ಊಟ ಮುಗಿಸೋದು 1 ನಿಮಿಷ ತಡವಾದ್ರೆ, 1 ಗಂಟೆ ಹೆಚ್ಚುವರಿ ಕೆಲಸ ಮಾಡ್ಬೇಕಂತೆ: ಕಂಪನಿ ನಡೆಗೆ ನೆಟ್ಟಿಗರ ತರಾಟೆ
Viral Office Notice: ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳನ್ನು ಮೈಕ್ರೋ ಮ್ಯಾನೇಜ್‌ಮೆಂಟ್ ಮಾಡುವ ಸಂಸ್ಕೃತಿ ಹೆಚ್ಚುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದೀಗ ಇದಕ್ಕೆ ಸಾಕ್ಷಿಯೆಂಬಂತೆ ಕಂಪನಿಯೊಂದರ ವಿಲಕ್ಷಣ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ವಿಲಕ್ಷಣ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲಸದ ಅವಧಿ ಮತ್ತು ನಿಯಮಗಳ ಹೆಸರಿನಲ್ಲಿ ಉದ್ಯೋಗಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ನೀಡಿರುವ ನೋಟಿಸ್‌ನಲ್ಲಿ 30 ನಿಮಿಷಗಳ ಊಟದ ವಿರಾಮದ (ಲಂಚ್ ಬ್ರೇಕ್) ಅವಧಿಯನ್ನು ಮೀರಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಈ ನೋಟಿಸ್ ಯಾವ ಕಂಪನಿಗೆ ಸೇರಿದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಇದರಲ್ಲಿರುವ ನಿಯಮಗಳು ಕಾರ್ಪೊರೇಟ್ ವಲಯದ ಅಮಾನವೀಯತೆಗೆ ಕನ್ನಡಿ ಹಿಡಿದಂತಿವೆ.

ನೋಟಿಸ್‌ನಲ್ಲಿ ಏನಿದೆ?
ವೈರಲ್ ಆಗಿರುವ ನೋಸ್‌ನಲ್ಲಿ ಉದ್ಯೋಗಿಗಳಿಗೆ ವಿಲಕ್ಷಣ ಲೆಕ್ಕಾಚಾರವೊಂದನ್ನು ನೀಡಲಾಗಿದೆ. 'ನಿಮಗೆ ನಿಗದಿಪಡಿಸಿದ 30 ನಿಮಿಷಗಳ ಊಟದ ಅವಧಿಗಿಂತ ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಪ್ರತಿ ಒಂದು ನಿಮಿಷಕ್ಕೆ ನೀವು ಸಂಜೆ 6 ಗಂಟೆಯ ನಂತರ ಕಂಪನಿಗೆ 60 ನಿಮಿಷಗಳ ಕಾಲ (1 ಗಂಟೆ) ಉಚಿತವಾಗಿ ಕೆಲಸ ಮಾಡಿಕೊಡಬೇಕಾಗುತ್ತದೆ. ಉದಾಹರಣೆಗೆ ನೀವು 31 ನಿಮಿಷಗಳ ಕಾಲ ಊಟದ ವಿರಾಮ ತಗೆದುಕೊಂಡರೆ, ಸಂಜೆ 6 ಗಂಟೆಗೆ ಮನೆಗೆ ಹೋಗುವ ಬದಲು 7 ಗಂಟೆಯವರೆಗೆ ಕಚೇರಿಯಲ್ಲೇ ಇದ್ದು ಕೆಲಸ ಮಾಡಬೇಕು,' ಎಂದು ಬರೆಯಲಾಗಿದೆ.
ಅಷ್ಟೇ ಅಲ್ಲದೆ, ನೋಟಿಸ್‌ನ ಕೊನೆಯಲ್ಲಿ ಅತ್ಯಂತ ಉದ್ಧಟತನದಿಂದ 'ಬೇಗ ಊಟ ಮಾಡಿ,' ಎಂದು ಆದೇಶಿಸಲಾಗಿದೆ. ನಳಿನಿ ಉನಾಗರ್ ಎಂಬ ಟ್ವಿಟರ್ ಬಳಕೆದಾರರು ಈ ನೋಟಿಸ್‌ನ ಚಿತ್ರವನ್ನು ಹಂಚಿಕೊಂಡಿದ್ದು, 'ನಿಮ್ಮ ಸಂಸ್ಥೆ ಇಂತಹ ನಿಯಮಗಳನ್ನು ರೂಪಿಸಿದರೆ, ಉತ್ತಮವಾಗು ಕೆಲಸ ಮಾಡುವ ಉದ್ಯೋಗಿಗಳು ರಾಜೀನಾಮೆ ಪತ್ರ ಬರೆದಾಗ ಆಶ್ಚರ್ಯಪಡಬೇಡಿ,' ಎಂದು ಎಚ್ಚರಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಕಂಪನಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನೆಟ್ಟಿಗರು ಹೇಳೋದೇನು?
ಕಂಪನಿಗಳು ಉದ್ಯೋಗಿಗಳ ಕೆಲಸದ ದಕ್ಷತೆಯನ್ನು ಅಳೆಯುವ ಬದಲು, ಕಚೇರಿಯಲ್ಲಿ ಕುಳಿತುಕೊಳ್ಳುವ ಪ್ರತಿಯೊಂದು ನಿಮಿಷವನ್ನು ಲೆಕ್ಕ ಹಾಕುತ್ತಿರುವುದು ದುರಂತ. ಇದು ಉದ್ಯಮ ಸಂಸ್ಥೆಯಲ್ಲ, ಬದಲಿಗೆ 'ಕಾರ್ಪೊರೇಟ್ ಜೈಲು' ಎಂದು ನೆಟ್ಟಿಗರೊಬ್ಬರು ಕೆಂಡಕಾರಿದ್ದಾರೆ. 'ಭಾರತದಲ್ಲಿ ಕಾರ್ಮಿಕರ ಶೋಷಣೆಯನ್ನು ಅತಿಯಾದ ದುಡಿಮೆ ಸಂಸ್ಕೃತಿ ಎಂದು ವೈಭವೀಕರಿಸಲಾಗುತ್ತಿದೆ,' ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
'ಹೆಚ್ಚುವರಿ ಕೆಲಸಕ್ಕೆ ಯಾವುದೇ ಓವರ್‌ಟೈಮ್ ಸಂಬಳ ನೀಡದ ಕಂಪನಿಗಳು, ಕೇವಲ ಒಂದು ನಿಮಿಷ ತಡವಾದರೆ 1 ಗಂಟೆಯ ಕಾಲ ಉಚಿತವಾಗಿ ದುಡಿಸಿಕೊಳ್ಳುತ್ತಿರುವುದು ವ್ಯವಸ್ಥೆಯ ಹಿಂದುಳಿದ ಮಾನಸಿಕತೆಯನ್ನು ತೋರಿಸುತ್ತದೆ,' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಈ ವಿಲಕ್ಷಣ ನೋಟಿಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಕಾರ್ಪೊರೇಟ್ ನೌಕರರ ಹಕ್ಕುಗಳು ಮತ್ತು ಮಾನಸಿಕ ನೆಮ್ಮದಿಯ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications