ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿದಶೆಯಲ್ಲಿ ಒಳಿತೂ ಆಗಬಹುದು, ಕೆಡಕೂ ಆಗಬಹುದು

By ನಾಗನೂರಮಠ ಎಸ್.ಎಸ್.
|
Google Oneindia Kannada News

ಶನಿದಶೆಯ 19 ವರ್ಷಗಳಲ್ಲಿ ಸಾಮಾನ್ಯವಾಗಿ ಕಿರಿಕಿರಿ ಇರುತ್ತದೆ ಎನ್ನಬಹುದು. ಯಾಕೆಂದರೆ ಈ ಸಂದರ್ಭದಲ್ಲಿ ಆಲಸ್ಯತನ ದೇಹ ಮತ್ತು ಮನಸ್ಸಿನಲ್ಲಿ ಮನೆ ಮಾಡುತ್ತದೆ. ದರಿದ್ರತನ, ಅರಿಷ್ಟತನ ಹೆಚ್ಚಾಗಿ, ಆರೋಗ್ಯವು ಅಷ್ಟಕಷ್ಟೇ ಇರುತ್ತದೆ. ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಮ್ಮಿಯಾಗುತ್ತದೆ. ಕೆಟ್ಟ ಚಟ ಕಲಿಯಲು ನಾಲಿಗೆ ಹಂಬಲಿಸುತ್ತದೆ.

ಕೆಲವರಿಗೆ ಚರ್ಮದ ಸುಖ ಬೇಕೇ ಬೇಕು ಎನಿಸುತ್ತದೆ. ಜಾತಿಯಿಂದ ಸಸ್ಯಾಹಾರಿಯಾಗಿದ್ದರೂ ಚರ್ಮದ ಹೊದಿಕೆಯಲ್ಲಿರುವ ಮಾಂಸ ಕಚ್ಚಿ ಮುದ್ದಾಡುವ ಬಯಕೆ ವಿಪರೀತ ಹೆಚ್ಚಾಗಿ, ಒಂಥರಾ ಇವರು ಮಾಂಸಾಹಾರಿಗಳೆನ್ನಿಸಿಕೊಳ್ಳುತ್ತಾರೆ. ಸುಖಕ್ಕಾಗಿ ತಮ್ಮತನವನ್ನೇ ಪಣಕ್ಕಿಟ್ಟು ತಮ್ಮನ್ನು ಸಂತೋಷಪಡಿಸಿಕೊಳ್ಳಲು ಹವಣಿಸುತ್ತಾರೆ. ಮಾನ, ಮರ್ಯಾದೆ ಹೋದರೂ ಚಿಂತೆಯಿಲ್ಲ. "ಮೂರು ಬಿಟ್ಟವರು ಊರಿಗೆ ದೊಡ್ಡವರು" ಎಂಬಂತಾಗುತ್ತಾರೆ.

ಮನಸ್ಸು ಕ್ರೂರವಾಗುತ್ತದೆ. ಕೆಟ್ಟ ಕೆಲಸ ಮಾಡಲು ಉತ್ಸಾಹ ಮತ್ತು ಹುಮ್ಮಸ್ಸು ಬರುತ್ತದೆ. ಆದರೆ ಎಲ್ಲರೂ ಇದೇ ತರಹ ಇರಬೇಕಂತಿಲ್ಲ. ಜಾತಕದಲ್ಲಿ ಮಹಾತ್ಮನಿರುವ ಸ್ಥಾನ ನೋಡಿಕೊಂಡು ಅವನಿರುವ ಭಾವಕ್ಕೆ ಸಂಬಂಧಪಟ್ಟ ಒಳಿತು-ಕೆಡಕನ್ನು ನಿರ್ಧರಿಸಬಹುದು.

Sade Sati : What will happen during Shanidasha

ಹೀಗಾಗಿ ಜಾತಕವೇ ಬಯೋಡಾಟಾ ಆಗಿರುವುದರಿಂದ ತಮ್ಮ ಮತ್ತು ಕುಟುಂಬದ ಸದಸ್ಯರ ಎಲ್ಲ ಮಾಹಿತಿ ಮೊದಲೇ ನೋಟ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಹಿಂದು- ಮುಂದು ಗೊತ್ತಿಲ್ಲದಂತೆ ಮುನ್ನುಗ್ಗಿ, ಮುಕ್ಕರಿಸಿದ ಮೇಲೆನೆ ಜಾತಕ ಹಿಡಕೊಂಡು ತಿರುಗೋಕೆ ಶುರು ಮಾಡುತ್ತಾರೆ ಎಷ್ಟೋ ಜನ.

ಆದರಿನ್ನೊಂದು ಮಾತು, ಶನಿದಶೆಯಲ್ಲಿರುವವರು ತಮ್ಮೂರು, ತಮ್ಮವರನ್ನು ಬಿಟ್ಟು ದೂರದಲ್ಲಿ ವಾಸಿಸಲೇಬೇಕಾಗುತ್ತದೆ. ಜೀವನ ಸಾಗಿಸಲು ಅನಿವಾರ್ಯವಾಗಿ ಬೇರೆ ಕಡೆಗೆ ಬಾಳಬೇಕಾಗುತ್ತದೆ. ಕೆಲವೊಬ್ಬರಿಗೆ ಪರದೇಶದಲ್ಲಿ ವಾಸಿಸುವ ಯೋಗ ಕೂಡಿ ಬರುತ್ತದೆ (ಎಷ್ಟೋ ಜನರು ಪರದೇಶಕ್ಕೆ ಹೋಗಬೇಕು ಎಂದು ಪರಿತಪಿಸುತ್ತಿರುತ್ತಾರೆ). ಕುಟುಂಬದವರಿಂದ ಬೇರ್ಪಡುವ ಸಂದರ್ಭ ಒದಗಿ ಬರುತ್ತದೆ. ಆದ್ದರಿಂದ ಮನೆಯವರು, ತಮ್ಮ ಕುಟುಂಬ ಸದಸ್ಯರು ಯಾರಾದರೂ ಶನಿದಶೆಯಲ್ಲಿದ್ದರೆ ಅವರಿಗೆ ಬೆಂಬಲವಾಗಿ ನಿಂತು ಅವರನ್ನು ಪ್ರೋತ್ಸಾಹಿಸುತ್ತ, ಜೀವನೋತ್ಸಾಹ ತುಂಬುತ್ತಿರಬೇಕು.

ಶನಿಪ್ರಭಾವದ ಬಗ್ಗೆ ಏನೂ ಗೊತ್ತಿಲ್ಲದೆ ಕೆಲ ಮನೆಯಲ್ಲೆಲ್ಲರೂ ಜಗಳ ಮಾಡುತ್ತ ಕಣ್ಣೀರು ಕೂಳು ತಿನ್ನುತ್ತಿರುತ್ತಾರೆ. "ಅರಮನೆಯಿದ್ದರು, ನೆರೆಮನೆಯಿರಬೇಕು" ಎಂಬ ಮಾತಿನಂತೆ ಅಕ್ಕಪಕ್ಕದ ಮನೆಯವರೊಂದಿಗೆ ಈ ಕುರಿತು ವಿಷಯ ಕೇಳಿ ತಿಳಿದುಕೊಳ್ಳಬೇಕು. ಅರಿತವರಲ್ಲಿ ಕೇಳಿದರೆ ಮರ್ಯಾದೆ ಹೋಗುತ್ತದೆನ್ನುವಷ್ಟು ಸ್ವಾಭಿಮಾನ ಒಂದು ಕಡೆ. ಇನ್ನೊಂದೆಡೆ ಮಾಹಿತಿ ಕೇಳಿದರೆ ದಕ್ಷಿಣೆ ಕೊಡಬೇಕಾಗುತ್ತದಲ್ಲ ಎಂಬ ದುರಾಲೋಚನೆ ಬೇರೆ. ಒಟ್ಟಿನಲ್ಲಿ ಇಂಥವರಿಗೆ ಎಲ್ಲಾ ಪುಗ್ಸಟ್ಟೆನೆ ಆಗಬೇಕು. ತಮ್ಮ ಒಳಿತಿಗೆ ಖರ್ಚು ಮಾಡದಂಥಹವರು ಇನ್ನೊಬ್ಬರಿಗೆಂದು ಸಹಾಯ ಮಾಡಬಲ್ಲರು!

