ಮೈಸೂರು-ಕೊಡಗು ಲೋಕ ಅಖಾಡದಲ್ಲಿ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ?
ಮೈಸೂರು, ಏಪ್ರಿಲ್ 24: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕೆಂದು ಕಾಂಗ್ರೆಸ್ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಕಾಂಗ್ರೆಸ್‌ನ ಪ್ರಭಾವಿ ಒಕ್ಕಲಿಗ ನಾಯಕ ಡಾ.ಸುಶ್ರುತ್ ಗೌಡ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಇಂತಹದೊಂದು ಬೆಳವಣಿಗೆ ಕಾಂಗ್ರೆಸ್ ಗೆ ಆಘಾತ ನೀಡಿದೆ.
ಕಾಂಗ್ರೆಸ್ ಮೈಸೂರು ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವ ಸಲುವಾಗಿ ಒಕ್ಕಲಿಗ ಅಸ್ತ್ರವನ್ನು ಬಳಸುವ ಪ್ರಯತ್ನ ಮಾಡಿತ್ತು. ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದೆ ಒಕ್ಕಲಿಗ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂಬಂತಹ ಮಾತುಗಳನ್ನಾಡುವ ಮೂಲಕ ಬಿಜೆಪಿ ಒಕ್ಕಲಿಗ ವಿರೋಧಿ ಎಂಬಂತೆ ಬಿಂಬಿಸುವ ಕೆಲಸವನ್ನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಮಾಡಿದ್ದರು.

ಆ ಮೂಲಕ ಒಕ್ಕಲಿಗರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ತಂತ್ರಗಳನ್ನು ರೂಪಿಸಿದ್ದರು. ಕಾಂಗ್ರೆಸ್ ಒಕ್ಕಲಿಗರ ಪರವಾಗಿದ್ದು, ಒಕ್ಕಲಿಗ ಅಭ್ಯರ್ಥಿಗೆ ನಾವು ಟಿಕೆಟ್ ನೀಡಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಅಭ್ಯರ್ಥಿ ಎಂ.ಲಕ್ಷ್ಮಣ್ ಹೆಸರಿನ ಮುಂದೆ ಲಕ್ಷ್ಮಣ ಗೌಡ ಎಂದು ಸೇರಿಸಿ ಪ್ರಚಾರ ನಡೆಸಿದರು. ಇಷ್ಟೇ ಅಲ್ಲದೆ ಕೊಡಗಿನಲ್ಲಿ ಗೌಡ ಸಮುದಾಯ ಪ್ರಾಬಲ್ಯವಿರುವ ಕಾರಣ ಅಲ್ಲಿ ಡಿ.ಕೆ.ಶಿವಕುಮಾರ್ ಸಭೆ ನಡೆಸುವಂತೆ ಮಾಡಿ ಮತ ಸೆಳೆಯುವ ಪ್ರಯತ್ನವನ್ನು ಮಾಡಿದ್ದರು.
ಶ್ರಮವೆಲ್ಲವೂ ನದಿಯಲ್ಲಿ ಕೊಚ್ಚಿ ಹೋಯ್ತಾ?
ಚುನಾವಣೆ ಆರಂಭದಿಂದಲೂ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕರು ಹೇಗಾದರೂ ಮಾಡಿ ಒಕ್ಕಲಿಗ ಮತಗಳನ್ನು ಸೆಳೆದುಕೊಂಡಿದ್ದೇ ಆದರೆ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಆದರೀಗ ಪ್ರಭಾವಿ ಒಕ್ಕಲಿಗ ನಾಯಕ ಡಾ.ಸುಶ್ರುತ್ ಗೌಡ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ಇಷ್ಟು ದಿನಗಳ ಕಾಲ ಒಕ್ಕಲಿಗ ಮತವನ್ನು ಸೆಳೆಯಲು ಪಟ್ಟ ಶ್ರಮವೆಲ್ಲವೂ ಕಾವೇರಿ ನದಿಯಲ್ಲಿ ಕೊಚ್ಚಿ ಹೋದಂತಾಗಿದೆ.

ಹಾಗೆನೋಡಿದರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಡಜನ್ ಗಟ್ಟಲೆ ನಾಯಕರು ಮುಗಿಬಿದ್ದಿದ್ದರು. ಅವರ ಪೈಕಿ ಡಾ.ಸುಶ್ರುತ್ ಗೌಡ ಕೂಡ ಒಬ್ಬರಾಗಿದ್ದರು. ಇವರು ಕಳೆದ ವಿಧಾನ ಸಭಾ ಚುನಾವಣೆ ಕಳೆಯುತ್ತಿದ್ದಂತೆಯೇ ಅಖಾಡಕ್ಕೆ ಇಳಿದಿದ್ದರು. ನಾನು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿ ಎಂಬುದನ್ನು ಬೇರೆ ಬೇರೆ ರೀತಿಯಲ್ಲಿ ಬಿಂಬಿಸಿದ್ದರು.
ಕಮಲ ಮುಡಿದ ಡಾ.ಸುಶ್ರುತ್ ಗೌಡ
ಆದರೆ ಡಜನ್ ಗಟ್ಟಲೆ ಆಕಾಂಕ್ಷಿಗಳು ಇದ್ದಿದ್ದರಿಂದ ಯಾರಿಗೂ ರಾಜ್ಯ ನಾಯಕರು ಸೊಪ್ಪು ಹಾಕದೆ, ಕೆಪಿಸಿಸಿ ವಕ್ತಾರರಾಗಿದ್ದ ಎಂ.ಲಕ್ಷ್ಮಣ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದರು. ಇದಾದ ನಂತರ ಆಕಾಂಕ್ಷಿಗಳು ತೆರೆಮರೆಗೆ ಸರಿದಿದ್ದು, ಆ ಪೈಕಿ ಗುರುಪಾದಸ್ವಾಮಿ ಎಂಬುವರು ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದರೆ, ಇದೀಗ ಡಾ.ಸುಶ್ರುತ್ ಗೌಡ ಕಮಲ ಮುಡಿದಿದ್ದಾರೆ. ಉಳಿದಂತೆ ಕೆಲವು ಆಕಾಂಕ್ಷಿಗಳು ತಟಸ್ಥರಾಗಿದ್ದಾರೆ. ಇದು ಕಾಂಗ್ರೆಸ್ ಗೆ ಹಿನ್ನಡೆಯಾದರೂ ಅಚ್ಚರಿಯಿಲ್ಲ.
ಮೈಸೂರು ಕೊಡಗು ಲೋಕಸಭಾ ಅಖಾಡದಲ್ಲಿ ಕೊಡಗಿನಿಂದ ಬೀಳಲಿರುವ ಮತಗಳು ನಿರ್ಣಾಯಕವಾಗಿವೆ ಎಂದರೆ ತಪ್ಪಾಗಲಾರದು. ಇಲ್ಲಿನ ಬಹುತೇಕರು ಪಕ್ಷವನ್ನು ನೋಡಿ ಮತಹಾಕುವುದರಿಂದ ಅದರಲ್ಲೂ ಪ್ರಾಬಲ್ಯವಿರುವ ಅರೆಗೌಡ ಸಮುದಾಯ ಬಿಜೆಪಿಯೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿರುವುದರಿಂದ ಅವರನ್ನು ಸೆಳೆಯುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ಮಾಡಿದ್ದಾರೆ.

