Get Updates
Get notified of breaking news, exclusive insights, and must-see stories!

LPG Crisis: ಎಲ್‌ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್‌, ಪಿಜಿಗಳಲ್ಲಿ ಮೆನು ಚೇಂಜ್‌

ದೇಶದ ಮಹಾನಗರಗಳಾದ ಬೆಂಗಳೂರು, ಮುಂಬೈ, ಹೈದರಾಬಾದ್‌ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಅಡುಗೆ ಅನಿಲಕ್ಕಾಗಿ ಹಾಹಾಕಾರ ಶುರುವಾಗಿದ್ದು, ಇಂದು ಸತತ ನಾಲ್ಕನೇ ದಿನವೂ ಎಲ್‌ಪಿಜಿ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೋಟೆಲ್‌ಗಳಲ್ಲಿ ಎಲ್‌ಪಿಜಿ ಇಲ್ಲದೆ ವ್ಯಾಪಾರ ನೆಲಕಚ್ಚಿದೆ. ಐಟಿ ಕಂಪನಿಗಳಲ್ಲಿ ಕ್ಯಾಂಟೀನ್‌ಗಳು ಮುಚ್ಚುತ್ತಿವೆ. ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಾಗಿ ಹಾಹಾಕಾರ ಶುರುವಾಗಿದೆ. ಒಂದೊಂದು ನಗರದಲ್ಲೂ ಒಂದೊಂದು ರೀತಿಯ ಸಂಕಷ್ಟ ಎದುರಾಗಿದೆ.

ಬೆಂಗಳೂರು: ಎಲ್‌ಪಿಜಿ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ

ಬೆಂಗಳೂರಿನಲ್ಲಿ ಎಲ್‌ಪಿಜಿ ಅಭಾವವಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿಗಳ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಹತ್ವದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.ನಗರದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ದಾಸ್ತಾನು ಸಮರ್ಪಕವಾಗಿದೆ. ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲದ ಕಾರಣ ಸಾರ್ವಜನಿಕರು ಗಾಬರಿಗೊಳ್ಳುವ ಅಗತ್ಯವಿಲ್ಲ. ಗ್ಯಾಸ್ ಖಾಲಿಯಾಗಬಹುದು ಎಂಬ ಭಯದಲ್ಲಿ ಜನರು ಹೆಚ್ಚುವರಿಯಾಗಿ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಮಾಡಬಾರದೆಂದು ಸರ್ಕಾರ ವಿನಂತಿಸಿದೆ.

