ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಡಿಸಿಎಂ ಜಿ. ಪರಮೇಶ್ವರ್; ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಕುಮಾರಸ್ವಾಮಿಗೆ ತಿರುಗೇಟು
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಂದು ಮಾಧ್ಯಮಗಳ ಮುಂದೆ ಬಂದು ತಮ್ಮ ಆರೋಗ್ಯದ ಸ್ಥಿತಿಗತಿ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆರೋಗ್ಯದ ಚೇತರಿಕೆ ಹಾಗೂ ರಾಜ್ಯ ರಾಜಕೀಯದ ಪ್ರಮುಖ ವಿದ್ಯಮಾನಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ತಮ್ಮ ಅನಾರೋಗ್ಯದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್ ಅವರು, "ಕಳೆದ 10 ದಿನಗಳಿಂದ ನನ್ನ ಆರೋಗ್ಯ ಸರಿಯಿರಲಿಲ್ಲ. ಸಚಿವ ಹೆಚ್.ಕೆ. ಪಾಟೀಲ್ ಅವರು ನನ್ನನ್ನು ನೋಡಲು ಬರುವುದಾಗಿ ಹೇಳಿದ್ದರು. ಆದರೆ ಇಂದು ನಾನೇ ಸ್ವಲ್ಪ ಗುಣಮುಖನಾಗಿ ಹೊರಗಡೆ ಬಂದಿದ್ದರಿಂದ, ಅವರ ಸೌಜನ್ಯದ ಭೇಟಿಗಾಗಿ ನಾನೇ ಅವರ ನಿವಾಸಕ್ಕೆ ಬಂದಿದ್ದೇನೆ. ಸದ್ಯ ನನ್ನ ಆರೋಗ್ಯ ಶೇಕಡಾ 90 ರಷ್ಟು ಸುಧಾರಿಸಿದೆ. ಸಾರ್ವಜನಿಕರ ಮತ್ತು ನಿಮ್ಮೆಲ್ಲರ ಸಹಕಾರ ಹಾಗೂ ಪ್ರೀತಿಯಿಂದ ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಗುಣಮುಖನಾಗಲಿದ್ದೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಹೆಚ್.ಕೆ. ಪಾಟೀಲ್ ಅವರೊಂದಿಗಿನ ಭೇಟಿಯು ಕೇವಲ ಔಪಚಾರಿಕವಾಗಿದ್ದು, ಭವಿಷ್ಯದಲ್ಲಿ ಪಕ್ಷದ ಸಂಘಟನೆ ಮತ್ತು ಸರ್ಕಾರದ ಜನಪದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಡದಿ ಟೌನ್ ಶಿಪ್ ರಾಜಕೀಯ ಮತ್ತು ಕುಮಾರಸ್ವಾಮಿ ಟೀಕೆ
ಮುಂದುವರಿದು ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಟೀಕೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೂನ್ 26 ರಂದು ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಧಕ-ಬಾಧಕಗಳನ್ನು ಚರ್ಚಿಸಲು ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಜೂನ್ 27 ರಂದು ಬಿಡದಿಗೆ ಬಂದು ರೈತರ ಸಮ್ಮುಖದಲ್ಲಿ ಚರ್ಚಿಸುವಂತೆ ಮರುಪತ್ರ ಬರೆದಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ಈ ಯೋಜನೆಗೆ ಹಡ್ಕೊ ಹಾಗೂ ಬಿಡಿಎ ಮೂಲಕ ಅನುದಾನ ಒದಗಿಸುವ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ವಿಸ್ತೃತ ಚರ್ಚೆಯಾಗಿದೆ. ಕುಮಾರಸ್ವಾಮಿ ಅವರು ಹಳೆಯ ಹೇಳಿಕೆಗಳನ್ನು ಹಿಡಿದು ರಾಜಕೀಯ ಮಾಡುವುದನ್ನು ಬಿಟ್ಟು ಸಕಾರಾತ್ಮಕ ಸಲಹೆಗಳನ್ನು ನೀಡಬೇಕು" ಎಂದು ತಿಳಿಸಿದರು.
ರೈತರ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ಎಂದ ಡಿಸಿಎಂ
ರೈತರನ್ನು ಒಕ್ಕಲೆಬ್ಬಿಸುವುದು ಬೇಡ ಎನ್ನುವುದು ನಮ್ಮ ಉದ್ದೇಶವೂ ಆಗಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಪೂರ್ಣ ಒಪ್ಪಿಗೆಯ ಮೇಲೆ ಯೋಜನೆಯನ್ನು ಮಾಡಬೇಕು ಎಂದು ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ರೈತರು ನಮ್ಮದು ಒಣ ಭೂಮಿ ಇದೆ, ಇದರಿಂದ ನಮಗೆ ಅನುಕೂಲ ಇಲ್ಲ, ಈ ಭೂಮಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ನಮಗೆ ಹೆಚ್ಚು ಹಣ ಕೊಡಿ ಎಂದು ಕೇಳುತ್ತಾರೆ, ನಾವು ಅಂಥವರಿಗೆ ಅವರ ಬೇಡಿಕೆಯನ್ನು ನೋಡಿ ಸಮಾಧಾನಕರ ಪರಿಹಾರದ ಹಣ ನೀಡಿದರೆ ಅವರು ಬೇರೆ ಕಡೆ ಜಮೀನು ತೆಗೆದುಕೊಳ್ಳುತ್ತಾರೆ. ಅವರು ಕೃಷಿಯಲ್ಲಿ ಮುಂದುವರೆಯುತ್ತಾರೆ. ನಾವು ಈ ದೃಷ್ಟಿಕೋನದಲ್ಲಿ ಮುಂದುವರೆಯುತ್ತಿದ್ದೇವೆ ಆದರೆ ಅವರು ರಾಜಕೀಯ ಮಾಡಲು ಹೊರಟರೆ ಕಷ್ಟ.
ಬಿಜೆಪಿ ಶಾಸಕರ ಅಡ್ಡ ಮತದಾನ ಸಂಬಂಧ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡುವ ಬಗ್ಗೆ ಬಿಜೆಪಿ ಅಧ್ಯಕ್ಷರ ಮಾತಿಗೆ ಸಂಬಂಧಿಸಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಈ ವಿಚಾರವನ್ನು ಮಂಜುನಾಥ ಸ್ವಾಮಿಗೆ ಬಿಟ್ಟುಬಿಡೋಣ ಎಂದರು.
ತಹಶೀಲ್ದಾರರ ಬಡ್ತಿಯ ಜೊತೆಗೆ ಇನ್ನು ಯಾವೆಲ್ಲಾ ಕೆಲಸ ಕಾರ್ಯಗಳು ಬಾಕಿ ಇವೆ ಎಂಬ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮುಂದಿನ ಎರಡು ದಿನಗಳ ಒಳಗೆ ಒಂದು ಪತ್ರಿಕಾಗೋಷ್ಠಿಯನ್ನು ಮಾಡಲಿದ್ದೇನೆ. ಸುಮಾರು ವಿಷಯಗಳನ್ನು ನಾನು ರಾಜ್ಯದ ಜನರಿಗೆ ತಿಳಿಸಬೇಕಿದೆ. ಹಿಂದಿನ ಸಚಿವೆರಾದ ಕೃಷ್ಣ ಬೈರೇಗೌಡರು ಬಹಳಾ ಒಳ್ಳೆ ಕೆಲಸವನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ಹೊಸ ಆವಿಷ್ಕಾರಗಳನ್ನು ಸಹ ಮಾಡುವ ಕಡೆ ಯೋಚನೆ ಮಾಡಬೇಕು. ಅದನ್ನು ಸಹ ಮಾಡಲಾಗುವುದು.












Click it and Unblock the Notifications