ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ
Anthropic: ಆಂತ್ರೋಪಿಕ್ ಕಂಪನಿಯು ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡಿದೆ. ಎಐ ಯುಗದಲ್ಲಿ ಹಾಗೂ ಯುದ್ಧ ಕಾಲದಲ್ಲಿ ಆಂತ್ರೋಪಿಕ್ ಕಂಪನಿಯು ತೆಗೆದುಕೊಂಡ ನಿರ್ಧಾರ ವಿಶ್ವದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಬೆಂಗಳೂರು ಟೆಕ್ಕಿ, ಬರಹಗಾರ ಮಧುಸೂದನ ವೈ.ಎನ್ ಅವರ ವಿಶೇಷ ಬರಹ ಇಲ್ಲಿದೆ.
ಎಐ ಅಂದರೆ ಯಾಕೆ ಸರಕಾರಗಳು ಆಸಕ್ತಿ ಹೊಂದಿವೆ ಎಂಬುದಕ್ಕೆ ಆರಂಭದಲ್ಲಿಯೇ ಕಳೆದ ಎರಡು ಮೂರು ದಿನಗಳು ಸಾಕ್ಷಿಯಾಗಿವೆ. ಆಂತ್ರೋಪಿಕ್ ಬಹುಶಃ ನಿಮಗೆಲ್ಲ ಈಗಾಗಲೇ ಪರಿಚಯ ಇದ್ದಿರಬಹುದು. ಅದರ ಪ್ಲಗಿನ್‌ಗಳಿಂದಾಗಿ ಕೆಲಸ ಹೋಗತ್ತಂತೆ, ಹಂಗೆ ಹಿಂಗೆ ಸುದ್ದಿಗಳಿಂದ. ಐಟಿ ಕಂಪನಿಗಳ ಶೇರು ಬಿದ್ದುಹೋಗಿರುವದರಿಂದ. ಇದರ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತಾಡಿದ್ದೆ. ಈ ಕಂಪನಿ ಅಮೆರಿಕ ಸರಕಾರದ ಪೆಂಟಗಾನ್(ಯುದ್ಧಕ್ಕೆ ಸಂಬಂಧಪಟ್ಟ ಇಲಾಖೆ)ಗೂ ತನ್ನ ಎಐ ಮಾಡೆಲ್ ಒದಗಿಸಿತ್ತು. ಅವರೂ ಸಹ ಅದರ "ಶಕ್ತಿ"ಗೆ ಮಾರುಹೋಗಿದ್ದರು. ಅದನ್ನು ತಮ್ಮ ಮಿಲಿಟರಿಯ ರಹಸ್ಯ ಕಾರ್ಯಾಚರಣೆಗಳಲ್ಲಿ ಪರೀಕ್ಷಿಸುತ್ತಿದ್ದರು.

ಕಡೆಯಲ್ಲಿ ಕಂಪನಿಗೆ ಒಂದಷ್ಟು ಷರತ್ತುಗಳನ್ನು ಇಟ್ಟಿದ್ದರು. ಇವರು ಎಲ್ಲಾ ಷರತ್ತುಗಳನ್ನು ಒಪ್ಪಿ ಒಂದೆರಡಕ್ಕೆ ಇಲ್ಲ ಆಗಲ್ಲ ಅಂದರು. ಅವರು ಒಪ್ಪಲೇ ಬೇಕು ಎಂದರು. ಇವರು ಆಗೋದೇ ಇಲ್ಲ ಅಂದರು. ಅವರು ಹಂಗಾದರೆ ನಿಮ್ಮನ್ನು ಕಿತ್ತಾಕ್ತೀವಿ ಅಂದರು. ಇವರು ಕಿತ್ತಾಕ್ಕೋಳಿ ಅಂದರು. ₹16,800 ಕೋಟಿ ಮೌಲ್ಯದ ಒಪ್ಪಂದ ಮುರಿದು ಬಿತ್ತು. ಇದು ಅಮೆರಿಕದಂತಹ ದೇಶದಲ್ಲಿ ಮಾತ್ರ ಸಾಧ್ಯ ಅನ್ಸುತ್ತೆ.
