ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ ಸಲ್ಲಿಕೆ?

By ನಾಗನೂರಮಠ ಎಸ್.ಎಸ್.
|
Google Oneindia Kannada News

ಶನಿಕಾಟದಲ್ಲಿ ಜನರು ಶನಿವಾರ ಹನುಮನ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಹನುಮನ ಪೂಜಿಸುವ ವಾರ ಮಂಗಳವಾರ. ಶನಿಕೃಪೆಯಾಗಲಿ ಎಂದು ಹನುಮನ ದರ್ಶನ ಮಾಡುತ್ತಾರೆ. ನೀವು ಒಮ್ಮೆ ಪರೀಕ್ಷಿಸಿ. ಹನುಮನ ದೇವಸ್ಥಾನಕ್ಕೆ ಬಡವ, ಶ್ರೀಮಂತ, ಉಚ್ಚ, ಕೀಳುಜಾತಿಯೆಂಬ ಭೇದ-ಭಾವವಿಲ್ಲದೆ ಎಲ್ಲರೂ ಬರುತ್ತಾರೆ.

ಒಬ್ಬ ವ್ಯಕ್ತಿ ಐಷಾರಾಮಿ ಕಾರು ತೆಗೆದುಕೊಂಡು ದೇವಸ್ಥಾನಕ್ಕೆ ಬಂದಿದ್ದಾನೆಂದರೆ ಅವನಿಗೂ ಶನಿಕಾಟದಿಂದ ಪಾರಾಗಬೇಕಿರುತ್ತದೆ. ಇನ್ನು ಮತ್ತೊಬ್ಬಾತ ಚಪ್ಪಲಿ ಬಿಟ್ಟರೆ ಹಣ ಕೊಡಬೇಕಾಗುತ್ತದೆ ಎಂದು ಎಲ್ಲೋ ಚಪ್ಪಲಿ ಬಿಟ್ಟು ಹನುಮನ ದರ್ಶನ ಮಾಡುತ್ತಾನೆ. ಅವನ ಹತ್ತಿರ ಚಪ್ಪಲಿ ಕಾಯುವವನಿಗೆ ಕೊಡಲು ಹಣವಿರುವುದಿಲ್ಲ. (ಯಾರಾದರೂ ಪ್ರಸಾದ ನೀಡುತ್ತಿದ್ದರೆ ತುಂಬಾ ಸಂತಸದಿಂದ ಸ್ವೀಕರಿಸಿ ಹೊಟ್ಟೆ ತಣ್ಣಗಾಗಿಸಿಕೊಳ್ಳುತ್ತಾನೆ. ಅದಕ್ಕೆಂದೆ ದೇವಸ್ಥಾನದಲ್ಲಿ ಪ್ರಸಾದಕ್ಕೆಂದು ನೀವೆನಾದರೂ ತೆಗೆದುಕೊಂಡು ಹೋಗಿ ಎಂದು ನಾನು ಹೇಳುವುದು). ಈಗ ನಿಮಗೆ ಅರ್ಥವಾಗಿರಬೇಕು ಶನಿದೇವನು ಯಾರನ್ನೂ ಬಿಡುವುದಿಲ್ಲ ಎಂಬುದು. ಏಕೆಂದರೆ ಅವರವರ ಲೆವಲ್‌ಗೆ ಶನಿಕಾಟ ಅನುಭವಿಸುತ್ತಿರುತ್ತಾರೆ.

ಸಾಡೇಸಾತಿ ಸಮಯದಲ್ಲಿ ಹನುಮನನ್ನು ಒಲಿಸಿಕೊಳ್ಳಲು ಹನುಮಾನ್ ಚಾಲೀಸಾ ಓದುವುದು, ಹನುಮನ ದರ್ಶನ ಮಾಡುವುದೇಕೆ ಎಂಬ ಕುರಿತು ಪೌರಾಣಿಕ ಹಿನ್ನೆಲೆಯಿದೆ. ಎಷ್ಟೋ ಜನ ಪುರಾಣಗಳನ್ನು ಕಥೆಗಳೆಂದು ಹೀಗಳೆಯುತ್ತಾರೆ. ಮುಂದಿನ ಐದು ನೂರು ವರ್ಷಗಳ ನಂತರ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧೀಜಿ ಕುರಿತು ಆವಾಗಿನ ಜನರು ಕೂಡ ಇತಿಹಾಸವನ್ನು ಮೂಢನಂಬಿಕೆ ಎನ್ನಬಹುದು! ಇರಲಿ "ನೀರಿದ್ದಲ್ಲಿ ಕೆಸರುಂಟು, ಊರಿದ್ದಲ್ಲಿ ಹೊಲಸುಂಟು" ಎಂದುಕೊಂಡು ಇಂಥಹವರ ಮಾತನ್ನು ನಿರ್ಲಕ್ಷ್ಯ ಮಾಡಿ ನಾವೇ ಬುದ್ಧಿವಂತರಾಗೋಣ.

