ಐಪಿಎಲ್ ನಂತರ ಭಾರತ-ಅಫ್ಘಾನಿಸ್ತಾನ್ ಸರಣಿ ಪಂದ್ಯಗಳ ಹಬ್ಬ: ವೇಳಾಪಟ್ಟಿ ಪ್ರಕಟ
India vs Afghanistan 2026 Series: ಇದೀಗ ಅದ್ಯ ಟಿ20 ವಿಶ್ವಕಪ್ 2026 ಟೂರ್ನಿ ನಡೆಯುತ್ತಿದ್ದು, ಫೈನಲ್ ಪಂದ್ಯ ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯಾವಳಿಯ ಐಪಿಎಲ್ ಹಬ್ಬ ಶುರುವಾಗಲಿದೆ. ಈ ಪಂದ್ಯಾವಳಿಯೂ ಮಾರ್ಚ್ 28ರಿಂದ ಆರಂಭವಾಗಿ ಮೇ 31ರವರೆಗೆ ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಗೆ ಸಜ್ಜಾಗಬೇಕಿದೆ.
ಟಿ20 ವಿಶ್ವಕಪ್ ಮುಗಿದ ಕೂಡಲೇ ಐಪಿಎಲ್ ಶುರುವಾಗುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಫ್ರಾಂಚೈಸಿಗಳ ಕ್ರಿಕೆಟ್ ತಂಡಗಳಲ್ಲಿ ಸೇರಿಕೊಳ್ಳಲಿದ್ದಾರೆ. ಮೇ ಅಂತ್ಯದವರೆಗೆ ನಡೆಯುವ ಐಪಿಎಲ್ ನಂತರ ಭಾರತ ತಂಡ ಅಂತಾರಾಷ್ಟ್ರೀಯ ಸರಣಿಗೆ ಸಜ್ಜಾಗಲಿದೆ. ಬಿಸಿಸಿಐ ಪ್ರಕಟಿಸಿರುವಂತೆ, ಅಫ್ಘಾನಿಸ್ತಾನದ ವಿರುದ್ಧ ಭಾರತ ನಾಲ್ಕು ಪಂದ್ಯಗಳ ಸರಣಿಯನ್ನು ಆಡಲಿದೆ.

ಅಫ್ಘಾನಿಸ್ತಾನದ ವಿರುದ್ಧದ ಸರಣಿಗಳು
* 1 ಟೆಸ್ಟ್ ಪಂದ್ಯ
* 3 ಏಕದಿನ ಪಂದ್ಯಗಳು
ಭಾರತದಲ್ಲೇ ನಡೆಯಲಿರುವ ಪಂದ್ಯಗಳು
ಟೆಸ್ಟ್ ಪಂದ್ಯವು ಚಂಡೀಗಢ್‌ನ ಮುಲ್ಲನ್‌ಪುರ್‌ನಲ್ಲಿ ಇರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಇದುವರೆಗೆ ಐಪಿಎಲ್ ಪಂದ್ಯಗಳು ಹಾಗೂ ಸೀಮಿತ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದರೂ, ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುವುದು ಇದೇ ಮೊದಲ ಬಾರಿ. ಹೀಗಾಗಿ ಇದು ಐತಿಹಾಸಿಕ ಕ್ಷಣವಾಗಲಿದೆ.
8 ವರ್ಷಗಳ ಬಳಿಕ ಮುಖಾಮುಖಿ
ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಈವರೆಗೆ ಕೇವಲ ಒಂದು ಟೆಸ್ಟ್ ಪಂದ್ಯದಲ್ಲೇ ಮುಖಾಮುಖಿಯಾಗಿವೆ. 2018ರಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 262 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಈಗ ಎಂಟು ವರ್ಷಗಳ ನಂತರ ಎರಡೂ ತಂಡಗಳು ಮತ್ತೆ ದೀರ್ಘ ಮಾದರಿಯಲ್ಲಿ ಸೆಣಸಲು ಸಜ್ಜಾಗಿವೆ.