ಅಂತರ್‌ಭುಕ್ತಿ ಸಮಯ : ಶನಿದಶೆಯ 19 ವರ್ಷಗಳಲ್ಲಿ ಎಲ್ಲ ಗ್ರಹಗಳ ಅಂತರ್‌ಭುಕ್ತಿ ಬರುತ್ತದೆ. ಅಂತರ್‌ಭುಕ್ತಿ ಇರುವ ಸಮಯ ಈ ರೀತಿ ಇರುತ್ತದೆ. 1) ಶನಿಭುಕ್ತಿ- 3 ವರ್ಷ 3 ದಿನ ; 2) ಬುಧ- 2 ವರ್ಷ 8 ತಿಂಗಳು, 9 ದಿನ; 3) ಕೇತು- 1 ವರ್ಷ 1 ತಿಂಗಳು 9 ದಿನ ; 4) ಶುಕ್ರ- 3 ವರ್ಷ 2 ತಿಂಗಳು ; 5) ರವಿ- 11 ತಿಂಗಳು 12 ದಿನ ; 6) ಚಂದ್ರ- 1 ವರ್ಷ 7 ತಿಂಗಳು ; 7) ಕುಜ- 1 ವರ್ಷ 1 ತಿಂಗಳು 9 ದಿನ ; 8) ರಾಹು- 2 ವರ್ಷ 10 ತಿಂಗಳು 6 ದಿನ ; 9) ಗುರುಭುಕ್ತಿ- 2 ವರ್ಷ 6 ತಿಂಗಳು 12 ದಿನಗಳಿರುತ್ತದೆ.

ಈ ರೀತಿ ಶನಿದಶೆಯಲ್ಲಿ ವಿವಿಧ ಗ್ರಹಗಳ ಭುಕ್ತಿ ನಡೆಯುತ್ತವೆ. ಆದರೆ ಯಾವ ಗ್ರಹದ ಅಂತರ್‌ಭುಕ್ತಿ ಜೀವನಕ್ಕೆ ಲಾಭಕರ ಎಂಬುದನ್ನು ಜಾತಕದಲ್ಲಿ ಅದಿರುವ ಸ್ಥಾನ ನೋಡಿಕೊಂಡು ತಿಳಿದುಕೊಳ್ಳಬಹುದು.

ಒಳಿತೂ ಆಗಬಹುದು, ಕೆಡಕೂ ಆಗಬಹುದು : ಶನಿದಶೆ ಜೀವನದಲ್ಲಿ ಶುರುವಾದರೆ ಕೆಲವೊಂದು ಒಳಿತು ಆಗಬಹುದು, ಕೆಡಕು ಆಗಬಹುದು. ಅವರವರ ಜಾತಕದವಿದ್ದಂತೆ ಆಗುತ್ತದೆ. ಜಾತಕದಲ್ಲಿ ಶನಿಮಹಾತ್ಮನು ಯಾವ ಸ್ಥಾನದಲ್ಲಿ ಇದ್ದಾನೆ ಎಂದು ನೋಡಿ ಪರಿಶೀಲಿಸಿ ಶನಿದೇವನ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಏಕೆಂದರೆ ಜಾತಕದಲ್ಲಿ ಮಹಾತ್ಮನು ತನ್ನ ಉಚ್ಚ, ನೀಚ, ಶತ್ರು ಹಾಗೂ ಮಿತ್ರ ರಾಶಿ ಇವುಗಳಲ್ಲಿ ಯಾವ ರಾಶಿಯಲ್ಲಿದ್ದಾನೆ ಎಂಬುದನ್ನು ಮೊದಲು ನೋಡಿಕೊಳ್ಳಬೇಕು. ಯಾವಾಗಲೂ ಜಾತಕ ಪರಿಶೀಲನೆ ಮಾಡುವಾಗ ಮಾಡುವ ಮೊದಲನೇ ಕೆಲಸವೆಂದರೆ ಆಯುಷ್ಯ ನೋಡುವುದು. ಏಕೆಂದರೆ ಸಕಲೈಶ್ವರ್ಯ ಸಿಗುವ ಭಾಗ್ಯವಿದ್ದರು ಆಯುಷ್ಯವೇ ಕಮ್ಮಿಯಿದ್ದರೇನು ಬಂತು? ಹೀಗಾಗಿ ಜಾತಕದಲ್ಲಿ ಮೊದಲು ಆಯುಷ್ಯ ತಿಳಿದುಕೊಂಡು ಉಳಿದವುಗಳನ್ನು ನಂತರ ಪರಿಶೀಲಿಸಬೇಕಾಗುತ್ತದೆ.

