ಸಿಂಗಪುರದಲ್ಲಿ ಕೃಷ್ಣ ಸಂಧಾನ ಮತ್ತು ಗದಾಯುದ್ಧ

By: ಸುರೇಶ ಭಟ್ಟ, ಸಿಂಗಪುರ
Subscribe to Oneindia Kannada

ಸಿಂಗಪುರದ ಮತ್ತು ಸುತ್ತಮುತ್ತಣ ದೇಶದ ಯಕ್ಷಗಾನಪ್ರಿಯರಿಗೆ ಮತ್ತೊಮ್ಮೆ ಈ ಕಲೆಯನ್ನು ನೋಡುವ ಸುವರ್ಣಾವಕಾಶ! ಕನ್ನಡ ಸಂಘ (ಸಿಂಗಪುರ)ವು ಮೇ 21ರಂದು ಸಿಂಗಪುರ ಪಾಲಿಟೆಕ್ನಿಕ್ಕಿನ ಸಭಾಂಗಣದಲ್ಲಿ ಯಾಜಿ ಯಕ್ಷ ಮಿತ್ರ ಮಂಡಳಿ ಮತ್ತು ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನದ ಆಯ್ದ ಕಲಾವಿದರಿಂದ "ಕೃಷ್ಣ ಸಂಧಾನ ಮತ್ತು ಗದಾಯುದ್ಧ" ಎಂಬ ಎರಡು ಕಥಾಪ್ರಸಂಗಗಳನ್ನು ಹೆಮ್ಮೆಯಿಂದ ಪ್ರಸ್ತುತ ಪಡಿಸುತ್ತಿದೆ.

1996ರಲ್ಲಿ ಅಧಿಕೃತವಾಗಿ ನೋಂದಾಯಿತವಾದ ಕನ್ನಡ ಸಂಘ (ಸಿಂಗಪುರ)ವು ತನ್ನ 20ನೇ ವರ್ಷದ ಹರ್ಷವನ್ನು ರಂಗುರಂಗಿನ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಳ್ಳುತ್ತಿದೆ. ಲಯತರಂಗ, ಪುರಂದರ ನಮನ ಮುಂತಾದ ಬೃಹತ್ ಕಾರ್ಯಕ್ರಮಗಳನ್ನು ಈ ವರ್ಷ ಯಶಸ್ವಿಯಾಗಿ ಆಯೋಜಿಸಿದ ಸಂಘದ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಈಗನೃತ್ಯ, ಸಂಗೀತ, ಸಂಭಾಷಣೆ, ವೇಷ-ಭೂಷಣ, ಪ್ರಸಾಧನ, ರಂಗಕೌಶಲಗಳ ಸುಂದರ ಸಮ್ಮೇಳನವಾದ ಮಲೆನಾಡಿನ ಜಾನಪದರಂಗಕಲೆಯಾದ ಯಕ್ಷಗಾನವನ್ನು ಸಿಂಗಪುರದ ಕಲಾಪ್ರೇಮಿಗಳಿಗಾಗಿ ಆಯೋಜಿಸಿದ್ದಾರೆ. ಕಲಾಪ್ರೇಮಿಗಳು ಅಷ್ಟೇ ಕುತೂಹಲದಿಂದ "ಯಕ್ಷಸಿರಿ" ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ. [ಸಿಂಗಪುರದ 'ಕಲಾವೈಭವ'ದಲ್ಲಿ ಮೆರೆದ 'ಸಿಂಗಾರ ವೈಭವ']

Yakshasiri : Krishna Sandhana and Gadha Yuddha in Singapore

ಈ ಕಾರ್ಯಕ್ರಮದ ಜಾಹೀರಾತಿನ ಕಿರುಚಿತ್ರ ಸುರುಳಿಯನ್ನು ನೋಡಲು ಈ ಕೊಂಡಿಯನ್ನು ಕ್ಲಿಕ್ಕಿಸಿ.