LPG Crisis

ಅನಗತ್ಯವಾಗಿ ದಾಸ್ತಾನು ಮಾಡಿಕೊಳ್ಳುವುದು ವಿತರಣಾ ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ "ಅಡುಗೆ ಅನಿಲದ ಕೊರತೆ ಉಂಟಾಗಲಿದೆ" ಎಂಬ ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲ ಗೃಹಬಳಕೆ ಅಡುಗೆ ಅನಿಲ ಗ್ರಾಹಕರಿಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಗೃಹಬಳಕೆಯ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಅಥವಾ ಸಮಸ್ಯೆಗಳಿದ್ದಲ್ಲಿ ಬೆಂಗಳೂರು ನಗರ ಜಿಲ್ಲೆಯ ಗ್ರಾಹಕರು 9611404384 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಜನಪ್ರಿಯ ದರ್ಶಿನಿಗಳು ಅನಿವಾರ್ಯವಾಗಿ ಶಟರ್ ಎಳೆದಿವೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಬೆಂಗಳೂರಿನ ಸುಮಾರು 3,000ಕ್ಕೂ ಹೆಚ್ಚು ಹೋಟೆಲ್‌ಗಳು ಈಗಾಗಲೇ ಅಡುಗೆ ಮಾಡುವುದನ್ನು ನಿಲ್ಲಿಸಿವೆ. ದರ್ಶಿನಿಗಳು ಅತಿ ಕಡಿಮೆ ಅವಧಿಯಲ್ಲಿ ಸಾವಿರಾರು ಜನರಿಗೆ ಉಪಹಾರ ನೀಡುವ ವ್ಯವಸ್ಥೆಯಾಗಿದ್ದು, ಇಲ್ಲಿ ಅಡುಗೆ ಮಾಡಲು ನಿರಂತರವಾಗಿ ಹೈ-ಪ್ರೆಶರ್ ಗ್ಯಾಸ್ ಬರ್ನರ್‌ಗಳ ಅಗತ್ಯವಿರುತ್ತದೆ. ಗ್ಯಾಸ್ ಇಲ್ಲದೆ ದೋಸೆ ತವಾ ಮತ್ತು ಇಡ್ಲಿ ಪಾತ್ರೆಗಳನ್ನು ಬಿಸಿ ಮಾಡಲು ಸಾಧ್ಯವಾಗದ ಕಾರಣ, ಮಾಲೀಕರು ಹೋಟೆಲ್ ಮುಂದೆ "ಸಿಲಿಂಡರ್ ಕೊರತೆಯಿಂದ ಹೋಟೆಲ್ ಮುಚ್ಚಲಾಗಿದೆ" ಎಂಬ ಬೋರ್ಡ್ ಹಾಕುತ್ತಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷಾಂತರ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಹೊರಗಿನಿಂದ ಬಂದವರು ದಿನನಿತ್ಯದ ಆಹಾರಕ್ಕಾಗಿ ದರ್ಶಿನಿಗಳನ್ನೇ ನಂಬಿಕೊಂಡಿದ್ದಾರೆ. ದರ್ಶಿನಿಗಳು ಮುಚ್ಚಿರುವುದರಿಂದ ಮೆಸ್‌ಗಳು ಮತ್ತು ಸಣ್ಣ ಕ್ಯಾಂಟೀನ್‌ಗಳಲ್ಲೂ ಊಟ ಸಿಗುತ್ತಿಲ್ಲ. ಸ್ವಿಗ್ಗಿ ಮತ್ತು ಝೊಮ್ಯಾಟೋದಂತಹ ಆಪ್‌ಗಳಲ್ಲಿಯೂ ಹೆಚ್ಚಿನ ಹೋಟೆಲ್‌ಗಳಲ್ಲಿ ಆಹಾರ ಪೂರೈಕೆ ತಗ್ಗಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸದಿದ್ದರೆ ನಗರದ ಎಲ್ಲ 30,000 ಹೋಟೆಲ್‌ಗಳು ಮುಂದಿನ 48 ಗಂಟೆಗಳಲ್ಲಿ ಮುಚ್ಚಲಿವೆ ಎಂದು ಹೋಟೆಲ್‌ ಮಾಲೀಕರು ಎಚ್ಚರಿಸಿದ್ದಾರೆ.

Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ

ಮುಂಬೈನಲ್ಲಿ 800 ಹೋಟೆಲ್‌ ಮುಚ್ಚುವ ಆತಂಕ

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಎದ್ದುಕಾಣುತ್ತಿದೆ. ಥಾಣೆ ನಗರದ ಹೋಟೆಲ್ ಉದ್ಯಮದಲ್ಲಿ ಎದುರಾಗಿರುವ ಈ ಗಂಭೀರ ಪರಿಸ್ಥಿತಿಯು ಮಹಾರಾಷ್ಟ್ರದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಥಾಣೆ ನಗರದ ಹೋಟೆಲ್‌ಗಳ ಗ್ಯಾಸ್‌ ಒಲೆಗಳನ್ನು ಆರಿಸುವ ಹಂತಕ್ಕೆ ಬಂದು ತಲುಪಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ವಾಣಿಜ್ಯ ಎಲ್‌ಪಿಜಿ ಪೂರೈಕೆ ಗಣನೀಯವಾಗಿ ಕುಸಿದಿದೆ.

ಥಾಣೆ ನಗರದ ಹೋಟೆಲ್ ಅಸೋಸಿಯೇಷನ್ ನೀಡಿರುವ ಎಚ್ಚರಿಕೆಯ ಪ್ರಕಾರ, ನಗರದ ಬಹುತೇಕ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇನ್ನು ಕೇವಲ 5ರಿಂದ 6 ದಿನಗಳಿಗೆ ಆಗುವಷ್ಟು ಮಾತ್ರ ಅನಿಲ ದಾಸ್ತಾನು ಉಳಿದಿದೆ. ಪೂರೈಕೆ ಶೀಘ್ರವೇ ಸಹಜ ಸ್ಥಿತಿಗೆ ಬರದಿದ್ದರೆ, ಮುಂದಿನ ವಾರದೊಳಗೆ ನಗರದ ಪ್ರಮುಖ ಹೋಟೆಲ್‌ಗಳು ಅನಿವಾರ್ಯವಾಗಿ ಶಟರ್ ಎಳೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ 800ಕ್ಕೂ ಹೆಚ್ಚು ಹೋಟೆಲ್‌ಗಳು ಅನಿಲದ ಅಭಾವ ಎದುರಿಸುತ್ತಿವೆ. ಪೂರೈಕೆದಾರರು ಹೊಸ ಸಿಲಿಂಡರ್‌ಗಳನ್ನು ತಲುಪಿಸಲು ಅಸಮರ್ಥರಾಗುತ್ತಿದ್ದಾರೆ. ಈ ಬಿಕ್ಕಟ್ಟು ಮುಂದುವರಿದರೆ ನೂರಾರು ಕುಟುಂಬಗಳ ಜೀವನೋಪಾಯದ ಮೇಲೆ ಹೊಡೆತ ಬೀಳಲಿದೆ ಎಂದು ಥಾಣೆ ನಗರ ಹೋಟೆಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ರಘುನಾಥ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

