ಕರ್ನಾಟಕದಲ್ಲಿ ಮತ್ತೊಂದು ದುರಂತ: ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದ
ವಿಜಯಪುರ, ಏಪ್ರಿಲ್ 04: ಎರಡು ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ನಡೆದಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾತ್ವಿಕ್ ಕೊಳವೆ ಬಾವಿಯೊಳಗೆ ಬಿದ್ದಿರುವ ಎರಡು ವರ್ಷದ ಪುಟಾಣಿ ಕಂದ ಎಂದು ಗುರುತಿಸಲಾಗಿದೆ.
ಕೊಳವೆ ಬಾವಿಯೊಳಗೆ ಇಳಿಸಲಾದ ಸಿಸಿ ಕ್ಯಾಮೆರಾದಲ್ಲಿ ಮಗುವಿನ ಚಲನವಲನ ಸೆರೆಯಾಗಿದ್ದು, ಮಗು ರಕ್ಷಣೆಗೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.180 ಅಡಿ ಆಳದ ಕೊಳವೆ ಬಾವಿಯಲ್ಲಿ 16 ಅಡಿ ಆಳದಲ್ಲಿ ಮಗು ಸಾತ್ವಿಕ್ ಇರುವುದು ಪತ್ತೆಯಾಗಿದ್ದು, ಸದ್ಯ ಎಸ್‌ಡಿಆರ್‌ಎಫ್ ರಕ್ಷಣಾ ತಂಡ ಮಗುವಿಗೆ ಆಕ್ಸಿಜನ್ ಪೂರೈಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಸತೀಶ್ ಹಾಗೂ ಪೂಜಾ ದಂಪತಿಯ 2 ವರ್ಷದ ಮಗ ಸಾತ್ವಿಕ್ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ಬಾಲಕ ಸಾತ್ವಿಕ್ ತಂದೆ ಸತೀಶ್ ಕಳೆದ ಎರಡು ದಿನಗಳ ಹಿಂದಷ್ಟೆ ತಮ್ಮ ತೋಟದಲ್ಲಿ ಈ ಹೊಸ ಬೋರ್ವೆಲ್ನ ಕೊರೆಯಿಸಿದ್ದರು. ಈ ಹಿಂದೆ ಸತೀಶ್ 10 ಬೋರ್ವೆಲ್ಗಳನ್ನು ಕೊರೆಯಿಸಿದ್ದರು. ಆದರೆ ನೀರು ಬಂದಿರಲಿಲ್ಲ.
ಕಳೆದ 2 ದಿನದ ಹಿಂದೆ ಕೊರೆಸಿದ್ದ 265 ಅಡಿ ಆಳದ ಈ ಬೋರ್ವೆಲ್ನಲ್ಲಿ ನೀರು ಸಿಕ್ಕಿತ್ತು. ನೀರು ಕಂಡ ಕುಟುಂಬ ಸಂತೋಷದಲ್ಲಿ ತೇಲಾಡುತ್ತಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಈ ಖುಷಿ ಮಾಯವಾಗಿದೆ. ತೋಟದ ಮನೆ ಬಳಿ ಪೂಜಾ ಪಾತ್ರೆ ತೊಳೆಯುತ್ತಿದ್ದ ವೇಳೆ ಎರಡು ವರ್ಷದ ಕಂದ ಸಾತ್ವಿಕ್ ನಾಪತ್ತೆಯಾಗಿದ್ದಾನೆ. ಎಲ್ಲಾ ಕಡೆಗಳಲ್ಲೂ ಹುಡುಕಾಟ ನಡೆಸಿದ ಬಳಿಕ ಸಂಶಯದಿಂದ ಕೊಳವೆ ಬಾವಿ ಇಣುಕಿದಾಗ ಮಗು ಬೋರ್ವೆಲ್ಗೆ ಬಿದ್ದಿರುವುದು ತಿಳಿದು ಬಂದಿದೆ.
ಕೂಡಲೇ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದ್ದು, ಎರಡು ಜೆಸಿಬಿ ಹಾಗೂ 1 ಹಿಟಾಚಿ ಬಳಸಿ ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯ ಬಾಲಕನ ಚಲನವಲನಗಳು ಕ್ಯಾಮರದಲ್ಲಿ ಪತ್ತೆಯಾಗಿದೆ. ಕಾರ್ಯಾಚರಣೆ ಮುಂದುವರಿದಿದ್ದು, ಕಲ್ಲು ಬಂಡೆಗಳು ಸವಾಲಾಗಿದೆ. ಇನ್ನು ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಸಂಪೂರ್ಣ ಗ್ರಾಮವೇ ಪ್ರಾರ್ಥಿಸುತ್ತಿದೆ.












Click it and Unblock the Notifications