IIT, IIM ಓದಿದರೂ ಸಂತೋಷವಾಗಿರುವುದು ಹೇಗೆಂದು ಕಲಿಸಿಲ್ಲ: ಶಿಕ್ಷಣ ವ್ಯವಸ್ಥೆ ಬಗ್ಗೆ IAS ಅಧಿಕಾರಿ ದಿವ್ಯಾ ಮಿತ್ತಲ್ ಬೇಸರ

ನವದೆಹಲಿ: "ಐಐಟಿ ದೆಹಲಿ, ಐಐಎಂ ಬೆಂಗಳೂರು ನಂತರ ಐಎಎಸ್. ನನ್ನ ದೇಶ ನೀಡಬಹುದಾದ ಎಲ್ಲಾ ಅತ್ಯುತ್ತಮ ಶಿಕ್ಷಣವನ್ನು ನಾನು ಪಡೆದಿದ್ದೇನೆ. ಕಠಿಣ ಪರೀಕ್ಷೆಗಳನ್ನು ಎದುರಿಸುವುದು ಮತ್ತು ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಇದು ನನಗೆ ಕಲಿಸಿತು. ಆದರೆ, ನನ್ನ ಮನಸ್ಸನ್ನು ಹೇಗೆ ಶಾಂತವಾಗಿಟ್ಟುಕೊಳ್ಳಬೇಕು ಅಥವಾ ಒಂಟಿತನವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಇದು ನನಗೆಂದೂ ಕಲಿಸಲಿಲ್ಲ."

ಉನ್ನತ ಶಿಕ್ಷಣ ಪಡೆದು ಐಎಎಸ್ ಅಧಿಕಾರಿಯಾಗಿರುವ ದಿವ್ಯಾ ಮಿತ್ತಲ್ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಸಾಲುಗಳು ಇದೀಗ ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿವೆ.

Divya Mittal

ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ, ನಾಗರಿಕ ಸೇವೆಗೆ (ಯುಪಿಎಸ್‌ಸಿ) ಸೇರಿದ ದಿವ್ಯಾ ಮಿತ್ತಲ್, ನಮ್ಮ ಶಿಕ್ಷಣ ವ್ಯವಸ್ಥೆಯು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವೃತ್ತಿಪರ ಜವಾಬ್ದಾರಿಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆಯೇ ಹೊರತು, ಭಾವನಾತ್ಮಕ ಹೋರಾಟಗಳು, ಒಂಟಿತನ ಅಥವಾ ನಮ್ಮನ್ನು ನಾವು ಅರ್ಥಮಾಡಿಕೊಳ್ಳುವ ಜೀವನ ಕೌಶಲ್ಯಗಳನ್ನು ಕಲಿಸುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

"ನಾವು ಸಾಧನೆ ಮಾಡುವುದು ಹೇಗೆ ಎಂಬುದನ್ನು ಕಲಿಯಲು ವರ್ಷಗಟ್ಟಲೆ ಕಳೆಯುತ್ತೇವೆ. ಆದರೆ, ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿಯಲು ಒಂದು ದಿನವನ್ನೂ ಕೂಡ ಮೀಸಲಿಡುವುದಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

ಅವರ ಈ ಪೋಸ್ಟ್‌ಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಭಾರತದಲ್ಲಿನ ಶಾಲಾ-ಕಾಲೇಜುಗಳು ಕೇವಲ ಅಂಕಗಳು, ರ‍್ಯಾಂಕಿಂಗ್ ಮತ್ತು ಪ್ರವೇಶ ಪರೀಕ್ಷೆಗಳ ಮೇಲೆ ಹೆಚ್ಚು ಗಮನಹರಿಸುತ್ತಿದ್ದು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಆರ್ಥಿಕ ತಿಳುವಳಿಕೆ ಮತ್ತು ಜೀವನ ಕೌಶಲ್ಯಗಳಿಗೆ ಯಾವುದೇ ಮಹತ್ವ ನೀಡುತ್ತಿಲ್ಲ ಎಂಬ ವಾದಗಳು ಎಲ್ಲೆಡೆ ಕೇಳಿಬರುತ್ತಿವೆ.

