Namma Metro Update: ಸರ್ಜಾಪುರ - ಹೆಬ್ಬಾಳ ಮೆಟ್ರೋ ಎಲ್ಲೆಲ್ಲಿ ನಿಲ್ಲಲಿದೆ, ಇಲ್ಲಿದೆ ಸಂಪೂರ್ಣ ಮಾರ್ಗ - ನಿಲ್ದಾಣಗಳ ವಿವರ
Namma Metro Update: ಬೆಂಗಳೂರಿನ ಜನರಿಗೆ ನಮ್ಮ ಮೆಟ್ರೋದಿಂದ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ವಿವಾದಾತ್ಮಕ ಸುರಂಗ ರಸ್ತೆ ಯೋಜನೆ ವಿಳಂಬವಾಗುತ್ತಿದ್ದು, ಇದರ ನಡುವೆ ನಮ್ಮ ಮೆಟ್ರೋದ ರೆಡ್‌ಲೈನ್ ಯೋಜನೆಗೆ ಪ್ರಗತಿ ಆಗಿದೆ. ನಮ್ಮ ಮೆಟ್ರೋದ ರೆಡ್‌ಲೈನ್ ಯೋಜನೆಗೆ ಭರ್ಜರಿ ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ ಅನುಮೋದನೆ ನೀಡುವುದಕ್ಕೆ ಕನಿಷ್ಠ ನಾಲ್ಕು ತಿಂಗಳುಗಳು ಬೇಕಾಗಿದ್ದರೂ, ಪರಿಷ್ಕೃತ ವಿವರವಾದ ಯೋಜನಾ ವರದಿ (ಡಿಪಿಆರ್) ಯೋಜನೆ ಮತ್ತು ಅದರ ಸಂಭಾವ್ಯ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.
ಮುಂದುವರಿದು ಇದೀಗ ನಮ್ಮ ಮೆಟ್ರೋದ ಹಂತ-3ಎ ಅಡಿಯಲ್ಲಿ 'ರೆಡ್ ಲೈನ್' ಎಂದು ಕರೆಯಲಾಗುವ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್ ಯೋಜನೆಯು ವೇಗ ಪಡೆದುಕೊಂಡಿದೆ. 2023-24ರ ಕರ್ನಾಟಕದ ಬಜೆಟ್‌ನಲ್ಲಿ ನಮ್ಮ ಮೆಟ್ರೊದ ರೆಡ್‌ಲೈನ್ ಯೋಜನೆಯನ್ನು ಘೋಷಿಸಲಾಗಿತ್ತು. ಬಳಿಕ ಯೋಜನೆಯ ಕೆಲಸಗಳು ವೇಗ ಪಡೆದುಕೊಂಡಿದ್ದವು. 2024ರ ಜೂನ್ ವೇಳೆಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ನಂತರ 2025ರ ಜನವರಿ 10ರಂದು ರಾಜ್ಯ ಸಚಿವ ಸಂಪುಟವು ಇದಕ್ಕೆ ಅನುಮೋದನೆ ಸಲ್ಲಿಸಲಾಗಿತ್ತು. ಇದಾದ ಐದು ದಿನಗಳ ಬಳಿಕ ಯೋಜನೆಯನ್ನು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಆದರೆ ಇದಾದ ನಂತರ ಯೋಜನೆಗೆ ಅಡ್ಡಿಯಾಗಿತ್ತು. ಜೂನ್‌ನಲ್ಲಿ ಕೇಂದ್ರ ಸರ್ಕಾರವು ತನ್ನ ಹೆಚ್ಚಿನ ವೆಚ್ಚವನ್ನು ಗುರುತಿಸಿತ್ತು. ಪ್ರತಿ ಕಿಲೋಮೀಟರ್‌ಗೆ 776 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ನಮ್ಮ ಮೆಟ್ರೋ ಇತಿಹಾಸದಲ್ಲಿ ಅತ್ಯಂತ ದುಬಾರಿಯಾಗಿದೆ.

ಕೇಂದ್ರದ ನಿರ್ದೇಶನದ ಮೇರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಡಿಪಿಆರ್ ಅನ್ನು ಪರಿಶೀಲಿಸಲು ಮತ್ತು ವೆಚ್ಚವನ್ನು ಅತ್ಯುತ್ತಮವಾಗಿಸಲು ಬಹುರಾಷ್ಟ್ರೀಯ ಸಲಹಾ ಸಂಸ್ಥೆ ಸಿಸ್ಟ್ರಾವನ್ನು ನೇಮಿಸಿತ್ತು. ಏತನ್ಮಧ್ಯೆ ಕರ್ನಾಟಕವೂ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಹೆಬ್ಬಾಳವನ್ನು ಸಂಪರ್ಕಿಸುವ 16.75 ಕಿ.ಮೀ ಸುರಂಗ ರಸ್ತೆ ಯೋಜನೆಯನ್ನು ಘೋಷಿಸಿತು. ಈ ಯೋಜನೆಯ ಕೆಲವು ಭಾಗಗಳು ಮೆಟ್ರೋ ಮಾರ್ಗದೊಂದಿಗೆ ಅತಿಕ್ರಮಿಸುತ್ತಿವೆ ಎಂದು ಹೇಳಲಾಗಿದೆ. ಇದೇ ವೇಳೆ ಸುರಂಗ ರಸ್ತೆ (ಟನಲ್ ರಸ್ತೆ) ಯೋಜನೆಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರವು ವೇಗಗೊಳಿಸಿದೆ. ಇದಕ್ಕಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಅನ್ನು ತ್ವರಿತವಾಗಿ ಸಿದ್ಧಪಡಿಸಿ, ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಅತ್ಯಂತ ಕಡಿಮೆ ಮೊತ್ತದ ಬಿಡ್ಡರ್‌ನ್ನು (L1) ಗುರುತಿಸಿದೆ. ಈಗ ರಾಜ್ಯ ಸಚಿವ ಸಂಪುಟದ ಅಂತಿಮ ಅನುಮೋದನೆ ಸಿಕ್ಕರೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಪರಿಷ್ಕೃತ ಡಿಪಿಆರ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಮೆಟ್ರೋ ರೆಡ್‌ಲೈನ್‌ನಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಯೋಜನೆಯ ವೆಚ್ಚವನ್ನು 28,405 ಕೋಟಿ ರೂ.ಗಳಿಂದ 25,999 ಕೋಟಿ ರೂ.ಗಳಿಗೆ ಇಳಿಸಲಾಗಿದೆ. ಒಟ್ಟಾರೆ ಉದ್ದವನ್ನು 36.58 ಕಿ.ಮೀ.ಗಳಿಂದ 37.8 ಕಿ.ಮೀ.ಗಳಿಗೆ ಹೆಚ್ಚಿಸಲಾಗಿದೆ. ಸುರಂಗ ಮಾರ್ಗದ ಮೆಟ್ರೋ ಚಾಲನೆಯನ್ನು 14.44 ಕಿ.ಮೀ.ಗಳಿಂದ 14.28 ಕಿ.ಮೀ.ಗಳಿಗೆ ಕಡಿಮೆ ಮಾಡಲಾಗಿದೆ. ಪಶುವೈದ್ಯಕೀಯ ಕಾಲೇಜು ನಿಲ್ದಾಣವನ್ನು ತೆಗೆದುಹಾಕಲಾಗಿದೆ ಮತ್ತು ಯೋಜನೆಯ ಗಡುವನ್ನು ಏಪ್ರಿಲ್ 2031 ರಿಂದ ಏಪ್ರಿಲ್ 2033 ರವರೆ ವಿಸ್ತರಿಸಲಾಗಿದೆ.