ಏಕದಿನ ಸರಣಿ ನಡೆಯುವ ಸ್ಥಳಗಳು
ಟೆಸ್ಟ್ ಪಂದ್ಯದ ಬಳಿಕ ಜೂನ್ 14ರಿಂದ ಏಕದಿನ ಸರಣಿ ಆರಂಭವಾಗಲಿದೆ. ಮೂರು ಪಂದ್ಯಗಳು ಧರ್ಮಶಾಲಾ, ಲಕ್ನೋ ಹಾಗೂ ಚೆನ್ನೈನಲಲಿ ನಡೆಯಲಿವೆ. ಗಮನಾರ್ಹ ವಿಷಯವೆಂದರೆ, ಈ ಸರಣಿಯಲ್ಲೂ ಬೆಂಗಳೂರಿಗೆ ಪಂದ್ಯಾವಕಾಶ ನೀಡಲಾಗಿಲ್ಲ. ಬೆಂಗಳೂರಿನಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಪಿ ಗೆದ್ದ ಸಂಭ್ರಮದ ವೇಳೆ ಕಾಲ್ತುಳಿದ ಸಂಭವಿಸಿದ್ದು, ಆಗಿನಿಂದ ಇಲ್ಲಿನ ಯಾವುದೇ ಪಂದ್ಯಗಳನ್ನು ಆಡಿಸಿಲ್ಲ. ಆದ್ದರಿಂದ ಇಲ್ಲಿ ಸರಣಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ ಎಂದು ತಿಳಿದುದುಬಂದಿದೆ.
ಕೊಹ್ಲಿ, ರೋಹಿತ್ ಎಂಟ್ರಿ
ಐಪಿಎಲ್ ನಂತರ ನಡೆಯಲಿರುವ ಈ ಸರಣಿಯಲ್ಲಿ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿಶೇಷವಾಗಿ ಏಕದಿನ ಸರಣಿಯ ಮೂಲಕ ಅವರ ಕಂಬ್ಯಾಕ್‌ಗೆ ವೇದಿಕೆ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.
ಸರಣಿ ಪಂದ್ಯಗಳ ವೇಳಾಪಟ್ಟಿ
* ಟೆಸ್ಟ್ ಪಂದ್ಯ - ಜೂನ್ 6, ಚಂಡೀಗಢ್ (ಮುಲ್ಲನ್‌ಪುರ್)
* 1ನೇ ಏಕದಿನ - ಜೂನ್ 14, ಧರ್ಮಶಾಲಾ
* 2ನೇ ಏಕದಿನ - ಜೂನ್ 17, ಲಕ್ನೋ
* 3ನೇ ಏಕದಿನ - ಜೂನ್ 20, ಚೆನ್ನೈ
ಟೆಸ್ಟ್ ಪಂದ್ಯ ಆರಂಭದ ಸಮಯ ಜೂನ್ 6 ಬೆಳಿಗ್ಗೆ 9:30. ಇನ್ನೂ ಉಳಿದಂತೆ ಮೂರು ಏಕದಿನ ಸರಣಿಗಳು ಮಧ್ಯಾಹ್ನ 1:30ಕ್ಕೆ ಆರಂಭವಾಗಲಿವೆ. ಒಟ್ಟಿನಲ್ಲಿ ಟಿ20 ವಿಶ್ವಕಪ್ ಹಾಗೂ ಐಪಿಎಲ್ ಸಂಭ್ರಮದ ನಂತರ ಭಾರತ-ಅಫ್ಘಾನಿಸ್ತಾನ್ ನಡುವೆ ಸರಣಿಗಳು ನಡೆಯಲಿದ್ದು, ಅಭಿಮಾನಿಗಳಿಗೆ ಮತ್ತೊಂದು ರೋಚಕ ಕ್ಷಣವಾಗಲಿದೆ.












Click it and Unblock the Notifications