ಸ್ಯಾಂಡಲ್‌ವುಡ್ ನಟಿಯ ಮಾವ, ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ: ಅಪಾರ ಮದ್ಯ ಜಪ್ತಿ
ಬೆಂಗಳೂರು, ಏಪ್ರಿಲ್ 25: ಕನ್ನಡದ 'ಚೆಲುವಿನ ಚಿತ್ತಾರ'ದ ಬೆಡಗಿ ನಟಿ ಅಮೂಲ್ಯ ಅವರ ಮಾವನೂ ಆಗಿರುವ ಬಿಜೆಪಿ ನಾಯಕರೊಬ್ಬರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಮದ್ಯ ವಶಕ್ಕೆ ಪಡೆಯಲಾಗಿದೆ.
ಹೌದು, ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಅವರ ಮಾವ ಹಾಗೂ ಬಿಜೆಪಿ ಮುಖಂಡ, ಬಿಬಿಎಂಪಿ ಮಾಜಿ ಸದಸ್ಯರು ಆಗಿರುವ ರಾಮಚಂದ್ರ ಅವರ ನಿವಾಸದ ಮೇಲೆ ಬುಧವಾರ ರಾತ್ರಿ ಚುನಾವಣಾಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 30ಕ್ಕೂ ಹೆಚ್ಚು ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ.

30 ಅಧಿಕಾರಿಗಳ ತಂಡದಿಂದ ದಾಳಿ
ರಾಮಚಂದ್ರ ಅವರ ನಿವಾಸದ ಮೇಲೆ ಒಟ್ಟು ಸುಮಾರು 30 ಅಧಿಕಾರಿಗಳ ತಂಡ ದಾಳಿ ನಡೆಸಿತು. ಮನೆಯನ್ನೇಲ್ಲಾ ಪರಿಶೀಲಿಸಿದ ಅಧಿಕಾರಿಗಳು ಅಕ್ರಮ ವಸ್ತುಗಳು, ನಗದು ತಡಕಾಡಿದ್ದಾರೆ. ಈ ವೇಳೆ ಅವರಿಗೆ ಅಪಾರ ಪ್ರಮಾಣದ ಮದ್ಯ ಸಿಕ್ಕಿದೆ.
ಕಾಂಗ್ರೆಸ್‌ನಿಂದ ಅಧಿಕಾರ ದುರ್ಬಳಕೆ
ಈ ದಾಳಿ ಕುರಿತು ಆಕ್ರೋಶ ಹೊರ ಹಾಕಿದ ರಾಮಚಂದ್ರ ಅವರು, ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿದರು. ನಮ್ಮ ಮನೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಾಯಕರು ಹಣ ಹಂಚಿದ್ದರು. ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸುತ್ತೇವೆ ಎಂದು ದಾಳಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಇನ್ನೂ ಚುನಾವಣಾಧಿಕಾರಿಗಳ ದಾಳಿ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಪೇದೆಗೆ ಮೇಲಿಂದ ಮೇಲೆ ಫೋನ್ ಕಾಲ ಬರುತ್ತಿತ್ತು. ಅದರಲ್ಲಿ ಒಮ್ಮೆ ಕರೆ ಸ್ವೀಕರಿದ್ದ ಪೇದೆಗೆ ದೂರವಾಣಿಯಲ್ಲೇಗೆ, ಅವರನ್ನು ಎರಡು ದಿನ ಒಳಗೆ ಹಾಕಿಸಿ ಎಂದು ಹೇಳಿದ್ದು ಕೇಳಿಸಿತು ಎಂದರು.
ಹುಟ್ಟುಹಬ್ಬ ಕಾರಣಕ್ಕಾಗಿ ಮದ್ಯ ಖರೀದಿ
ಮೊಮ್ಮಕ್ಕಳ ಹುಟ್ಟುಹಬ್ಬ ಇರುವ ಕಾರಣ ನಾನು ಮದ್ಯ ತರಿಸಿದ್ದೇನೆ. ಇದರ ಹೊರತು ಯಾವುದೇ ದುರುದ್ದೇಶದಿಂದಲ್ಲ. ಚುನಾವಣೆ, ನೀತಿ ಸಂಹಿತೆ ಇರುವ ಕಾರಣ ಅದ್ಧೂರಿಯಾಗಿ ಮೊಮ್ಮಕ್ಕಳ ಹುಟ್ಟು ಹಬ್ಬ ಮಾಡದಂತೆ ಯೋಚಿಸಿದ್ದೆ, ಸರಳ ಆಚರಣೆಗೆ ನಿರ್ಧರಿಸಿದ್ದೆ. ಅಷ್ಟರಲ್ಲಾಗಲೇ ದಾಳಿ ನಡೆಸಿದೆ ಎಂದು ಅವರು ಹೇಳಿದರು.
ಈ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಬಹುಮತ ಬರಲಿದೆ ಎಂದು ಕಾಂಗ್ರೆಸ್ ಸಹಿಸಲಾರದೇ ಹೀಗೆ ಮಾಡಿದೆ ಎಂದು ಚುನಾವಣಾಧಿಕಾರಿಗಳ ದಾಳಿ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.












Click it and Unblock the Notifications