Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು
ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಹವಾಮಾನದಲ್ಲಿ ಏರುಪೇರು ಕಂಡುಬಂದಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದರೆ, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವಾಮಾನ ಮುಂದುವರಿದಿದೆ. ರಾಜ್ಯದ ಬಯಲು ಸೀಮೆಯಲ್ಲಿ ವಿಜಯಪುರವು 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಿಸುವ ಮೂಲಕ ಅತಿ ತಂಪಾದ ಪ್ರದೇಶವಾಗಿ ಹೊರಹೊಮ್ಮಿದೆ. ಹಾಸನದಲ್ಲಿ ಕನಿಷ್ಠ ತಾಪಮಾನ 13.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಾಪಮಾನ ಏರಿಳಿತ
ಮಂಡ್ಯದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಬೆಂಗಳೂರು, ದಾವಣಗೆರೆ ಹಾಗೂ ಮೈಸೂರಿನಲ್ಲಿಯೂ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಸಾಮಾನ್ಯಕ್ಕಿಂತ ಗಣನೀಯ ಇಳಿಕೆ ಕಂಡುಬಂದಿದ್ದರೆ, ಹಾವೇರಿಯಲ್ಲಿ ತಾಪಮಾನವು ಕುಸಿದಿದೆ. ಭಾನುವಾರವೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಪ್ರಸ್ತುತ ದಕ್ಷಿಣ ಒಳನಾಡು ಮತ್ತು ಕೇರಳ ಕರಾವಳಿಯ ಸಮೀಪ ವಾಯುಮಂಡಲದಲ್ಲಿ ಸುಳಿಗಾಳಿ (Cyclonic Circulation) ಕಂಡುಬಂದಿದೆ. ಅಲ್ಲದೆ, ತಮಿಳುನಾಡಿನಿಂದ ಮರಾಠವಾಡದವರೆಗೆ ಕರ್ನಾಟಕದ ಮೂಲಕ ಹಾದುಹೋಗುವ ಗಾಳಿಯ ಒತ್ತಡದ ಕುಸಿತದ (Trough) ಪ್ರಭಾವವೂ ಇದೆ. ಮುಂದಿನ 5 ದಿನಗಳ ಕಾಲ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲದಿದ್ದರೂ, ಸಲ್ಪ ಏರಿಕೆಯಾಗುವ ಸಾಧ್ಯತೆ ಇದೆ. ಎರಡನೇ ದಿನದಿಂದ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದೆ.
ಬೆಂಗಳೂರು ಭಾಗದಲ್ಲಿ ಆಕಾಶವು ಭಾಗಶಃ ಮೋಡದಿಂದ ಕೂಡಿದ್ದು, ಮುಂಜಾನೆ ಸಮಯದಲ್ಲಿ ಕೆಲವು ಕಡೆಗಳಲ್ಲಿ ಮಂಜು ಮುಸುಕುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಸುಮಾರು 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.
ಉತ್ತರ ಒಳನಾಡಿನ ವಿಜಯಪುರ, ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ, ಬಾಗಲಕೋಟೆ ಮತ್ತು ಹಾವೇರಿಯಲ್ಲಿ ಕನಿಷ್ಠ ತಾಪಮಾನವು 15.2 ಡಿಗ್ರಿ ಸೆಲ್ಸಿಯಸ್‌ನಿಂದ 17.4 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗಿದೆ. ದಕ್ಷಿಣ ಒಳನಾಡಿನ ಹಾಸನ, ಚಿಂತಾಮಣಿ, ಆಗುಂಬೆ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿಯೂ ಇದೇ ಪ್ರಮಾಣದ ತಾಪಮಾನ ಕಂಡುಬಂದಿದೆ. ಆದರೆ, ಹಾಸನದಲ್ಲಿ ಅತಿ ಕಡಿಮೆ ಅಂದರೆ 13.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ವಿಶೇಷ. ಇನ್ನು ಗದಗ, ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ ಸೇರಿದಂತೆ ಬೆಂಗಳೂರು ಮತ್ತು ಮೈಸೂರು ಭಾಗಗಳಲ್ಲಿ ತಾಪಮಾನವು 19-22 ಡಿಗ್ರಿ ಸೆಲ್ಸಿಯಸ್‌ರಷ್ಟಿದೆ. ಕರಾವಳಿ ಜಿಲ್ಲೆಗಳಾದ ಹೊನ್ನಾವರ, ಕಾರವಾರ ಮತ್ತು ಮಂಗಳೂರಿನಲ್ಲಿ ಉಷ್ಣಾಂಶವು 18.8-23 ಡಿಗ್ರಿ ಸೆಲ್ಸಿಯಸ್ ನಡುವೆ ಸ್ಥಿರವಾಗಿದೆ.
ತೀವ್ರಗೊಂಡ ಚಳಿ
ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಮಂಡ್ಯದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3.1-5.0 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದೇ ರೀತಿ ಬೆಂಗಳೂರು ನಗರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAL), ದಾವಣಗೆರೆ ಮತ್ತು ಮೈಸೂರಿನಲ್ಲಿಯೂ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಹೊನ್ನಾವರ ಮತ್ತು ಹಾಸನದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವಿದ್ದರೆ, ವಿಜಯಪುರದಲ್ಲಿ ಚಳಿಯ ತೀವ್ರತೆ ಸಾಮಾನ್ಯಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.
ದಕ್ಷಿಣ ಒಳನಾಡು ಮತ್ತು ಅದರ ಸುತ್ತಮುತ್ತಲಿನ ವಾಯುಮಂಡಲದ 1.5 ಕಿ.ಮೀ ಎತ್ತರದಲ್ಲಿ ಸುಳಿಗಾಳಿ ಮುಂದುವರಿದಿದೆ. ಅಲ್ಲದೆ, ಕೇರಳದ ಬಳಿ ಇದ್ದ ಸುಳಿಗಾಳಿಯು ಈಗ ಆಗ್ನೇಯ ಅರಬ್ಬೀ ಸಮುದ್ರದತ್ತ ಚಲಿಸಿದೆ. ಇದರೊಂದಿಗೆ ತಮಿಳುನಾಡಿನಿಂದ ಕರ್ನಾಟಕ ಮತ್ತು ರಾಯಲಸೀಮಾ ಮೂಲಕ ಮಹಾರಾಷ್ಟ್ರದ ಮರಾಠವಾಡದವರೆಗೆ ಗಾಳಿಯ ಒತ್ತಡದ (Trough) ಕಂಡುಬಂದಿದೆ. ಈ ಎಲ್ಲ ವಿದ್ಯಮಾನಗಳ ಪರಿಣಾಮವಾಗಿ ಮುಂದಿನ ಐದು ದಿನಗಳ ಕಾಲ ಕನಿಷ್ಠ ತಾಪಮಾನದಲ್ಲಿ ಸಲ್ಪ ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.












Click it and Unblock the Notifications