ಈ ರೀತಿಯ ಶಿಕ್ಷಣದಿಂದ ಕೈಬಿಟ್ಟುಹೋಗಿರುವ ಹಲವಾರು ಪ್ರಮುಖ ಅಂಶಗಳನ್ನು ಮಿತ್ತಲ್ ತಮ್ಮ ಪೋಸ್ಟ್‌ನಲ್ಲಿ ಪಟ್ಟಿ ಮಾಡಿದ್ದಾರೆ. ಭಾವನಾತ್ಮಕ ನಿಯಂತ್ರಣದ ಬಗ್ಗೆ ಬರೆದಿರುವ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಪರಿಕಲ್ಪನೆಗಳನ್ನು ಕಲಿಯುತ್ತಾರೆ, ಆದರೆ ದುಃಖ, ಒತ್ತಡ ಅಥವಾ ವೈಫಲ್ಯವನ್ನು ಹೇಗೆ ಎದುರಿಸಬೇಕು ಎಂಬುದನ್ನು ಅವರಿಗೆ ಕಲಿಸಲಾಗುವುದಿಲ್ಲ ಎಂದಿದ್ದಾರೆ. "ನಾವು ಆವರ್ತಕ ಕೋಷ್ಟಕವನ್ನು (periodic table) ಕಂಠಪಾಠ ಮಾಡಿದ್ದೇವೆ. ಆದರೆ, ದುಃಖದಲ್ಲಿ ಹೃದಯ ಒಡೆದು ಹೋಗುವುದರ ರಸಾಯನಶಾಸ್ತ್ರ (chemistry of a broken heart) ಯಾರೂ ವಿವರಿಸಿಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಸಂವಹನ ಕೌಶಲ್ಯದ ಕೊರತೆಯ ಬಗ್ಗೆಯೂ ಹೇಳಿರುವ ಮಿತ್ತಲ್, ಪ್ರಬಂಧಗಳನ್ನು ಬರೆಯಲು ಮತ್ತು ಅಂಕಗಳನ್ನು ಗಳಿಸಲು ಕಲಿಸಲಾಗುತ್ತದೆ. ಆದರೆ, ಕಷ್ಟಕರ ಸಂದರ್ಭಗಳಲ್ಲಿ ಅಸ್ವಸ್ಥತೆಯನ್ನು ವ್ಯಕ್ತಪಡಿಸುವುದು ಅಥವಾ 'ಇಲ್ಲ' ಎಂದು ಹೇಳುವುದನ್ನು ಹೇಳಿಕೊಡಲಾಗುವುದಿಲ್ಲ ಎಂದಿದ್ದಾರೆ.

"ಶಾಲೆಯಲ್ಲಿ, ಹೆಚ್ಚು ಉತ್ತರಗಳನ್ನು ಹೊಂದಿರುವ ವ್ಯಕ್ತಿ ಗೆಲ್ಲುತ್ತಾನೆ. ಆದರೆ ನಿಜ ಜೀವನದಲ್ಲಿ, ಹೆಚ್ಚು ಪ್ರಶ್ನೆಗಳನ್ನು ಕೇಳುವ ವ್ಯಕ್ತಿ ಮಾತ್ರ ಬದುಕುಳಿಯುತ್ತಾನೆ" ಎಂದು ವಿಮರ್ಶಾತ್ಮಕ ಚಿಂತನೆಯ ಬಗ್ಗೆ ಅವರು ಬರೆದಿದ್ದಾರೆ. ಇನ್ನು ಹಣಕಾಸಿನ ಸಾಕ್ಷರತೆಯ ಬಗ್ಗೆಯೂ ಧ್ವನಿ ಎತ್ತಿರುವ ಅವರು, ಗಣಿತದಲ್ಲಿ ಸಾಲ, ಖರ್ಚು ಮಾಡುವ ಅಭ್ಯಾಸಗಳು ಅಥವಾ ಆರ್ಥಿಕ ಒತ್ತಡವನ್ನು ನಿಭಾಯಿಸಲು ಸಿದ್ಧಪಡಿಸುವುದಿಲ್ಲ. ಶಿಕ್ಷಣವು ಹೆಚ್ಚಾಗಿ ಹಣವನ್ನು ಸಂಪಾದಿಸುವತ್ತ ಗಮನಹರಿಸುತ್ತದೆ ವಿನಃ ಅದನ್ನು ನಿರ್ವಹಿಸುವತ್ತ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕ ಬಳಕೆದಾರರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಮಿತ್ತಲ್ ಅವರ ವಾದವನ್ನು ಬೆಂಬಲಿಸಿ, ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಯಶಸ್ವಿಯಾಗಲು ಸಿದ್ಧಪಡಿಸುತ್ತದೆಯೇ ಹೊರತು ಭಾವನಾತ್ಮಕವಾಗಿ ಅಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ದಿವ್ಯಾ ಮಿತ್ತಲ್ ಅವರ ಪೋಸ್ಟ್ ಶೈಕ್ಷಣಿಕ ಶಿಕ್ಷಣದ ಮೌಲ್ಯವನ್ನು ಪ್ರಶ್ನಿಸಿಲ್ಲ. ಬದಲಾಗಿ, ಶಿಕ್ಷಣವು ವಿದ್ಯಾರ್ಥಿಗಳನ್ನು ಕೇವಲ ವೃತ್ತಿಜೀವನಕ್ಕೆ ಮಾತ್ರ ಸಿದ್ಧಪಡಿಸಬೇಕೇ ಅಥವಾ ಭವಿಷ್ಯದ ಅನಿಶ್ಚಿತತೆ, ವೈಫಲ್ಯ, ಸಂಬಂಧಗಳು ಮತ್ತು ಜೀವನಕ್ಕೂ ಸಿದ್ಧಪಡಿಸಬೇಕೇ ಎಂಬ ಗಂಭೀರ ಪ್ರಶ್ನೆಯನ್ನು ವ್ಯವಸ್ಥೆಯ ಮುಂದಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+