Sade Sati : Why one should worship Hanuman?

ಪೌರಾಣಿಕ ಹಿನ್ನೆಲೆ-1 : ಹನುಮನ ಕೃಪೆಯಾದರೆ ಶನಿರಾಜನ ಕೆಟ್ಟ ದೃಷ್ಟಿ ಕುಪ್ರಭಾವ ಕಮ್ಮಿಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಿರುವ ಪೌರಾಣಿಕ ಹಿನ್ನೆಲೆ ಎರಡಿವೆ. ಅದರಲ್ಲೊಂದು ಇದು. ಇದು ರಾಮಾಯಣಕ್ಕೆ ಸಂಬಂಧಪಟ್ಟಂತಹ ಹಿನ್ನೆಲೆ ಹೊಂದಿದೆ. ರಾಮಾಯಣದಲ್ಲಿನ ಮಹಾನ್ ಶಿವಭಕ್ತ ಅಸುರ ರಾವಣನು ನವಗ್ರಹಗಳನ್ನು ತನ್ನ ಅಡಿಯಾಳಾಗಿಟ್ಟುಕೊಂಡಿದ್ದನಂತೆ. ನವಗ್ರಹಗಳನ್ನು ತನ್ನ ಪಾವಟಿಗೆ ಮಾಡಿಕೊಂಡು ಅವರ ಬೆನ್ನ ಮೇಲೆ ಕಾಲಿಟ್ಟು ತನ್ನ ಸಿಂಹಾಸನವನ್ನೇರುತ್ತಿದ್ದನಂತೆ. ರಾವಣನ ಬಲಿಷ್ಠ ಮುಷ್ಠಿಯಿಂದ ತಪ್ಪಿಸಿಕೊಳ್ಳಲಾರದೇ ವಿಲವಿಲ ಒದ್ದಾಡುತ್ತಿದ್ದರಂತೆ ನವಗ್ರಹರು. ಅಪ್ರತಿಮ ಈಶ್ವರನ ಭಕ್ತನಾಗಿದ್ದ ರಾವಣ ಪ್ರಚಂಡನಾಗಿದ್ದನು. ಮಹಾಶಿವನ ಕೃಪಾಕಟಾಕ್ಷವೇ ರಾವಣನ ಮೇಲಿದ್ದುದರಿಂದ ಯಾರೂ ರಾವಣನ ತಂಟೆಗೆ ಬರುತ್ತಿರಲಿಲ್ಲ (ಆಫೀಸ್‌ನಲ್ಲಿ ಚಮಚಾಗಿರಿ, ಬಟರಿಂಗ್ ಮಾಡುತ್ತ ಬಾಸ್‌ಗೆ ಪ್ರಿಯವಾದವನ/ಳ ತಂಟೆಗೆ ಯಾರೂ ಹೋಗುವುದಿಲ್ಲವಲ್ಲ ಆ ರೀತಿ).

