ಚಳಿಗಾಲದಲ್ಲಿ ಹೃದಯ ಬಡಿತ, ಉಸಿರಾಟ ನಿಲ್ಲಿಸುವ ಈ ವಿಶಿಷ್ಟ ಕಪ್ಪೆ : ಸೂರ್ಯನ ಶಾಖ ತಾಗಿದರೆ ಸಾಕು ಮರುಜೀವ ಪಡೆಯುತ್ತದೆ
ಚಳಿಗಾಳ ಬಂದರೆ ಸಾಕು ಹೃದಯ ಬಡಿತವಿಲ್ಲ, ಉಸಿರಾಟವಿಲ್ಲ, ಕಲ್ಲಿನಷ್ಟು ಗಟ್ಟಿಯಾದ ದೇಹ. ಇದು ಸಾಮಾನ್ಯ ಕಪ್ಪೆ ಅಲ್ಲ, ಅಲಾಸ್ಕಾ ಮತ್ತು ಕೆನಡಾದ ಕಾಡುಗಳಲ್ಲಿ ಕಂಡುಬರುವ ವುಡ್ ಫ್ರಾಗ್. ಚಳಿಗಾಲದಲ್ಲಿ ತಿಂಗಳುಗಳ ಕಾಲ ನಿರ್ಜೀವ ಮಂಜುಗಡ್ಡೆಯ ತುಂಡಾಗಿ ಉಳಿಯುತ್ತದೆ ಈ ಕಪ್ಪೆ. ಹವಾಮಾನ ಬದಲಾದ ತಕ್ಷಣ, ಅದು ಮತ್ತೆ ಜೀವಂತವಾಗಿ ಜಿಗಿಯಲು ಪ್ರಾರಂಭಿಸುತ್ತದೆ. ಪ್ರಕೃತಿಯ ಈ ವಿಶಿಷ್ಟ ಪವಾಡ ವಿಜ್ಞಾನವನ್ನೂ ಬೆರಗುಗೊಳಿಸುತ್ತದೆ.
ಕೆನಡಾ ಮತ್ತು ಅಲಾಸ್ಕಾದ ಮರಗಟ್ಟಿಸುವ ಚಳಿಯಲ್ಲಿ, ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾದಾಗ, ವುಡ್ ಫ್ರಾಗ್‌ನ ಬದುಕುಳಿಯುವ ವಿಧಾನವು ಕಾರ್ಯರೂಪಕ್ಕೆ ಬರುತ್ತದೆ. ಈ ಕಪ್ಪೆ ಚಳಿಯಿಂದ ತಪ್ಪಿಸಿಕೊಳ್ಳಲು ಎಲ್ಲಿಯೂ ಅಡಗಿಕೊಳ್ಳುವುದಿಲ್ಲ. ಬದಲಿಗೆ ತನ್ನ ಎದೆಯನ್ನು ಮೇಲಕ್ಕೆತ್ತಿ ಶೀತವನ್ನು ಎದುರಿಸುತ್ತದೆ. ಹಿಮ ಬಿದ್ದಾಗ, ಅದರ ದೇಹದ ಸರಿಸುಮಾರು ಮೂರನೇ ಎರಡರಷ್ಟು ನೀರು ಮಂಜುಗಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಈ ಸಮಯದಲ್ಲಿ, ಅದರ ಹೃದಯ ಬಡಿತ ಸಂಪೂರ್ಣವಾಗಿ ನಿಲ್ಲುತ್ತದೆ. ಉಸಿರಾಟವೂ ನಿಂತು ಹೋಗುತ್ತದೆ. ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸುತ್ತದೆ. ಮೇಲ್ನೋಟಕ್ಕೆ ನೋಡಿದರೆ, ಈ ಕಪ್ಪೆ ಸತ್ತು ಬಿದ್ದಿದೆ ಎಂದೇ ಅನ್ನಿಸುವುದು.

ದೇಹದಲ್ಲಿ ನೈಸರ್ಗಿಕ ಆಂಟಿಫ್ರೀಜ್‌ನ ರಹಸ್ಯ:
ಯಾವುದೇ ಸಾಮಾನ್ಯ ಜೀವಿ ಈ ರೀತಿ ಹೆಪ್ಪುಗಟ್ಟಿದರೆ, ಅದರ ಜೀವಕೋಶಗಳು ಸಿಡಿದು ಅದು ಸಾಯುತ್ತದೆ. ಆದರೆ, ಕಪ್ಪೆಗೆ ಒಂದು ರಹಸ್ಯ ಜೈವಿಕ ಆಯುಧವಿದೆ. ಅದರ ದೇಹದ ಸುತ್ತಲೂ ಮಂಜುಗಡ್ಡೆ ರೂಪುಗೊಳ್ಳಲು ಪ್ರಾರಂಭಿಸಿದ ತಕ್ಷಣ, ಅದರ ಯಕೃತ್ತು ಹೆಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ (ಸಕ್ಕರೆ) ಮತ್ತು ಯೂರಿಯಾವನ್ನು ಬಿಡುಗಡೆ ಮಾಡುತ್ತದೆ. ಈ ಗ್ಲೂಕೋಸ್ ಮತ್ತು ಯೂರಿಯಾ ಅದರ ಅಂಗಗಳಿಗೆ ನೈಸರ್ಗಿಕ ಆಂಟಿಫ್ರೀಜ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ರಾಸಾಯನಿಕ ಸಂಯೋಜನೆಯು ಜೀವಕೋಶಗಳ ಒಳಗೆ ಮಂಜುಗಡ್ಡೆ ರೂಪುಗೊಳ್ಳುವುದನ್ನು ತಡೆಯುತ್ತದೆ. ಕಪ್ಪೆಯ ಆಂತರಿಕ ಅಂಗಗಳನ್ನು ಸಂಪೂರ್ಣವಾಗಿ ಸುರಕ್ಷಿತವಾಗಿರಿಸುತ್ತದೆ.
