ಇರಾನ್-ಇಸ್ರೇಲ್ ಸಂಘರ್ಷ: ಕತಾರ್‌ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಭೀತಿ ಹಾಗೂ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್ ನಡೆಸಿದ ಡ್ರೋನ್ ದಾಳಿಯ ಬಳಿಕ, ವಿಶ್ವದ ಪ್ರಮುಖ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದಕ ದೇಶವಾದ ಕತಾರ್, ತನ್ನ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಕತಾರ್‌ನಲ್ಲಿ ಎಲ್‌ಎನ್‌ಜಿ ಉತ್ಪಾದನೆ ಸ್ಥಗಿತ

ಕತಾರ್‌ನ ಸರ್ಕಾರಿ ಒಡೆತನದ ಇಂಧನ ದೈತ್ಯ ಕಂಪನಿಯಾದ 'ಕತಾರ್‌ಎನರ್ಜಿ' (QatarEnergy) ತನ್ನ ಪ್ರಮುಖ ಘಟಕಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಈ ಕಠಿಣ ನಿರ್ಧಾರ ಕೈಗೊಂಡಿದೆ. ಕತಾರ್‌ನ ರಸ್ ಲಫಾನ್ (Ras Laffan) ಎಂಬ ಅನಿಲ ಸಂಸ್ಕರಣಾ ನೆಲೆ ಹಾಗೂ ನೈಸರ್ಗಿಕ ಅನಿಲ ಉತ್ಪಾದನೆಯ ಪ್ರಮುಖ ತಾಣವಾದ ಮೆಸೈಯೀದ್ (Mesaieed) ಮೇಲೆ ಇರಾನ್ ಡ್ರೋನ್‌ಗಳು ದಾಳಿ ನಡೆಸಿವೆ. ರಸ್ ಲಫಾನ್ ರಾಜಧಾನಿ ದೋಹಾದಿಂದ 80 ಕಿ.ಮೀ ದೂರದಲ್ಲಿದ್ದರೆ, ಮೆಸೈಯೀದ್ 40 ಕಿ.ಮೀ ದೂರದಲ್ಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಭದ್ರತೆಯ ದೃಷ್ಟಿಯಿಂದ ಎಲ್‌ಎನ್‌ಜಿ ಉತ್ಪಾದನೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

LNG Production

ಯುರೋಪ್‌ಗೆ ತಟ್ಟಿದ ಬಿಸಿ

ಅಮೆರಿಕ, ಆಸ್ಟ್ರೇಲಿಯಾ ಮತ್ತು ರಷ್ಯಾ ಜೊತೆಗೆ ಕತಾರ್ ಕೂಡ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಪೂರೈಕೆದಾರ ರಾಷ್ಟ್ರವಾಗಿದೆ. ಕತಾರ್‌ನ ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಯುರೋಪಿಯನ್ ಅನಿಲ ಮಾರುಕಟ್ಟೆಯಲ್ಲಿ ಬೆಲೆಗಳು ಶೇಕಡಾ 45 ರಿಂದ 50 ರಷ್ಟು ದಿಢೀರ್ ಏರಿಕೆಯಾಗಿವೆ. ಕತಾರ್‌ನ ಬಹುಪಾಲು ಗ್ರಾಹಕರು ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿದ್ದರೂ, ಯುರೋಪ್‌ಗೆ ಇದರ ಬಿಸಿ ತಟ್ಟಿದೆ. ವಿಶ್ಲೇಷಕರ ಪ್ರಕಾರ, ಚಳಿಗಾಲ ಮುಗಿಯುತ್ತಾ ಬಂದರೂ, ಯುರೋಪ್‌ನ ಅನಿಲ ದಾಸ್ತಾನುಗಳು ಕರಗುತ್ತಿವೆ. ಬೇಸಿಗೆಯ ವೇಳೆಗೆ ಅವರು ತಮ್ಮ ದಾಸ್ತಾನುಗಳನ್ನು ಮರುಭರ್ತಿ ಮಾಡಿಕೊಳ್ಳಬೇಕಿರುವುದರಿಂದ, ಈ ಬಿಕ್ಕಟ್ಟು ಯುರೋಪ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೇ ವೇಳೆ ಇಸ್ರೇಲ್ ಕೂಡ ಭದ್ರತೆಯ ಕಾರಣಗಳಿಗಾಗಿ ತನ್ನ ಕೆಲವು ಅನಿಲ ಉತ್ಪಾದನಾ ಘಟಕಗಳನ್ನು ಮುಚ್ಚಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಪರ್ಯಾಯ ಅನಿಲ ಮೂಲಗಳಿಗಾಗಿ ಪೈಪೋಟಿ ಶುರುವಾಗಿದೆ.

ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಸುಮಾರು ಶೇಕಡಾ 20 ರಷ್ಟು ಭಾಗವು 'ಹಾರ್ಮುಜ್ ಜಲಸಂಧಿ' (Strait of Hormuz) ಎಂಬ ಕಿರಿದಾದ ಕಡಲ ಮಾರ್ಗದ ಮೂಲಕವೇ ಸಾಗುತ್ತದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಈ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ. ಇರಾನ್ ಈ ಮಾರ್ಗವನ್ನು ನಿರ್ಬಂಧಿಸುವ ಎಚ್ಚರಿಕೆ ನೀಡಿದೆ. ಇದರಿಂದಾಗಿ ಪೂರೈಕೆ ಸರಪಳಿ ಕಡಿತಗೊಂಡು, ಕಚ್ಚಾ ತೈಲದ ಬೆಲೆಯಲ್ಲೂ ಶೇ. 8 ರಿಂದ 10 ರಷ್ಟು ಏರಿಕೆಯಾಗಿದ್ದು, ಬ್ಯಾರೆಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಭಾರತದ ಮೇಲಿನ ಪ್ರಭಾವ

ಮಧ್ಯಪ್ರಾಚ್ಯದ ಈ ಸಂಘರ್ಷವು ಕೇವಲ ಆ ದೇಶಗಳಿಗಷ್ಟೇ ಸೀಮಿತವಾಗಿರದೆ, ಇಡೀ ವಿಶ್ವದ ಇಂಧನ ಮಾರುಕಟ್ಟೆಯ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಎಲ್‌ಎನ್‌ಜಿ ಖರೀದಿದಾರ ರಾಷ್ಟ್ರವಾಗಿರುವ ಭಾರತ ಕೂಡ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತವು ತನ್ನ ತೈಲ ಅಗತ್ಯಗಳಿಗಾಗಿ ಹೆಚ್ಚಾಗಿ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದ್ದು, ಬೆಲೆ ಏರಿಕೆಯು ದೇಶದ ಆರ್ಥಿಕತೆಯ ಮೇಲೆ, ವಿಶೇಷವಾಗಿ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ದೇಶೀಯ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+