84ರ ಅಜ್ಜನ ಕೈಮಗ್ಗದ ಕಲೆಗೆ ಮೊಮ್ಮಗನ ಸಾಥ್: ಸೇಲಂನ ಸೀರೆಗೆ ವಿದೇಶದಲ್ಲಿ ಬೇಡಿಕೆ, ನೇಕಾರನ ಬಾಳಲ್ಲಿ ಹೊಸ ಭರವಸೆ
84ರ ಇಳಿವಯಸ್ಸಿನಲ್ಲಿ ವಿಶ್ರಾಂತಿ ಪಡೆಯಬೇಕಾದ ತಮಿಳುನಾಡಿನ ಕಕಾಪಾಳ್ಯಂನ ಚಿನ್ನಸ್ವಾಮಿ ಇಂದಿಗೂ ನೇಯ್ಗೆ ಕೆಲಸ ಮಾಡುತ್ತಾರೆ. ದಿನ ಬೆಳಗಾದರೆ ಸಾಕು ಎದ್ದು ಬಂದು ತಮ್ಮ ಕೈಮಗ್ಗದ ಮುಂದೆ ಕೂರುತ್ತಾರೆ. ಕೈಗಳು ನಡುಗುತ್ತಿದ್ದರೂ, ಕೆಲಸದ ಮೇಲಿನ ಪ್ರೀತಿ ಮತ್ತು ಬದ್ಧತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಕುಟುಂಬ ಸದಸ್ಯರು ಆಗಾಗ ಇಷ್ಟು ಕಾಲ ದುಡಿದ್ದದ್ದು ಸಾಕು ಇನ್ನಾದರೂ ವಿಶ್ರಾಂತಿ ಪಡೆಯುವಂತೆ ಹೇಳುತ್ತಾರೆ. ಆದರೆ ಚಿನ್ನಸ್ವಾಮಿ ಕೇಳಬೇಕಲ್ಲ. ತಮ್ಮ ಕೈಕಾಲು ಎಲ್ಲಿಯವರೆಗೆ ಸಾಥ್ ಕೊಡುತ್ತದೆಯೋ ಅಲ್ಲಿಯವರೆಗೆ ಈ ಕೆಲಸ ನಿಲ್ಲಿಸುವುದಿಲ್ಲ ಎನ್ನುತ್ತಾರೆ. 60 ವರ್ಷಗಳಿಗೂ ಹೆಚ್ಚು ಕಾಲ ನೇಯ್ಗೆಯಲ್ಲಿಯೇ ಕಳೆದಿದ್ದಾರೆ. ಅವರ ಜೀವನವನ್ನು ರೂಪಿಸಿದ್ದೇ ಈ ಕೈಮಗ್ಗ. ಹಾಗಾಗಿ ಇದನ್ನು ಬಿಡುವ ಯೋಚನೆಯನ್ನೇ ಮಾಡುವುದಿಲ್ಲ ಚಿನ್ನಸ್ವಾಮಿ. ದಶಕಗಳ ಕಾಲ ಮಧ್ಯವರ್ತಿಗಳ ಶೋಷಣೆಗೆ ಒಳಗಾಗಿದ್ದ ಈ ಹಿರಿಯ ನೇಕಾರನ ಬದುಕು, ಇಂದು ಅವರ ಮೊಮ್ಮಗನ ಸಾಹಸದಿಂದಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ.
ಕಷ್ಟದ ದಿನಗಳಲ್ಲಿ ಕೈಹಿಡಿದ ಕೈಮಗ್ಗ:
ಚಿನ್ನಸ್ವಾಮಿ ಮೂಲತಃ ಕೃಷಿಕರು. ಆದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ಭದ್ರಪಡಿಸುವ ಆಸೆ ಚಿನ್ನಸ್ವಾಮಿಯದ್ದಾಗಿತ್ತು. ತಮ್ಮ ಮೂವರು ಗಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ ಸಲುವಾಗಿ ತನ್ನಲ್ಲಿರುವ ಜಮೀನನ್ನು ಮಾರಿದ್ದರು. ಆದರೆ, ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ. ವಿಧಿಯಾಟ ಬೇರೆಯೇ ಆಗಿರುತ್ತದೆ. ಚಿನ್ನಸ್ವಾಮಿಯ ಇಬ್ಬರು ಮಕ್ಕಳು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗುತ್ತಾರೆ. ಅವರಿಗಾಗಿ ಕಂಡ ಕಂಡಲ್ಲಿ ಹುಡುಕಾಟ ನಡೆಸುತ್ತಾರೆ. ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತಾರೆ. ಆದರೆ ಏನೂ ಪ್ರಯೋಜನವಾಗುವುದಿಲ್ಲ.

