• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀರಾಮುಲು ಮರುಸೇರ್ಪಡೆಗೆ ಅಡ್ವಾಣಿ ಕೂಡ ಅಡ್ಡಗಾಲು

By Prasad
|

ನವದೆಹಲಿ, ಮಾ. 7 : ಭಾರತೀಯ ಜನತಾ ಪಕ್ಷಕ್ಕೆ ಮರುಸೇರ್ಪಡೆಯಾಗುವ ಉತ್ಸಾಹದಲ್ಲಿದ್ದ ಬಿಎಸ್ಆರ್ ಕಾಂಗ್ರೆಸ್ ನಾಯಕ ಬಿ ಶ್ರೀರಾಮುಲುಗೆ ಮತ್ತೊಂದು ಹೊಡೆತ ಬಿದ್ದಿದೆ. ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು, ಶ್ರೀರಾಮುಲು ಬಿಜೆಪಿಗೆ ಮರಳುವಿಕೆಯ ಪ್ರಸ್ತಾವನೆಯನ್ನು ಕಡ್ಡಿ ಮುರಿದಂತೆ ತುಂಡು ಮಾಡಿದ್ದಾರೆ.

"ಬಿಜೆಪಿಗೆ ಮರಳುತ್ತಿರುವವರ ಬಗ್ಗೆ ಎಚ್ಚರದಿಂದಿರಿ" ಎಂಬ ಸ್ಪಷ್ಟ ಸಂದೇಶವನ್ನು ಶುಕ್ರವಾರ ರವಾನಿಸಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಸಂದರ್ಭದಲ್ಲಿ ಅಡ್ವಾಣಿ ಅವರು, ಶ್ರೀರಾಮುಲು ಅವರ ವಾಪಸಾತಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ-ಬಿಎಸ್ಆರ್ ಕಾಂಗ್ರೆಸ್ ವಿರೋಧಿಸಿರುವ ಸುಷ್ಮಾ ಸ್ವರಾಜ್ ಕೂಡ ಹಾಜರಿದ್ದರು.

"ಬಿಎಸ್ಆರ್ ಕಾಂಗ್ರೆಸ್ ಜೊತೆಗಿನ ವಿಲೀನವಾಗಲಿ, ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಾಗಲಿ ನನ್ನ ವಿರೋಧವಿದೆ" ಎಂದು ಗುರುವಾರ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಅವರು, ಕರ್ನಾಟಕದ ಬಿಜೆಪಿ ನಾಯಕರ ಪ್ರಯತ್ನಕ್ಕೆ ತಣ್ಣೀರು ಎರಚಿದ್ದರು. ಮಾರ್ಚ್ 9ಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಲು ಮುಹೂರ್ತವನ್ನು ನಿಗದಿಪಡಿಸಲಾಗಿತ್ತು. [ಶ್ರೀರಾಮುಲು ವಾಪಸಾತಿಗೆ ಸುಷ್ಮಾ ವಿರೋಧ]


ಸುಷ್ಮಾ ಅವರ ಈ ನಿರ್ಣಯದಿಂದಾಗಿ ರಾಜ್ಯ ಬಿಜೆಪಿ ಪಾಳಯದಲ್ಲಿ ಮೋಡ ಕವಿದಂತಾಗಿದೆ. ಬುಧವಾರ ಬಳ್ಳಾರಿಯಲ್ಲಿ ನಡೆಸಿದ ಸಭೆಯಲ್ಲಿ ತಾವು ಬಿಜೆಪಿಯನ್ನು ತಮ್ಮ ಬೆಂಬಲಿಗರೊಂದಿಗೆ ಮರುಸೇರುತ್ತಿರುವುದಾಗಿ ಶ್ರೀರಾಮುಲು ಹೇಳಿದ್ದರು. ಸೋಮಶೇಖರ ರೆಡ್ಡಿ ಅವರು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ತಮ್ಮ ಪರಮ ಗುರಿ ಎಂದು ಘೋಷಿಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಏ.17ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿಯನ್ನು ಸೇರಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸುವ ಉತ್ಸುಕತೆಯನ್ನು ಶ್ರೀರಾಮುಲು ತೋರಿದ್ದರು.

