National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು?
National Highway: ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಮತ್ತು ಐತಿಹಾಸಿಕ ತಾಣವಾದ ಬೇಲೂರನ್ನು ಮೈಸೂರಿನ ಬಿಳಿಕೆರೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 373 ಯೋಜನೆ ಕಳೆದ 5 ವರ್ಷಗಳಿಂದ ಪೂರ್ಣಗೊಳ್ಳದೇ ಸ್ಥಗಿತಗೊಂಡು ಹಳ್ಳ ಹಿಡಿದಿದೆ. ಸುಮಾರು 630 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಸ್ಥಗಿತಗೊಂಡಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಬೇಲೂರಿನ ಚನ್ನಕೇಶವ ದೇವಸ್ಥಾನ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಂತಹ ಪ್ರಮುಖ ತಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಯೋಜನೆ ಕುಂಠಿತವಾಗಿರುವುದು ಸ್ಥಳೀಯರು ಹಾಗೂ ವಾಹನ ಸವಾರರು ಅಸಮಾಧಾನಕ್ಕೆ ಕಾರಣವಾಗಿದೆ.

ಕಾಮಗಾರಿ ಸ್ಥಗಿತದಿಂದ ವಾಹನ ಸವಾರರ ಪರದಾಟ
ಹಾಸನದಿಂದ ಬೇಲೂರು ಮಾರ್ಗವಾಗಿ ಮೂಸೂರಿಗೆ ಬಿಳಿಕೆರೆವರೆಗೆ ಮಾರ್ಗದಲ್ಲಿ ಸಾಗುವ ಈ ಹೆದ್ದಾರಿ ಚತುಷ್ಪಥ ಆಗಬೇಕಿದ್ದು, ಪ್ರಾಥಮಿಕ ಹಂತದ ಕೆಲಸಗಳು ಆರಂಭವಾದರೂ ನಂತರ ಆಮೆಗತಿಯಲ್ಲಿ ಸಾಗಿದೆ. ಕೆಲವು ಕಡೆ ರಸ್ತೆ ಅಗೆದ ಸ್ಥಿತಿಯಲ್ಲೇ ಬಿಟ್ಟಿರುವುದು ವಾಹನ ಸವಾರರಿಗೆ ಭಾರೀ ತೊಂದರೆ ಆಗುತ್ತಿದೆ. ಇದರಿಂದ ಅಪಘಾತಗಳು ಕೂಡ ಸಂಭವಿಸುತ್ತಿವೆ ಎನ್ನುವ ಆರೋಪಗಳು ಕೂಡ ಕೇಳಿಬಂದಿವೆ.
ಹಾಸನದಿಂದ ಸುಮಾರು 35 ಕಿಲೋ ಮೀಟರ್ ಸೇರಿ ಬೇಲೂರಿನಿಂದ ಬಿಳಿಕೆರೆವರೆಗಿನ ಈ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 630 ಕೋಟಿ ರೂಪಾಯಿ ಹಣ ಮೀಸಲಿಟ್ಟಿದೆ. ಆದರೆ ರಸ್ತೆಗೆ ಬೇಕಾದ ಭೂಸ್ವಾಧೀನ ಮಾಡುವಲ್ಲಿ ಅಧಿಕಾರಿಗಳು ಮಾಡಿರುವ ವಿಳಂಬದಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಸ್ಥಳೀಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂಸ್ವಾಧೀನವೇ ಪ್ರಮುಖ ಅಡೆತಡೆ
ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೂ ಸಹ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬವೇ ಮುಖ್ಯ ತೊಡಕಾಗಿದೆ ಎನ್ನಲಾಗುತ್ತಿದೆ. ಪ್ರಾರಂಭದಲ್ಲಿ ಭೂಸ್ವಾಧೀನಕ್ಕೆ ನಿಗದಿಪಡಿಸಿದ ಮೊತ್ತ ಸಾಕಾಗದೇ, ಭೂಮಿಯ ಮೌಲ್ಯ ಏರಿಕೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಅನುದಾನ ಅಗತ್ಯವಾಗಿದೆ ಎಂದು ತಿಳಿದುಬಂದಿದೆ. ಭೂಸ್ವಾಧೀನ ಸಂಬಂಧಿತ ಕಚೇರಿ ಬೆಂಗಳೂರಿನಲ್ಲಿ ಇರುವುದರಿಂದ ಸ್ಥಳೀಯರೊಂದಿಗೆ ಸಮರ್ಪಕ ಸಂವಹನ ಸಾಧ್ಯವಾಗುತ್ತಿಲ್ಲ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲೇ ಕಚೇರಿ ತೆರೆಯುವ ಬಗ್ಗೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚತುಷ್ಪಥ ಆಗಬೇಕೆಂಬ ಬೇಡಿಕೆ
ಬೇಲೂರು ಮೂಲಕ ಚಿಕ್ಕಮಗಳೂರು, ಶೃಂಗೇರಿ, ಹೊರನಾಡು ಹಾಗೂ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ತೆರಳುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಈ ಮಾರ್ಗ ಚತುಷ್ಪಥ ಆಗಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸರ್ಕಾರವು ತುರ್ತು ಕ್ರಮ ಕೈಗೊಂಡು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ವೇಗ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿರುವ ಹಾಸನ ಜಿಲ್ಲಾಧಿಕಾರಿಗಳು ಶೀಘ್ರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೆದ್ದಾರಿ ಯೋಜನೆ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯ
ಅಧಿಕಾರಿಗಳು ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಲಾಗಿದೆ. ಕೆಲಸ ಶೀಘ್ರಗತಿಯಲ್ಲಿ ಆರಂಭವಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ, ಪ್ರಮುಖ ಪ್ರವಾಸಿ ತಾಣವನ್ನು ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿ ಯೋಜನೆ ಶೀಘ್ರ ಪೂರ್ಣಗೊಳ್ಳುವಂತೆ ಸರ್ಕಾರ ಕ್ರಮವಹಿಸಬೇಕೆಂಬ ಒತ್ತಾಯ ಜೋರಾಗಿದೆ. ಆದರೆ, ಈ ಕಾಮಗಾರಿಗೆ ವೇಗ ಯಾವಾಗ ನೀಡಲಾಗುತ್ತದೆಯೋ ಗೊತ್ತಿಲ್ಲ. ಪ್ರಯಾಣಿಕರಂತೂ ರೊಚ್ಚಿಗೆದ್ದಿರುವುದಂತೂ ನಿಜ. ಮೊದಲು ಕಾಮಗಾರಿ ಮುಕ್ತಾಯ ಮಾಡಿ. ಇಲ್ಲದಿದ್ದರೆ ಪ್ರತಿನಿತ್ಯವೂ ನಾವು ಹೀಗೆ ಪರದಾಡಬೇಕಾಗುತ್ತದೆ ಎಂದು ಕೆಂಡಕಾರಿದ್ದಾರೆ.












Click it and Unblock the Notifications