LPG Crisis

ಮುಂಬೈನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್‌ಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಆಹಾರದ ಬಿಕ್ಕಟ್ಟು ತಲೆದೂರಿದೆ. ನಿರಂತರವಾಗಿ ಸೇವೆ ಸಲ್ಲಿಸುವ ವೈದ್ಯರು ಮತ್ತು ವಿದ್ಯಾರ್ಥಿಗಳು ಈಗ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಸ್ಯಾಂಡ್‌ವಿಚ್‌ಗಳ ಮೇಲೆ ಅವಲಂಬಿತವಾಗುವಂತಾಗಿದೆ. ಮುಂಬೈನ ಪ್ರತಿಷ್ಠಿತ ಸರ್ ಜೆಜೆ ಆಸ್ಪತ್ರೆ ಆವರಣದಲ್ಲಿರುವ ಬಾಲಕರ, ಬಾಲಕಿಯರ ಮತ್ತು ನರ್ಸಿಂಗ್ ಹಾಸ್ಟೆಲ್‌ಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸಾಮಾನ್ಯವಾಗಿ ಸಿಗುತ್ತಿದ್ದ ಪೋಹಾ, ಉಪ್ಪಿಟ್ಟು, ಇಡ್ಲಿ, ವಡಾ, ದೋಸೆ ಮತ್ತು ಪೂರಿ-ಭಾಜಿಯಂತಹ ಬಿಸಿ ತಿಂಡಿಗಳ ಜಾಗದಲ್ಲಿ ಈಗ ಕೇವಲ ಸ್ಯಾಂಡ್‌ವಿಚ್ ಮಾತ್ರ ಸಿಗುತ್ತಿದೆ. ಕ್ಯಾಂಟೀನ್‌ನ ಆಹಾರ ಪಟ್ಟಿಯಲ್ಲಿ ಸುಮಾರು ಶೇ. 50ರಷ್ಟು ಕಡಿತ ಮಾಡಲಾಗಿದೆ.

ಗ್ಯಾಸ್ ಇಲ್ಲದಿದ್ದರೂ ಪರ್ಯಾಯವಾಗಿ ಇಂಡಕ್ಷನ್ ಅಥವಾ ಎಲೆಕ್ಟ್ರಿಕ್ ಒಲೆಗಳನ್ನು ಬಳಸಲು ಇಲ್ಲಿ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಹಾಸ್ಟೆಲ್ ಕಟ್ಟಡಗಳು ಅತ್ಯಂತ ಹಳೆಯದಾಗಿರುವುದರಿಂದ, ಬೃಹತ್ ಪ್ರಮಾಣದ ವಿದ್ಯುತ್ ಒಲೆಗಳನ್ನು ಬಳಸಿದರೆ ವೈರಿಂಗ್‌ನಲ್ಲಿ ಲೋಡ್ ಜಾಸ್ತಿಯಾಗಿ 'ಶಾರ್ಟ್ ಸರ್ಕ್ಯೂಟ್ ಆಗುವ ಅಥವಾ ಬೆಂಕಿ ಅನಾಹುತ ಸಂಭವಿಸುವ ಭೀತಿ ವೈದ್ಯರನ್ನು ಕಾಡುತ್ತಿದೆ. ರೀಫಿಲ್ ಸಿಲಿಂಡರ್ ಬರದಿದ್ದರೆ, ಕ್ಯಾಂಟೀನ್ ಸಂಪೂರ್ಣವಾಗಿ ಮುಚ್ಚುವುದನ್ನು ಬಿಟ್ಟು ಬೇರೆ ಹಾದಿಯಿಲ್ಲ ಎಂದಿದ್ದಾರೆ.

ಚೆನ್ನೈನಲ್ಲಿ ಸಿಬ್ಬಂದಿಗೆ ವರ್ಕ್‌ ಫ್ರಂ ಹೋಂ

ಭಾರತದ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದಾದ HCLTech ಚೆನ್ನೈ ಕ್ಯಾಂಪಸ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆಯಿಂದಾಗಿ ತನ್ನ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ 'ಮನೆಯಿಂದ ಕೆಲಸ' ಮಾಡಲು ಅನುಮತಿ ನೀಡಿದೆ. ಆಫೀಸ್ ಕ್ಯಾಂಪಸ್‌ನ ಕೆಫೆಟೇರಿಯಾ ಸೇವೆಗಳಲ್ಲಿ ಉಂಟಾದ ವ್ಯತ್ಯಯವೇ ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣವಾಗಿದೆ. ಕಂಪನಿಯ ಆವರಣದಲ್ಲಿರುವ ಆಹಾರ ಮಳಿಗೆಗಳ ಬಳಿ ಅಡುಗೆ ಮಾಡಲು ಅಗತ್ಯವಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದಾಸ್ತಾನು ಖಾಲಿಯಾಗಿರುವುದು ಈ ಸಮಸ್ಯೆಗೆ ಮೂಲ ಕಾರಣ.

ಕಚೇರಿಗೆ ಬರುವ ಉದ್ಯೋಗಿಗಳಿಗೆ ಪೌಷ್ಟಿಕ ಆಹಾರ ಮತ್ತು ಕೆಫೆಟೇರಿಯಾ ಸೌಲಭ್ಯ ಒದಗಿಸುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ಕಂಪನಿಯು ಉದ್ಯೋಗಿಗಳನ್ನು ಕಚೇರಿಗೆ ಬರುವಂತೆ ಒತ್ತಾಯಿಸದೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ. ಪ್ರತಿದಿನ ಸಾವಿರಾರು ಮೀಲ್‌ಗಳನ್ನು ಸಿದ್ಧಪಡಿಸುವ ಐಟಿ ಪಾರ್ಕ್‌ಗಳು ಮತ್ತು ಕಾರ್ಪೊರೇಟ್ ಕಿಚನ್‌ಗಳು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿವೆ.

LPG Crisis

ಅಡುಗೆ ಅನಿಲದ ಬಿಕ್ಕಟ್ಟು ಈಗ ಕೇವಲ ಹೋಟೆಲ್ ಅಥವಾ ಐಟಿ ಕಂಪನಿಗಳಿಗಷ್ಟೇ ಸೀಮಿತವಾಗಿಲ್ಲ. ಇದು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಉದ್ಯೋಗಿಗಳ ಬದುಕಿನ ಮೇಲೂ ಪ್ರಹಾರ ನಡೆಸಿದೆ. ತಮಿಳುನಾಡಿನ ಸಾವಿರಾರು ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಎಲ್‌ಪಿಜಿ ಇಲ್ಲದೆ ಒಲೆಗಳು ಆರಿಹೋಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಕಚೇರಿ ಉದ್ಯೋಗಿಗಳು ಊಟಕ್ಕಾಗಿ ಪರದಾಡುವಂತಾಗಿದೆ.

ತಮಿಳುನಾಡು ಐಟಿ ಹಾಸ್ಟೆಲ್ ಮತ್ತು ಪಿಜಿ ಮಾಲೀಕರ ಸಂಘದ ಪ್ರಕಾರ, ಚೆನ್ನೈ, ಚಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸುಮಾರು 15,000ಕ್ಕೂ ಹೆಚ್ಚು ಪಿಜಿ ಮಾಲೀಕರು ತಮ್ಮಲ್ಲಿ ಗ್ಯಾಸ್ ದಾಸ್ತಾನು ಖಾಲಿಯಾಗಿರುವುದರಿಂದ ಅಡುಗೆ ಮಾಡುವುದನ್ನು ನಿಲ್ಲಿಸಿದ್ದಾರೆ. ಸಾಮಾನ್ಯವಾಗಿ 1,950 ರೂಪಾಯಿ ಇರುತ್ತಿದ್ದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 5,000 ರೂಪಾಯಿ ದಾಟಿದೆ.

ಕಾಲೇಜುಗಳಿಗೆ ರಜೆ, ಮೊಸರನ್ನ ಮಾತ್ರ

ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹಾಸ್ಟೆಲ್‌ನಲ್ಲಿ 'ಮೊಸರನ್ನ' ಮಾತ್ರ ನೀಡಲಾಗುತ್ತಿದೆ. ಸಾಂಬಾರ್, ರಸಂ ಮತ್ತು ಪಲ್ಯಗಳಿದ್ದ ಊಟದ ಜಾಗದಲ್ಲಿ ಈಗ ಕೇವಲ ಮೊಸರನ್ನ ಮಾತ್ರ ನೀಡಲಾಗುತ್ತಿದೆ. ಕೆಲವು ಕಾಲೇಜುಗಳು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ಒದಗಿಸಲು ಸಾಧ್ಯವಾಗದೆ ತರಗತಿಗಳನ್ನೇ ರದ್ದುಗೊಳಿಸಿ ರಜೆ ಘೋಷಿಸಿವೆ. ಪಿಜಿ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದು ಕಡೆ ಗ್ಯಾಸ್ ಬೆಲೆ ಏರಿಕೆಯಾಗಿದೆ, ಇನ್ನೊಂದು ಕಡೆ ವಿದ್ಯಾರ್ಥಿಗಳು ಮತ್ತು ಬಡ ಉದ್ಯೋಗಿಗಳಿಂದ ಅಚಾನಕ್ ಆಗಿ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಮಾನವೀಯತೆಯ ದೃಷ್ಟಿಯಿಂದ ಕಷ್ಟವಾಗಿದೆ. ಇದರಿಂದಾಗಿ ಅನೇಕರು ಅಡುಗೆಮನೆಯನ್ನೇ ತಾತ್ಕಾಲಿಕವಾಗಿ ಮುಚ್ಚುತ್ತಿದ್ದಾರೆ.

ಹೈದರಾಬಾದ್‌ ಬಿರಿಯಾನಿಗೂ ಶಾಕ್‌

ದೇಶದೆಲ್ಲೆಡೆಯೂ ಎಲ್‌ಪಿಜಿ ಬಿಕ್ಕಟ್ಟು ದಿನನಿತ್ಯದ ಆಹಾರದ ಮೇಲೆ ನೇರ ಪರಿಣಾಮ ಬೀರಿದೆ. ಹೈದರಾಬಾದ್‌ನ ಪ್ರಸಿದ್ಧ ದಮ್ ಬಿರಿಯಾನಿ ತಯಾರಿಸಲು ಬೃಹತ್ ಪ್ರಮಾಣದ ಅನಿಲದ ಅಗತ್ಯವಿರುತ್ತದೆ. ಪೂರೈಕೆ ಇಲ್ಲದಿದ್ದರೆ ಈ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಈ ವಾರಾಂತ್ಯದ ಹೊತ್ತಿಗೆ ಈ ಬಿಕ್ಕಟ್ಟು ಇನ್ನುಷ್ಟು ಉಲ್ಬಣಿಸಿದರೆ ನಗರದ ಪ್ರಮುಖ ಹೋಟೆಲ್‌ಗಳ ಮುಂದೆ ಬೋರ್ಡ್ ಬೀಳುವ ಸಾಧ್ಯತೆಯಿದೆ. ಇನ್ನು ಹೈದರಾಬಾದ್‌ ಜೂಬಿಲಿ ಹಿಲ್ಸ್‌ನ ಜನಪ್ರಿಯ 'ಸಿಂಪ್ಲಿ ಸೌತ್' ರೆಸ್ಟೋರೆಂಟ್ ಅನಿವಾರ್ಯವಾಗಿ ತನ್ನ ಬಾಗಿಲು ಮುಚ್ಚಿರುವುದು ಹೈದರಾಬಾದ್‌ನ ಆಹಾರ ಪ್ರಿಯರಿಗೆ ದೊಡ್ಡ ನಿರಾಸೆ ತಂದಿದೆ. ಅಡುಗೆ ಅನಿಲ ಬಿಕ್ಕಟ್ಟು ಕೇವಲ ಸಣ್ಣ ಹೋಟೆಲ್‌ಗಳಿಗಷ್ಟೇ ಅಲ್ಲ, ನಗರದ ಪ್ರತಿಷ್ಠಿತ ಡೈನಿಂಗ್ ತಾಣಗಳಿಗೂ ಬಿಸಿ ಮುಟ್ಟಿಸಿದೆ.

ಹೈದರಾಬಾದ್‌ನ ಅತ್ಯಂತ ಶ್ರೀಮಂತ ಮತ್ತು ಜನನಿಬಿಡ ಪ್ರದೇಶವಾದ ಜೂಬಿಲಿ ಹಿಲ್ಸ್‌ನಲ್ಲಿರುವ ಹೋಟೆಲ್‌ಗಳೇ ಈ ರೀತಿ ಮುಚ್ಚುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಇಲ್ಲದಿರುವುದು ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದು ದೊಡ್ಡ ಮಟ್ಟದ ರೆಸ್ಟೋರೆಂಟ್‌ಗಳಿಗೂ ನಿರ್ವಹಣಾ ವೆಚ್ಚದ ಹೊರೆಯಾಗಿ ಪರಿಣಮಿಸಿದೆ.

ಹೈದರಾಬಾದ್‌ನಲ್ಲಿ ಎಲ್‌ಪಿಜಿಗಾಗಿ ಆತಂಕದಿಂದ ಮುಂಚಿತವಾಗಿಯೇ ಬುಕ್ ಮಾಡುವ ಪ್ರವೃತ್ತಿ ದಿಢೀರ್ ಹೆಚ್ಚಾಗಿದೆ. ಇದರಿಂದಾಗಿ ನಗರದ ವಿತರಣಾ ವ್ಯವಸ್ಥೆಯ ಮೇಲೆ ಭಾರಿ ಒತ್ತಡ ಉಂಟಾಗಿದೆ. ಒಂದೆಡೆ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್‌ಗಳು ಮುಚ್ಚುತ್ತಿದ್ದರೆ, ಇನ್ನೊಂದೆಡೆ ಮನೆಬಳಕೆಯ ಸಿಲಿಂಡರ್‌ಗಳಿಗೂ ಅಭಾವ ಉಂಟಾಗಬಹುದು ಎಂಬ ಭೀತಿಯಲ್ಲಿ ಹೈದರಾಬಾದ್‌ನ ಗ್ರಾಹಕರು ಮುಗಿಬಿದ್ದು ಬುಕ್ಕಿಂಗ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹೈದರಾಬಾದ್‌ನಲ್ಲಿ ಗ್ಯಾಸ್ ಬುಕ್ ಮಾಡಿದ ಒಂದು ದಿನದೊಳಗೆ (24 ಗಂಟೆ) ಸಿಲಿಂಡರ್ ಮನೆಗೆ ತಲುಪುತ್ತಿತ್ತು. ಆದರೆ, ಈಗ ಈ ಅವಧಿ 3 ದಿನಗಳಿಗೆ ಏರಿಕೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಗ್ರಾಹಕರು ಸಿಲಿಂಡರ್‌ಗಾಗಿ ಇನ್ನು ಹೆಚ್ಚಿನ ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಗೃಹಬಳಕೆ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ. ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಕೊರತೆಯಿಲ್ಲ, ಆದರೆ ಎಲ್ಲರೂ ಒಟ್ಟಾಗಿ ಬುಕ್ ಮಾಡುತ್ತಿರುವುದರಿಂದ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಸಿಲಿಂಡರ್ ಖಾಲಿಯಾಗದ ಹೊರತು ಅಥವಾ ಅಗತ್ಯವಿಲ್ಲದಿದ್ದರೂ ಆತಂಕದಿಂದ ಬುಕ್ ಮಾಡಬೇಡಿ. ಇದು ಸಕಾಲದಲ್ಲಿ ಸಿಲಿಂಡರ್ ಬೇಕಾದವರಿಗೆ ತೊಂದರೆ ಉಂಟುಮಾಡುತ್ತದೆ ಗ್ರೇಟರ್ ಹೈದರಾಬಾದ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಗ್ರಾಹಕರಿಗೆ ಮನವಿ ಮಾಡಿದೆ.

LPG Crisis

ಬುಕ್ಕಿಂಗ್‌ಗಳ ಸಂಖ್ಯೆ ಹೆಚ್ಚಾದಾಗ, ಗೋದಾಮಿನಿಂದ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸುವ ಡೆಲಿವರಿ ಸಿಬ್ಬಂದಿ ಮತ್ತು ವಾಹನಗಳ ಕೊರತೆ ಎದುರಾಗುತ್ತದೆ. ಇದೇ ಕಾರಣಕ್ಕೆ ವಿತರಣಾ ಸಮಯ 3ರಿಂದ 4 ದಿನಗಳಿಗೆ ವಿಸ್ತರಣೆಯಾಗುತ್ತಿದೆ. ನಿಜವಾದ ಅಗತ್ಯವಿದ್ದಾಗ ಮಾತ್ರ ಬುಕ್ ಮಾಡಿ, ನಿಮ್ಮ ಸಿಲಿಂಡರ್ ಇನ್ನೂ 15-20 ದಿನ ಬರುತ್ತದೆ ಎಂದಾದರೆ ಆತುರಪಡಬೇಡಿ. ಗೃಹಬಳಕೆಯ ಸಿಲಿಂಡರ್ ಪೂರೈಕೆಯನ್ನು ಸರ್ಕಾರ ಮೊದಲ ಆದ್ಯತೆಯನ್ನಾಗಿರಿಸಿದೆ ಎಂಬುದು ನೆನಪಿರಲಿ ಎಂದು ಹೇಳಿದೆ.

ವಿಜಯವಾಡ ಫಾಸ್ಟ್ ಫುಡ್ ಬಂದ್‌

ಈ ಎಲ್‌ಪಿಜಿ ಬಿಕ್ಕಟ್ಟು ಕೇವಲ ಆಂಧ್ರಪ್ರದೇಶದಲ್ಲಿ ದೊಡ್ಡ ಹೋಟೆಲ್‌ಗಳಿಗೆ ಮಾತ್ರವಲ್ಲದೆ, ಬೀದಿ ಬದಿಯ ವ್ಯಾಪಾರಿಗಳು ಮತ್ತು ಸಣ್ಣ ಟಿಫನ್‌ ಸೆಂಟರ್‌ಗಳಂತಹ ಅಸಂಘಟಿತ ವಲಯದ ಮೇಲೆ ಭೀಕರ ಪ್ರಹಾರ ಮಾಡಿದೆ. ದಿನದ ದುಡಿಮೆಯನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳ ಜೀವನೋಪಾಯ ಈಗ ಸಂಕಷ್ಟದಲ್ಲಿದೆ. ವಾಣಿಜ್ಯ ಸಿಲಿಂಡರ್‌ಗಳ ಅಭಾವದಿಂದಾಗಿ ರಾಜ್ಯದಾದ್ಯಂತ ಸಾವಿರಾರು ಸಣ್ಣ ಹೋಟೆಲ್‌ಗಳು ಮತ್ತು ಫಾಸ್ಟ್ ಫುಡ್ ಕೇಂದ್ರಗಳು ಮುಚ್ಚುವ ಹಂತಕ್ಕೆ ತಲುಪಿವೆ. ರಸ್ತೆ ಬದಿಯ ತಿಂಡಿ ಗಾಡಿಗಳು, ಟೀ ಅಂಗಡಿಗಳು ಮತ್ತು ಟಿಫನ್ ಸೆಂಟರ್‌ಗಳು ದಿನಕ್ಕೆ ಸುಮಾರು 1,000ರಿಂದ 2,000 ರೂಪಾಯಿವರೆಗೆ ಗಳಿಸುತ್ತಿದ್ದವು. ಈ ಹಣವನ್ನೇ ನಂಬಿ ಅವರು ತಮ್ಮ ಮನೆ ನಡೆಸುತ್ತಿದ್ದರು. ಆದರೆ ಈಗ ಸಿಲಿಂಡರ್ ಸಿಗದೆ ವ್ಯಾಪಾರ ಸ್ಥಗಿತಗೊಂಡಿದ್ದು, ದೈನಂದಿನ ಆದಾಯ ಶೂನ್ಯವಾಗಿದೆ. ಇದರಿಂದಾಗಿ ಅವರ ಕುಟುಂಬದ ನಿರ್ವಹಣೆ ಅಸಾಧ್ಯವಾಗುತ್ತಿದೆ.

India LPG Supply: ಭಾರತಕ್ಕೆ ಎಲ್ಲಿಂದ ಹೇಗೆ ಬರುತ್ತೆ ಎಲ್‌ಪಿಜಿ? ಉತ್ಪಾದನೆಯಿಂದ ವಿತರಣೆಯವರೆಗೆ ಸರಪಳಿಯ ಸಂಪೂರ್ಣ ಮಾಹಿತಿ
India LPG Supply: ಭಾರತಕ್ಕೆ ಎಲ್ಲಿಂದ ಹೇಗೆ ಬರುತ್ತೆ ಎಲ್‌ಪಿಜಿ? ಉತ್ಪಾದನೆಯಿಂದ ವಿತರಣೆಯವರೆಗೆ ಸರಪಳಿಯ ಸಂಪೂರ್ಣ ಮಾಹಿತಿ

