Yaduveer Wadiyar: ಒಕ್ಕಲಿಗರು ಕೈಕೊಟ್ಟ ಬೆನ್ನಲ್ಲೆ ಯದುವೀರ್ ಒಡೆಯರ್‌ಗೆ ಮತ್ತೊಂದು ಸಂಕಷ್ಟ!
ಮೈಸೂರು, ಏಪ್ರಿಲ್. 21: ಬಿಜೆಪಿಯ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಲಂಚ ನೀಡಿದ್ದಾರೆ ಎಂಬ ಆರೋಪದ ಮೇಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಶನಿವಾರ ಪತ್ರ ಬರೆದಿರುವ ಕೆಪಿಸಿಸಿ, ಯದುವೀರ್ ಒಡೆಯರ್ ಅವರು ಮಾದರಿ ನೀತಿ ಸಂಹಿತೆ ಅತಿಯಾಗಿ ಉಲ್ಲಂಘಿಸುವ ಕೆಲಸಗಳಲ್ಲಿ ತೊಡಗಿದ್ದಾರೆ. ಇದು ಚುನಾವಣಾ ಪ್ರಕ್ರಿಯೆಯ ನ್ಯಾಯಸ ಮ್ಮತತೆ ಮತ್ತು ಪಾರದರ್ಶಕತೆಗೆ ತೀವ್ರ ಅಪಾಯ ಉಂಟುಮಾಡುತ್ತದೆ ಎಂದು ಆರೋಪಿಸಿದೆ.

"ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಅವರ ಬೆಂಬಲ ಮತ್ತು ಪ್ರಭಾವವನ್ನು ಬಳಸಿಕೊಳ್ಳುವ ಸ್ಪಷ್ಟ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಹಲವಾರು ಪ್ರಭಾವಿ ವ್ಯಕ್ತಿಗಳ ಜೊತೆಗೆ ಸಭೆಯನ್ನು ಆಯೋಜಿಸಿದ್ದಾರೆ. ರಹಸ್ಯವಾಗಿ ನಡೆಸಲಾದ ಈ ಸಭೆಯಲ್ಲಿ, ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ವೈಯಕ್ತಿಕ ನೋಟ್‌ಬುಕ್‌ಗಳು, ಪೆನ್ನುಗಳು, ಚಾಕೊಲೇಟ್‌ಗಳು, ಸೀರೆಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಹಲವು ಉಡುಗೊರೆಗಳನ್ನು ನೀಡುವ ಮೂಲಕ ಈ ಪ್ರಭಾವಿಗಳನ್ನು ಓಲೈಸಲು ತೀವ್ರ ಪ್ರಯತ್ನಗಳನ್ನು ಮಾಡಿದ್ದಾರೆ" ಎಂದು ದೂರಿನಲ್ಲಿ ತಿಳಿಸಿದೆ.
ಮುಂದುವರಿದು, "ಈ ಸಭೆಯ ಅತ್ಯಂತ ಆತಂಕಕಾರಿ ಅಂಶವೆಂದರೆ ಈ ಪ್ರಭಾವಿಗಳಿಗೆ ಅವರ ಬೆಂಬಲ ಮತ್ತು ಅವರ ಪರ ಪ್ರಚಾರ ನಡೆಸುವುದಕ್ಕಾಗಿಯೇ ಗಣನೀಯ ಪ್ರಮಾಣದ ಹಣವನ್ನು ವಿತರಣೆ ಮಾಡಿರುವುದು" ಎಂದು ದೂರಿದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಹಣ ಹಂಚುವ ಈ ಖಂಡನೀಯ ಕ್ರಮವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತದೆ. ಇಷ್ಟೇ ಅಲ್ಲದೆ, 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಘೋರ ಅಪರಾಧವಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಚುನಾವಣಾ ಪ್ರಕ್ರಿಯೆಯು ಮುಕ್ತ, ನ್ಯಾಯಸಮ್ಮತ ಮತ್ತು ಭ್ರಷ್ಟ ಆಚರಣೆಗಳಿಂದ ನಿಷ್ಕಳಂಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ಈ ವಿಷಯದ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ.
ಯದುವೀರ್ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಒಕ್ಕಲಿಗರ ಬೆಂಬಲ!
ಇನ್ನು, ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಒಕ್ಕಲಿಗ ಸಮುದಾಯ ಬಿಜೆಪಿ ವಿರುದ್ಧ ರೊಚ್ಚಿಗೆದ್ದಿದೆ. ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿ ಯದುವೀರ್ ಒಡೆಯರ್ ಮತ್ತು ಬಿಜೆಪಿಗೆ ಶಾಕ್ ನೀಡಿದೆ.
ಕೆಲ ದಿನಗಳ ಹಿಂದೆ ಮೈಸೂರು ಒಕ್ಕಲಿಗ ಸಂಘದ ಅಧ್ಯಕ್ಷ ಮರಿ ಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ. 'ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಒಕ್ಕಲಿಗ ಸಮುದಾಯದಿಂದ ಬಂದಿದ್ದರಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಒಕ್ಕಲಿಗರನ್ನು ವ್ಯವಸ್ಥಿತವಾಗಿ ಬದಿಗೊತ್ತಲಾಗಿದೆ. ಆದ್ದರಿಂದ ಸಮುದಾಯದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಪಕ್ಷ ನೋಡಿ ಬೆಂಬಲ ಘೋಷಿಸುತ್ತಿಲ್ಲ. ಸಮುದಾಯದ ವ್ಯಕ್ತಿಗೆ ಬೆಂಬಲ ನೀಡುತ್ತಿದ್ದೇವೆ" ಎಂದು ಮಾಹಿತಿ ನೀಡಿದ್ದರು.












Click it and Unblock the Notifications