ಅಸುರ ಬುದ್ಧಿಯಿಂದ ಮೆರೆದಾಡುತ್ತಿದ್ದ ರಾವಣನು ಶನಿದೇವನನ್ನೂ ತನ್ನ ಅಡಿಯಾಳಾಗಿಟ್ಟುಕೊಂಡಿದ್ದನು. ಆ ಸಮಯದಲ್ಲಿ ಹನುಮನು ಸೀತೆ ಹುಡುಕಿಕೊಂಡು ಬಂದಾಗ ಅಲ್ಲಿ ರಾವಣಾಸುರನ ಬಂಧನದಲ್ಲಿರುವ ನವಗ್ರಹ ನೋಡಿದನು. ಅಪ್ರತಿಮ ಬಲವಾನನಾದ ಹನುಮನು ಕೂಡಲೇ ಶನಿದೇವನನ್ನು ರಾವಣನ ಬಂಧನದಿಂದ ಬಿಡುಗಡೆ ಮಾಡಿದನು. ಆಗ ಶನಿದೇವನ ಕುದೃಷ್ಟಿಯಿಂದ ರಾವಣನ ಸರ್ವನಾಶಕ್ಕೆ ಮುನ್ನುಡಿಯಾಯಿತು. ರಾವಣಾಸುರನ ಬಂಧನದಿಂದ ತನ್ನನ್ನು ಬಿಡುಗಡೆ ಮಾಡಿದ್ದಕ್ಕೆ ಶನಿದೇವನು ಪ್ರಸನ್ನನಾದನು. ಶನಿವಾರ ಯಾರು ಭಕ್ತಿಯಿಂದ ಹನುಮನನ್ನು ಪೂಜಿಸುತ್ತಾರೋ ಅವರಿಗೆ ನನ್ನಿಂದ ಬರುವ ತೊಂದರೆಗಳು ಕಮ್ಮಿಯಾಗುತ್ತೆ ಎಂದು ವಚನ ಕೊಟ್ಟನಂತೆ. ಅಲ್ಲದೇ ಮನುಜರಿಗೆ ತನ್ನಿಂದ ಬರುವ ಎಲ್ಲ ರೀತಿ ಕಷ್ಟಪರಿಹಾರವಾಗುತ್ತವೆ. ಬರುವ ತಾಪತ್ರಯ ಕೂಡ ಹನುಮನ ಪೂಜಿಸುವುದರಿಂದ ಹೆಚ್ಚಿನ ಕೇಡು ಮಾಡುವುದಿಲ್ಲ ಎಂದು ಮಾತು ಕೊಟ್ಟನಂತೆ. ಹನುಮ, ನಿನ್ನನ್ನು ಎಲ್ಲರೂ ಪೂಜಿಸುವಂತಾಗಲಿ ಎಂದು ಶನಿದೇವನು ಹಾರೈಸಿದನಂತೆ.

ಪೌರಾಣಿಕ ಹಿನ್ನೆಲೆ-2 : ಪೌರಾಣಿಕ ಹಿನ್ನೆಲೆಯು ಮತ್ತೊಂದಿದೆ. ಸಾಮಾನ್ಯವಾಗಿ ಪೌರಾಣಿಕ ವಿಷಯ ಬೇರೆಬೇರೆಯಾಗಿದ್ದರೂ ಸಾರಾಂಶ ಒಂದೇ ಆಗಿರುತ್ತದೆ. ಒಟ್ಟಿನಲ್ಲಿ ನಾವು ಮಾಡುವ ಪೂಜೆ, ಪುನಸ್ಕಾರಗಳು ದೇವರಿಗೆ ಮುಟ್ಟಿದರೆ ಸಾರ್ಥಕ ಎನ್ನುವವರು ನಾವೆಲ್ಲರೂ.

ಶನಿದೇವನು ತನ್ನ ಕಾಡಾಟದಲ್ಲಿ ನಮ್ಮ ಹೆಗಲೇರುತ್ತಾನೆ ಎಂಬುದರ ಕುರಿತು ಈ ಮೊದಲು ನೀವು ಓದಿದ್ದೀರಿ. ಶನಿದೇವನು ಹನುಮನಿಗೆ ಸಾಡೇಸಾತಿ ಮೊದಲ ಹಂತದಲ್ಲಿ ಹೆಗಲೇರುತ್ತಾನಂತೆ. ಆಗ ಹನುಮನು ಅಗಾಧ ಪ್ರಮಾಣದಲ್ಲಿ ಬೆಳೆಯಲಾರಂಭಿಸಿದನಂತೆ. ಈ ಸಮಯದಲ್ಲಿ ಶನಿದೇವನು ಹನುಮನ ಹೆಗಲಿನಲ್ಲಿ ಸಿಕ್ಕಿಕೊಂಡು ವಿಲವಿಲ ಒದ್ದಾಡಲಾರಂಭಿಸಿದನಂತೆ. ತನ್ನನ್ನು ಕಾಪಾಡು ಎಂದು ಹನುಮನನಿಗೆ ಬೇಡಿಕೊಳ್ಳಲಾರಂಭಿಸಿದನಂತೆ. ಬಲಿಷ್ಠ ಹನುಮನ ಹಿಡಿತದ ನೋವು ಅನುಭವಿಸಲಾರದೇ ಶನಿದೇವನು ದಯವಿಟ್ಟು ನನ್ನನ್ನು ಬಿಡು ಎಂದು ಹನುಮನಲ್ಲಿ ಕೇಳಿಕೊಂಡನಂತೆ. ನನಗೇಕೆ ಹೆಗಲೇರಿದ್ದೀಯಾ ಎಂದು ಹನುಮನು ಕೇಳಿದನಂತೆ.

