Get Updates
Get notified of breaking news, exclusive insights, and must-see stories!

Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿ ಖರೀದಿ ಹಾಗೂ ಆಸ್ತಿ ಮಾರಾಟ ವಿಚಾರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭಾರೀ ಬದಲಾವಣೆಗಳು ಆಗಿವೆ. ಅದರಲ್ಲಿ ಖಾತಾಗಳ ವಿಚಾರದಲ್ಲಿ ಆಗಿರುವ ಬದಲಾವಣೆಗಳು ಮಹತ್ವದ್ದಾಗಿದೆ. ಇ ಖಾತಾ ಬದಲಾವಣೆಯು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ನವೀನ ಇ-ಖಾತಾ (e-Khata) ಯೋಜನೆಗೆ 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ (National e-Governance Award 2025) ಪ್ರಶಸ್ತಿ ಸಿಕ್ಕಿದೆ. ಇ ಖಾತಾ ಪರಿಚಯವು ಆಸ್ತಿ ವಿಷಯದಲ್ಲಿ ಡಿಜಿಟಲ್ ಕ್ರಾಂತಿ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇನ್ನು ಕರ್ನಾಟಕದಲ್ಲಿ ಆಸ್ತಿದಾರರು ದಶಕಗಳಿಂದ ಎದುರಿಸುತ್ತಿದ್ದ ಸವಾಲುಗಳಲ್ಲಿ ಒಂದಾಗಿರುವ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೂ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಖಾತಾ ಎಂದರೇನು, ಇ - ಖಾತಾ, ಬಿ ಖಾತಾ ಹಾಗೂ ಎ ಖಾತಾ ಎಂದರೇನು, ಈಗ ಇ ಖಾತಾ ಹಾಗೂ ಬಿ ಖಾತಾದಲ್ಲಿ ಆಗಿರುವ ಬದಲಾವಣೆಗಳೇನು, ಗೊಂದಲಗಳೇನು ಹಾಗೂ ಆಸ್ತಿದಾರರಿಗೆ ಆಗಿರುವ ಲಾಭ - ನಷ್ಟಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಆಸ್ತಿ ವಿಚಾರದಲ್ಲಿ ದೇಶದಲ್ಲೇ ಮಾದರಿ ಕ್ರಮಗಳನ್ನು ಅಳವಡಿಸಿಕೊಂಡಿದೆ. ಇದರಿಂದ ಆಸ್ತಿದಾರರು - ಹೊಸದಾಗಿ ಆಸ್ತಿ ಖರೀದಿ ಮಾಡುವವರಿಗೆ ಭಾರೀ ಅನುಕೂಲವಾಗಿದೆ. ಆದರೆ ಇದೇ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳು ಸಹ ಆಗಿವೆ. ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳಿಗೆ ಪ್ರಾಪರ್ಟಿಗಳಿಂದ ಬರುವ ಆದಾಯವು ಬಹುದೊಡ್ಡ ಆದಾಯವಾಗಿದೆ. ಆಸ್ತಿ ನೋಂದಣಿ ಹಾಗೂ ಆಸ್ತಿ ತೆರಿಗೆಯಿಂದಲೇ ಕರ್ನಾಟಕ ಸರ್ಕಾರವು ವಾರ್ಷಿಕವಾಗಿ ಅಂದಾಜು 25,000 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗುತ್ತದೆ. ಆದರೆ, ಆಸ್ತಿ ತೆರಿಗೆ ವಂಚನೆಯೂ ಆಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಆಸ್ತಿಗಳಿಗೆ ಇ - ಖಾತಾ ಕಡ್ಡಾಯ ಮಾಡಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಆದಾಯ ಸಂಗ್ರಹ ಹೆಚ್ಚಳವಾಗಿದ್ದು, ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಆಗುತ್ತಿದ್ದ ಸಮಸ್ಯೆಗಳು ತಪ್ಪಿವೆ. ಮುಖ್ಯವಾಗಿ ಆಸ್ತಿ ಮಾರಾಟದಲ್ಲಿನ ಮೋಸಕ್ಕೆ ಕಡಿವಾಣ ಬಿದ್ದಂತೆ ಆಗಿದೆ.

