ಹೆಂಡತಿ ಸಾವಿಗೆ ಕಾರಣನಾದ ತಿ.ನರಸೀಪುರ ಸಿಡಿಪಿಒ ಅಧಿಕಾರಿ ಅಮಾನತು
ಮೈಸೂರು, ಮಾರ್ಚ್ 10: ಹೆಂಡತಿ ಸಾವಿಗೆ ಕಾರಣನಾದ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ವೆಂಕಟಪ್ಪನನ್ನು ಅಮಾನತುಗೊಳಿಸಲು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಆದೇಶ ಮಾಡಿದ್ದಾರೆ.
ವೆಂಕಟಪ್ಪ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿಷಯಕ್ಕೆ ಹೆಂಡತಿ ನಾಗವೇಣಿ (41) ಮನೆಯಲ್ಲಿ ಜಗಳ ಮಾಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ವೆಂಕಟಪ್ಪ ಹೆಂಡತಿಗೆ ಪದೇ ಪದೇ ಮಾನಸಿಕ, ದೈಹಿಕ ಕಿರುಕುಳ ನೀಡುತಿದ್ದ. ಅಲ್ಲದೇ ಆತನೇ ನಾಗವೇಣಿ ಕೊಲೆಗೆ ಯತ್ನಿಸಿದ್ದಾನೆ ಎಂದು ನಾಗವೇಣಿ ಪೋಷಕರು ಆರೋಪಿಸಿದ್ದರು. ಈ ಕುರಿತು ಪೊಲೀಸರು ಒತ್ತಡದ ನಂತರ ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಹೆಂಡತಿಯ ಸಾವಿಗೆ ಕಾರಣನಾಗಿದ್ದಾನೆ ಎಂಬ ಪೋಷಕರ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ವೆಂಕಟಪ್ಪನನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಮೈಸೂರಿನ ತಿ.ನರಸೀಪುರದ ಸಹಾಯಕ ಅಭಿವೃದ್ಧಿ ಅಧಿಕಾರಿ ವೆಂಕಟಪ್ಪ ಹೆಂಡತಿಗೆ ಕಿರುಕುಳ ನೀಡಿದ್ದು, ಈ ಕುರಿತು ಇಲಾಖೆಯಿಂದ ಮಾ. 5ರಂದು ವರದಿ ತರಿಸಿದ್ದೆ. ಎಫ್ಐಆರ್ ರಿಪೋರ್ಟ್, ಎಲ್ಲವನ್ನೂ ಪರಿಶೀಲಿಸಿದ ಮೇಲೆ ಅವರು ಹೆಂಡತಿಗೆ ತೊಂದರೆ ಕೊಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ಐಪಿಸಿ ಸೆಕ್ಷನ್ 498 ಮತ್ತು 594, 506, 307 ಕಾಲಂಗಳಡಿ ದೂರು ದಾಖಲಾಗಿರುವುದರಿಂದ ಪ್ರಕರಣ ಇತ್ಯರ್ಥವಾಗುವವರೆಗೂ ಅಮಾನತು ಮಾಡಿದ್ದೇವೆ ಎಂದರು.












Click it and Unblock the Notifications