ಪಕ್ಷ ತೊರೆದಿದ್ದ ಬಿಎಸ್ ಯಡಿಯೂರಪ್ಪ ಅವರ ಮರಳುವಿಕೆಯಿಂದ ಭಾರೀ ಸಂಭ್ರಮ ಮನೆಮಾಡದಿದ್ದರೂ, ಶ್ರೀರಾಮುಲು ಅವರ ಮರಳುವಿಕೆಗೆ ಕೂಡ ದಾರಿ ಸಿಕ್ಕಂತಾಗಿತ್ತು. ಶ್ರೀರಾಮುಲು ಬಿಜೆಪಿ ಸೇರಿದರೆ ಪಕ್ಷ ಮತ್ತಷ್ಟು ಬಲವಾಗುತ್ತದೆ ಎಂಬುದು ರಾಜ್ಯ ನಾಯಕರ ಇರಾದೆಯಾಗಿತ್ತು. ಇದರ ಪೌರೋಹಿತ್ಯವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಮುಂತಾದವರು ವಹಿಸಿದ್ದರು. ಇದು ಸುಷ್ಮಾ ಸೇರಿದಂತೆ ಕೆಲ ಹಿರಿಯರ ಕೆಂಗಣ್ಣಿಗೆ ತುತ್ತಾಗಿತ್ತು.

ಅಕ್ರಮ ಗಣಿಗಾರಿಕೆ ಪ್ರಕರಣ ಮತ್ತು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಆರೋಪಿ ಸಾಲಿನಲ್ಲಿರುವ ಯಡಿಯೂರಪ್ಪ ಅವರ ಮರಳುವಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಲಾಲ್ ಕೃಷ್ಣ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ನಂತರ ಮನವೊಲಿಕೆ ನಡೆಸಿದ ನಂತರ ಅಡ್ವಾಣಿ ಅವರು ಹಸಿರು ನಿಶಾನೆ ತೋರಿದ್ದರು.

1999ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದಾಗ ಇಡೀ ರೆಡ್ಡಿ ಕುಟುಂಬ ಸುಷ್ಮಾ ಬೆಂಬಲಕ್ಕೆ ನಿಂತಿತ್ತು. ಸುಷ್ಮಾ ಸೋಲು ಕಂಡಿದ್ದರೂ ರೆಡ್ಡಿ ಸಹೋದರರ ಪ್ರೀತಿ ಗಳಿಸಿದ್ದರು ಮತ್ತು ಪ್ರತಿ ವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ಬಳ್ಳಾರಿಗೆ ಹಾಜರಾಗುತ್ತಿದ್ದರು.

ಆದರೆ, ಯಾವಾಗ ಜನಾರ್ದನ ರೆಡ್ಡಿ ಹೆಸರು ಅಕ್ರಮ ಗಣಿಗಾರಿಕೆಯಲ್ಲಿ ಕಂಡುಬಂದು ಅವರು ಚಂಚಲಗೂಡ ಜೈಲು ಸೇರಿದರೋ ಸುಷ್ಮಾ ಸ್ವರಾಜ್ ಅವರು ರೆಡ್ಡಿ ಸಹೋದರರನ್ನು ದೂರವಿಡಲು ಪ್ರಾರಂಭಿಸಿದರು ಮತ್ತು ಇವರು ನನ್ನ 'ಮಕ್ಕಳೇ' ಅಲ್ಲ ಎಂದು ಕಠಿಣ ನಿರ್ಧಾರ ತೆಗೆದುಕೊಂಡರು.

ರೆಡ್ಡಿ ಸಹೋದರರು ಇನ್ನೂ ದೊಡ್ಡ ಆಪತ್ತಿನಲ್ಲಿ ಸಿಲುಕಿದರೆ, ಅವರ ಸೇರ್ಪಡೆಯಿಂದ ಆಗುವ ಅವಮಾನವನ್ನು ದೂರವಿಡುವ ಉದ್ದೇಶದಿಂದ 'ಕಳಂಕಿತರಿಗೆ ನಾನು ಮಣೆ ಹಾಕುವುದಿಲ್ಲ' ಎಂಬ ಸಂದೇಶವನ್ನು ಸಾರಿದ್ದಾರೆ ಸುಷ್ಮಾ ಸ್ವರಾಜ್. ಶ್ರೀರಾಮುಲು ಮತ್ತು ಪಟಾಲಂ ಮರುಸೇರ್ಪಡೆಗೆ ಸುಷ್ಮಾ ಮತ್ತು ಅಡ್ವಾಣಿ ವಿರೋಧ ವ್ಯಕ್ತಪಡಿಸಿದ್ದರಿಂದ ರಾಜ್ಯ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ಮುಂದೇನಾಗುವುದೋ?

English summary
BJP senior leader Lal Krishna Advani too has opposed BSR Congress leader B Sriramulu's return to BJP. On Thursday Sushma Swaraj, who once considered close to Reddy brothers, had opposed reunion of BJP and BSR Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X