Property

ಖಾತಾ ಎಂದರೇನು

ಖಾತಾ ಪ್ರಮಾಣ ಪತ್ರ ಎನ್ನುವುದು ಆಸ್ತಿ ಮಾಲೀಕತ್ವ ಹಾಗೂ ಆ ಆಸ್ತಿಯ ನಿಖರ ಮಾಹಿತಿಯನ್ನು ಒಳಗೊಂಡಿರುತ್ತದೆ. ಜಿಬಿಎ ಸೇರಿದಂತೆ ಕರ್ನಾಟಕದ ಆಯಾ ಸ್ಥಳೀಯ ಸಂಸ್ಥೆಗಳು ನೀಡುವ ಈ ಪ್ರಮಾಣಪತ್ರದಲ್ಲಿ ಆಸ್ತಿಯ ಗಾತ್ರ, ಯಾವ ಪ್ರದೇಶ, ಸ್ಥಳ ಹಾಗೂ ಆ ಆಸ್ತಿ ವಸತಿ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆಯೋ ಅಥವಾ ವಾಣಿಜ್ಯ ಯಾವ ವ್ಯಾಪ್ತಿಗೆ ಸೇರಿದೆ ಎನ್ನುವುದು ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯೂ ಖಾತಾ ಪತ್ರದ ವಿವರದಲ್ಲಿ ಇರುತ್ತದೆ.

ಇ -ಖಾತಾ ಎಂದರೇನು

1. ಇ-ಖಾತಾ ಎನ್ನುವುದು ಆಸ್ತಿ ವಿವರಗಳನ್ನು ಡಿಜಿಟಲೀಕರಣಗೊಳಿಸುವ ಆನ್‌ಲೈನ್ ವ್ಯವಸ್ಥೆಯಾಗಿದೆ. ಈ ಹಿಂದೆ ಆಸ್ತಿ ದಾಖಲೆಗಳ ವಿವರಗಳು ಕಾಗದ ರೂಪದಲ್ಲಿ ಇರುತ್ತಿದ್ದವು. ಅದನ್ನು ಇದೀಗ ಡಿಜಿಟಲೀಕರಣ ಮಾಡಲಾಗಿದೆ.

2. ಇ-ಖಾತಾ ಆಸ್ತಿ ನೋಂದಣಿ, ತೆರಿಗೆ ಪಾವತಿ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಣ ಮಾಡುತ್ತದೆ. ಇದರಿಂದ ಆಸ್ತಿದಾರರು ತಮ್ಮ ಆಸ್ತಿ ಮಾರಾಟ ಮತ್ತು ಖರೀದಿ ಮಾಡುವುದಕ್ಕೆ ತುಂಬಾ ಸಹಾಯ ಆಗುತ್ತದೆ.

3. ಇ-ಖಾತಾ ಆಸ್ತಿ ಪಾರದರ್ಶಕತೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಆಸ್ತಿ ಲೋಪಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

4. ಇ-ಖಾತಾ ಆಸ್ತಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವಾಗ ಮೋಸ ಹೋಗದಂತೆ ತಪ್ಪಿಸಲು ಸಾಧ್ಯವಾಗುತ್ತದೆ. ಆಸ್ತಿದಾರರ ಹೆಸರು, ನಿಖರ ವಿಳಾಸ ಹಾಗೂ ಆಸ್ತಿಯ ಚಿತ್ರ ಸೇರಿದಂತೆ ಸಂಪೂರ್ಣ ಮಾಹಿತಿಯು ಇದರಲ್ಲಿ ಇರುವುದರಿಂದ ಆನ್‌ಲೈನ್‌ನ ಮೂಲಕವೂ ಪರಿಶೀಲನೆ ಮಾಡಬಹುದು. ಒಟ್ಟಾರೆ ಆಸ್ತಿಯ ಸಂಪೂರ್ಣ ವಿವರ ಸಿಗಲಿದೆ.

ಎ - ಖಾತಾ ಎಂದರೇನು, ಆಸ್ತಿ ವಿಷಯದಲ್ಲಿ ಯಾಕೆ ಮುಖ್ಯವಾಗುತ್ತದೆ

1. ಎ ಖಾತಾ ಎನ್ನುವುದು ಆಸ್ತಿ ಕಾನೂನು ಬದ್ಧವಾಗಿದೆ ಎಂದು ತೋರಿಸುತ್ತದೆ. ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ ಎನ್ನುವುದನ್ನು ಪ್ರಮಾಣೀಕರಿಸುವ ದಾಖಲೆಯಾಗಿದೆ.

