Heavy Rain: ವಿಜಯಪುರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಿಂದ ಸಂಭವಿಸಿದ ಅನಾಹುತಗಳಿವು
ವಿಜಯಪುರ, ಮಾರ್ಚ್, 31: ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಾಮಾನದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಜನರು ಮನೆಯಿಂದ ಹೊರಗಡೆ ಕಾಲಿಡದಂತಹ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆಯೂ ಕೆಲವೆಡೆ ಮಾತ್ರ ಮಳೆರಾಯ ತಂಪೆರೆದು ಜನರನ್ನು ತಣಿಸುವ ಕೆಲಸ ಮಾಡುತ್ತಿದ್ದಾನೆ. ಹಾಗೆಯೇ ನಿನ್ನೆ (ಮಾರ್ಚ್ 30) ಸಂಜೆ ವಿಜಯಪುರ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಇದರಿಂದ ಹಲವು ಅನಾಹುತಗಳು ಸಹ ಸೃಷ್ಟಿಯಾಗಿವೆ.
ಶನಿವಾರ (ಮಾರ್ಚ್ 30) ಸಂಜೆ ಗುಡುಗು, ಸಿಡಿಲು ಸಹಿತ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಸುರಿದಿದೆ. ವಿಜಯಪುರ ತಾಲೂಕಿನ ಗುಣಕಿ ಗ್ರಾಮದ ರೈತ ನಾನಾಗೌಡ ಬಿರಾದಾರ ಅವರ ಎತ್ತುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ. ಅಲ್ಲದೆ, ಕೆಲವೆಡೆ ತೋಟಗಳು ನಾಶವಾದ ಘಟನೆಗಳು ಕೂಡ ನಡೆದಿವೆ. ಇನ್ನು ತಾಲೂಕಿನ ಜನ್ನೂರು, ಮುಖಣಾಪೂರ, ತಿಡಗುಂದಿ ಭಾಗಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಳ ಮಳೆರಾಯ ಬಿಡುವು ನೀಡದೇ ತಂಪೆರೆದಿದ್ದಾನೆ.

ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ರಣಭೀಕರ ಗಾಳಿಯಿಂದ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಹಳಗುಣಕಿ ಗ್ರಾಮದ ವಿಶ್ಚನಾಥ ಪಾಟೀಲ್ ಅವರ ದ್ರಾಕ್ಷಿ ತೋಟಕ್ಕೆ ಹಾನಿ ಆಗಿದೆ. ದ್ರಾಕ್ಷಿ ಸಾಲುಗಳ ಮೇಲೆ ವಿದ್ಯುತ್ ಕಂಬಗಳು, ಮರ ಬಿದ್ದ ಪರಿಣಾಮ ದ್ರಾಕ್ಷಿ ಬೆಳೆ ನಾಶ ಆಗಿವೆ. ಇನ್ನು ಬೆಳೆ ಕಳೆದುಕೊಂಡವರು ಆತಂಕಕ್ಕೆ ಒಳಗಾಗಿದ್ದಾರೆ.
ಬೊಮ್ಮನಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಎಂಬವವರು ಬೆಳೆದಿದ್ದ 1,000ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕುರುಳಿದ್ದು, ಇದರಿಂದ ಸುಮಾರು 2 ಲಕ್ಷ ರೂಪಾಯಿ ಹಾನಿ ಆಗಿದೆ. ಇಳುವರಿ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ಮುರಿದು ಬಿದ್ದಿವೆ.
ಜಿಲ್ಲೆಯಲ್ಲಿ ವಾರದಿಂದ ಈಚೆಗೆ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿದ್ದು, ವಾತಾವರಣ ಕಾದ ಕಾವಲಿನಂತಾಗಿದೆ. ಈ ನಡುವೆಯೂ ಅಲ್ಲಲ್ಲಿ ಮಳೆಯಾಗುವ ಮೂಲಕ ಇಲ್ಲಿನ ವಾತಾವರಣವನ್ನು ತಣ್ಣಗಾಗಿಸಿದೆ. ಹಾಗೆಯೇ ಇಂದು ಕೂಡ ಮಳೆರಾಯ ಹಲವು ಜಿಲ್ಲೆಗಳಿಗೆ ತಂಪೆರೆಯಲಿದ್ದಾನೆ ಎನ್ನುವ ಮುನ್ಸೂಚನೆ ಇದೆ.












Click it and Unblock the Notifications