸಿದ್ದಾರೆ.
ಪೂಜಾ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ನಗರ ಯೋಜನೆ (Urban planning) ಅಧ್ಯಯನ ಮಾಡಿದ್ದು, ವಾಷಿಂಗ್ಟನ್ ಡಿಸಿಯಲ್ಲಿ ನಾಗರಿಕ ಹಕ್ಕುಗಳ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡಿದ್ದರು. 2014ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾಗ, ಸ್ನೇಹಿತರಿಗಾಗಿ ಶುಂಠಿ ಮತ್ತು ಸ್ಟಾರ್ ಅನೈಸ್ ಬಳಸಿ ಮನೆಯಲ್ಲೇ ಐಸ್‌ಕ್ರೀಮ್ ತಯಾರಿಸುತಿದ್ದರು. ತಾವು ಈ ಹಿಂದೆಂದೂ ಇಂತಹ ಐಸ್‌ಕ್ರೀಮ್ ತಿಂದಿಲ್ಲ ಎಂದು ಸ್ನೇಹಿತರು ನೀಡಿದ ಪ್ರತಿಕ್ರಿಯೆ ಅವರ ಉದ್ಯಮದ ಕನಸಿಗೆ ಮುನ್ನುಡಿ ಬರೆಯಿತು.
ಆರಂಭದಲ್ಲಿ ತಮ್ಮ ಮನೆಯ ಅಡುಗೆಮನೆಯಲ್ಲೇ ಐಸ್‌ಕ್ರೀಮ್ ತಯಾರಿಸಿ ನ್ಯೂಯಾರ್ಕ್‌ನ ಹೊರಾಂಗಣ ಮಾರುಕಟ್ಟೆಗಳಲ್ಲಿ ಕ್ಯಾಂಪಿಂಗ್ ಫ್ರೀಜರ್ ಮೂಲಕ ಮಾರಾಟ ಮಾಡಲು ಆರಂಭಿಸಿದರು. ಇವರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗ್ರಾಹಕರ ಅಭಿರುಚಿಯನ್ನು ತಿಳಿಯಲು ಸ್ನೇಹಿತರ ಸಹಾಯ ಪಡೆದರು. 2015ರಲ್ಲಿ 'ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯ ಆಹಾರ ವಿಮರ್ಶಕರು ಇವರ ಐಸ್‌ಕ್ರೀಮ್ ರುಚಿ ನೋಡಿ ಲೇಖನ ಪ್ರಕಟಿಸಿದಾಗ, ಆನ್‌ಲೈನ್ ಆರ್ಡರ್‌ಗಳು ದಿಢೀರನೆ ಹೆಚ್ಚಾಗಿದ್ದವು.
ಉದ್ಯಮವನ್ನು ವಿಸ್ತರಿಸಲು ಕ್ರೆಡಿಟ್ ಕಾರ್ಡ್ ಬಳಸಿ ಕಮರ್ಷಿಯಲ್ ಕಿಚನ್ ಬಾಡಿಗೆಗೆ ಪಡೆದರು. 2017ರಲ್ಲಿ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಸ್ವಲ್ಪ ಬಂಡವಾಳ ಸಂಗ್ರಹಿಸಿದರು. ಬ್ರೂಕ್ಲಿನ್‌ನಲ್ಲಿ ಮೊದಲ ಮಳಿಗೆ ತೆರೆಯಲು ಸುಮಾರು 200,000 ಡಾಲರ್ ಅಂದರೆ ಸುಮಾರು 1.6 ಕೋಟಿ ರೂ. ಕ್ರೆಡಿಟ್ ಕಾರ್ಡ್ ಸಾಲ ಮಾಡಿದ್ದರು. ಈ ಸಾಲವನ್ನು ತೀರಿಸಲು ಅವರಿಗೆ ಸುಮಾರು 2 ವರ್ಷಗಳು ಬೇಕಾಯಿತು.
ಇಂದು, 'ಮಲೈ' ಕಂಪನಿಯ ಶೇಕಡಾ 80ರಷ್ಟು ಆದಾಯ ಅದರ ಮಳಿಗೆಗಳಿಂದಲೇ ಬರುತ್ತಿದೆ ಮತ್ತು ಆ ಎಲ್ಲಾ ಮಳಿಗೆಗಳು ಲಾಭದಾಯಕವಾಗಿವೆ. ಉದ್ಯಮ ವಿಸ್ತರಣೆಗಾಗಿ 1.8 ಮಿಲಿಯನ್ ಡಾಲರ್ ಹೊರಗಿನ ಹೂಡಿಕೆಯನ್ನು ಪಡೆಯಲಾಗಿದ್ದರೂ, ಪೂಜಾ ಅವರೇ ಈಗಲೂ ಕಂಪನಿಯ ಬಹುಪಾಲು ಒಡೆತನವನ್ನು ಹೊಂದಿದ್ದಾರೆ.
ಭವಿಷ್ಯದಲ್ಲಿ ಅಮೆರಿಕದಾದ್ಯಂತ ಕಿರಾಣಿ ಅಂಗಡಿಗಳು ಮತ್ತು ರಿಟೇಲರ್‌ಗಳ ಮೂಲಕ 'ಮಲೈ' ಬ್ರ್ಯಾಂಡ್ ಅನ್ನು ವಿಸ್ತರಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ. "ಭಾರತೀಯ ಸ್ವಾದಗಳು ಕೇವಲ ಪ್ರಯೋಗವಲ್ಲ, ಅವು ತಲೆಮಾರುಗಳಿಂದ ಶತಕೋಟಿ ಜನರ ದೈನಂದಿನ ಭಾಗವಾಗಿವೆ. ಇವುಗಳನ್ನು ಅಮೆರಿಕದ ಮುಖ್ಯವಾಹಿನಿಯ ಮಾರುಕಟ್ಟೆಗೆ ಪರಿಚಯಿಸುತ್ತಿರುವುದಕ್ಕೆ ಹಾಗೂ ಅದರಲ್ಲಿ ನಾವು ನಾಯಕರಾಗಿರುವುದಕ್ಕೆ ನನಗೆ ಅತೀವ ಹೆಮ್ಮೆಯಿದೆ" ಎಂದು ಪೂಜಾ ಸಂತಸ ಹಂಚಿಕೊಂಡಿದ್ದಾರೆ.












Click it and Unblock the Notifications