ಈ ಕಾರ್ಯಕ್ರಮದ ಪ್ರಮುಖ ಕಲಾವಿದರ ಕಿರುಪರಿಚಯ:

ಬಳ್ಕೂರು ಕೃಷ್ಣ ಯಾಜಿ
ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದನಾಗಿ, ಪೌರಾಣಿಕ ಪ್ರಸಂಗದ ಗಂಡು ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ, ಪೌರಾಣಿಕ ಹಾಗೂ ಆಧುನಿಕ ಪ್ರಸಂಗಗಳ ಪ್ರೇಕ್ಷಕರ ಮನೆಮಾತಾದ ಮೇರು ಕಲಾವಿದರು "ಯಕ್ಷರಂಗದ ಭೀಷ್ಮ" ಮತ್ತು "ರಂಗ ಸ್ಥಳ ರಾಜ" ಎಂದೇ ಪ್ರಸಿದ್ಧರಾದ ಬಳ್ಕೂರು ಕೃಷ್ಣ ಯಾಜಿಯವರು. ನಿರಂತರ 40 ವರ್ಷ ಬಡಗುತಿಟ್ಟು ರಂಗಸ್ಥಳವನ್ನು ಆಳಿದ ಇವರನ್ನು ರಂಗದ ರಾಜನೆಂದೇ ಜನ ಗುರುತಿಸಿದ್ದಾರೆ.

ರಂಗಸ್ಥಳದಲ್ಲಿ ಒಂದೇ ರಾತ್ರಿಯಲ್ಲಿ ಪಾತ್ರ ಯಾವುದೇ ಇರಲಿ ಪ್ರವೇಶದಿಂದ ನಿರ್ಗಮನದವರೆಗೆ ಪ್ರೇಕ್ಷಕರನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಶಿಷ್ಟ ಕಲಾವಿದರಿವರು. ದಿ. ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯರಾದ ಇವರಿಗೆ ಡಾ. ಶಿವರಾಮ ಕಾರಂತ, "ರಾಮ ವಿಠಲ", "ಕಲಾ ತಿಲಕ", "ಯಕ್ಷಶ್ರೀ", "ಕೆ ಯಸ್ ನಿದಂಬರಿ", "ಪಲ್ಲಿ ಸೋಮನಾಥ ಹೆಗ್ಡೆ"ಮತ್ತು "ಯಕ್ಷರತ್ನ" ಪ್ರಶಸ್ತಿ ದೊರೆತಿದೆ. ಕೃಷ್ಣ ಯಾಜಿಯವರು 30 ವರ್ಷಗಳ ಹಿಂದೆ ಕೆರೆಮನೆ ಶಂಭು ಹೆಗಡೆಯವರ ಯಕ್ಷಗಾನ ಕಲಾರಸವನ್ನು ಮಧ್ಯ ಪೂರ್ವೀಯ ರಾಷ್ಟ್ರಗಳಲ್ಲಿ ಕೊಂಡೊಯ್ದಿದ್ದಾರೆ.

ಕೊಂಡದಕುಳಿ ರಾಮಚಂದ್ರ ಹೆಗಡೆ
ಯಕ್ಷಗಾನದಲ್ಲಿ ಬರುವ ಪೌರಾಣಿಕ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವ ತುಂಬಿ ಆಧುನಿಕ ಪ್ರಸಂಗದಲ್ಲೂ ಹೊಸತನವನ್ನು ತುಂಬಿ ಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದರೆಂದು ಗುರುತಿಸಲ್ಪಡುವ ಕೊಂಡದಕುಳಿಯವರು ಸಿದ್ದಿ ಹಾಗೂ ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರು. ನಾಯಕ ಪ್ರತಿನಾಯಕ ಹಾಗೂ ಪುರುಷ ವೇಷಗಳಲ್ಲಿ ಸಮಾನ ಸಿದ್ದಿಯನ್ನು ಹೊಂದಿದ ಇವರು ವಿರುದ್ದ ನಿಲುವಿನ ಪಾತ್ರಗಳಿಗೂ ಜೀವತುಂಬಬಲ್ಲ ಅಪರೂಪದ ಕಲಾವಿದರು.