ಆಗ ಶನಿದೇವನು ಎಲ್ಲರಿಗೂ ಬರುವಂತೆ ನಾನು ನಿನಗೂ ಬಂದು ಹೆಗಲೇರಿದ್ದೇನೆ. ಶಿವನಿಚ್ಛೆಯಂತೆ ಕರ್ಮಫಲ ನೀಡುವ ನನ್ನ ಕೆಲಸ ನಾನು ಮಾಡುತ್ತಿದ್ದೇನೆ ಎಂದನಂತೆ. ದಯವಿಟ್ಟು ನನ್ನನ್ನು ಈ ಸಹಿಸಲಸಾಧ್ಯವಾದ ನೋವಿನಿಂದ ಪಾರು ಮಾಡು. ಇನ್ಮೇಲೆ ನಿನ್ನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ನಾನು ಹೆಚ್ಚಿನ ತೊಂದರೆ ನೀಡುವುದಿಲ್ಲ ಎಂದು ಹೇಳಿದನಂತೆ. ಆದ್ದರಿಂದ ಹನುಮ ತನ್ನ ಭಕ್ತರ ಒಳಿತಾಗುತ್ತದೆಂದು ಶನಿದೇವನನ್ನು ಬಿಡುಗಡೆ ಮಾಡಿದನಂತೆ. ಈ ರೀತಿ ಹನುಮನನ್ನು ಶನಿವಾರದಂದು ಪೂಜಿಸಿದರೆ ಶನಿಕಾಟದಿಂದ ಮುಕ್ತಿ ಸಿಗುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಹನುಮನ ಪಾದಕ್ಕೆ ಹಣೆಹಚ್ಚಿ ನಮಸ್ಕರಿಸುವುದು ತುಂಬಾ ಶ್ರೇಯಸ್ಕರ ಎಂದು ನೆನಪಿಟ್ಟುಕೊಳ್ಳಿ.

ದೇವರೆಂದರೇನೆ ಮೂಢನಂಬಿಕೆ : ಕೆಲವರು ಆ ದೇವಸ್ಥಾನಕ್ಕೆ ಹೋಗಬೇಡಿ, ಈ ದೇವಸ್ಥಾನಕ್ಕೆ ಹೋಗಬೇಡಿ ಎಂದು ಹೇಳುತ್ತಿರುವುದನ್ನು ನೀವು ಕೇಳಿರಬಹುದು. (ಹೀಗೆ ಹೇಳುವವರು ಶಾಶ್ವತವಾಗಿ ಇಲ್ಲಿ ಇರಲ್ಲ. ಅವರೇ ಹೋಗುತ್ತಾರೆ. ಆದರೆ ದೇವಸ್ಥಾನಗಳು ಶಾಶ್ವತವಾಗಿ ಇಲ್ಲೇ ಇರುತ್ತವೆ!) ಆದರೆ ಇಂದಿನ ದಿನಗಳಲ್ಲಿ ದೇವರೆಂದರೇನೆ ಮೂಢನಂಬಿಕೆ ಎನ್ನುವ ಜನರೇ ನಮ್ಮಲ್ಲಿ ಹೆಚ್ಚಿದ್ದಾರೆ. ಇಂಥದರಲ್ಲಿ ಈ ರೀತಿ ಹೇಳುವುದರಿಂದ ದೇವರ ಮೇಲಿರುವ ಇದ್ದ ಅಲ್ಪಸ್ವಲ್ಪ ಭಯ, ಭಕ್ತಿ ಜನರಿಂದ ಮಾಯವಾಗುತ್ತದೆ.