ಎಲೆಗಳ ಕೆಳಗೆ ತಿಂಗಳುಗಟ್ಟಲೆ ಮಲಗುವುದು:
ಚಳಿಗಾಲದುದ್ದಕ್ಕೂ, ಈ ಕಪ್ಪೆ ಕಾಡಿನಲ್ಲಿ, ಬಿದ್ದ ಎಲೆಗಳು ಮತ್ತು ಹಿಮದ ಹೊದಿಕೆಗಳ ಕೆಳಗೆ ನಿರ್ಜೀವವಾಗಿ ಮಲಗಿರುತ್ತದೆ. ವಾರಗಳು ಮತ್ತು ತಿಂಗಳುಗಳ ಕಾಲ, ಅದು ತನ್ನ ಸಮಯವನ್ನು ಈ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಕಳೆಯುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಹೇಳುವುದಾದರೆ ಈ ಕಪ್ಪೆಯ ಜೀವನದ ಸ್ಥಿತಿ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಆದರೆ, ಅದು ಕೊನೆಯಾಗುವುದಿಲ್ಲ. ಬಿರುಗಾಳಿಯಾಗಿರಬಹುದು ಅಥವಾ ಮೈ ಕೊರೆಯುವ ಚಳಿಯಾಗಿರಬಹುದು, ಈ ಪುಟ್ಟ ಜೀವಿಯು ಅಚಲವಾಗಿ ಉಳಿಯುತ್ತದೆ.
ವಸಂತ ಸೂರ್ಯ ಮತ್ತು ಹೊಸ ಜೀವನ:
ಚಳಿಗಾಲ ಮುಗಿದು ವಸಂತಕಾಲ ಬರುತ್ತಿದ್ದಂತೆ, ಪ್ರಕೃತಿಯ ನಿಜವಾದ ಮ್ಯಾಜಿಕ್ ಪ್ರಾರಂಭವಾಗುತ್ತದೆ. ತಾಪಮಾನ ಹೆಚ್ಚಾದಂತೆ, ಕಪ್ಪೆಯ ದೇಹದ ಮೇಲಿನ ಮಂಜುಗಡ್ಡೆ ಕರಗಲು ಪ್ರಾರಂಭಿಸುತ್ತದೆ. ಮೊದಲನೆಯದಾಗಿ, ಅದರ ಹೃದಯ ಮತ್ತೆ ಬಡಿಯಲು ಪ್ರಾರಂಭಿಸುತ್ತದೆ, ಅದರ ದೇಹದಾದ್ಯಂತ ರಕ್ತ ಪರಿಚಲನೆಯುವ ಕೆಲಸ ಶುರು ಮಾಡುತ್ತದೆ. ಕೆಲವು ಗಂಟೆಗಳಲ್ಲಿ, ಈ ವಿಶಿಷ್ಟ ಜೀವಿ ತನ್ನ ಕಣ್ಣುಗಳನ್ನು ತೆರೆದು ಏನೂ ಆಗಿಯೇ ಇಲ್ಲ ಎಂಬಂತೆ ಜಿಗಿಯಲು ಪ್ರಾರಂಭಿಸುತ್ತದೆ. ಎಚ್ಚರವಾದ ನಂತರ, ಅದು ಆಹಾರ ಮತ್ತು ಸಂಗಾತಿಯನ್ನು ಹುಡುಕುವ ಕೆಲಸಕ್ಕೆ ಮುಂದಾಗುತ್ತದೆ.
ಮಾನವ ವೈದ್ಯಕೀಯ ವಿಜ್ಞಾನದ ಭರವಸೆ:
ಈ ಪುಟ್ಟ ಕಪ್ಪೆಯ ಈ ವಿಶಿಷ್ಟ ಸಾಮರ್ಥ್ಯವು ವರ್ಷಗಳಿಂದ ವಿಜ್ಞಾನಿಗಳಿಗೆ ಸಂಶೋಧನೆಯ ಪ್ರಮುಖ ವಿಷಯವಾಗಿದೆ. ವುಡ್ ಫ್ರಾಗ್‌ನ ಈ ನೈಸರ್ಗಿಕ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದರಿಂದ ಮಾನವ ವೈದ್ಯಕೀಯ ವಿಜ್ಞಾನದಲ್ಲಿ ಕ್ರಾಂತಿಯುಂಟಾಗಬಹುದು ಎನ್ನುವುದು ವಿಜ್ಞಾನಿಗಳ ನಂಬಿಕೆ. ಅಂಗಾಂಗ ಕಸಿ ಸಮಯದಲ್ಲಿ ಮಾನವ ಅಂಗಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸುವಲ್ಲಿ ಮತ್ತು ಕ್ರಯೋಬಯಾಲಜಿ ಕ್ಷೇತ್ರದಲ್ಲಿ ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಇದು ಹೆಚ್ಚಿನ ಸಹಾಯ ಮಾಡಬಹುದು.
(ಬರಹ: ರಂಜಿತಾ ಆರ್.ಕೆ.)













Click it and Unblock the Notifications