ಸಾಂತ್ವನ ನೀಡಿದ್ದೇ ಕೈ ಮಗ್ಗ:
ಚಿಂತೆ, ಮಕ್ಕಳಿಗಾಗಿ ನಿರಂತರ ಕಾಯುವಿಕೆ, ಉತ್ತರ ಸಿಗದ ಪ್ರಶ್ನೆಗಳು ಹೀಗೆ ಜೀವನದಲ್ಲಿ ಅತೀವ ನೋವು ಅನುಭವಿಸಿದಾಗ ಅವರಿಗೆ ಸಾಂತ್ವನ ನೀಡಿದ್ದು ಇದೇ ಕೈಮಗ್ಗದ ಕೆಲಸ. ಕಷ್ಟದ ದಿನಗಳಲ್ಲಿ ನೇಯ್ಗೆಯೇ ಅವರ ಬದುಕಿನ ಆಧಾರಸ್ತಂಭವಾಗಿತ್ತು. ಚಿನ್ನಸ್ವಾಮಿ ಮೊಮ್ಮಗ ಪ್ರವೀಣ್ ಅಜ್ಜನ ಬದುಕಿನ ಕತೆಗಳನ್ನು ಕೇಳುತ್ತಲೇ ಬೆಳೆದವ. ಅಜ್ಜ ಅನುಭವಿಸಿದ ನೋವು ಮಾಡಿರುವ ತ್ಯಾಗ ಇವೆಲ್ಲವೂ ಅಜ್ಜನ ಮೇಲಿನ ಗೌರವವನ್ನು ಹೆಚ್ಚಿಸಿತ್ತು. ತನ್ನ ಅಜ್ಜನ ಕೆಲಸ, ಪ್ರತಿಭೆ ತೆರೆ ಮರೆಯಲ್ಲಿಯೇ ಅಡಗಬಾರದು ಎನ್ನುವ ನಿರ್ಧಾರಕ್ಕೆ ಪ್ರವೀಣ್ ಬರುತ್ತಾರೆ.
ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿರಲಿಲ್ಲ:
ಈ ಹಿಂದೆ ನೇಕಾರರು ನೇಯ್ದ ರೇಷ್ಮೆ ಸೀರೆಗಳನ್ನು ಮಧ್ಯವರ್ತಿಗಳು ಕೇವಲ 1,500 ರೂಪಾಯಿಗೆ ಖರೀದಿಸಿ, ಮಾರುಕಟ್ಟೆಯಲ್ಲಿ 15,000 ರೂಪಾಯಿಗೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.ಈ ಸೀರೆ ನೇಯ್ಯಲು ನೇಕಾರರಿಗೆ ಒಂದು ವಾರಗಳ ಕಾಲ ಬೇಕಾಗುತ್ತಿತ್ತು. ಆದರೆ ಒಂದು ವಾರಗಳ ಶ್ರಮಕ್ಕೆ ಸಿಗುತ್ತಿದ್ದದ್ದು ಕೇವಲ 1,500. ಹಾಗಾಗಿ ಇವರಲ್ಲಿ ಬಹಳ ಮಂದಿ ರೇಷ್ಮೆ ಸೀರೆ ನೇಯ್ಯುವುದನ್ನೇ ನಿಲ್ಲಿಸಿ ಕೇವಲ ಕಾಟನ್ ಸೀರೆಯನ್ನಷ್ಟೇ ಹೆಣೆಯಲು ಆರಂಭಿಸಿದರು.
ಮಧ್ಯವರ್ತಿಗಳ ಶೋಷಣೆಗೆ ಬ್ರೇಕ್ ಹಾಕಿದ ಮೊಮ್ಮಗ:
ಚಿನ್ನಸ್ವಾಮಿ ಅವರ ಮೊಮ್ಮಗ ಪ್ರವೀಣ್ ಬಿಎಸ್ಸಿ ಕೆಮಿಸ್ಟ್ರಿ ಅಂತಿಮ ವರ್ಷದ ವಿದ್ಯಾರ್ಥಿ. ತನ್ನ ಅಜ್ಜನ ಕೌಶಲ್ಯಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ ಎಂಬುದನ್ನು ಗಮನಿಸಿದ ಪ್ರವೀಣ್, 2026ರ ಜನವರಿಯಲ್ಲಿ 'ತಾತಾಸ್ ಕ್ಲೋತಿಂಗ್' (Thatha's Clothing) ಎಂಬ ಇನ್‌ಸ್ಟಾಗ್ರಾಮ್ ಪುಟವನ್ನು ಆರಂಭಿಸಿದರು.