ಮದುವೆ ಆಗಲಾರದವರು, ಮಕ್ಕಳಾಗದವರು, ಉದ್ಯೋಗವಿಲ್ಲದವರು, ಆರೋಗ್ಯ ಸುಧಾರಿಸಿಕೊಳ್ಳಲು ಸಂಬಂಧಪಟ್ಟ ದೇವರನ್ನು ಪೂಜಿಸುತ್ತಿರುತ್ತಾರೆ. ಕೆಲವರಿಗಂತು ಯಾವುದಕ್ಕೆ ಯಾವ ದೇವರನ್ನು ಪೂಜಿಸುವುದು ಎಂಬುದು ಕೂಡ ಗೊತ್ತಿರುವುದಿಲ್ಲ. ಸುಮ್ಮನೆ ಎಲ್ಲರೂ ಹೋಗುತ್ತಾರೆಂದು ತಾವೂ ಹೋಗುತ್ತಿರುತ್ತಾರೆ. ಮಹಾಶಿವನು ಇಂತಿಂಥದಕ್ಕೆ ಇಂತಹ ದೇವರು ಎಂದು ನೇಮಿಸಿದ್ದಾನೆ. (ಮುಖ್ಯಮಂತ್ರಿಯು ಜನಸೇವೆಗಾಗಿ ಮಂತ್ರಿಗಳು, ಅಧಿಕಾರಿಗಳನ್ನು ನೇಮಿಸಿ ಅವರಿಗೊಂದು ಇಲಾಖೆ ಕೊಟ್ಟಿರುತ್ತಾರೆ, ಆ ರೀತಿ).

ದೇವರ ಮೇಲೆ ಅಪವಾದ ಹೊರಿಸುವುದು ತರವಲ್ಲ. ಯಾವುದೇ ದೇವಸ್ಥಾನಕ್ಕೆ ಹೋದರು ಏನೂ ಕೆಟ್ಟದಾಗಿ ಆಗೋದಿಲ್ಲ. ಆದರೆ ನೀವು ಕೆಟ್ಟವರಾಗಿದ್ದುಕೊಂಡು ಬೇಕಾದ ವರ ದೇವರಲ್ಲಿ ಬೇಡಿಕೊಂಡರೆ "ಬೋರ್ಗಲ್ಲಿನ ಮೇಲೆ" ನೀರೆರೆದಂಗಾಗುತ್ತದೆ. ಏನಾದರೂ ಕೆಟ್ಟದ್ದಾಗುತ್ತಿರುವಾಗ "ಅನಿಷ್ಟಕ್ಕೆಲ್ಲ ಶನೈಶ್ಚರನೇ ಕಾರಣ" ಎಂಬ ಮಾತು ಕೂಡ ಕೇಳಿಬರುತ್ತದೆ. ಮಾಡಿದ್ದ ಕೆಟ್ಟ ಕೆಲಸ ನೆನಪಿಗೆ ಬರುವುದಿಲ್ಲ ಆ ಸಮಯದಲ್ಲಿ.

ತಂದೆ ತಾಯಿ ನಿರ್ಲಕ್ಷಿಸಬೇಡಿ : ಎಷ್ಟೋ ಜನ ಮನೆಯಲ್ಲಿರುವ ತಂದೆ-ತಾಯಿ ನಿರ್ಲಕ್ಷ್ಯ ಮಾಡಿ, ಪಾಪದ ಹಣದಿಂದ ಐಷಾರಾಮಿಯಾಗಿ ಊರೂರು ಸುತ್ತುತ್ತ ದೇವರ ದರ್ಶನ ಮಾಡುತ್ತಿರುತ್ತಾರೆ. ತಮಗೆ ಜೀವ ಕೊಟ್ಟ ನಿಜವಾದ ದೇವರು ಮನೆಯಲ್ಲಿರುವ ತಂದೆ-ತಾಯಿ ಎಂಬುದು ಕೂಡ ಅರಿಯದಂತಹ ಮುಠ್ಠಾಳತನವಿರುವ ಸಾಕಷ್ಟು ಜನರು ನಮ್ಮ ಸುತ್ತಮುತ್ತ ಕಂಡು ಬರುತ್ತಾರೆ. ಆದರೆ ಇವರೇನೂ ಅವಿದ್ಯಾವಂತರಲ್ಲ. ವಿದ್ಯೆ, ಬುದ್ಧಿ ಎಲ್ಲ ಇರುತ್ತದೆ. ಸಮಾಜದಲ್ಲಿ ದೊಡ್ಡ ಹೆಸರು ಮಾಡಿಕೊಂಡಿರುತ್ತಾರೆ.

