Gilli: ಗಿಲ್ಲಿ ಕಥೆ ಮುಗೀತು ಅಂದವ್ರಿಗೆ ನನ್ ರೇಂಜೇ ಬೇರೆ ಅನ್ನೋ ಮೆಸೇಜ್ ಕೊಟ್ಟ ಬಿಗ್‌ಬಾಸ್ ವಿನ್ನರ್
ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಮಿಂಚಿದ ಗಿಲ್ಲಿ ನಟನ ಕ್ರೇಜ್ ನೋಡಿ ಇಡೀ ಕರ್ನಾಟಕವೇ ಶೇಕ್ ಆಗಿತ್ತು. ಬಳಿಕ "ಬಿಗ್‌ಬಾಸ್ ಟ್ರೋಫಿ ಗೆದ್ದಿದ್ದಾಯ್ತು, ಗಿಲ್ಲಿ ಕಥೆ ಮುಗೀತು, ಇನ್ನು ಇವನ ಕೈಯಲ್ಲಿ ಏನೂ ಆಗಲ್ಲ' ಎಂದೇ ಅನೇಕರು ಭಾವಿಸಿದ್ರು. ಆದರೆ ಅಂತವರ ಬಾಯಿ ಮುಚ್ಚಿಸುವ ಸಂದೇಶ ರವಾನಿಸಿದ್ದಾರೆ ಮಂಡ್ಯ ಹೈದ. ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಇವರ ಮುಂದಿನ ಹೆಜ್ಜೆ ಏನು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿಸುದ್ದಿ ಕೊಟ್ಟಿದ್ದಾರೆ ಕಾಮಿಡಿ ಕಿಂಗ್.
ಬಿಗ್‌ಬಾಸ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ್ದ 'ಗಿಲ್ಲಿ' ಖ್ಯಾತಿಯ ನಟ, ಈಗ ಬೆಳ್ಳಿಪರದೆಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ನಟ ಗಿಲ್ಲಿ ಅವರನ್ನು ನಾಯಕನನ್ನಾಗಿ ಲಾಂಚ್ ಮಾಡುತ್ತಿದ್ದು, ಸಿನಿಮಾ ಮುಹೂರ್ತಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಈಗ ಸ್ಯಾಂಡಲ್‌ವುಡ್‌ನ ಬಿಗ್ಗೆಸ್ಟ್ ಬ್ಯಾನರ್ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ಜೂನ್ 21ಕ್ಕೆ ಅದ್ಧೂರಿ ಮುಹೂರ್ತ
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸಾಲು ಸಾಲು ದೊಡ್ಡ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಈ ಹೊಸ ಚಿತ್ರ ಸೆಟ್ಟೇರಲಿದೆ. ಇದೇ ಜೂನ್ 21ರಂದು ಚಿತ್ರದ ಅದ್ಧೂರಿ ಮುಹೂರ್ತ ನೆರವೇರಲಿದ್ದು, ಚಿತ್ರತಂಡ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮುಹೂರ್ತದ ಹಿನ್ನೆಲೆಯಲ್ಲಿ ಚಿತ್ರತಂಡ ಬಿಡುಗಡೆ ಮಾಡಿರುವ ವಿಭಿನ್ನವಾದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ.
ಹಾಸ್ಯ ನಿರ್ದೇಶಕ ಚಂದ್ರಮೋಹನ್ ಸಾರಥ್ಯ
ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಸಿನಿಮಾಗಳ ಮೂಲಕವೇ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಚಂದ್ರಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗಿಲ್ಲಿ ಅವರ ನಟನಾ ಶೈಲಿ ಹಾಗೂ ಚಂದ್ರಮೋಹನ್ ಅವರ ಹಾಸ್ಯ ಪ್ರಜ್ಞೆ ಒಟ್ಟಿಗೆ ಸೇರಿದರೆ ಪಕ್ಕಾ ಎಂಟರ್‌ಟೇನರ್ ಸಿನಿಮಾ ಸಿಗುವುದರಲ್ಲಿ ಅನುಮಾನವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಚಿತ್ರದಲ್ಲಿ ಗಿಲ್ಲಿಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ನಾಯಕಿಯ ಆಯ್ಕೆಯನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಯುವ ಪ್ರತಿಭೆಗೆ ಕೆವಿಎನ್ ಸಾಥ್
ಕೆವಿಎನ್ ಪ್ರೊಡಕ್ಷನ್ಸ್‌ನ ಸಂಸ್ಥಾಪಕರಾದ ಕೆ. ವೆಂಕಟನಾರಾಯಣ ಮತ್ತು ಬ್ಯುಸಿನೆಸ್ ಹೆಡ್ ಸುಪ್ರೀತ್ ಅವರು ಹೊಸ ಚಿತ್ರಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ. ಈ ಚಿತ್ರವನ್ನು ಕೆವಿಎನ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಜಂಟಿಯಾಗಿ ನಿರ್ಮಿಸುತ್ತಿದ್ದು, ಇದು ಅವರ ಚೊಚ್ಚಲ ನಿರ್ಮಾಣದ ಸಿನಿಮಾವಾಗಿದೆ. ಗಿಲ್ಲಿ ಅವರಿಗೆ ಚಿತ್ರತಂಡ ಹೂಗುಚ್ಛ ನೀಡಿ ಅಧಿಕೃತವಾಗಿ ಸ್ವಾಗತಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೆ. ವೆಂಕಟನಾರಾಯಣ, "ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕೆವಿಎನ್ ಪ್ರೊಡಕ್ಷನ್ ಸದಾ ಸಿದ್ಧವಿರುತ್ತದೆ" ಎಂದು ಹೇಳುತ್ತಾ ನಟ ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.












Click it and Unblock the Notifications