2. ಎ - ಖಾತಾ ಇದ್ದರೆ ಆ ಕಟ್ಟಡಗಳನ್ನು ಕಾನೂನುಬದ್ಧವಾಗಿ ನಿರ್ಮಾಣ ಮಾಡಲಾಗಿದೆ. ಸಮರ್ಪಕವಾಗಿ ತೆರಿಗೆ ದಾಖಲೆಗಳನ್ನು ಹೊಂದಿರುವ ಆಸ್ತಿ ಎಂದು ಪರಿಗಣಿಸಲಾಗುತ್ತದೆ.

3. ಎ ಖಾತಾ ಇದ್ದರೆ ಆಸ್ತಿ ಮಾಲೀಕರು ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ ಪಡೆಯಬಹುದು. ಮುಂದುವರಿದು ಬ್ಯಾಂಕ್ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ನಲ್ಲಿ ಸಾಲ ಹಾಗೂ ಸರ್ಕಾರದ ಸೌಲಭ್ಯಗಳು ಆ ನಿರ್ದಿಷ್ಟ ಆಸ್ತಿಗೆ ಸಿಗುತ್ತದೆ.

ಬಿ ಖಾತಾ ಎಂದರೇನು, ಬಿ - ಖಾತೆ ಇದ್ದರೆ ಸಂಕಷ್ಟವೇಕೆ

1. ಬಿ ಖಾತಾ ಎನ್ನುವುದು ಕೇವಲ ಆಸ್ತಿ ತೆರಿಗೆ ವಸೂಲಿಗಾಗಿ ನಿರ್ವಹಿಸುವ ಒಂದು ರಿಜಿಸ್ಟರ್ ಮಾತ್ರ. ಇದು ಮಾಲೀಕತ್ವದ ಹಕ್ಕನ್ನಾಗಲಿ ಅಥವಾ ಕಟ್ಟಡದ ಸಕ್ರಮವನ್ನಾಗಲಿ ಸಂಪೂರ್ಣವಾಗಿ ಖಾತರಿಪಡಿಸುವುದಿಲ್ಲ.

2. ಅನುಮೋದನೆಗಾಗಿ ಬಾಕಿ ಉಳಿಸಲಾಗಿರುವ ಆಸ್ತಿಗಳನ್ನು ಬಿ ಖಾತಾ ವ್ಯಾಪ್ತಿಯಲ್ಲಿ ಗುರುತಿಸಲಾಗುತ್ತದೆ.

3. ಅನಧಿಕೃತ ನಿವೇಶನ ಹಾಗೂ ಬಡಾವಣೆಗಳನ್ನು ಬಿ ಖಾತಾ ವ್ಯಾಪ್ತಿಗೆ ತರಲಾಗಿತ್ತು.

ಬಿ ಖಾತಾದ ಎದುರಾಗಿರುವ ಸಮಸ್ಯೆಗಳು

ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಅವಕಾಶ ಮಾಡಿಕೊಟ್ಟಿದೆಯಾದರೂ, ಇದರಲ್ಲಿ ಕೆಲವೊಂದ ಗೊಂದಗಳು ಮುಂದುವರಿದಿವೆ. ಆಸ್ತಿಯ ಶೇ 5 ಗೈಡ್‌ಲೈನ್ಸ್‌ ವ್ಯಾಲ್ಯೂ ಆಧಾರದ ಮೇಲೆ ಶುಲ್ಕ ಪಾವತಿ ಮಾಡಿಸಿಕೊಂಡು ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಲಾಗುತ್ತಿದೆ. ಆದರೆ ಇದು ಸಣ್ಣ ಆಸ್ತಿದಾರರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಖಾತಾ ಪರಿವರ್ತನೆಗೆ ಶುಲ್ಕ ಪಾವತಿ ಮಾಡಿದ ನಂತರವೂ ಹಲವರಿಗೆ ರಶೀದಿ ಸಿಗುತ್ತಿಲ್ಲ. ಹೀಗಾಗಿ, ಇಂದಿಗೂ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವ ಆಸ್ತಿದಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ಇ ಖಾತಾದಲ್ಲಿ ಎದುರಾಗಿರುವ ಸಮಸ್ಯೆಗಳೇನು

