ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ
ಸದ್ಯದ ಜಾಗತಿಕ ಯುದ್ಧದ ಸನ್ನಿವೇಶ ಮತ್ತು ಭಾರತದ ಸ್ಥಿತಿಗತಿಯ ಬಗ್ಗೆ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಕುಮಾರ್ ಶಾಸ್ತ್ರಿ ಅವರು ಒನ್ ಇಂಡಿಯಾ ಕನ್ನಡದೊಂದಿಗೆ ಸಮಗ್ರವಾಗಿ ಮಾತನಾಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ವಿಶ್ವದ ಅನೇಕ ದೇಶಗಳು ಆತಂಕದಲ್ಲಿವೆ. ಇಂತಹ ಹೊತ್ತಿನಲ್ಲಿ ಭಾರತವು ಈ ಪರಿಸ್ಥಿತಿಯನ್ನು ಹೇಗೆ ಗಮನಿಸುತ್ತಿದೆ ಮತ್ತು ಸಾಮಾನ್ಯ ಭಾರತೀಯನಾಗಿ ನಾವು ಎಷ್ಟು ಸುರಕ್ಷಿತವಾಗಿದ್ದೇವೆ ಎಂದು ವಿವರಿಸಿದ್ದಾರೆ. ಅವರ ವಿಶ್ಲೇಷಣೆ ಇಲ್ಲಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಉಲ್ಲೇಖಿಸಿದ ಶಾಸ್ತ್ರಿಯವರು, "ಯಾವುದೇ ದೇಶಕ್ಕೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ತಿರುಗಿ ಬೀಳುವುದು ಅನಿವಾರ್ಯ" ಎಂದಿದ್ದಾರೆ. ಇಸ್ರೇಲ್‌ಗೆ ಇರಾನ್‌ನ ಪರಮಾಣು ಶಕ್ತಿ ಒಂದು ದೊಡ್ಡ ಭೀತಿಯಾಗಿ ಕಾಣುತ್ತಿರುವುದೇ ಈ ಎಲ್ಲ ಸಂಘರ್ಷಕ್ಕೆ ಮೂಲ ಕಾರಣ ಎಂದು ಅವರು ವಿವರಿಸಿದ್ದಾರೆ.

ಭಾರತ ಕಲಿಯಬೇಕಾದ ಪಾಠ
ಯುದ್ಧದ ಕಾರಣದಿಂದ ಜಾಗತಿಕವಾಗಿ ಇಂಧನ ಅಥವಾ ಸಂಪನ್ಮೂಲಗಳ ಕೊರತೆ ಉಂಟಾದಾಗ, ಭಾರತವು ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಮಧ್ಯಪ್ರಾಚ್ಯವು ಜಗತ್ತಿನ ಎನರ್ಜಿ ಸೆಕ್ಟರ್‌ನ ಕೇಂದ್ರ ಬಿಂದುವಾಗಿರುವುದರಿಂದ, ಅಲ್ಲಿನ ಯುದ್ಧವು ಖಂಡಿತವಾಗಿಯೂ ಜಾಗತಿಕ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತದೆ. ಒಬ್ಬ ಸೈನಿಕನಾಗಿ ತಾವು ಎಂದಿಗೂ ಯುದ್ಧವನ್ನು ಬೆಂಬಲಿಸುವುದಿಲ್ಲ ಎಂದು ಶಾಸ್ತ್ರಿಯವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಸಮಸ್ಯೆಯನ್ನಾದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ ಎಂಬುದು ಭಾರತದ ನಿಲುವು ಕೂಡ ಆಗಿದೆ. ಅನಿವಾರ್ಯವಾಗಿ ದಾಳಿ ನಡೆಸಬೇಕಾದ ಸಂದರ್ಭ ಬಂದರೂ, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಅವರ ಕಳಕಳಿಯಾಗಿದೆ.
ಮಿಸೈಲ್ ಬೀಳುವ ಭಯದಲ್ಲಿದ್ದಾರೆ
ಇಂದು ಜಗತ್ತಿನ ಬೇರೆ ದೇಶಗಳಲ್ಲಿ ಜನರು ರಾತ್ರಿ ಮಲಗುವಾಗ ಎಲ್ಲಿಂದ ಮಿಸೈಲ್ ಬರುತ್ತದೋ ಎಂಬ ಭಯದಲ್ಲಿರುತ್ತಾರೆ. ಆದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾವುದೇ ಭಾರತೀಯ ನಾಗರಿಕ ಅಂತಹ ಭಯದಿಂದ ಮಲಗುವುದಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. ಭಾರತೀಯರು ಇಂದು ಬೆಳಿಗ್ಗೆ ಎದ್ದಾಗ ತಮ್ಮ ಕೆಲಸವನ್ನು ಹೇಗೆ ಉತ್ತಮವಾಗಿ ಮಾಡಬಹುದು ಮತ್ತು ದೇಶವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಯೋಚಿಸುತ್ತಾರೆಯೇ ಹೊರತು, ಯುದ್ಧದ ಭೀತಿಯಿಂದಲ್ಲ.
ಭಾರತವು ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಪ್ರಭಾವವನ್ನು ಬೆಳೆಸಿಕೊಂಡಿದೆ. ನಾವು ಇಂದು ನೆಮ್ಮದಿಯಿಂದ ಇದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರ ತ್ಯಾಗ ಮತ್ತು ಸರ್ಕಾರದ ರಾಜತಾಂತ್ರಿಕ ನೀತಿಗಳೇ ಕಾರಣ ಎಂದು ಅವರು ಶ್ಲಾಘಿಸಿದ್ದಾರೆ. ವಿಶ್ವದ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ಅದರ ಸಣ್ಣ ಪರಿಣಾಮ ಭಾರತದ ಮೇಲೆ ಇದ್ದೇ ಇರುತ್ತದೆ. ಆದರೆ ಆಂತರಿಕವಾಗಿ ನಾವು ಅತ್ಯಂತ ಸುರಕ್ಷಿತ ರಾಷ್ಟ್ರದಲ್ಲಿದ್ದೇವೆ ಎಂಬುದು ಶಾಸ್ತ್ರಿಯವರ ಅಭಿಪ್ರಾಯ.












Click it and Unblock the Notifications