Anthropic's: ಇದು ಬಹಳ ಆಸಕ್ತಿಕರ; ಆ ಷರತ್ತುಗಳು ಏನು ಕೇಳಿ
ಒಂದು: ಸಂಪೂರ್ಣ ಸ್ವಾಯತ್ತ ಶಸ್ತ್ರಾಸ್ತ್ರಗಳು ಅಥವಾ ಫುಲಿ ಅಟೊನೋಮಸ್ ವೆಪನ್ಸ್: ಉದಾಹರಣೆಗೆ ಇಂದು ಯುದ್ಧದಲ್ಲಿ ಬಳಕೆಯಾಗುವ ಡ್ರೋನ್‌ಗಳನ್ನು ಒಬ್ಬ ಮಾನವ ಸೈನಿಕ ನಿಯಂತ್ರಿಸುತ್ತಾನೆ. ಸ್ಕ್ರೀನ್‌ನಲ್ಲಿ ನೋಡಿ ಗುರಿ ಇಡ್ತಾನೆ ಶೂಟ್ ಮಾಡ್ತಾನೆ, ಇದು ʼಅರೆ-ಸ್ವಾಯತ್ತʼ (partially autonomous).
ʼಸಂಪೂರ್ಣ ಸ್ವಾಯತ್ತʼ ಎಂದರೆ ಮತ್ತೊಂದು ಮಟ್ಟ. ಒಂದು ಲಕ್ಷ ಡ್ರೋನ್‌ಗಳ ಸೈನ್ಯವನ್ನು ಕಲ್ಪಿಸಿಕೊಳ್ಳಿ. ಎಐ ತಾನೇ ಗುರಿ ಗುರುತಿಸುತ್ತದೆ, ತಾನೇ ʼಇದು ಶತ್ರುʼ ಎಂದು ತೀರ್ಮಾನಿಸುತ್ತದೆ, ತಾನೇ ಗುಂಡು ಹಾರಿಸುತ್ತದೆ. ನಡುವೆ ಮನುಷ್ಯನ ಪಾತ್ರ ಇರುವುದಿಲ್ಲ.
ಮಿಲಿಟರಿ ಕೇಳ್ತಿರೋದು ಸಂಪೂರ್ಣ ಅಟೊನೋಮಸ್‌ಗೆ ಪರ್ಮಿಶನ್ ಕೊಡಿ ಅಂತ. ಅಂದರೆ ಕಂಪನಿಯವರು ತಮ್ಮ ಮಾಡೆಲ್‌ಗಳಲ್ಲಿ ರಕ್ಷಣಾತ್ಮಕ ತಡೆ(ಗಾರ್ಡ್‌ರೈಲ್ಸ್ ಅಂತಾರೆ)ಗಳನ್ನು ಇಟ್ಟಿದಾರೆ, ಇವರು ಅದನ್ನು ತೆಗೆಯಿರಿ ಅಂತ ಕುತಿರೋದು. ಆಂತ್ರೊಪಿಕ್ ಮುಖ್ಯಸ್ಥ ಡಾರಿಯೊ ಅಮೋಡೆಯ್ ವಾದವೇನಂದರೆ: ಮೊದಲನೆಯದಾಗಿ, ಇಂದಿನ ಎಐ ಮಾಡೆಲ್‌ಗಳು ಇಷ್ಟು ನಂಬಿಕಾರ್ಹವಲ್ಲ. ಎಐ ಜೊತೆ ಕೆಲಸ ಮಾಡಿದ ಯಾರಿಗಾದರೂ ಗೊತ್ತು - ಇವು ಊಹಿಸಲಾಗದ ತಪ್ಪುಗಳನ್ನು ಮಾಡುತ್ತವೆ. ಯುದ್ಧಭೂಮಿಯಲ್ಲಿ ತಪ್ಪಾದರೆ? ನಿರಪರಾಧಿ ನಾಗರಿಕರ ಮೇಲೆ ಗುಂಡು ಹಾರಬಹುದು, ಸ್ವಂತ ಸೈನಿಕರ ಮೇಲೆ ಗುಂಡು ಹಾರಬಹುದು.