ಇಂದಿನ ದಿನಗಳಲ್ಲಿ ಜೀವನ ಚೆನ್ನಾಗಿರಬೇಕೆಂದರೆ ದುಡ್ಡು ಹಾಗೂ ಆರೋಗ್ಯ ಇದ್ದರೆ ಸಾಕು. ಆದರೆ ದುಡ್ಡಿಗೋಸ್ಕರ ಅನ್ಯಾಯದ ಹಾದಿ ಹಿಡಿಯಬಾರದಷ್ಟೆ. ಕೆಲವರು ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತ, ನಯಾಪೈಸೆ ಖರ್ಚು ಮಾಡದೆ ತಮ್ಮ ಹಣ ಗಂಟು ಮಾಡಿಟ್ಟುಕೊಳ್ಳುತ್ತಿರುತ್ತಾರೆ. ಆಮೇಲೆ ಆ ಹಣದ ಗಂಟು ಎಲ್ಲಿ ಹೋಯಿತು ಎಂಬುದೇ ಕಗ್ಗಂಟಾಗುತ್ತದೆ! ಇಂಥಹವರು ಪರ್ಸನಲ್ ಕೆಲಸಗಳಿಗೆ ತಮ್ಮ ಕುಟುಂಬಕ್ಕೆ ಅನ್ನ ಕೊಡುವ ಕಚೇರಿಯ ಫೋನ್, ವಸ್ತು, ವಾಹನ, ಸಿಬ್ಬಂದಿಗಳನ್ನು ವಿಪರೀತ ದುರುಪಯೋಗಪಡಿಸಿಕೊಳ್ಳುತ್ತಿರುತ್ತಾರೆ.

ಇನ್ನು ಕೆಲವು ಮಹಾನ್ ವ್ಯಕ್ತಿಗಳೆನೆಸಿಕೊಂಡವರು ತಮ್ಮ ಹುದ್ದೆ ಹೆಸರು ಹೇಳಿ ಪುಗ್ಸಟ್ಟೆ ಕೆಲಸ ಮಾಡಿಸಿಕೊಳ್ಳುತ್ತ, ಬೆದರಿಸಿ ಹಣ ವಸೂಲು ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿರುತ್ತಾರೆ. ಬಂದ ಪಾಪದ ಹಣದಿಂದ ತಮ್ಮ ಸಂಸಾರದವರೆಲ್ಲರೂ ಸೇರಿಕೊಂಡು ತಮಗೆ ಬೇಕಾದ್ದನ್ನು ತಿಂದು ತೇಗುತ್ತಾರೆ. ಆದರೆ ಶನಿ ಮಹಾತ್ಮ ತಮ್ಮ ಮೇಲೆ ಕಣ್ಣಿಟ್ಟಿರುತ್ತಾನೆ ಎಂಬುದೇ ಇವರಿಗೆ ಅರಿವಿರುವುದಿಲ್ಲ. ಮಹಾತ್ಮನ ದೃಷ್ಟಿ ಬಿದ್ದಾಗ ತಿನ್ನಬೇಕಂದ್ರೆ ಹಿಡಿ ಅನ್ನ ಸಿಗಲ್ಲ. ಉಣ್ಣಲಿ ಬಿಡಿ ಪಾಪದ ಫಲ.

ಶನಿಸ್ವಾಮಿಯ ಕಣ್ಣು ನೋಡಿರಬಹುದು ನೀವು. ಅವು ನೇರವಾಗಿರಲ್ಲ, ಬೇರೆಲ್ಲೊ ನೋಡುತ್ತಿರುತ್ತದೆ ಮಹಾತ್ಮನ ದೃಷ್ಟಿ. ನೇರ ದೃಷ್ಟಿ ಮಹಾತ್ಮನದು ಬೀಳಬಾರದೆಂದು ಆ ರೀತಿ ಮಾಡಿರುತ್ತಾರೆ.

"ಶನಿಶಕ್ತಿ ಮೇಷರಾಶಿಗೆ ಹೀಗೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ತುಳಸಿ ಗಿಡವನ್ನು ಕುಂಡದಲ್ಲಿ ಬೆಳೆಸಿದ್ದರೆ, ಅದನ್ನು ದಕ್ಷಿಣ ಅಥವಾ ಪಶ್ಚಿಮದಲ್ಲಿಡಿ.

ಶನಿದೇವನ ಕೃಪೆಗೆ : ಶನಿರಕ್ಷಾ ಕವಚ ಧರಿಸಿಕೊಳ್ಳಿ ಅಥವಾ ಪೂಜಿಸಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 29 : Impact of Sade Sati on zodiac signs. Sade Sati : What will happen during Shanidasha? During this period of 19 years good or bad both things can happen in ones life. But, no one can get away from it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X