ಇನ್ನು ಬಿ ಖಾತಾದಂತೆಯೇ ಇ ಖಾತಾದಲ್ಲೂ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಬೆಂಗಳೂರಿನಲ್ಲಿ ಆಸ್ತಿಗಳಿಗೆ ಇ ಖಾತಾ ಕರ್ನಾಟಕದ ಉಳಿದ ಪ್ರದೇಶಗಳಿಗಿಂತಲೂ ಸುಲಭವಾಗಿ ಸಿಗುತ್ತಿದೆ. ಆದರೆ ಕರ್ನಾಟಕದ ವಿವಿಧ ಭಾಗದಲ್ಲಿ ಇ ಖಾತಾ ಸಿಗುತ್ತಿಲ್ಲ. ಆಸ್ತಿಗಳ ಮಾರಾಟ ಮತ್ತು ಖರೀದಿ, ರಿಜಿಸ್ಟ್ರೇಷನ್‌ಗೆ ಇ ಖಾತಾ ಕಡ್ಡಾಯ ಮಾಡಲಾಗಿದೆ. ಇದರಿಂದ ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರಿದ್ದು, ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ.

ಇ ಖಾತಾದಿಂದ ಸರ್ಕಾರಕ್ಕೆ ಹೇಗೆ ಅನುಕೂಲವಾಗಿದೆ ?

ಇನ್ನು ಕರ್ನಾಟಕದಲ್ಲಿ ಆಸ್ತಿಗಳಿಗೆ ಇ ಖಾತಾ ಪರಿಚಯಿಸಿದ ಮೇಲೆ ಸರ್ಕಾರಕ್ಕೆ ಭಾರೀ ಲಾಭವಾಗಿದೆ. ಈ ಹಿಂದೆ ಆಸ್ತಿಗಳ ವಿಸ್ತೀರ್ಣದಲ್ಲಿ ಕೆಲವು ಆಸ್ತಿದಾರರು ತಪ್ಪು ಮಾಹಿತಿ ನೀಡುತ್ತಿದ್ದರು, ಅದು ಈಗ ಸಾಧ್ಯವಿಲ್ಲ. ಈಗ ಇ ಖಾತಾದಲ್ಲಿ ಆಸ್ತಿಯ ಎಲ್ಲಾ ನಿಖರ ಮಾಹಿತಿಗಳು ಸಹ ಲಭ್ಯವಾಗಲಿವೆ. ಇದರಿಂದ ಆಸ್ತಿ ತೆರಿಗೆ ವಂಚನೆ ಪ್ರಕರಣಗಳಿಗೆ ಕಡಿವಾಣ ಬಿದ್ದಂತಾಗಿದೆ. ಮುಖ್ಯವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ - ಧಾರವಾಡ ಹಾಗೂ ಬೆಳಗಾವಿ ಸೇರಿದಂತೆ ಕರ್ನಾಟಕದ ಪ್ರಮುಖ ನಗರ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಕೆಲವು ಆಸ್ತಿಗಳು ಹೊರಗೆ ಉಳಿದಿದ್ದವು. ಇ ಖಾತಾದಿಂದ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಸ್ಥಳೀಯ ಸಂಸ್ಥೆಗಳು ಹಾಗೂ ಕರ್ನಾಟಕ ಸರ್ಕಾರದ ಆದಾಯ ಹೆಚ್ಚಳವಾಗುತ್ತಿದೆ. ಇಷ್ಟು ವರ್ಷಗಳ ಕಾಲ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ಶುಲ್ಕ ಪಾವತಿ ನಿಗದಿ ಮಾಡಲಾಗಿದೆ. ಅದನ್ನು ಪಾವತಿ ಮಾಡಿದ ನಂತರ ಪ್ರತಿ ವರ್ಷವೂ ಆಸ್ತಿ ತೆರಿಗೆ ಪಾವತಿ ಮಾಡಿಕೊಂಡು ಹೋಗಬೇಕು ಎನ್ನುವ ನಿಯಮ ರೂಪಿಸಲಾಗಿದೆ.

ಇ ಖಾತಾಗೆ ಬೇಕಾಗುವ ದಾಖಲೆ ಪತ್ರಗಳು

ಇ-ಖಾತಾ (E-Khata) ಪಡೆಯಲು ಮುಖ್ಯವಾಗಿ ಆಸ್ತಿ ಮಾಲೀಕರ ಗುರುತಿನ ಚೀಟಿ (ಆಧಾರ್/PAN), ನೋಂದಾಯಿತ ಸೇಲ್ ಡೀಡ್, ಆಸ್ತಿ ತೆರಿಗೆ ಪಾವತಿ ರಸೀದಿ (SAS), ಬೆಸ್ಕಾಂ (BESCOM) ID, ಮತ್ತು ಆಸ್ತಿ ನಕ್ಷೆ/ಫೋಟೋಗಳು ಅಗತ್ಯವಾಗಿದೆ. ಈ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರ ಅಥವಾ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.