ಫಾಸ್ಟ್ ಫುಡ್ ಕೇಂದ್ರಗಳು ಅತಿ ಹೆಚ್ಚು ಅನಿಲದ ಮೇಲೆ ಅವಲಂಬಿತವಾಗಿವೆ. ಎಲ್‌ಪಿಜಿ ರೀಫಿಲ್ ಪಡೆಯುವುದು ಅಸಾಧ್ಯವಾಗಿರುವುದರಿಂದ, ಅನೇಕ ವ್ಯಾಪಾರಿಗಳು ಅನಿವಾರ್ಯವಾಗಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದಾರೆ. ಗ್ಯಾಸ್ ಸಿಕ್ಕರೂ ಅದರ ಬೆಲೆ ಇವರ ಕೈಗೆಟುಕದ ಮಟ್ಟಕ್ಕೆ ಏರಿಕೆಯಾಗಿದೆ. ಈ ಸಣ್ಣ ಹೋಟೆಲ್‌ಗಳು ಮತ್ತು ಗಾಡಿಗಳಲ್ಲಿ ಸಹಾಯಕರಾಗಿ ಕೆಲಸ ಮಾಡುವ ದಿನಗೂಲಿ ನೌಕರರು ಈಗ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ವ್ಯಾಪಾರವೇ ಇಲ್ಲದ ಮೇಲೆ ಮಾಲೀಕರು ಸಂಬಳ ನೀಡುವುದು ಹೇಗೆ? ಇದು ರಾಜ್ಯದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದ್ದು, ನಿರುದ್ಯೋಗದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಸಿಲಿಂಡರ್ ಉಳಿಸಿಕೊಳ್ಳಲು ಕೆಲವು ಅಂಗಡಿಗಳು ತಮ್ಮ ಮೆನುವನ್ನು ಕಡಿತಗೊಳಿಸಿವೆ. ಈ ಮೊದಲು 10 ಬಗೆಯ ತಿಂಡಿಗಳನ್ನು ತಯಾರಿಸುತ್ತಿದ್ದವರು ಈಗ ಕೇವಲ ಒಂದೆರಡು ಬಗೆಯ ಪದಾರ್ಥಗಳಿಗೆ ಸೀಮಿತವಾಗಿದ್ದಾರೆ. ಇದು ಅವರ ವ್ಯಾಪಾರವನ್ನು ಇನ್ನಷ್ಟು ಕುಂಠಿತಗೊಳಿಸಿದೆ.

LPG Crisis

ದೆಹಲಿ: ಎಲ್‌ಪಿಜಿ ಗೋದಾಮುಗಳಿಗೆ ಭದ್ರತೆ

ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಎಲ್‌ಪಿಜಿ ಗೋದಾಮುಗಳ ರಕ್ಷಣೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಹೆಚ್ಚಿನ ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಲು ದೆಹಲಿ ಪೊಲೀಸರು ಸಿಬ್ಬಂದಿಯ ಎಲ್ಲ ಸಾಮಾನ್ಯ ರಜೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ. ಅತ್ಯಂತ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ರಜೆ ನೀಡಲಾಗುವುದು. ಉಳಿದಂತೆ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿರಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಡಕ್‌ ಸೂಚನೆ ನೀಡಿದ್ದಾರೆ.

ದೆಹಲಿಯ ಎಲ್ಲ ಜಿಲ್ಲೆಗಳ ಡಿಸಿಪಿಗಳಿಗೆತಮ್ಮ ವ್ಯಾಪ್ತಿಯಲ್ಲಿರುವ ಎಲ್‌ಪಿಜಿ ಸಿಲಿಂಡರ್ ಸಂಗ್ರಹಣಾ ಕೇಂದ್ರಗಳು ಮತ್ತು ಗೋದಾಮುಗಳನ್ನು ಗುರುತಿಸಲು ಸೂಚಿಸಲಾಗಿದೆ. ಈ ಗೋದಾಮುಗಳ ಹೊರಗೆ ದಿನದ 24 ಗಂಟೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಲಿಂಡರ್‌ಗಳ ಅಭಾವದ ಲಾಭ ಪಡೆದು ಲೂಟಿ ಮಾಡುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವಂತಹ ಕಾನೂನುಬಾಹಿರ ಕೃತ್ಯಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+