ಮನೆಯಲ್ಲಿ ದೇವರಂತ ತಂದೆ-ತಾಯಿಯನ್ನು ಹೆಸರಿಲ್ಲದಂತೆ ಮಾಡಿ, ನರಕದ ನೋವು ಅನುಭವಿಸಲು ಸಿದ್ಧರಾಗಿ ತಮ್ಮ ಬಾವಿ ತಾವೇ ತೋಡಿಕೊಳ್ಳುತ್ತಾರೆ. ತಾವು ಮಾಡಿದ ತಪ್ಪು ಅರಿವಾಗುವಷ್ಟರಲ್ಲಿ ಎಲ್ಲ ಮುಗಿದು ಹೋಗಿರುತ್ತದೆ. ಆಗ ಗಳಿಸಿದ ಹಣ, ಬಂಗಾರ, ಆಸ್ತಿ ಯಾವುದಕ್ಕೂ ಉಪಯೋಗ ಬರುವುದಿಲ್ಲ. ಅನ್ಯಾಯದಿಂದ ಗಳಿಸಿದ್ದದರೊಂದಿಗೆ ಪ್ರಾಮಾಣಿಕವಾಗಿ ಗಳಿಸಿದ್ದು ಕೂಡ ಶನಿಕಾಟದಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಇನ್ನೊಂದು ವಿಶೇಷವೆಂದರೆ ಇಷ್ಟೆಲ್ಲಾ ದುರ್ಗುಣಗಳಿರುವ ಇಂಥಹವರಿಗೆ ಅವರ ತಂದೆ-ತಾಯಿ ದೇವರ ಹೆಸರಿಟ್ಟುತ್ತಾರೆ. ಆದರೆ ಇವರು ದೇವರ ಹೆಸರಿಟ್ಟುಕೊಂಡು ದಾನವರಾಗಿರುತ್ತಾರೆ. ಇಂಥವರು ಶನಿಕಾಟ ಅನುಭವಿಸುವುದನ್ನು ನಾವು ಕಣ್ಣಾರೆ ನೋಡಿದರೆ ನಮ್ಮ ಹೃದಯ ಹಿಂಡಿದಂತಾಗುತ್ತದೆ.

"ಶನಿದಶೆಯಲ್ಲಿ ಹೇಗಿರುತ್ತೆ ಜೀವನ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಮನೆಯಲ್ಲಿ ಕನ್ನಡಿಯನ್ನು ಪೂರ್ವ ಮತ್ತು ಉತ್ತರ ದಿಕ್ಕಿನ ಗೋಡೆಗೆ ಹಾಕಿ.

ಶನಿದೇವನ ಕೃಪೆಗೆ : ಶನಿದೇವನು "ಕೊಟ್ರೆ ವರ, ಇಟ್ರೆ ಶಾಪ" ಎಂಬ ಮಾತಿನಂತೆ ನಡೆದುಕೊಳ್ಳುವವನು. ಹೀಗಾಗಿ ಶನಿದೇವನಿಂದ ಶಾಪ ಪಡೆದುಕೊಳ್ಳುವಂತಹ ಕೆಲಸ ಅಪ್ಪಿತಪ್ಪಿಯೂ ಮಾಡಬೇಡಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 28 : Impact of Sade Sati on zodiac signs. Why Lord Hanuman is worshipped on Saturday by people who are affected by Sade Sati? Here goes two mythological stories from Ramayana. Believe in the God.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X