ಅವರ ಶರೀರ ಆಳಂಗ ಪುಂಡುವೇಷದಿಂದ ಎರಡನೇ ವೇಷದವರೆಗೆ ಯಾವ ವೇಷಕ್ಕೂ ಹೊಂದುವಂತಾದ್ದು. ಇವರ ಯಕ್ಷಗಾನದ ಗುರು ಸ್ವತಃ ಇವರ ತಾತ ದಿ. ಶ್ರೀ ರಾಮ ಹೆಗ್ಡೆ ಕೊಂಡದಕುಳಿ. ಯಕ್ಷಗಾನವನ್ನು ಹಲವಾರು ದೇಶಗಳಿಗೆ ಕೊಂಡೊಯ್ದ"ಯಕ್ಷರತ್ನ" ಪ್ರಶಸ್ತಿ ವಿಜೇತ ರಾಮಚಂದ್ರ ಹೆಗಡೆಯವರು ಪೂರ್ಣಚಂದ್ರ ಯಕ್ಷಗಾನ ಮಂಡಳಿಯ ಪ್ರತಿಷ್ಠಾಪಕರು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ.ಇವರು ತಮ್ಮ ತಂಡದೊಡನೆ ಸಿಂಗಪುರ ಹಾಗೂ ಅಮೇರಿಕದ 25 ವಿವಿಧ ಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.

Yakshasiri : Krishna Sandhana and Gadha Yuddha in Singapore

ಶಂಕರ ಭಾಗವತ್ (ಮದ್ದಳೆ)

ಒಂದೇ ಬಾರಿಗೆ ಏಳು ಮದ್ದಳೆಗಳನ್ನು ಬಾರಿಸಬಲ್ಲಏಕೈಕ ಕಲಾವಿದ ಶಂಕರ ಭಾಗವತರಿಗೆ ಈ ಕಲೆ ವಂಶಪಾರಂಪರ್ಯವಾಗಿ ಒಲಿದದ್ದಲ್ಲ, ತಮ್ಮ 12ನೇ ವಯಸ್ಸಿನಲ್ಲಿ ಅವರೇ ಆರಿಸಿಕೊಂಡದ್ದು. ಕಠಿಣ ಅಭ್ಯಾಸ, ಬೆಂಬಿಡದ ಛಲದೊಂದಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಸಾಧನೆಗೈದಿರುವ ಇವರು ಕರ್ನಾಟಕದಲ್ಲಿ, ಭಾರತದ ಹಲವೆಡೆ ಮತ್ತು ಮಧ್ಯ ಪೂರ್ವೀಯ ರಾಷ್ಟ್ರಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ, ತಮ್ಮ ಚಾತುರ್ಯವನ್ನು ಮೆರೆದಿದ್ದಲ್ಲದೇ ಪ್ರಖ್ಯಾತ ತಬಲ ಕಲಾವಿದರೊಂದಿಗೆ ಜುಗಲ್ಬಂದಿ ಪ್ರದರ್ಶನವನ್ನೂ ನೀಡಿದ್ದಾರೆ.

ತೋಟಿ ಗಣಪತಿ ಹೆಗಡೆ
1980ರಿಂದ ಹಿರಿಯ ಮಹಾನ್ ಯಕ್ಷಗಾನ ಕಲಾವಿದ ಸುಬ್ರಾಯ ಭಾಗವತ ಕಪ್ಪೆಕೆರೆ ಅವರ ಮಾರ್ಗದರ್ಶನದಲ್ಲಿ ಗುರುಕುಲ ಶಿಕ್ಷಣ ಪಡೆದ ತೋಟಿ ಗಣಪತಿ ಹೆಗಡೆ ಅವರು ಯಕ್ಷಗಾನ ರಂಗದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ.

1985ರಲ್ಲಿ ಶ್ರೀ ಮುಖ್ಯಪ್ರಾಣ ಯಕ್ಷಗಾನ ತಂಡ (ಗುಂಡಬಾಳ, ಹೊನ್ನಾವರ)ದೊಂದಿಗೆ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ ಇವರು ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಮಂಡಲಿ (ಸಿರ್ಸಿ), ಶ್ರೀ ಮಾರಿಕಾಂಬ ಯಕ್ಷಗಾನ ಮಂಡಲಿ (ಸಿರ್ಸಿ), ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲಿ (ಮಂದಾರ್ತಿ), ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಲಿ (ಸಾಲಿಗ್ರಾಮ), ಶ್ರೀ ಪೂರ್ಣಚಂದ್ರ ಯಕ್ಷಗಾನ ಮಂಡಳಿ (ಕೊಂಡದಕುಳಿ, ಕುಂಭಾಶಿ) ಮುಂತಾದ ಪ್ರಸಿದ್ಧ ತಂಡಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. 2012 ಮತ್ತು 2013ರಲ್ಲಿ ಸಿಂಗಪುರ, ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಕಲಾಪ್ರದರ್ಶನ ನೀಡಿದ್ದಾರೆ.

