ರಾಜ್ಯದಲ್ಲಿ ಪಿಎಫ್ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ: ವೇಣುಗೋಪಾಲ್
ವಿಜಯಪುರ, ಜನವರಿ 11: "ರಾಜ್ಯದಲ್ಲಿ ಪಿಎಫ್ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ" ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
2018ರ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಜಿಲ್ಲಾ ಪ್ರವಾಸ ಕೈಗೊಂಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಇಂದು (ಜನವರಿ 11) ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ರಾಜ್ಯದಲ್ಲಿ ಪಿಎಫ್ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರೇ ಅಪರಾಧ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದು, ಕ್ರಿಮಿನಲ್ ರಾಜಕೀಯದಿಂದ ಹೊರ ಬರಲಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ ಮತ್ತು ಅಪರಾಧ ಪ್ರಕರಣಗಳಲ್ಲಿ ಒಂದು ಕಡೆ ಬಿಜೆಪಿ ಮತ್ತೋಂದು ಕಡೆ ಆರ್ ಎಸ್ಎಸ್ ಇವೆ. ಜನರನ್ನು ಕೋಮು ಆಧಾರದ ಮೇಲೆ ವಿಭಜಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಬಿಜೆಪಿ ಮತ್ತು ಆರ್ ಎಸ್ ಎಸ್ ಪ್ರಯತ್ನಿಸುತ್ತಿವೆ.

ಆದರೆ, ಕರ್ನಾಟಕದ ಜನತೆ ಜಾಣರಿದ್ದು, ಬಿಜೆಪಿ ಮತ್ತು ಆರ್ ಎಸ್ ಎಸ್ ಕೋಮು ವಿಭಜನೆಯ ತಂತ್ರವನ್ನು ಬಲ್ಲವರಾಗಿದ್ದಾರೆ. ಚುನಾವಣೆಯಲ್ಲಿ ಕನ್ನಡಿಗರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಆರ್ ಎಸ್ ಎಸ್ ಅಷ್ಟೇ ಅಲ್ಲ, ಹಿಂದೂ ಮೂಲಭೂತವಾದಿಗಳಾಗಲಿ ಬೇರೆ ಯಾರೇ ಕೋಮವಾದಿಗಳಾಗಲೀ ಅವರ ವಿರುದ್ಧ ಸರಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಮತವಿಲ್ಲ. ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಹಿಂದೂ ಸಂಘಟನೆಯ ಕಾರ್ಯಕರ್ತರ ಸರಣಿ ಹತ್ಯೆಗಳಾಗುತ್ತಿದ್ದು, ಹತ್ಯೆ ಹಿಂದೆ ಪಿಎಫ್ ಐ ಕೈವಾಡವಿದೆ. ಆದ್ದರಿಂದ ಅದನ್ನು ನಿಷೇಧಿಸಬೇಕೆಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ.












Click it and Unblock the Notifications