ಇ - ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳ ವಿವರ

ನೋಂದಾಯಿತ ಮಾರಾಟ ಪತ್ರ (Registered Sale Deed): ಆಸ್ತಿ ಖರೀದಿಯ ಮೂಲ ದಾಖಲೆ ಬೇಕಾಗುತ್ತದೆ.

ಆಸ್ತಿ ತೆರಿಗೆ ಪಾವತಿ ರಸೀದಿ (Property Tax Receipt): ಕಳೆದ 3 ವರ್ಷಗಳ ಸ್ವಯಂ ಮೌಲ್ಯಮಾಪನ ಯೋಜನೆಯ (SAS) ಆಸ್ತಿ ತೆರಿಗೆ ರಸೀದಿ ಸಲ್ಲಿಸಬೇಕು

ಗುರುತಿನ ಚೀಟಿ (ID Proof): ಮಾಲೀಕರ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್

ಬೆಸ್ಕಾಂ ID (BESCOM ID): ವಿದ್ಯುತ್ ಸಂಪರ್ಕ ಸಂಖ್ಯೆ (ಖಾಲಿ ನಿವೇಶನಕ್ಕೂ ಅಗತ್ಯವಾಗಿದೆ).

ಆಸ್ತಿಯ ಫೋಟೋ (Property Photo): ಆಸ್ತಿ ವಿಸ್ತೀರ್ಣ ಅಥವಾ ನಿರ್ದಿಷ್ಟ ಪ್ರದೇಶ ಕಾಣಿಸುವ ಸ್ಪಷ್ಟ ಫೋಟೋಗಳು.

ಡಿ.ಸಿ ಕನ್ವರ್ಷನ್ ಸರ್ಟಿಫಿಕೇಟ್ (DC Conversion Certificate): ಕೃಷಿಯೇತರ ಆಸ್ತಿಯಾಗಿದ್ದರೆ.

ಕಟ್ಟಡ ನಕ್ಷೆ (Building Plan Approval): ಜಿಬಿಎ / ಸಂಬಂಧಿತ ಪ್ರಾಧಿಕಾರದಿಂದ ಅನುಮೋದಿತ ನಕ್ಷೆ.

ಸರ್ವೇ ನಕ್ಷೆ (Survey Map/Village Map): ಆಸ್ತಿಯ ಸ್ಥಳ ಗುರುತಿಸಲು ಸರ್ವೇ ನಕ್ಷೆಯನ್ನು ಸಲ್ಲಿಸಬೇಕಾಗುತ್ತದೆ.

ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಬೇಕಾಗುವ ದಾಖಲೆಗಳು

ನೋಂದಾಯಿತ ಪತ್ರಗಳು: ಸೇಲ್ ಡೀಡ್ (Sale Deed), ದಾನ ಪತ್ರ, ಅಥವಾ ವಿಭಾಗ ಪತ್ರ (10/09/2024ಕ್ಕಿಂತ ಮುಂಚಿನದು).

ಆಸ್ತಿ ತೆರಿಗೆ ದಾಖಲೆಗಳು: 2015-16ರಿಂದ ಪ್ರಸ್ತುತ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿದ ಎಸ್‌ಎಎಸ್ (SAS) ಫಾರಂ ಮತ್ತು ಚಲನ್ ಸಲ್ಲಿಸಬೇಕಾಗುತ್ತದೆ.

ಇಸಿ (Encumbrance Certificate): ಇತ್ತೀಚಿನ ಋಣಭಾರ ಪ್ರಮಾಣ ಪತ್ರ.

ಗುರುತಿನ ಚೀಟಿ: ಮಾಲೀಕರ ಆಧಾರ್ ಕಾರ್ಡ್, ಫೋಟೋ.

ಆಸ್ತಿಯ ವಿವರ: ಆಸ್ತಿಯ ಫೋಟೋ, ಜಿಪಿಎಸ್ (GPS) ಅಂಕಿಸಂಖ್ಯೆಗಳು.