ಲಕ್ಷ್ಮೀನಾರಾಯಣ ಸಂಪ (ಹಿಮ್ಮೇಳ - ಚಂಡೆ)
ಲಕ್ಷ್ಮೀನಾರಾಯಣ ಸಂಪ ಅವರು ಶ್ರೀ ಪೂರ್ಣಚಂದ್ರ ಯಕ್ಷಗಾನ ಮಂಡಳಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಹಿಮ್ಮೇಳ (ಚಂಡೆ) ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ತಂಡದೊಂದಿಗೆ ಭಾರತದ ವಿವಿಧೆಡೆ ಹಾಗೂ ವಿದೇಶಗಳಲ್ಲೂ ಪ್ರದರ್ಶನ ನೀಡಿರುವ ಇವರು, ಮಹಾನ್ ಕಲಾವಿದರಾದ ದಿ. ಗಜಾನನ ಭಂಡಾರಿ ಅವರ ಶಿಷ್ಯ.

ಉಪ್ಪೂರು ನಾರಾಯಣ ಭಾಗವತ್, ಹೊಸತೋಟ ಮಂಜುನಾಥ ಭಾಗವತ್, ದಿ. ಕಾಳಿಂಗ ನಾವುಡರು ಮುಂತಾದ ಯಕ್ಷಲೋಕದ ದಿಗ್ಗಜರೊಂದಿಗೆ ಕೆಲಸ ಮಾಡಿರುವ ಇವರಿಗೆ 1980ರಲ್ಲಿ ಮಹಾತ್ಮ ಗಾಂಧಿ ಟ್ರಸ್ಟ್ (ಜೋರ, ಮದ್ಯಪ್ರದೇಶ)ದಿಂದ ಪುರಸ್ಕಾರ ದೊರೆತಿದೆ. ಮಕ್ಕಳಿಗೆ, ಯುವಕರಿಗೆ ಯಕ್ಷಶಿಕ್ಷಣ ನೀಡುತ್ತಿರುವ ಇವರು ಗಿರೀಶ್ ಕಾಸರವಳ್ಳಿ ಅವರ 'ಬಣ್ಣದ ವೇಷ' ಎಂಬ ಕಿರುತೆರೆಯ ಚಿತ್ರದಲ್ಲೂ ಪಾತ್ರವಹಿಸಿದ್ದಲ್ಲದೇ, ಚಿತ್ರನಟ ಶ್ರೀಧರ್ ಅವರಿಗೆ ಈ ಚಿತ್ರದಲ್ಲಿ ಯಕ್ಷಗಾನದ ಅಭಿನಯವನ್ನು ಕಲಿಸಿಕೊಟ್ಟಿದ್ದಾರೆ.

ಕೇಶವ ಹೆಗಡೆ ಕೊಳಗಿ(ಭಾಗವತ)
ಭಾಗವತ ಕಲಾವಿದರಾದ ಕೇಶವ ಹೆಗಡೆ ಕೊಳಗಿಯವರು ಯಕ್ಷಗಾನ ರಂಗದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಆರಂಭಿಸಿದ ಇವರು ಯಕ್ಷಗಾನ ಭಾಗವತಿಗೆಯನ್ನು ಉಪ್ಪೂರು ನಾರಾಯಣ ಭಾಗವತ್ ಮತ್ತು ಕೆ.ಪಿ.ಹೆಗಡೆ ಅವರ ಮಾರ್ಗದಶನದಲ್ಲಿ ಕಲಿತರು. ಅವರ ತಂದೆ ಕೊಳಗಿ ಅನಂತ ಹೆಗಡೆಯವರು ಸ್ವತಃ ಒಬ್ಬ ಮಹಾನ್ ಕಲಾವಿದರಾಗಿದ್ದರು. "ಕರಾವಳಿ ಕೋಗಿಲೆ"ಬಿರುದಿನ ಕೇಶವ ಹೆಗಡೆಯವರು ಹಲವಾರು ಜನಪ್ರಿಯ ಯಕ್ಷಗಾನ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಚಪ್ಪರಮನೆ ಶ್ರೀಧರ ಹೆಗಡೆ
ಯಕ್ಷಗಾನರಂಗದಲ್ಲಿ, ಬಡಗುತಿಟ್ಟು ಶೈಲಿಯಲ್ಲಿ ಅತ್ಯುತ್ತಮ ಮತ್ತು ಪ್ರಖ್ಯಾತ ಹಾಸ್ಯಗಾರರಲ್ಲೊಬ್ಬರು ಚಪ್ಪರಮನೆ ಶ್ರೀಧರ ಹೆಗಡೆಯವರು. ದಿ. ಕುಂಜಾಲು ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಗುರುಕುಲ ಯಕ್ಷಗಾನ ಹಾಗೂ ರಂಗಕುಶಲತೆಯನ್ನು ಕಲಿತ ಚಪ್ಪರಮನೆ ಅವರು ಯಕ್ಷಗಾನ ರಂಗದಲ್ಲಿ 40ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಸಾಲಿಗ್ರಾಮ, ಸಿರ್ಸಿ, ನಾಗರಕೊಡಿಗೆ, ಪೆರ್ಡೂರು ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಮೇಳ ಮುಂತಾದ ಪ್ರಸಿದ್ಧ ತಂಡಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2012 ಮತ್ತು 2013ರಲ್ಲಿ ಸಿಂಗಪುರ, ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಕಲಾಪ್ರದರ್ಶನ ನೀಡಿದ್ದಾರೆ.

ಲಕ್ಷ್ಮಣ ನಾಯಕ್
ಯಕ್ಷಗಾನ ರಂಗದಲ್ಲಿ 18ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಲಕ್ಷ್ಮಣ ನಾಯಕ್ ಅವರು ಮುಖ್ಯವಾಗಿ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಮೇಳ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಉತ್ತಮ ಪೋಷಕ ವೇಷಧಾರಿ ಹಾಗೂ ಯಕ್ಷಗಾನ ಪೋಷಾಕುಗಳ ನಕ್ಷೆಗಾರ ಹಾಗೂ ತಯಾರಕ.

ಯಲಗುಪ್ಪ ಸುಬ್ರಮಣ್ಯ ಹೆಗಡೆ
ಯಕ್ಷಗಾನ ರಂಗದಲ್ಲಿ ರೂಪ, ಸ್ವರಭಾರ, ಆಳಂಗ, ಅಭಿನಯಗಳು ಒಂದಕ್ಕೊಂದು ಪೂರಕವಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀವೇಷ ಎಷ್ಟು ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ದೃಷ್ಟಾಂತ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ. ಹೊನ್ನಾವರದವರಾದ ಇವರು ಕನ್ನಡ ಸ್ನಾತಕೋತ್ತರ ಪದವೀಧರರಾಗಿ ಯಕ್ಷರಂಗ ಪ್ರವೇಶಿಸಿದವರು. ಪದವಿಯ ಬಳಿಕ ಕೆರೆಮನೆ ಶಂಭು ಹೆಗಡೆಯವರ ಗುಣವಂತೆಯ ಶ್ರೀಮಯ ಕಲಾಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು.

ಅಲ್ಲಿ ಗುರುಗಳಾಗಿದ್ದ ಹೆರಂಜಾಲು ವೆಂಕಟರಮಣ ಗಾಣಿಗರಿಂದ ನಾಟ್ಯ ಕಲಿತು ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು. ಗುಂಡಬಾಳ, ಸಾಲಿಗ್ರಾಮ, ಪೆರ್ಡೂರು, ಇಡಗುಂಜಿ, ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ, ಹೊಸನಗರ, ಯಾಜಿ ಯಕ್ಷ ಮಿತ್ರ ಮಂಡಳಿ ಮುಂತಾದ ಪ್ರಸಿದ್ಧ ತಂಡಗಳಲ್ಲಿ ಸೇವೆ ಸಲ್ಲಿಸಿರುವ ಇವರು ತೆಂಕು ಮತ್ತು ಬಡಗುತಿಟ್ಟು ಎರಡರಲ್ಲೂ ನಿರಾಯಾಸವಾಗಿ ಸ್ತ್ರೀವೇಷ ಮಾಡಬಲ್ಲರು.

