ಈ ವರ್ಷ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಬಲಿ; ಬಾಲಕ ಸಾವು
ನವದೆಹಲಿ, ಜುಲೈ 20; ಹಕ್ಕಿ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕ ದೆಹಲಿಯಲ್ಲಿ ಮಂಗಳವಾರ ಮೃತಪಟ್ಟಿದ್ದಾನೆ. ದೇಶದಲ್ಲಿ ಹಕ್ಕಿ ಜ್ವರದಿಂದ ಈ ವರ್ಷ ಉಂಟಾದ ಮೊದಲ ಸಾವು ಇದಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಗೆ ಜುಲೈ 2ರಂದು 11 ವರ್ಷದ ಬಾಲಕನನ್ನು ದಾಖಲು ಮಾಡಲಾಗಿತ್ತು. ಹೆಚ್5ಎನ್1 ವೈರಸ್ ಸೋಂಕು ಬಾಲಕನಿಗೆ ತಗುಲಿತ್ತು. ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮಂಗಳವಾರ ಮೃತಪಟ್ಟಿದ್ದಾನೆ. ಬಾಲಕನ ಸಂಪರ್ಕದಲ್ಲಿದ್ದ ಎಲ್ಲಾ ವೈದ್ಯರು, ಸಿಬ್ಬಂದಿಗೆ ಐಸೋಲೇಷನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹರ್ಯಾಣ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯದಲ್ಲಿ ಹಕ್ಕಿಗಳು ಮೃತಪಟ್ಟಿದ್ದವು.
ರಾಜಸ್ಥಾನ, ಕೇರಳ, ಮಧ್ಯಪ್ರದೇಶದಲ್ಲಿ ಹೆಚ್5ಎನ್8 ಮಾದರಿ ಸೋಂಕು, ಹಿಮಾಚಲ ಪ್ರದೇಶದಲ್ಲಿ ಹೆಚ್5ಎನ್1 ಮಾದರಿ ಸೋಂಕು ಪತ್ತೆಯಾಗಿತ್ತು. ಹೆಚ್5ಎನ್1 ಮಾದರಿ ಸೋಂಕು ತಗುಲಿದ್ದ ಬಾಲಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸೋಂಕು ತಗುಲಿದ ಹಕ್ಕಿಗಳ ಸಂಪರ್ಕಕ್ಕೆ ಬಂದ ಮನುಷ್ಯರಿಗೆ ರೋಗ ತಗುಲುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಚ್5ಎನ್1 ಮಾದರಿಯ ವೈರಸ್ ಮನುಷ್ಯರಿಗೆ ತಗುಲುವುದು ಕಡಿಮೆ. ಆದರೆ ತಗುಲಿದರೆ ಮರಣ ಪ್ರಮಾಣ ಶೇ60ರಷ್ಟಿದೆ ಎಂದು ಎಚ್ಚರಿಕೆ ನೀಡಿತ್ತು.
ವೈರಸ್ ತಗುಲಿದೆ ಹಕ್ಕಿಯ ಸಂಪರ್ಕಕ್ಕೆ ಬಂದ ವ್ಯಕ್ತಿಯ ಕಣ್ಣು, ಮೂಗು, ಬಾಯಿ ಮೂಲಕ ವೈರಸ್ ಮನುಷ್ಯನಿಗೆ ತಗುಲುತ್ತದೆ. ಪ್ರತ್ಯೇಕ ವಾರ್ಡ್‌ನಲ್ಲಿಯೇ ಸೋಂಕು ತಗುಲಿದ ವ್ಯಕ್ತಿಗೆ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿತ್ತು.












Click it and Unblock the Notifications