ಎರಡನೆಯದಾಗಿ, ಹೊಣೆಗಾರಿಕೆಯ ಪ್ರಶ್ನೆ. ಮಾನವ ಸೈನಿಕ ಯುದ್ಧಾಪರಾಧ ಮಾಡಿದರೆ ಅವನನ್ನು ಮಿಲಿಟರಿ ಕೋರ್ಟ್‌ನಲ್ಲಿ ವಿಚಾರಣೆ ಮಾಡಬಹುದು. ಎಐ ಡ್ರೋನ್ ನಿರಪರಾಧಿಗಳನ್ನು ಕೊಂದರೆ ಯಾರು ಹೊಣೆ, ಪ್ರೋಗ್ರಾಮರ್, ಜನರಲ್, ಎಐ ಈ ಚರ್ಚೆ ಇನ್ನೂ ನಡೆದೇ ಇಲ್ಲ.
ಪ್ರಜೆಗಳ ಸಾಮೂಹಿಕ ಕಣ್ಗಾವಲು
ಇನ್ನು ಎರಡನೆಯದ್ದು ಪ್ರಜೆಗಳ ಸಾಮೂಹಿಕ ಕಣ್ಗಾವಲು. ಈ ವಿಷಯ ಇನ್ನೂ ಸೂಕ್ಷ್ಮ. ಖಾಸಗಿ ಕಂಪನಿಗಳು ಈಗಾಗಲೇ ನಿಮ್ಮ ಲೊಕೇಶನ್ ಡೇಟಾ, ಬ್ರೌಸಿಂಗ್ ಇತಿಹಾಸ, ರಾಜಕೀಯ ಒಲವು, ಸಾಮಾಜಿಕ ಸಂಪರ್ಕಗಳನ್ನು ಸಂಗ್ರಹಿಸುತ್ತಿವೆ. ಈ ಡೇಟಾವನ್ನು ಸರ್ಕಾರ ಕೊಂಡುಕೊಳ್ಳಬಹುದು, ಅದು ಕಾನೂನುಬಾಹಿರವಲ್ಲ. ಆದರೆ ಎಐ ಬರುವ ಮೊದಲು ಈ ಡೇಟಾ ವಿಶ್ಲೇಷಿಸುವುದು ಅಸಾಧ್ಯವಾಗಿತ್ತು. ಮೂವತ್ತು ಕೋಟಿ ಜನರ ಡೇಟಾ ಓದುವುದು ಯಾರಿಂದಲೂ ಆಗುತ್ತಿರಲಿಲ್ಲ. ಈಗ ಎಐ ಬಂದಿದೆ. ಅದು ಒಂದೊಂದು ನಾಗರಿಕನ ʼಪ್ರೊಫೈಲ್ʼ ಕೆಲವೇ ಸೆಕೆಂಡುಗಳಲ್ಲಿ ತಯಾರಿಸಬಲ್ಲದು - ಅವರು ಎಲ್ಲಿ ಹೋಗುತ್ತಾರೆ, ಯಾರನ್ನು ಭೇಟಿಯಾಗುತ್ತಾರೆ, ಏನು ಓದುತ್ತಾರೆ, ಯಾರಿಗೆ ವೋಟ್ ಹಾಕಬಹುದು - ಎಲ್ಲವನ್ನೂ.