ಎಲ್ಲೆಲ್ಲಿ ನಿಲ್ಲಲಿದೆ ನಮ್ಮ ಮೆಟ್ರೋ ಹೊಸ ಯೋಜನೆ
ಸರ್ಜಾಪುರ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಟೆಕ್ ಹಬ್ ಅನ್ನು ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಸಿಬಿಡಿ ಮತ್ತು ಹೆಬ್ಬಾಳದೊಂದಿಗೆ ಸಂಪರ್ಕಿಸುವುದರಿಂದ, ರೆಡ್ ಲೈನ್ ಬೆಂಗಳೂರಿನಲ್ಲಿ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಸಹಕಾರಿಯಾಗುವ ನಿರೀಕ್ಷೆ ಇದೆ. ಈ ಮೆಟ್ರೋ ಮಾರ್ಗದಲ್ಲಿ ದಿನಕ್ಕೆ 6.4 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಅಲ್ಲದೆ, ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್ (PHPDT) 24,834 ಎಂದು ಅಂದಾಜಿಸಲಾಗಿದೆ. ಈ ಎಲಿವೇಟೆಡ್ ಮಾರ್ಗವು ಸರ್ಜಾಪುರ ರಸ್ತೆಯ ಮಧ್ಯಭಾಗದಲ್ಲಿ ಇಬ್ಲೂರು ಜಂಕ್ಷನ್ ಮಾರ್ಗವಾಗಿ ಸಾಗಿದ ನಂತರ ಮಣಿಪಾಲ್ ಆಸ್ಪತ್ರೆಯಿಂದ ಎಡಕ್ಕೆ ತಿರುಗಿ ಹೊರ ವರ್ತುಲ ರಸ್ತೆ (ORR) ಮೂಲಕ ಮುಂದುವರಿಯಲಿದೆ.
ಇಬ್ಲೂರು ಮೇಲ್ಸೇತುವೆ ದಾಟಿದ ಬಳಿಕ, ಈ ಮಾರ್ಗವು ಬ್ಲೂ ಲೈನ್ ಮೆಟ್ರೋ ಜೊತೆ ಸಂಪರ್ಕ ಸಾಧಿಸಲಿದೆ. ಜಕ್ಕಸಂದ್ರ ಹಾಗೂ ಕೋರಮಂಗಲ 3ನೇ ಬ್ಲಾಕ್ ಮೂಲಕ ಸಾಗುತ್ತದೆ. ನಂತರ ಬಲಕ್ಕೆ ತಿರುಗಿ, ಕೋರಮಂಗಲ 2ನೇ ಬ್ಲಾಕ್‌ನಲ್ಲಿರುವ ಸೇಂಟ್ ಜಾನ್ಸ್ ಆಸ್ಪತ್ರೆ ಕಡೆಗೆ ಮುಂದುವರಿಯಲಿದೆ. ಈ ಮಾರ್ಗವು ಕೋರಮಂಗಲ 2ನೇ ಬ್ಲಾಕ್‌ನಿಂದ ಸುರಂಗ ಮಾರ್ಗವಾಗಿ ಸಾಗಲಿದೆ. ಹೊಸೂರು ರಸ್ತೆಯ ಕೆಳ ಮಾರ್ಗವಾಗಿ ಹಾದುಹೋಗಲಿದೆ. ಅಲ್ಲದೆ ಡೈರಿ ಸರ್ಕಲ್, ನಿಮ್ಹಾನ್ಸ್, ಡಬಲ್ ರಸ್ತೆ, ಮಿಷನ್ ರಸ್ತೆ, ಕಳಿಂಗ ರಾವ್ ರಸ್ತೆ (ಜಿಬಿಎ ಕಚೇರಿ ಬಳಿ), ಹಡ್ಸನ್ ವೃತ್ತ, ನೃಪತುಂಗ ರಸ್ತೆ, ಕೆಆರ್ ವೃತ್ತ, ಶೇಷಾದ್ರಿ ರಸ್ತೆ, ಅರಮನೆ ರಸ್ತೆ, ಬಸವೇಶ್ವರ ವೃತ್ತ ಮತ್ತು ಸ್ಯಾಂಕಿ ರಸ್ತೆಯನ್ನು ತಲುಪಲಿದೆ. ನಂತರ ಅದು ಮೈಕ್ರಿ ವೃತ್ತವನ್ನು ತಲುಪುವ ಮೊದಲು ಬಳ್ಳಾರಿ ರಸ್ತೆಯ ಮೂಲಕವಾಗಿ ಸಾಗಲಿದೆ.












Click it and Unblock the Notifications