ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಪ್ಪತ್ತರ ಹರೆಯದ ಹೊಸ್ತಿಲಲ್ಲಿ ಸಿಂಗಪುರ ಕನ್ನಡ ಸಂಘ

By ವಸಂತ ಕುಲಕರ್ಣಿ
|
Google Oneindia Kannada News

ಈ ಭೂಮಿಯ ಮೇಲಿನ ಚಿಕ್ಕ ಕೆಂಪು ಚುಕ್ಕೆ ಸಿಂಗಪುರ. ಈ ಕೆಂಪು ಚುಕ್ಕೆಯ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತಿರುವಂಥಾದ್ದೇ. ಇಂತಹ ಮಹತ್ವದ ನಾಡಿನಲ್ಲಿ ಕನ್ನಡಿಗರನೇಕರು ನೆಲೆಸಿ ಈ ನಾಡಿನ ಏಳಿಗೆಗಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ತಮ್ಮ ದಕ್ಷತೆ ಮತ್ತು ಪ್ರಾಮಾಣಿಕತೆಗಳಿಂದ ತಾಯ್ನಾಡಿಗೆ ಕೀರ್ತಿ ತರುತ್ತಿದ್ದಾರೆ. ಈ ಕನ್ನಡಿಗರೆಲ್ಲರೂ ತಮ್ಮ ಮಾತೃ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ವರ್ಗಾಯಿಸಲು ಕಟ್ಟಿಕೊಂಡ ಸಂಸ್ಥೆ ಕನ್ನಡ ಸಂಘ (ಸಿಂಗಪುರ).

ಎಪ್ಪತ್ತು, ಎಂಬತ್ತರ ದಶಕದಲ್ಲಿ ಕೆಲವು ಕನ್ನಡ ಕುಟುಂಬಗಳು ಮನೆಗಳಲ್ಲಿ ಅಥವಾ ಉದ್ಯಾನದಲ್ಲಿ ಸೇರಿ ಕನ್ನಡಿಗರ ಹಬ್ಬ ಹರಿದಿನಗಳನ್ನು ಆಚರಿಸಲು ಮತ್ತು ವರ್ಷಕ್ಕೊಮ್ಮೆ 'ಕಸ್ತೂರಿ ಕಂಪು' ಎಂಬ ಹೆಸರಿನಲ್ಲಿ ನಾಟಕಗಳನ್ನು ನಡೆಸಲು ಸೇರುತ್ತಿದ್ದ ದಿನಗಳಲ್ಲಿ ಈ ಸಂಸ್ಥೆಯ ಕಲ್ಪನೆ ಆಗಿನ ಸಿಂಗಪುರದ ಕನ್ನಡಿಗರಿಗೆ ಹೊಳೆಯಿತು. ಮುಂದೆ 90ರ ದಶಕದಲ್ಲಿ ಗಣನೀಯವಾಗಿ ಬೆಳೆದ ಕನ್ನಡಿಗರ ಸಂಖ್ಯೆ ಈ ಕಲ್ಪನೆಯನ್ನು ಸಾಕಾರಗೊಳಿಸಿ, 11 ಸೆಪ್ಟೆಂಬರ್ 1996ರಲ್ಲಿ ಕನ್ನಡ ಸಂಘ (ಸಿಂಗಪುರ). ಉದಯವಾಯಿತು.

ಅಲ್ಲಿಂದ ವರುಷದಿಂದ ವರುಷಕ್ಕೆ ಬೆಳೆಯುತ್ತಲೇ ನಡೆದ ಕನ್ನಡ ಸಂಘ, ಇಂದು ಅನೇಕ ಸ್ವಯಂ ಸೇವಕರ ನಿರಂತರ ಸೇವೆ ಮತ್ತು ಕನ್ನಡಿಗರ ಅಪಾರ ಮಾತೃಭಾಷಾ ಪ್ರೀತಿಯ ಪರಿಣಾಮವಾಗಿ, ಸಿಂಗಪುರದ ಭಾರತೀಯರ ಒಂದು ಪ್ರಮುಖ, ಸಾಂಸ್ಕೃತಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ.

20th anniversary of Kannada Sangha Singapore

ತಾಯ್ನಾಡಿನಿಂದ ದೂರ ಹೊರಟು ಬಂದ ಕನ್ನಡಿಗರಿಗೆ, ಕನ್ನಡ ಸಂಘ (ಸಿಂಗಪುರ), ಈ ಹೊರದೇಶದಲ್ಲಿ ಸಹಜವಾಗಿ ಉಂಟಾಗುವ ಅನಾಥಪ್ರಜ್ಞೆಯನ್ನು ದೂರ ಮಾಡುವ ಒಂದು ಮಾತೃ ಸಂಸ್ಥೆಯಾಗಿ ಬೆಳೆದು ಇಲ್ಲಿಯ ಕನ್ನಡಿಗರಲ್ಲಿ ಒಂದು ಭಾವನಾತ್ಮಕ ಬಂಧವನ್ನು ಬೆಸೆದಿದೆ. ನಾವು ಕರ್ನಾಟಕದ ಯಾವ ಮೂಲೆಯಿಂದ ಬಂದವರಾದರೂ, ನಮ್ಮದೊಂದು ಸಂಸ್ಥೆಯಿದೆ, ನಮ್ಮವರನೇಕರು ಇಲ್ಲಿದ್ದಾರೆ ಎಂಬ ಭಾವನೆ ಮೂಡಿ ನೆಮ್ಮದಿ ಉಂಟುಮಾಡಿಸುತ್ತದೆ.

ಅಲ್ಲದೇ ಮಾತೃ ಭಾಷೆ ಮತ್ತು ಮಾತೃಭೂಮಿಯ ಸಂಸ್ಕೃತಿಯೊಡನೆ ನಮ್ಮೆಲ್ಲರ ಬೆಸುಗೆಯನ್ನು ಸದಾ ಜೋಪಾನವಾಗಿ ಇಟ್ಟಿರಲು ಸಂಸ್ಥೆ ಕನ್ನಡದ ಪ್ರಸಿದ್ಧ ಸಾಹಿತಿಗಳು, ಸಂಗೀತಕಾರರು, ಕಲಾವಿದರುಗಳನ್ನು ಕರೆಸಿ, ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಸಮಾನ ಮನೋಭಾವನೆ ಹೊಂದಿರುವ ಸ್ಥಳೀಯ ಕನ್ನಡಿಗರನ್ನು ಪರಸ್ಪರ ಹತ್ತಿರ ತರಲು "ಸ್ವರಾವೋಕೆ", "ಬನ್ನಿ ಮಾತಾಡೋಣ" ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಕನ್ನಡದ ಮಾಸ ಪತ್ರಿಕೆ ಮತ್ತು ದ್ವಿವಾರ್ಷಿಕ ಪತ್ರಿಕೆಗಳನ್ನು ಹೊರತಂದು ಕನ್ನಡದ ಕಂಪನ್ನು ಹರಡುತ್ತಿದೆ. ಮಕ್ಕಳಿಗಾಗಿ "ಕನ್ನಡ ಕಲಿ" ಕಾರ್ಯಕ್ರಮ ಮತ್ತು ಎಲ್ಲ ಸಿಂಗನ್ನಡಿಗರಗಾಗಿ "ಅರಿವು" ಕಾರ್ಯಕ್ರಮಗಳನ್ನು ಏರ್ಪಡಿಸಿ ಜ್ಞಾನ ಕೃಷಿಯನ್ನು ಸಮರ್ಥವಾಗಿ ನೆರವೇರಿಸುತ್ತಿದೆ. ಅದಲ್ಲದೇ ಇಲ್ಲಿಯ ಕನ್ನಡಿಗರ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಬೆಳೆಯಲು ಅನುವುಮಾಡಿಕೊಡುತ್ತಿದೆ. ಇದಕ್ಕೆ ಒಬ್ಬ ಹವ್ಯಾಸಿ ಬರಹಗಾರನಾದ ನನ್ನ ಸ್ವಂತದ ಅನುಭವವೇ ಸಾಕ್ಷಿ.

ಈ ವರ್ಷ ತನ್ನ ಇಪ್ಪತ್ತನೆಯ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ತರುಣ ಸಂಸ್ಥೆಯ ಕನಸುಗಳು ಹಲವಾರು. ಇಪ್ಪತ್ತನೆಯ ಹುಟ್ಟುಹಬ್ಬದ ವಿಜೃಂಭಣೆಯ ಸಮಾರಂಭದ ಅಂಗವಾಗಿ ಇದೇ ಅಕ್ಟೋಬರ್ 29 ಮತ್ತು 30ರಂದು "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ವನ್ನು ಅದ್ದೂರಿಯಾಗಿ ಹಮ್ಮಿಕೊಂಡಿದೆ ನಮ್ಮ ಕನ್ನಡ ಸಂಘ.

ಈ ಕಾರ್ಯಕ್ರಮದ ಅಂಗವಾಗಿ, ಅನೇಕ ಸುಪ್ರಸಿದ್ಧ ಕಲಾವಿದರು, ಸಾಹಿತಿಗಳು, ಗಾಯಕರು, ಸಂಗೀತಗಾರರು ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಅದರ ಯಶಸ್ಸಿನಲ್ಲಿ ಹೆಮ್ಮೆಯಿಂದ ಪಾಲ್ಗೊಳ್ಳಲು ಸಿಂಗನ್ನಡಿಗರನ್ನಲ್ಲದೇ ವಿಶ್ವಕನ್ನಡಿಗರೆಲ್ಲರನ್ನೂ ಸ್ವಾಗತಿಸುತ್ತಿದೆ ನಮ್ಮ ಹೆಮ್ಮೆಯ ಕನ್ನಡ ಸಂಘ(ಸಿಂಗಪುರ)

English summary
Singapore Kannada Sangha is celebrating 20th anniversary on 29th and 30th October, 2016. On this occasion Vasant Kulkarni recalls how the association took birth, how it grew as one of the main culture oriented organizations in Singapore and what all activities it is conducting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X