ಅಮೋಡೆಯ್ ಹೇಳುವುದೇನಂದರೆ ಅಮೆರಿಕ ಸಂವಿಧಾನದ ನಾಲ್ಕನೇ ತಿದ್ದುಪಡಿ ಪ್ರಕಾರ ಅದು ತನ್ನ ನಾಗರಿಕರನ್ನು ಅನ್ಯಾಯವಾದ ಶೋಧನೆ ಮತ್ತು ಬಂಧನದಿಂದ ರಕ್ಷಿಸುತ್ತದೆ. ಆದರೆ ಎಐ ಮೂಲಕ ಕಣ್ಗಾವಲು ಮಾಡುವ ಈ ವಿಧಾನ ಆ ಕಾನೂನಿನ ಪರಿಧಿಯಲ್ಲಿ ಬರುವುದೇ ಇಲ್ಲ. ಏಕೆಂದರೆ ಆ ಕಾನೂನು ಬರೆದಾಗ ಈ ತಂತ್ರಜ್ಞಾನ ಅಸ್ತಿತ್ವದಲ್ಲೇ ಇರಲಿಲ್ಲ. ಆದ್ದರಿಂದ ಸದ್ಯಕ್ಕೆ ಇದು ಗೊಂದಲಕಾರಿಯಾಗಿದ್ದು ಇತ್ಯರ್ಥವಾಗಬೇಕಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಸರಕಾರ ಆಂಥ್ರೊಪಿಕ್‌ಗೆ ಮೂರು ದಿನಗಳ ಅಂತಿಮ ಗಡುವು ಕೊಟ್ಟಿತ್ತು. ಸರಕಾರದ ಅಧಿಕಾರಿಯೊಬ್ಬರು ಅವರನ್ನು ನಾವು ಈ ಷರತ್ತು ಇಟ್ಟೇ ಇಲ್ಲ ಎಂದೂ ಈತ ʼಸುಳ್ಳುಗಾರʼ ಎಂದೂ ಈತ ತನ್ನನ್ನು ತಾನೇ ದೇವರು ಎಂದು ಭಾವಿಸಿದ್ದಾನೆ ಎಂದೂ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿ ಬರೆದುಕೊಂಡಿದ್ದಾರೆ.
ಅಮೊಡೆಯ್ ಟಿವಿ ಸಂದರ್ಶನ ಒಂದರಲ್ಲಿ ʼನಾವು ದೇಶಭಕ್ತ ಅಮೆರಿಕನ್ನರು. ಅಮೆರಿಕದ ರಾಷ್ಟ್ರೀಯ ಭದ್ರತೆಗಾಗಿ ನಾವು ಮಾಡೋದೆಲ್ಲವನ್ನೂ ಮಾಡಿದ್ದೇವೆ. ನಾವು ರೆಡ್‌ಲೈನ್ ಎಳೆದಿರುವುದು ಅಮೆರಿಕನ್ ಮೌಲ್ಯಗಳಿಗಾಗಿ. ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಅತ್ಯಂತ ಅಮೆರಿಕನ್ ಕೆಲಸ. ನಮ್ಮ ಶತ್ರುಗಳು ಯುದ್ಧಾಪರಾಧ ಮಾಡುತ್ತಾರೆ ಎಂದ ಮಾತ್ರಕ್ಕೆ ನಾವೂ ಮಾಡಬೇಕೆ, ನಮ್ಮ ಮೌಲ್ಯಗಳ ಸಾರವೆಂದರೆ ಗೆಲುವನ್ನು ನಮ್ಮ ತತ್ವಗಳನ್ನು ಉಳಿಸಿಕೊಂಡೇ ಸಾಧಿಸಬೇಕು. ನಾವು ಎಂದಿಗೂ ಕೆಳಮಟ್ಟಕ್ಕಿಳಿಯುವ ಸ್ಪರ್ಧೆ ನಡೆಸಬಾರದು.ʼ ಎಂದಿದ್ದಾರೆ.
ಶುಕ್ರವಾರ ಟ್ರಂಪ್ ಆಂಥ್ರೊಪಿಕ್‌ನವರನ್ನು ಇವರೆಲ್ಲ Radical Left ಹುಚ್ಚರು ಎಂದು ಬೈದು, ಇನ್ಮುಂದೆ ಇವರೂ ಬೇಡ ಇವರ ಪ್ರಾಡಕ್ಟೂ ಬೇಡ, ಮತ್ತೆ ಅವರ ಜೊತೆ ವ್ಯಾಪಾರ ಮಾಡೋದೇ ಇಲ್ಲ!ʼ ಎಂದು ಬರೆದುಕೊಂಡಿದ್ದಾರೆ. ಇವರ ಇಬ್ಬರ ಜಗಳದ ನಡುವೆ ಇನ್ನೊಂದು ವಿಶೇಷ ಬೆಳವಣಿಗೆ ನಡೆಯಿತು. ಓಪನ್‌ಎಐ(ಚಾಟ್‌ಜಿಪಿಟಿ) ಪ್ರವೇಶಿಸಿತು. ಅದೇ ಶುಕ್ರವಾರ ರಾತ್ರಿ, OpenAI ಸಿಇಒ ಸ್ಯಾಮ್ ಆಲ್ಟ್‌ಮನ್ ಪೆಂಟಗಾನ್ ಜೊತೆ ಒಪ್ಪಂದ ಮಾಡಿಕೊಂಡರು. ಈ ಆಂತ್ರೊಪಿಕ್ ಮುಖ್ಯಸ್ಥ ಡೊರಿಯೋ ಹಿಂದೆ ಮೌಲ್ಯಗಳ ಸಂಘರ್ಷದಿಂದ (ಅನ್ಸುತ್ತೆ) ಓಪನ್‌ಎಐನಿಂದ ಹೊರಬಂದು ಹೊಸ ಕಂಪನಿ ಸ್ಥಾಪಿಸಿದ್ದವರು! ಆದ್ದರಿಂದ ಈ ಎರಡೂ ಕಂಪನಿಗಳು ಒಂದರ್ಥದಲ್ಲಿ ಪ್ರತಿಸ್ಪರ್ಧಿಗಳು.
