ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
ಮೈಸೂರು: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಮತ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ನಾನಾ ತಂತ್ರಗಳ ಮೊರೆ ಹೋಗಿದೆ. ಇದೀಗ ಮೈಸೂರಿನ ಹೋಟೆಲ್, ಗ್ಯಾಸ್ ಏಜೆನ್ಸಿ, ಪ್ರವಾಸಿತಾಣಗಳ ಮಾಲೀಕರು ವೋಟ್ ಮಾಡಿದರೆ ರಿಯಾಯಿತಿ ಕೊಡುವುದಾಗಿ ಘೋಷಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರುಚಿಯಾದ ಚೌಚೌ ಬಾತ್ ಅನ್ನು ಉಚಿತವಾಗಿ ತಿನ್ನ ಬನ್ನಿ. ಕಡಿಮೆ ದರದಲ್ಲಿ ಕಾಫಿ-ಟೀ ಕುಡಿಯಿರಿ. ಉಚಿತವಾಗಿ ದಂತ ತಪಾಸಣೆ ಮಾಡಿಕೊಡಿಸಿಕೊಳ್ಳಿ ಎಂಬ ಜಾಗೃತಿ ಫಲಕಗಳು ಎಲ್ಲೆಡೆ ರಾರಾಜಿಸುತ್ತಿವೆ.

ಏನೇನು ಆಫರ್ ಇದೆ ಗೊತ್ತಾ?
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮರಳಿನ ಮ್ಯೂಸಿಯಂ ಇದೆ. ಇದರ ಮಾಲೀಕರಾದ ಕಲಾವಿದೆ ಎಂ.ಎನ್.ಗೌರಿ ಅವರು, ಮತದಾನ ಮಾಡಿ ಬರುವ ಪ್ರವಾಸಿಗರಿಗೆ ಟಿಕೆಟ್ ದರದಲ್ಲಿ ಶೇ. 30ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
ಉಚಿತ ಚೌಚೌ ಬಾತ್ ವಿತರಣೆ
ನಜರ್‌ಬಾದ್‌ನಲ್ಲಿರುವ ದಕ್ಷಿಣ ಪಾಕ ಹೋಟೆಲ್‌ನಲ್ಲಿ ಬೆಳಗ್ಗೆ 7 ರಿಂದ ಸಂಜೆ 4ರವರೆಗೆ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಚೌಚೌ ಬಾತ್ ನೀಡಲಾಗುತ್ತದೆ.
ಸಾಕಷ್ಟು ಪ್ರಸಿದ್ಧಿಯಾಗಿರುವ ಹೋಟೆಲ್ ಹನುಮಂತುವಿನಲ್ಲಿ ಊಟದ ಬಿಲ್‌ನಲ್ಲಿ ಶೇ. 10ರಷ್ಟು ರಿಯಾಯಿತಿ ಕೊಡುವುದಾಗಿ ಹೋಟೆಲ್ ಮಾಲೀಕರಾದ ಗೀತಾ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಟೀ ಅಂಗಡಿಯಲ್ಲಿ ಡಿಸ್ಕೌಂಟ್
ನಾರಾಯಣ ಶಾಸಿ ರಸ್ತೆಯಲ್ಲಿರುವ ಪುಣೇರಿ ಶ್ರೀಮಾನ್ ಚಹಾದಂಗಡಿಯಲ್ಲಿ ಟೀ, ಕಾಫಿ ಕುಡಿದರೆ ಶೇ. 20 ರಿಯಾಯಿತಿ ಸಿಗಲಿದೆ. "ವೋಟ್ ಹಾಕಿ ಬಂದ ಗ್ರಾಹಕ, ಮತದಾನದ ಗುರುತು ತೋರಿದರೆ 20 ರೂ. ಟೀ ಯನ್ನು 16 ರೂ.ಗೆ ನೀಡಲಾಗುವುದು" ಎನ್ನುತ್ತಾರೆ ಚಹಾದಂಗಡಿ ಮಾಲೀಕ ಶಶಿಕಾಂತ್ ಪುಣೇರಿ.
ಉಚಿತ ದಂತ ತಪಾಸಣೆ
"ಮತದಾನ ಮಾಡಿದ ಬಳಿಕ ಕ್ಲಿನಿಕ್‌ಗೆ ಬರುವ ಜನರು, ಅಳಿಸಲಾಗದ ಶಾಹಿ ಗುರುತನ್ನು ತೋರಿಸಿದರೆ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಈ ಸೌಲಭ್ಯವನ್ನು ಮೇ 10ರವರೆಗೆ ನೀಡಲಾಗುವುದು ಎನ್ನುತ್ತಾರೆ ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಅನಿಫೌಂಡೇಷನ್ ಅಧ್ಯಕ್ಷೆ ಡಾ.ಎನ್.ಅನುಶ್ರೀ.
ಗ್ಯಾಸ್ ಏಜೆನ್ಸಿ
ನಗರದ ಹೆಬ್ಬಾಳು ರಿಂಗ್ ರಸ್ತೆಯಲ್ಲಿನ ಅಮರ್ ದೀಪ್ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಸ್ಟೌ ಖರೀದಿ ಮೇಲೆ 500 ರೂ. ರಿಯಾಯಿತಿ ಘೋಷಣೆ ಮಾಡಿದೆ. ಮತದಾನ ಮಾಡುವ ರಾಜ್ಯದ ನಿವಾಸಿಗಳೊಂದಿಗೆ ನೆರೆಯ ರಾಜ್ಯದ ನಿವಾಸಿಗಳಿಗೂ ಅನುಕೂಲವಾಗುವಂತೆ ಏ. 26ರಿಂದ ಜೂ. 4ರವರೆಗೆ ಈ ವಿಶೇಷ ಅವಕಾಶವನ್ನು ಮತದಾನ ಮಾಡಿದ ಮತದಾರರಿಗೆ ಕಲ್ಪಿಸಲಾಗಿದೆ.












Click it and Unblock the Notifications