ಒಕ್ಕಲಿಗ ನಾಯಕನಿಗೆ ಬಿಜೆಪಿ ಗಾಳ
ಕೊಡಗಿನ ಗೌಡ ಫೆಡರೇಶನ್ ಪ್ರಮುಖರಾದ ಸೂರ್ತಲೆ ಸೋಮಣ್ಣನವರ ಮೂಲಕ ಸಭೆಯನ್ನು ನಡೆಸಿ ಅರೆ ಭಾಷೆ ಗೌಡ ಮತ್ತು ಒಕ್ಕಲಿ ಗೌಡ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಇಲ್ಲಿ ಒಕ್ಕಲಿಗ ಗೌಡರಿಗಿಂತ ಹೆಚ್ಚಾಗಿ ದಕ್ಷಿಣಕನ್ನಡ ಮೂಲದ ಅರೆಗೌಡರು ಹೆಚ್ಚು ಪ್ರಾಬಲ್ಯ ಹೊಂದಿದ್ದು ಅವರನ್ನು ಕಾಂಗ್ರೆಸ್ ನತ್ತ ಓಲೈಸುವ ಕೆಲಸ ಮಾಡಲಾಗಿತ್ತು.
ಈಗಾಗಲೇ ಮೈಸೂರು ಕೊಡಗು ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ದಲಿತ ಮತಗಳೊಂದಿಗೆ ಒಂದಷ್ಟು ಮಹಿಳಾ ಮತಗಳು ಕಾಂಗ್ರೆಸ್ ನ ಕೈಹಿಡಿಯಲಿದ್ದು, ಇದರ ಜತೆಗೆ ಒಕ್ಕಲಿಗ ಮತ್ತು ಅರೆಗೌಡ ಸಮಾಜದ ಒಂದಷ್ಟು ಮತಗಳು ಕಾಂಗ್ರೆಸ್ ಗೆ ಬಿದ್ದರೆ ಸುಲಭವಾಗಿ ಗೆಲ್ಲಬಹುದು ಎಂಬುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ. ಹೀಗಾಗಿಯೇ ಒಕ್ಕಲಿಗ ಸಮುದಾಯದ ಬಗ್ಗೆಯೇ ಹೆಚ್ಚು ಮಾತನಾಡಿದ್ದರು. ಆದರೀಗ ಬಿಜೆಪಿ ನಾಯಕರು ಕಾಂಗ್ರೆಸ್ ನಲ್ಲಿದ್ದ ಒಕ್ಕಲಿಗ ನಾಯಕರಿಗೆ ಗಾಳ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.
ಕೊಡವ ಸಮುದಾಯದ ಚಿತ್ತ ಯಾರತ್ತ?
ಇದೆಲ್ಲದರ ನಡುವೆ ಕೊಡಗಿನ ಪ್ರಮುಖ ಸಮುದಾಯವಾಗಿರುವ ಕೊಡವರು ಯಾರ ಕಡೆಗೆ ಒಲವು ತೋರುತ್ತಾರೆ ಎಂಬುದೇ ಬಹುಮುಖ್ಯ ಪ್ರಶ್ನೆಯಾಗಿದೆ. ಜಾತಿ, ಸಮುದಾಯವನ್ನು ಲೆಕ್ಕಿಸದೆ ಕೊಡಗಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾ ಬರಲಾಗಿತ್ತು. ಆದರೆ ಕಳೆದ ಬಾರಿ ಕಾಂಗ್ರೆಸ್ ಗೆಲ್ಲಲು ಸಹಕಾರಿಯಾಗಿದ್ದು ಕೊಡವ ಸಮುದಾಯದ ನಾಯಕ ಸಂಕೇತ್ ಪೂವಯ್ಯ. ಅವರು ಚುನಾವಣೆಗೆ ಹತ್ತಿರವಿರುವಾಗಲೇ ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.
ಅವರ ಮೂಲಕ ಸುಮಾರು ಹನ್ನೊಂದು ಸಾವಿರ ಮತಗಳು ಕಾಂಗ್ರೆಸ್ ಗೆ ಬರುವುದರೊಂದಿಗೆ ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿತ್ತು. ಆದರೀಗ ಸಂಕೇತ್ ಪೂವಯ್ಯ ತಟಸ್ಥವಾಗಿರುವುದು ಕೂಡ ಬಿಜೆಪಿ ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅದು ಏನೇ ಇರಲಿ ಕೊಡಗಿನಲ್ಲಿ ಬೀಳುವ ಮತಗಳು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.












Click it and Unblock the Notifications