ಕಹಾನಿ ಇಲ್ಲಿಗೇ ಮುಗಿಯಲ್ಲ. ಇದರ ನಂತರ ಇನ್ನೂ ಒಂದು ವಿಶೇಷ ಘಟನೆ ನಡೆಯಿತು. ಇದೇ ಓಪನ್‌ಎಐ ಕಂಪನಿಯ ಕೆಲವು ಉದ್ಯೋಗಿಗಳು ಮತ್ತು ಗೂಗಲ್‌ನ ಕೆಲವು ಉದ್ಯೋಗಿಗಳು ಸೇರಿಕೊಂಡು (ಒಟ್ಟು ನಾಲ್ಕು ನೂರಕ್ಕೂ ಅಧಿಕ ಮಂದಿ) ʼನಮ್ಮನ್ನು ನೀವು ಒಡೆಯಲಾಗುವುದಿಲ್ಲʼ ಎಂಬ ಬಹಿರಂಗ ಪತ್ರಕ್ಕೆ ಸಹಿ ಹಾಕಿ ಆಂಥ್ರೊಪಿಕ್‌ಗೆ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೂಗಲ್‌ನ 100ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಕಂಪನಿಯ ಮುಖ್ಯ ವಿಜ್ಞಾನಿಗೆ ನೀವೂ ಸಹ ಇಂಥದೇ ನಿರ್ಬಂಧಗಳನ್ನು ಹಾಕಿ ಎಂದು ಪತ್ರ ಬರೆದಿದ್ದಾರೆ. ಹಾರ್ವರ್ಡ್‌ನ ಕಾನೂನು ಪ್ರಾಧ್ಯಾಪಕ ಲಾರೆನ್ಸ್ ಲೆಸ್ಸಿಗ್ ಅವರು ಆಂಥ್ರೊಪಿಕ್‌ನ ನಿಲುವನ್ನು ಇದು ನಮ್ಮ ಕಾಲಕ್ಕೆ ಅಪರೂಪ ಎಂದು ಹೊಗಳಿದ್ದಾರೆ ಸಹ.
ಒಟ್ನಲ್ಲಿ ಟೆಕ್ ಪ್ರಪಂಚದಲ್ಲಿ ಸಹ ಇದನ್ನು ಹೇಗೆ ಬಳಸಬೇಕೆಂಬ ಬಿರುಗಾಳಿ ಎದ್ದಿರುವುದು ನಿಜ. ಈ ಸಂಘರ್ಷವನ್ನು ಮುಂಚೆಯೇ ಊಹಿಸಲಾಗಿತ್ತು. ಮೂರು ವರುಷಗಳ ಹಿಂದೆ ಅಮೆರಿಕಾದ ಸೆನೇಟ್ ಎದುರು ಅಂದಿನ ಹೀರೋ ಸ್ಯಾಮ್‌ನನ್ನು ಕೂರಿಸಿ ಪ್ರಶ್ನಾವಳಿ ನಡೆಸಲಾಗಿತ್ತು. ಮುಂದೇನಾಗುತ್ತೋ ಕಾದು ನೋಡೋಣ.
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications