ಮಾ.2,3 ಮಂಡ್ಯದ ಐತಿಹಾಸಿಕ ಬೂದನೂರು ಉತ್ಸವ: ಸಾಧುಕೋಕಿಲಾ ಹಾಗೂ ಅರ್ಜುನ್ ಜನ್ಯ ಕಾರ್ಯಕ್ರಮ
ಮಂಡ್ಯ ಮಾರ್ಚ್ 2: ಮಂಡ್ಯ ಮಂದಿಗೆ ಈ ದಿನ ಸುದಿನ. ಇಂದು ಪುರಾತನ ಸ್ಮಾರಕಗಳತ್ತ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಪ್ರಥಮ ಬಾರಿಗೆ ಬೂದನೂರು ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಬೆಂಗಳೂರು, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನ ಮಂಡ್ಯದ ಬೂದನೂರು ಗ್ರಾಮದತ್ತ ಹೆಜ್ಜೆ ಇಡುತ್ತಿದ್ದಾರೆ.
ಪ್ರವಾಸಿಗರಿಂದ ದೂರು ಉಳಿದಿರುವ ಪುರಾತನ ಸ್ಮಾರಕಗಳತ್ತ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಮಂಡ್ಯ ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಬೂದನೂರು ಉತ್ಸವ ಕಾರ್ಯಕ್ರಮವನ್ನು ಇಂದು (ಮಾರ್ಚ್ 2) ಮತ್ತು ನಾಳೆ (ಮಾರ್ಚ್ 3) ಆಯೋಜಿಸಲಾಗಿದೆ. ಈ ಮೂಲಕ ಶಾಸಕ ಪಿ.ರವಿಕುಮಾರ್ ಅವರು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಈ ಉತ್ಸವದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿದ್ದು ಸಾಧುಕೋಕಿಲಾ ಹಾಗೂ ಅರ್ಜುನ್ ಜನ್ಯ ತಂಡದವರಿಂದ ಕಾರ್ಯಕ್ರಮಗಳು ಜರುಗಲಿವೆ.

65 ಲಕ್ಷ ರೂಪಾಯಿ ವೆಚ್ಚದಲ್ಲಿ ಇದೇ ಮೊದಲ ಬಾರಿಗೆ ಬೂದನೂರು ಉತ್ಸವವನ್ನು ನಡೆಸಲಾಗುತ್ತಿದ್ದು, ಇದನ್ನು ಪ್ರತಿ ವರ್ಷವೂ ಮುಂದುವರೆಸಿಕೊಂಡು ಹೋಗುವುದಕ್ಕೆ ನಿರ್ಧರಿಸಲಾಗಿದೆ. ಹೊಸ ಬೂದನೂರಿನ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗ ಉತ್ಸವದ ಕಾರ್ಯಕ್ರಮಗಳು ಜರುಗಲಿದೆ.
ಮಾರ್ಚ್ 2 ರಂದು ಸಂಜೆ 5 ಗಂಟೆಗೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಪಿ ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್,ರಂಗಡಿಗಿ, ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಸಹಕಾರ ಸಚಿವ ಕೆ. ಎನ್..ರಾಜಣ್ಣ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಾಗೂ ಸಂಸದರು, ವಿಧಾನಸಭೆ ಹಾಗೂ ವಿಧಾನಸಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮಗಳ ವಿವರ ಹೀಗಿದೆ:
ಮಾರ್ಚ್ 2 ರಂದು ಸಂಜೆ 5 ಗಂಟೆಗೆ ಹೊಸ ಬೂದನೂರು ಗ್ರಾಮದ ಪ್ರವೇಶ ದ್ವಾರದಿಂದ ಶ್ರೀ ಕಾಶಿವಿಶ್ವನಾಥ ಮತ್ತು ಶ್ರೀ ಆನಂತಪದ್ಮನಾಭ ದೇವಾಲಯದವರೆಗೆ ಮೆರವಣಿಗೆ ನಡೆಯಲಿದೆ. ಆರು ಗಂಟೆಗೆ ಶ್ರೀ ಕಾಶಿ ವಿಶ್ವನಾಥ ಮತ್ತು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಪೂಜೆ ನಡೆಯಲಿದೆ. 6 15ಕ್ಕೆ ಮುಖ್ಯ ವೇದಿಕೆ ಬಳಿ ಗಂಗಾರತಿ ನಡೆಯಲಿದೆ. 6.30ಕ್ಕೆ ಬೂದನೂರು ಉತ್ಸವ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7.30ಕ್ಕೆ ಸಾಧುಕೋಕಿಲಾ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಬಳಿಕೆ ಮಾರ್ಚ್ 3ರಂದು ಅಂದರೆ ನಾಳೆ ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. 6 ಗಂಟೆಗೆ ಶಾಲಾ ಮಕ್ಕಳು, 6.15ಕ್ಕೆ ಸ್ಥಳೀಯ ಕಲಾ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಇನ್ನೂ ಸಂಜೆ 7.30 ಗಂಟೆಗೆ ಅರ್ಜುನ್ ಜನ್ಯ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಕೇರಳ ರಾಜ್ಯ ತಿರುವಂತಪುರದ ಅನಂತ ಪದ್ಮನಾಭ ದೇಗುಲ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಮಂಡ್ಯ ಜಿಲ್ಲೆಯ ಬೂದನೂರಿನಲ್ಲಿ ಮಾತ್ರ ಸದರಿ ದೇವಾಲಯ ನಿರ್ಮಾಣವಾಗಿದ್ದು, ಅನಂತ ಪದ್ಮನಾಭ ದೇಗುಲದಲ್ಲಿ ಇಂದಿಗೂ ಹತ್ತಾರು ಅಡಿ ಉದ್ದದ ನಾಗರಹಾವು ವಾಸ್ತವ್ಯವಿರುವುದು ದೇಗುಲದ ಧಾರ್ಮಿಕತೆಯನ್ನು ಬಿಂಬಿಸುತ್ತದೆ.
ಗ್ರಾಮದ ಎರಡು ದೇಗುಲಗಳ ವಾಸ್ತು ಶಿಲ್ಪದ ಶ್ರೀಮಂತಿಕೆ ಹಾಗೂ ಗ್ರಾಮದಲ್ಲಿರುವ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದ್ದು ಇವುಗಳ ಪ್ರಸಿದ್ಧತೆಯನ್ನು ಪಸರಿಸಲು ಬೂದನೂರು ಉತ್ಸವ ಸಹಕಾರಿಯಾಗಲಿದೆ ಎಂದು ಆಯೋಜಕರು ಹೇಳುತ್ತಾರೆ.












Click it and Unblock the Notifications