ಪತ್ನಿಗೆ ಬರ್ತ್ಡೇ ಸರ್ಪ್ರೈಸ್ ಕೊಡಲು ಫ್ಲೈಓವರ್ ಅನ್ನೇ ಪಾರ್ಟಿ ಹಾಲ್ ಮಾಡಿಕೊಂಡ ಉದ್ಯಮಿ, ಪೊಲೀಸರಿಂದಲೂ ಸಿಕ್ತು ಗಿಫ್ಟ್
ಹೆಂಡತಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲು ಶ್ರೀಮಂತರು ಐಷಾರಾಮಿ ಹೋಟೆಲ್ ಬುಕ್ ಮಾಡುವುದು, ದುಬಾರಿ ಕಾರು ಕೊಡಿಸುವುದು ಸಾಮಾನ್ಯ. ಆದರೆ, ಭಾರತದ ಉದ್ಯಮಿಯೊಬ್ಬರು ತಮ್ಮ ಧರ್ಮಪತ್ನಿಗೆ ಎಂದೂ ಮರೆಯಲಾಗದ 'ಬರ್ತ್ಡೇ ಸರ್ಪ್ರೈಸ್' ಕೊಡಲು ಹೋಗಿ ಇಡೀ ನಗರದ ಜನರಿಗೇ ಶಾಕ್ ಕೊಟ್ಟಿದ್ದಾರೆ. ಹೋಟೆಲ್, ಪಾರ್ಟಿ ಹಾಲ್ಗಳನ್ನೆಲ್ಲ ಬಿಟ್ಟು ಇವರು ಆರಿಸಿಕೊಂಡ ಜಾಗ ನಗರದ ಅತ್ಯಂತ ಬ್ಯುಸಿ ಫ್ಲೈಓವರ್.
ಹೌದು, ಸಾರ್ವಜನಿಕರ ಸಂಚಾರಕ್ಕೆ ನಿರ್ಮಿಸಿರುವ ಫ್ಲೈಓವರ್ ಅನ್ನೇ ತಮ್ಮ ಸ್ವಂತ ಪಾರ್ಟಿ ಹಾಲ್ ಮಾಡಿಕೊಂಡ ಅಸ್ಸಾಂನ ಗುವಾಹಟಿಯ ಈ ರೋಮ್ಯಾಂಟಿಕ್ ಉದ್ಯಮಿಯ ಹೈಡ್ರಾಮಾ ಈಗ ಅವರಿಗೇ ಕುತ್ತು ತಂದಿಟ್ಟಿದೆ. ಫ್ಲೈಓವರ್ ಮೇಲೆಯೇ ತನ್ನ ದುಬಾರಿ ಡಿಫೆಂಡರ್ ಕಾರನ್ನು ಅಡ್ಡಲಾಗಿ ನಿಲ್ಲಿಸಿ, ರಸ್ತೆ ಬ್ಲಾಕ್ ಮಾಡಿ, ಕೇಕ್ ಕತ್ತರಿಸಿ ಪಟಾಕಿ ಸಿಡಿಸಿದ ಈ ಶ್ರೀಮಂತ ಆಚರಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ.

ಸಾರ್ವಜನಿಕ ಆಸ್ತಿ ಹಾಗೂ ಸಂಚಾರ ರಸ್ತೆಗಳನ್ನು ತಮ್ಮ ವೈಯಕ್ತಿಕ ಮೋಜು-ಮಸ್ತಿಗಾಗಿ ಬಳಸಿಕೊಳ್ಳುವ ಶ್ರೀಮಂತರ ಉದ್ಧಟತನಕ್ಕೆ ಅಸ್ಸಾಂನಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಗುವಾಹಟಿಯ ಪ್ರಸಿದ್ಧ 'ಕುಮಾರ್ ಭಾಸ್ಕರ್ ವರ್ಮಾ' ಸೇತುವೆಯ ಮೇಲೆ ಸಂಚಾರಕ್ಕೆ ಅಡ್ಡಿಪಡಿಸಿ, ತನ್ನ ಪತ್ನಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದ ಉದ್ಯಮಿಯನ್ನು ಪೊಲೀಸರು ಸದ್ಯ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
Businessman Gautam Baruah landed in trouble while celebrating his wife’s birthday. Baruah was detained by Bharalumukh Police for allegedly organizing a birthday celebration on the Kumar Bhaskar Varma Bridge, where a red carpet was laid out. Police action was taken after… pic.twitter.com/1oZH0gbSQ7
— atanu bhuyan (@atanubhuyan) June 23, 2026
ಸೇತುವೆಯನ್ನೇ ಪಾರ್ಟಿ ಹಾಲ್ ಮಾಡಿದ ಉದ್ಯಮಿ
ಸ್ಥಳೀಯ ಮೂಲಗಳ ಪ್ರಕಾರ, ಗುವಾಹಟಿಯ ಉದ್ಯಮಿಯೊಬ್ಬರು ತಮ್ಮ ಪತ್ನಿಯ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿ, ಕುಮಾರ್ ಭಾಸ್ಕರ್ ವರ್ಮಾ ಸೇತುವೆಯನ್ನು ಆರಿಸಿಕೊಂಡಿದ್ದರು. ಸೇತುವೆಯ ಮೇಲೆಯೇ ವಾಹನಗಳನ್ನು ನಿಲ್ಲಿಸಿ, ರಸ್ತೆಯನ್ನು ಬ್ಲಾಕ್ ಮಾಡಿ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು ಹಾಗೂ ಮ್ಯೂಸಿಕ್ ಹಾಕಿ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸೇತುವೆಯ ಮೇಲಿನ ಈ ಹುಟ್ಟುಹಬ್ಬದ ಆಚರಣೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಮತ್ತು ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಮಂತಿಕೆಯನ್ನು ಪ್ರದರ್ಶಿಸಲು ಸಾರ್ವಜನಿಕ ಸೇತುವೆ ಮತ್ತು ರಸ್ತೆಗಳು ಇವರಿಗೇನು ಸ್ವಂತ ಆಸ್ತಿಯೇ? ಸಾಮಾನ್ಯ ಜನರಿಗೆ ತೊಂದರೆ ಕೊಡುವ ಇವರ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಗುವಾಹಟಿ ಪೊಲೀಸರನ್ನು ಟ್ಯಾಗ್ ಮಾಡಿ ಒತ್ತಾಯಿಸಿದ್ದರು.
ಉದ್ಯಮಿ ಪೊಲೀಸ್ ವಶಕ್ಕೆ
ಸಾರ್ವಜನಿಕರ ಆಕ್ರೋಶ ಮತ್ತು ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಗುವಾಹಟಿ ಪೊಲೀಸರು, ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಉದ್ಯಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಬೇಜವಾಬ್ದಾರಿ ವರ್ತನೆಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲೇ ಬರ್ತ್ಡೇ ಪಾರ್ಟಿ ಮಾಡಿ ಜನಾಕ್ರೋಶಕ್ಕೆ ಈಡಾಗಿದ್ದ ಆ ಉದ್ಯಮಿಯನ್ನು ಗೌತಮ್ ಬರುವಾ ಎಂದು ಗುರುತಿಸಲಾಗಿದೆ. ತನ್ನ ಧರ್ಮಪತ್ನಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಹಪಾಹಪಿಗೆ ಬಿದ್ದ ಗೌತಮ್, ಫ್ಲೈಓವರ್ ಮೇಲೆ ಸಂಚಾರಕ್ಕೆ ಅಡ್ಡಿಪಡಿಸಿ ಈ ಬೇಜವಾಬ್ದಾರಿ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಪೊಲೀಸರು ಗೌತಮ್ ಬರುವಾ ವಿರುದ್ಧ ಸಾರ್ವಜನಿಕರಿಗೆ ತೊಂದರೆ ನೀಡಿದ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸರು ಇದುವರೆಗೆ 14 ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ಪಾರ್ಟಿ ಮಾಡಲು ಫ್ಲೈಓವರ್ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದ್ದ 4 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications