Karnataka Rains: ರಾಜ್ಯಕ್ಕೆ ಮುಂಗಾರು ಕಂಬ್ಯಾಕ್, 13 ಜಿಲ್ಲೆಗಳಿಗೆ ಭಾರೀ ಮಳೆ-ಯೆಲ್ಲೋ ಅಲರ್ಟ್: ಐಎಂಡಿ
Karnataka Weather: ಕರ್ನಾಟಕ ರಾಜ್ಯಾದ್ಯಂತ ಮತ್ತೆ ಮುಂಗಾರು ಚುರುಕುಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ್ದು, ಕರಾವಳಿ, ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಜೂನ್ 28ರವರೆಗೆ ಗುಡುಗು, ಮಿಂಚು ಸಹಿತ ಜೋರು ಮಳೆ ಆಗಲಿದ್ದು, ಹವಾಮಾನ ಇಲಾಖೆ 10ಕ್ಕೂ ಅಧಿಕ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.
ಮುಂಗಾರು ಆರಂಭದಲ್ಲಿಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆ, ಕಳೆದ ಎರಡು ವಾರಗಳಿಂದ ದುರ್ಬಲಗೊಂಡಿತ್ತು. ಮುಂಗಾರು ಬಿತ್ತನೆ ಮಾಡಿದ್ದ ರೈತರಲ್ಲಿ ಆತಂಕ ಉಂಟಾಗಿತ್ತು. ಇದೀಗ ಮತ್ತೆ ಮುಂಗಾರು ಮಳೆ ಕರಾವಳಿ ಹಾಗೂ ಉತ್ತರ ಕರ್ನಾಟಕದ ಹಲವೆಡೆ ಆರ್ಭಟಿಸುವ ಮುನ್ಸೂಚನೆ ನೀಡಿದೆ. ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಉತ್ತಮ ಮಳೆ ನಿರೀಕ್ಷೆ ಇದೆ.

ಜೂನ್ 23ರಂದು ನಾಳೆ ಮಂಗಳವಾರ ರಾಜ್ಯದ 13 ಜಿಲ್ಲೆಗಳಲ್ಲಿ ಸಾಧರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿಯ ಉಡುಪಿ,ದಕ್ಷಿಣ ಕನ್ನಡ ಹಾಗೂ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಕನಿಷ್ಠ 65 ಮಿಲಿ ಮೀಟರ್ ನಿಂದ 115 ಮಿಲಿ ಮೀಟರ್ ವರೆಗೆ ಭಾರೀ ಮಳೆ ಆಗಲಿದ್ದು, ಒಂದು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬಿಸಿಲಿಗೆ ತತ್ತರಿಸಿರುವ ಜನತೆಗೆ ತಾತ್ಕಾಲಿಕ ಮಳೆ ಕೊಂಚ ನಿರಾಳತೆ ತರುವ ಜೊತೆಗೆ ಬಿಸಿಲಿಗೆ ಬಾಡಿದ ಮುಂಗಾರು ಹಂಗಾಮಿಗೆ ತುಸು ಜೀವ ಒದಗಿಸಲಿದೆ.
ಕರಾವಳಿಯಲ್ಲಿ ವಾರದವರೆಗೂ ಮಳೆ
ಒಳನಾಡು ಹಾಗೂ ಮಲೆನಾಡಿನಲ್ಲಿ ಜೂನ್ 23ರಂದು ಒಂದು ದಿನ ಮಾತ್ರವೇ ಧಾರಾಕಾರ ಮಳೆ ಆಲಿದ್ದು, ಉಳಿದೆಡೆ ಒಣಹವೆ, ತೀವ್ರ ಬಿಸಿಲಿನ ಶಾಖ ಮುಂದುವರಿಯಲಿದೆ. ಹಾವೇರಿ, ಕೊಪ್ಪಳ, ಗದಗ, ರಾಯಚೂರು, ಕಲಬುರಗಿ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಬೇಸಿಗೆ ಅನುಭವ ಮುಂದುವರಿಯಲಿದೆ. ಇತ್ತ ಕರ್ನಾಟಕ ಕರಾವಳಿಯಲ್ಲಿ ಜೂನ್ 28ರವರೆಗೆ ಭರ್ಜರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.
ಇನ್ನೂ ಜೂನ್ 26ರಂದು ಒಂದು ದಿನ ಕಲಬುರಗಿ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಂದು ದಿನ ಭಾರೀ ಮಳೆ ಆಗಲಿದ್ದು, ಅಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇದರ ಹೊರತಾಗಿ ಉಳಿದೆಡೆ ಅಧಿಕ ಬಿಸಿಲು ಕಂಡು ಬರಲಿದೆ. ಮುಂದಿನ ಐದು ದಿನ ಇದೇ ರೀತಿಯ ಮಳೆ ಪೂರಕ ಹವಾಮಾನ ವಾತಾವರಣ ಇದ್ದಲ್ಲಿ ನಿರೀಕ್ಷೆಯಂತೆ ಮಳೆ ಆಗಲಿದೆ. ಒಂದು ವೇಳೆ ದಿಢೀರ್ ಏನಾದರೂ ಪರಿಸ್ಥಿತಿ ಬದಲಾದಲ್ಲಿ ಮತ್ತೆ ಮಳೆ ಕ್ಷೀಣಿಸುವ ಸಾಧ್ಯತೆಯೂ ಇದೆ.
ಇನ್ನೂ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಆಗಾಗ ಜೋರು ಮಳೆ ಆಗುತ್ತಿದೆ. ಹಗಲು ಹೆಚ್ಚು ಬಿಸಲಿನಿಂದ ಕೂಡಿದ್ದು, ಆಗಾಗ ಮಳೆ ಆಗುತ್ತಿದೆ. ಮಬ್ಬು ಕವಿದ ತಂಪು ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿನ ಪ್ರಯಾಣ ಕೊಂಚ ತಗ್ಗಿದೆ.
ರಾಜ್ಯದಲ್ಲಿ ಗರಿಷ್ಠ ತಾಪಮಾನದ 39 ಡಿ.ಸೆ.ಗೆ ಏರಿಕೆ
ರಾಜ್ಯದ ಬಹುತೇಕ ಭಾಗಗಳಲ್ಲಿ ಎರಡು ವಾರಗಳಿಂದ ಬೇಸಿಗೆಯ ಬಿಸಿಲಿನ ಅನುಭವವಾಗುತ್ತಿದೆ. ಗರಿಷ್ಠ ತಾಪಮಾನದಲ್ಲೂ ಏರಿಕೆ ಕಂಡು ಬಂದಿದೆ. ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ದಾಖಲಾಗಿದೆ. ಉಳಿದಂತೆ ತುಮಕೂರು (ಚಿಕ್ಕನಹಳ್ಳಿ) 38, ಕೊಪ್ಪಳದಲ್ಲಿ 38 ಡಿಗ್ರಿ ಸೆಲ್ಸಿಯಸ್, ಬೀದರ್ ನಲ್ಲಿ 36 ಡಿಗ್ರಿ ಸೆಲ್ಸಿಯಸ್, ರಾಯಚೂರು ಮತ್ತು ಬೀದರ್ ನಲ್ಲಿ ತಲಾ 36 ಡಿಗ್ರಿ ಸೆಲ್ಸಿಯಸ್, ವಿಜಯಪುರ ಮತ್ತು ಬಳ್ಳಾರಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿ ಉರಿಬಿಸಿಲಿನ ಅನುಭವವಾಗಿದೆ. ರೈತರು ಮಳೆಗೆ ಕಾಯುತ್ತಿದ್ದಾರೆ. ಸಾರ್ವಜನಿಕರು ಬಿಸಿಲಿಗೆ ಪರದಾಡುವಂತಾಗಿದೆ. ಮಳೆಗಾಲದ ಅನುಭವವೇ ಆಗುತ್ತಿಲ್ಲ.
ಬಿತ್ತನೆಗೆ ಭಾರೀ ಹಿನ್ನಡೆ
ಪೂರ್ವ ಮುಂಗಾರು ಮಳೆ ಪೂರಕ ವಾತಾವರಣ ನಿರ್ಮಿಸುತ್ತಿದ್ದಂತೆ ಜೂನ್ ಮೊದಲ ಮತ್ತು ಎರಡನೇ ವಾರ ರಾಜ್ಯದಲ್ಲಿ ಬಿತ್ತನೆ ಕಂಡು ಬಂದಿದೆ. ಆದರೆ ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಬಿತ್ತನೆಯೇ ಆಗಿಲ್ಲ. ಸರಿಯಾಗಿ ಮುಂಗಾರು ಆರಂಭವಾಗದ ಕಾರಣ, ಬರಗಾಲದ ಮುನ್ಸೂಚನೆ ಹಿನ್ನೆಲೆ ಬಿತ್ತನೆ ಕೈ ಬಿಟ್ಟಿದ್ದಾರೆ. ಇದು ಈ ಬಾರಿ ಕೃಷಿ ಉತ್ಪನ್ನಕ್ಕೆ ಭಾರೀ ಹೊಡೆತ ನೀಡಲಿದೆ. ಇನ್ನೂ ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದ ರೈತರಿಗೆ ಮಳೆಗಾಗಿ ಕಾಯುವಂತಾಗಿದೆ. ಈ ಭಾರಿಯ ಮಳೆ ಕೊರತೆ, ಬರಗಾಲವು ರಾಜ್ಯದ ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ.













Click it and Unblock the Notifications