Borewell Survey: ತೆರೆದ ಬೋರ್‌ವೆಲ್ ಸರ್ವೆಗೆ ಎಂಬಿ ಪಾಟೀಲ್ ಖಡಕ್ ಸೂಚನೆ: ರಕ್ಷಣಾ ತಂಡಕ್ಕೆ ಅಭಿನಂದನೆ
ಬೆಂಗಳೂರು, ಏಪ್ರಿಲ್ 04: ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗೆ ಬಿದ್ದ ಮಗು ರಕ್ಷಿಸಿ, ತಾಯಿ ಮಡಿಲಿಗೆ ಸೇರಿಸಲಾಗಿದೆ. ಇದರ ಬೆನ್ನಲ್ಲೆ ತೆರೆದ ಬೋರ್ ವೆಲ್ ಸರ್ವೆ ನಡೆಸುವಂತೆ, ಪ್ರಕರಣ ದಾಖಲಿಸುವಂತೆ ಕೈಗಾರಿಕೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಸೂಚನೆ ನೀಡಿದರು.
ಮಗು ರಕ್ಷಣೆಯ ಕಾರ್ಯ ಯಶಸ್ವಿಯಾಗುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಂಬಿ ಪಾಟೀಲ್ ಅವರು, ಜಮೀನಿನಲ್ಲಿ, ಮನೆ ಬಳಿ, ಉದ್ಯಾನದಲ್ಲಿ ಮುಚ್ಚದೆ ಹಾಗೆಯೇ ಬಿಟ್ಟಿರುವ ಕೊಳವೆಬಾವಿಗಳ ಬಗ್ಗೆ ಜಿಲ್ಲೆಯಾದ್ಯಂತ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ಇಂತಹ ಘಟನೆ ಮರುಕಳಿಸದಂತೆ ರೈತರಿಗೆ ಸಲಹೆ
ಈ ಮೂಲಕ ಸಣ್ಣ ಸಣ್ಣ ಮಕ್ಕಳ ಸಾವು ಬದುಕಿಗೆ ಕಾರಣವಾಗುತ್ತಿರುವ ತೆರೆದ ಕೊಳವೆ ಬಾವಿಯನ್ನು ಹಾಗೆ ಬಿಡುವವರ ವಿರುದ್ಧ ಅವರು ಜಿಲ್ಲೆಯಾದ್ಯಂತ ಸಮರ ಸಾರಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸುವಂತೆ ಪೋಷಕರು ಮತ್ತು ರೈತರಿಗೆ ಸಚಿವರು ಸಲಹೆ ನೀಡಿದ್ದಾರೆ.
ಕೊಳವೆಬಾವಿಗಳನ್ನು ಮುಚ್ಚದೆ ಬಿಟ್ಟರೆ ಕಠಿಣ ಕ್ರಮ ತೆಗೆದುಕೊಳ್ಳಲು ಈಗಾಗಲೇ ಕಾನೂನು ಇದೆ. ಜಿಲ್ಲೆಯಲ್ಲಿ ಸರ್ವೆ ನಡೆಸಿ, ಬೋರ್‌ವೆಲ್ ಗಳನ್ನು ಮುಚ್ಚದೆ ಬಿಟ್ಟಿದ್ದರೆ, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾವ ಇದೆ. ಅದರನ್ವಯ ಯಾರು ಕೊಳವೆಬಾವಿ ಮುಚ್ಚದೇ ಹಾಗೆಯೇ ಬಿಟ್ಟಿದ್ದರ ಬಗ್ಗೆ ಸರ್ವೆ ನಡೆಸಿ, ಪ್ರಕರಣ ದಾಖಲಿಸುವಂತೆ ಅವರು ಹೇಳಿದರು.

ಮಗು ರಕ್ಷಿಸಿದ ಸಿಬ್ಬಂದಿಗೆ ಸಚಿವರ ಶ್ಲಾಘನೆ
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 14 ತಿಂಗಳ ಮಗುವನ್ನು 20 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲ ಸಿಬ್ಬಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲ್ ಶ್ಲಾಘಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ NDRF, SDRF ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಗೆ ಸಹಕರಿಸಿದ ಸ್ಥಳೀಯ ಜನರು ಹಾಗೂ ನೇತೃತ್ವ ವಹಿಸಿದ ಜಿಲ್ಲಾಡಳಿತಕ್ಕೂ ಅವರು ಮೆಚ್ಚುಗೆ ಮಾತು ಆಡಿದ್ದಾರೆ.
ಬುಧವಾರ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ ಮಗು
ಬೋರ್‌ವೆಲ್ ಜಾರಿದ್ದ ಮಗು ಸಾತ್ವಿಕ್ ಅನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿರುವುದು ಅತ್ಯಂತ ಸಮಾಧಾನ ನೀಡಿದೆ. ಸದ್ಯ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಡೆದಿರುವ ಸುದ್ದಿ ಬುಧವಾರ ಸಂಜೆ ತಿಳಿಯುತ್ತಿದ್ದಂತೆಯೇ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದರು. ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿಯುವ ತನಕ ಜಿಲ್ಲಾಡಳಿತದೊಂದಿಗೆ ಪಾಟೀಲ್ ಅವರು ನಿರಂತರ ಸಂಪರ್ಕದಲ್ಲಿದ್ದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ರಕ್ಷಣಾ ಸಿಬ್ಬಂದಿಗೆ, ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದ್ದಾರೆ.












Click it and Unblock the Notifications