'ಹೇ ನಿತಿನ್, ಡ್ರಿಂಕ್ಸ್‌ಗೆ ಬರ್ತೀರಾ?': ಸಿಇಒಗೆ ಆಫರ್ ಕೊಟ್ಟ ಜೆನ್ ಜಿ ಉದ್ಯೋಗಿ, ಕಾರ್ಪೊರೇಟ್ ಲೋಕದಲ್ಲಿ ಹೊಸ ಚರ್ಚೆ!
ನೊಯ್ಡಾ ಮೂಲದ ಸಿಇಒ ಒಬ್ಬರು ತಮ್ಮ ಜೆನ್ ಜಿ ಉದ್ಯೋಗಿ ಕಡೆಯಿಂದ ಬಂದ ಕ್ಯಾಶುಯಲ್ ಆಹ್ವಾನವೊಂದನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಇದು ಕಾರ್ಪೊರೇಟ್ ವಲಯದ ಹೈರಾರ್ಕಿಯ ಕುರಿತು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಜೆನ್- ಜಿ ಉದ್ಯೋಗಿಯೊಬ್ಬರು ಸಿಇಒ ಅವರನ್ನು ಡ್ರಿಂಕ್ಸ್‌ಗೆ ಆಹ್ವಾನಿಸಿದ್ದು ಉಳಿದ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿತ್ತು.
ಹಳೆಯ ತಲೆಮಾರಿನವರು ಕಟ್ಟುನಿಟ್ಟಾದ ನಿಯಮ ಮತ್ತು ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಗೌರವ ತೋರಿಸುತ್ತಿದ್ದರು. ಆದರೆ ಇಂದಿನ ಪೀಳಿಗೆ ಕಾರ್ಪೊರೇಟ್ ಹುದ್ದೆಗಳಿಗಿಂತ ನೈಜತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ಸಿಇಒ ನಿತಿನ್ ವರ್ಮಾ ಹೇಳಿದ್ದಾರೆ.

ಜೆನ್ ಜಿ ಉದ್ಯೋಗಿ ಮತ್ತು ಕಾರ್ಪೊರೇಟ್ ಹೈರಾರ್ಕಿ
ನೊಯ್ಡಾ ಮೂಲದ ಸಿಇಒ ನಿತಿನ್ ವರ್ಮಾ ಅವರು ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. " 'ಹೇ ನಿತಿನ್, ನೀವು ನಮ್ಮೊಂದಿಗೆ ಡ್ರಿಂಕ್ಸ್‌ಗೆ ಬರ್ತೀರಾ?' ಎಂದು ನನ್ನ ಜೆನ್ ಜಿ ಉದ್ಯೋಗಿಯೊಬ್ಬರು ಕೇಳಿದರು. ಅದನ್ನು ಕೇಳಿ ಉಳಿದ ತಂಡದವರು ಆತನನ್ನು ಯಾವುದೋ ದೊಡ್ಡ ಅಪರಾಧ ಮಾಡಿದವನಂತೆ ನೋಡಿದರು. ಅಂದು ಸಂಜೆ ನಾನು ಆ ಆಹ್ವಾನವನ್ನು ನಿರಾಕರಿಸಿದೆ. ಆದರೆ ಆ ಕ್ಷಣದ ಬಗ್ಗೆ ನಾನು ಯೋಚಿಸುವುದನ್ನು ಇನ್ನು ನಿಲ್ಲಿಸಿಲ್ಲ," ಎಂದು ವರ್ಮಾ ಬರೆದುಕೊಂಡಿದ್ದಾರೆ.
ಆ ಒಂದು ಪ್ರಶ್ನೆ ಯುವ ಉದ್ಯೋಗಿಗಳು ಕಚೇರಿಯ ಸಂಬಂಧಗಳನ್ನು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ಯೋಚಿಸುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ. "ಅವನು ನನ್ನಲ್ಲಿ ಒಬ್ಬ ಸಿಇಒ ಅನ್ನು ನೋಡಲಿಲ್ಲ. ಬದಲಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ನೋಡಿದನು. ತನ್ನ ಸ್ನೇಹಿತನನ್ನು ಆಹ್ವಾನಿಸುವಷ್ಟೇ ಕ್ಯಾಶುಯಲ್ ಆಗಿ ನನ್ನನ್ನು ಡ್ರಿಂಕ್ಸ್‌ಗೆ ಕರೆದನು. ಆದರೆ ತಂಡದ ಇತರ ಸದಸ್ಯರು ನನ್ನಲ್ಲಿ ಕೇವಲ ಒಂದು ಹುದ್ದೆ ಹಾಗೂ ಮೀರಬಾರದ ಗಡಿಯೊಂದನ್ನು ಮಾತ್ರ ನೋಡಿದರು" ಎಂದು ಅವರು ವಿವರಿಸಿದ್ದಾರೆ.
ಕಚೇರಿ ಸಂಸ್ಕೃತಿ ಬಗ್ಗೆ ಸಿಇಒ ಅಭಿಪ್ರಾಯ
"ಹಿರಿಯರು ಕೋಣೆಗೆ ಪ್ರವೇಶಿಸಿದಾಗ ಎದ್ದು ನಿಲ್ಲುವುದು, ಮೇಲಧಿಕಾರಿಗಳ ಮುಂದೆ ಎಚ್ಚರಿಕೆಯಿಂದ ಮಾತನಾಡುವುದು - ಇದು ಹಿಂದಿನ ತಲೆಮಾರಿನವರಿಗೆ ಗೌರವದ ಸಂಕೇತವಾಗಿತ್ತು. ಆದರೆ ಯುವ ಜನತೆ ಹುದ್ದೆಗಳನ್ನು ಗೌರವಿಸುವುದಿಲ್ಲ, ಅವರು ವ್ಯಕ್ತಿಗಳನ್ನು ಗೌರವಿಸುತ್ತಾರೆ. ನೀವು ನೈಜವಾಗಿ ಹಾಗೂ ಸ್ನೇಹಪರವಾಗಿ ಇದ್ದರೆ, ನಿಮಗೂ ಡ್ರಿಂಕ್ಸ್‌ಗೆ ಆಹ್ವಾನ ಸಿಗುತ್ತದೆ" ಎಂದು ಸಿಇಒ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಇಂತಹ ನಡವಳಿಕೆಯನ್ನು 'ವೃತ್ತಿಪರತೆಯ ಕೊರತೆ' ಎಂದು ಅವರು ಭಾವಿಸಿದ್ದರು. ಆದರೆ ಈಗ ಇದು ಅತ್ಯಂತ ಪ್ರಾಮಾಣಿಕವಾದ ಗೌರವದ ರೂಪವಾಗಿರಬಹುದು ಎಂದು ಅವರು ನಂಬುತ್ತಾರೆ. "ಇದು ಭಯದಿಂದ ನೀಡುವ ಗೌರವವಲ್ಲ, ಸಹಜತೆಯಿಂದ ಬರುವ ಗೌರವ. ಅಂದು ನಾನು ಆಹ್ವಾನವನ್ನು ನಿರಾಕರಿಸಿಬಹುದು, ಆದರೆ ಮುಂದಿನ ಬಾರಿ ಖಂಡಿತ ಒಪ್ಪಿಕೊಳ್ಳಬಹುದು" ಎಂದು ವರ್ಮಾ ಬರೆದಿದ್ದಾರೆ.

ಲಿಂಕ್ಡ್‌ಇನ್ ವೈರಲ್ ಪೋಸ್ಟ್
ಸಿಇಒ ಅವರ ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅನೇಕ ವೃತ್ತಿಪರರು ನಾಯಕತ್ವ ಮತ್ತು ಕಚೇರಿ ಸಂಸ್ಕೃತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಒಬ್ಬ ಬಳಕೆದಾರರು, "ಉದ್ಯೋಗಿಗಳು ತಮ್ಮ ಸಿಇಒ ಅವರನ್ನು ಡ್ರಿಂಕ್ಸ್‌ಗೆ ಆಹ್ವಾನಿಸುವಷ್ಟು ಮುಕ್ತವಾಗಿದ್ದಾರೆ ಎಂದರೆ, ಆ ಆಫೀಸ್‌ನ ವಾತಾವರಣ ಅತ್ಯುತ್ತಮವಾಗಿದೆ ಎಂದರ್ಥ. ನಿಜವಾದ ಗೌರವವು ನಂಬಿಕೆ ಮತ್ತು ಪರಸ್ಪರ ಸಹಜತೆಯ ಮೇಲೆ ನಿರ್ಮಾಣವಾಗುತ್ತದೆಯೇ ಹೊರತು, ಕೃತಕ ಅಂತರವನ್ನು ಕಾಯ್ದುಕೊಳ್ಳುವುದರಿಂದಲ್ಲ" ಎಂದು ಕಮೆಂಟ್ ಮಾಡಿದ್ದಾರೆ. "ಎಲ್ಲರೂ ಎಚ್ಚರಿಕೆಯಿಂದ ಮಾತನಾಡುವ ವಾತಾವರಣಕ್ಕಿಂತ, ಮುಕ್ತವಾಗಿ ಮಾತನಾಡುವ ಕಚೇರಿ ಸಂಸ್ಕೃತಿ ಹೆಚ್ಚು ಬಲಿಷ್ಠವಾಗಿರುತ್ತದೆ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜೆನ್ ಜಿ ಉದ್ಯೋಗಿಗಳು ಕೆಲಸ ಮಾಡುವ ಕ್ರಮ ಮತ್ತು ಅವರ ನಿರ್ಧಾರಗಳು ಆಗಾಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ.
ಇತ್ತೀಚೆಗಷ್ಟೇ, ಉದ್ಯೋಗಿಯೊಬ್ಬರು ರಾತ್ರಿ 9 ಗಂಟೆಯ ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ನೇರವಾಗಿ ನಿರಾಕರಿಸಿದ ಘಟನೆ ಲಿಂಕ್ಡ್‌ಇನ್‌ನಲ್ಲಿ ಭಾರಿ ವೈರಲ್ ಆಗಿತ್ತು. ಇದು ಕಚೇರಿಯ ಸಮಯ, ಬರ್ನ್‌ಔಟ್ ಮತ್ತು ಕನೆಕ್ಟ್ ಆಗುವ ಹಕ್ಕಿನ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ಹಿಂದಿನ ತಲೆಮಾರುಗಳು ಕಚೇರಿಗಾಗಿ ತಮ್ಮ ವೈಯಕ್ತಿಕ ಸಮಯವನ್ನು ತ್ಯಾಗ ಮಾಡುತ್ತಿದ್ದರೆ, ಈಗಿನ ಉದ್ಯೋಗಿಗಳು ತಮ್ಮ ವೈಯಕ್ತಿಕ ಸಮಯ ಹಾಗೂ ವೃತ್ತಿಪರ ಗಡಿಗಳನ್ನು ಸ್ಪಷ್ಟವಾಗಿ ಕಾಯ್ದುಕೊಳ್ಳುವಲ್ಲಿ ಹೆಚ್ಚು ದಿಟ್ಟರಾಗಿದ್ದಾರೆ ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ.












Click it and Unblock the Notifications