ಇ - ಖಾತಾ, ಎ - ಖಾತಾ ಮತ್ತು ಬಿ ಖಾತಾಗೆ ಸಂಬಂಧಿಸಿದಂತೆ ಜನರು ಕೇಳುವ ಪ್ರಶ್ನೆಗಳು (FAQs)

1. ಬಿಬಿಎಂಪಿ / ಜಿಬಿಎ ಇ - ಖಾತಾ ವೆಬ್‌ಸೈಟ್ ಲಿಂಕ್

https://bbmpeaasthi.karnataka.gov.in/

2. ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸ್ಟೇಟಸ್ ಪರಿಶೀಲನೆ ಮಾಡುವುದು ಹೇಗೆ

https://bbmp.karnataka.gov.in/btoakhata/

3. ಖಾತಾ ಎಂದರೇನು?

ಖಾತಾ ಪ್ರಮಾಣಪತ್ರವು ಆಸ್ತಿ ಮಾಲೀಕತ್ವ, ವಿಸ್ತೀರ್ಣ, ಸ್ಥಳ, ಬಳಕೆ (ವಸತಿ/ವಾಣಿಜ್ಯ) ಸೇರಿದಂತೆ ಆಸ್ತಿಯ ಅಧಿಕೃತ ವಿವರಗಳನ್ನು ಒಳಗೊಂಡ ದಾಖಲೆ.

4. ಬಿ - ಖಾತಾದಿಂದ ಎ - ಖಾತಾಗೆ ಹೇಗೆ ಪರಿವರ್ತನೆ ಮಾಡಬಹುದು

ಗೈಡ್‌ಲೈನ್ ವ್ಯಾಲ್ಯೂ ಆಧಾರಿತ ಶುಲ್ಕ (ಶೇ. 5) ಪಾವತಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ; ಸ್ಥಿತಿ ಪರಿಶೀಲನೆಗೆ ಅಧಿಕೃತ ಪೋರ್ಟಲ್ ಬಳಸಬಹುದು.

5. ಇ - ಖಾತಾ ಇಲ್ಲದೆ ರಿಜಿಸ್ಟ್ರೇಷನ್ ಸಾಧ್ಯವೇ

ಪ್ರಸ್ತುತ ಕಾವೇರಿ 2.0 ತಂತ್ರಾಂಶದಲ್ಲಿ ಇ-ಖಾತಾ ಕಡ್ಡಾಯಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅಥವಾ ಹಳೆಯ ದಾಖಲೆಗಳ ಆಧಾರದ ಮೇಲೆ ಪ್ರಕ್ರಿಯೆ ನಡೆಯುತ್ತಿದೆ.

6. ಇ-ಖಾತಾದಿಂದ ಸರ್ಕಾರಕ್ಕೆ ಏನು ಲಾಭ

ಆಸ್ತಿ ವಿಸ್ತೀರ್ಣ ಮತ್ತು ವಿವರಗಳ ಪಾರದರ್ಶಕತೆ ಹೆಚ್ಚಾಗಿ, ತೆರಿಗೆ ವಂಚನೆ ಕಡಿಮೆಯಾಗುತ್ತದೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ಧಿಗೆ ಸಹಕಾರಿಯಾಗಿದೆ.

7. ಬಿ ಖಾತಾದಿಂದ ಎ ಖಾತಾ ಶುಲ್ಕ ಪಾವತಿಸಿದರೂ ರಶೀದಿ ಸಿಗದಿದ್ದರೆ ಏನು ಮಾಡಬೇಕು ?

ಅರ್ಜಿ ಸಂಖ್ಯೆ/ಪಾವತಿ ವಿವರಗಳೊಂದಿಗೆ ಸಂಬಂಧಿತ ಸ್ಥಳೀಯ ಸಂಸ್ಥೆ/ಹೆಲ್ಪ್‌ಲೈನ್ ಸಂಪರ್ಕಿಸಿ, ಆನ್‌ಲೈನ್ ಸ್ಥಿತಿ ಪರಿಶೀಲಿಸಿ ದೂರು ದಾಖಲಿಸಬೇಕು.

8. ಇ-ಖಾತಾ ಅರ್ಜಿ ಸಲ್ಲಿಸುವುದು ಹೇಗೆ

ಅಧಿಕೃತ ಪೋರ್ಟಲ್ ಅಥವಾ ಬೆಂಗಳೂರು ಒನ್ ಕೇಂದ್ರದ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ / ಸಲ್ಲಿಸಿ ಅರ್ಜಿ ಹಾಕಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+