ಸಂಜಯ್ ಬೆಳೆಯೂರ್
ಸಂಜಯ್ ಒಬ್ಬ ಬಹುಮುಖ ಪ್ರತಿಭೆಯ ಯಕ್ಷಗಾನ ಕಲಾಕಾರರು, ಯಕ್ಷಗಾನ ವಸ್ತ್ರ ವಿನ್ಯಾಸಕರು ಮತ್ತು ತಯಾರಕರು. ಅವರು ತಮ್ಮ ಯಕ್ಷಗಾನ ನಾಟ್ಯದ ತರಬೇತಿಯನ್ನು ಪಡೆದದ್ದು ಗುರು ಯಕ್ಷ ಭೀಷ್ಮ ಹೊಸತೋಟ ಮಂಜುನಾಥ ಭಾಗವತರ ಬಳಿ. ಯಕ್ಷಗಾನ ವಸ್ತ್ರ ವಿನ್ಯಾಸ ಮತ್ತು ತಯಾರಿಕೆಯನ್ನು ಕಲಿತದ್ದು ಬಿ.ಪಿ. ಬಾಲಕೃಷ್ಣ ಅವರ ಬಳಿ.

1994ರಿಂದ ಸಂಜಯ್ ಹಲವಾರು ಯಕ್ಷಗಾನ ಮೇಳಗಳಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದಲ್ಲಿ ಕಲಾಪ್ರದರ್ಶನ ನೀಡುತ್ತಿದ್ದಾರೆ. ಅವರಿಗೆ 2007ರಲ್ಲಿ ದಿ. ಕೊಂಡದಕುಳಿ ರಾಮ್ ಹೆಗ್ಡೆ ಪುರಸ್ಕಾರ ದೊರೆತಿದೆ. ಅವರು ಸಿಂಗಪುರ, ಇಂಡೋನೇಶಿಯಾ ಮುಂತಾದ ಕಡೆ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ.

ಅಶೋಕ್ ಭಟ್ ಸಿದ್ದಾಪುರ
ಪ್ರತಿಭಾಶಾಲಿಯಾದ ಯಕ್ಷಗಾನ ಮುಮ್ಮೇಳ (ವೇಷಧಾರಿ) ಸರ್ವಾಂಗೀಣ ಕಲಾವಿದ ಅಶೋಕ್ ಭಟ್ ಅವರು ಸ್ತ್ರೀ ಮತ್ತು ಪುರುಷ ಪಾತ್ರಗಳೆರಡನ್ನೂ ಮತ್ತು ಹಾಸ್ಯಗಾರನ ಪಾತ್ರವನ್ನೂ ಲೀಲಾಜಾಲವಾಗಿ ನಿಭಾಯಿಸಬಲ್ಲರು. ಅವರು ಯಕ್ಷಗಾನ ನೃತ್ಯವನ್ನು ಕಲಿತದ್ದು ಯಕ್ಷಗಾನ ಕೇಂದ್ರ ಉಡುಪಿಯಲ್ಲಿ. ಅಶೋಕ್ ಭಟ್ ಅವರು ಸಾಲಿಗ್ರಾಮ ಮೇಳ, ಇಡುಗುಂಜಿ ಮೇಳದಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದು ಯಕ್ಷರಂಗದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಬಹುತೇಕ ಪ್ರಸಿದ್ಧ ತಂಡಗಳಲ್ಲಿ ಹವ್ಯಾಸಿ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದತ್ತಾತ್ರೇಯ ತಿಮ್ಮಪ್ಪ
ಇವರು ಮೂಲತಃ ಕೃಷಿಕರಾಗಿದ್ದು, ಕಳೆದ 10 ವರ್ಷಗಳಿಂದ ಹವ್ಯಾಸಿ ವೇಷ ಕಲಾವಿದರಾಗಿ ಸಾಗರದ ಸುತ್ತ ಮುತ್ತಲಿನ ಮೇಳಗಳಲ್ಲಿ ಭಾಗವಹಿಸುತ್ತಿದ್ದಾರೆ.

ಲೇಖನ : ಸುರೇಶ ಭಟ್ಟ, ಸಿಂಗಪುರ
ಮಾಹಿತಿ, ಚಿತ್ರಗಳು : ಚಂದ್ರಶೇಖರ್ ಕೊಳಕಿ, ಸಿಂಗಪುರ ಹಾಗೂ ಅಂತರ್ಜಾಲ ತಾಣಗಳಿಂದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Singapore Kannada Sangha has given a wonderful opportunity for lovers of Yakshagana to watch Krishna Sandhana and Gadha Yuddha on 21st May, 2016 in Singapore. Famous Yakshagana artists from Karnataka will be performing in Yakshasiri in Singapore.
Please Wait while comments are loading...