ಪ್ರವೀಣ್ ಅವರ ವೇದಿಕೆಯು ನೇಕಾರರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ವಿದೇಶಗಳಿಗೂ ವಿಸ್ತರಿಸಿದ ಕಲೆ:
ಪ್ರಸ್ತುತ, ಸೇಲಂನ ಸುಮಾರು 30ಕ್ಕೂ ಹೆಚ್ಚು ನೇಕಾರರು ಈ ವೇದಿಕೆಯೊಂದಿಗೆ ಕೈಜೋಡಿಸಿದ್ದಾರೆ. ಇಲ್ಲಿನ ವಿಶೇಷತೆಯೆಂದರೆ ಪಾರದರ್ಶಕತೆ. ಗ್ರಾಹಕರು ನೇರವಾಗಿ ನೇಕಾರರ ಪರಿಶ್ರಮಕ್ಕೆ ಬೆಲೆ ನೀಡುತ್ತಿದ್ದಾರೆ. ಈ ಸೀರೆಗಳಿಗೆ ಇಂದು ಕೆನಡಾ, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಮಲೇಷ್ಯಾದಂತಹ ದೇಶಗಳಿಂದಲೂ ಭಾರೀ ಬೇಡಿಕೆ ಬಂದಿದ್ದು, ಒಟ್ಟು ಆರ್ಡರ್‌ಗಳ ಪೈಕಿ ಶೇ. 50ರಷ್ಟು ವಿದೇಶಗಳಿಂದಲೇ ಬರುತ್ತಿವೆ.
ಕಸ್ಟಮೈಸ್ ಮಾಡಿದ ಸೀರೆಗಳಿಗೆ ಬೇಡಿಕೆ:
ಈ ಸೀರೆ ತಯಾರಿಸಲು ನಾಲ್ಕರಿಂದ ಹತ್ತು ದಿನಗಳು ಬೇಕಾಗುತ್ತದೆ.ಇಲ್ಲಿ ಗ್ರಾಹಕರು ಭಾಗಶಃ ಮುಂಗಡ ಪಾವತಿ ಮಾಡಿದ ನಂತರ ಆರ್ಡರ್ ಕನ್‌ರ್ಫಮ್ ಮಾಡಲಾಗುತ್ತದೆ. ನಿಯಮಿತ ಸ್ಟಾಕ್‌ಗಾಗಿ, ತಾತಾ ಪ್ರತಿ ತಿಂಗಳು ಹತ್ತು ವಿಭಿನ್ನ ನೇಕಾರರಿಂದ ನಾಲ್ಕರಿಂದ ಐದು ಸೀರೆಗಳನ್ನು ಖರೀದಿಸುತ್ತಾರೆ. ಅವರು ಪ್ರಸ್ತುತಪಡಿಸುವ ಸಂಗ್ರಹಗಳ ಆಧಾರದ ಮೇಲೆ ಈ ಸೀರೆಯನ್ನು ಖರೀದಿ ಮಾಡಲಾಗುತ್ತದೆ. ಈ ಹತ್ತು ನೇಕಾರರು ಮಾಸಿಕವಾಗಿ ಬದಲಾಗುತ್ತಾರೆ. ಇದರಿಂದ ಪ್ರತಿಯೊಬ್ಬ ನೇಕಾರನ ಕೆಲಸವು ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ಸಂಪ್ರದಾಯ ಮತ್ತು ಆಧುನಿಕತೆಯ ಸಂಗಮ:
ಮೊಮ್ಮಗ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ, ಚಿನ್ನಸ್ವಾಮಿ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ನೇಯ್ಗೆಯ ಅನುಭವಗಳನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಸಂಜೆ ವೇಳೆ ಇಬ್ಬರೂ ಸೇರಿ ಸೀರೆಗಳನ್ನು ಪ್ಯಾಕ್ ಮಾಡುವ ದೃಶ್ಯಗಳು ಅನೇಕ ಗ್ರಾಹಕರ ಮನ ಗೆದ್ದಿವೆ.
"ನಾನು ವಿದ್ಯಾವಂತನಲ್ಲ, ಆದರೆ ನನ್ನ ಕೈಯ್ಯಲ್ಲಿ ಕಲೆಯಿದೆ" ಎನ್ನುವ ಚಿನ್ನಸ್ವಾಮಿ ಅವರ ಮಾತುಗಳಲ್ಲಿ ದೃಢತೆಯಿದೆ. ಅಜ್ಜ ಮತ್ತು ಮೊಮ್ಮಗನ ಈ ಭಾವನಾತ್ಮಕ ಬಾಂಧವ್ಯ ಮತ್ತು ಸಾಮಾಜಿಕ ಕಳಕಳಿ, ಇಂದು ಕೈಮಗ್ಗದ ನೇಕಾರರಿಗೆ ಹೊಸ ಬದುಕಿನ ದಾರಿಯನ್ನು ತೋರಿಸಿಕೊಟ್ಟಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications