ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 26ರಂದು (ನಾಳೆ) ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಜಿಲ್ಲೆಯಲ್ಲಿ 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 2202 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಎಲ್ಲಾ ಕೇಂದ್ರಗಳಿಗೂ 9809 ಸಿಬ್ಬಂದಿ ನೇಮಕ ಮಾಡಲಾಗಿದೆ. 10,26,324 ಪುರುಷರು, 10,65,714 ಮಹಿಳೆಯರು, 184 ಇತರರು ಸೇರಿದಂತೆ ಒಟ್ಟು 20,92,222 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆಗೆ ಮತಯಂತ್ರಗಳೊಂದಿಗೆ ಎಲ್ಲ ಮತಗಟ್ಟೆಗಳಿಗೆ ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿ ತೆರಳಿದರು. ವಿದ್ಯುನ್ಮಾನ ಮತಯಂತ್ರಗಳು, ವಿವಿ ಪ್ಯಾಟ್ ಸೇರಿದಂತೆ ಚುನಾವಣೆಗೆ ಅಗತ್ಯವಾದ ಸಾಮಗ್ರಿಗಳನ್ನು ಪಡೆದು ನಿಗದಿತ ಮತಗಟ್ಟೆಗಳಿಗೆ ಸಿಬ್ಬಂದಿ ಹೋದರು.
ಸಿಸಿ ಟಿವಿ ಕ್ಯಾಮರಾ ಕಣ್ಗಾವಲು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ 2202 ಮತಗಟ್ಟೆಗಳಲ್ಲೂ ಈ ಬಾರಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಜತೆಗೆ 2202 ಮತಗಟ್ಟೆಗಳ ಪೈಕಿ 435 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, 41 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.
ನೆರಳಿನ ವ್ಯವಸ್ಥೆ
ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ. ಅಲ್ಲದೇ, ಮತಗಟ್ಟೆಗೆ ಬರುವ ಮತದಾರರಿಗೆ ಬಿಸಿಲಿನಿಂದ ಸಮಸ್ಯೆಯಾಗದಂತೆ ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಭದ್ರತೆಗೆ 5700 ಪೊಲೀಸರು
ನಗರ ಸೇರಿದಂತೆ ಜಿಲ್ಲೆಯಲ್ಲಿ ಮತದಾನ ವೇಳೆ ಯಾವುದೇ ಅಕ್ರಮ, ಅಹಿತಕರ ಘಟನೆ ನಡೆಯದಂತೆ 5700 ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆ ವ್ಯಾಪ್ತಿಯಲ್ಲಿ 3 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.
ಅಧಿಕಾರಿಗಳಿಗೆ ಬಸ್ ವ್ಯವಸ್ಥೆ
ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಮತ್ತು ಮತಗಟ್ಟೆಯಿಂದ ಡಿಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ ಹಾಗೂ ಸಿಬ್ಬಂದಿ ಕರೆದೊಯ್ಯಲು 473 ಕೆಎಸ್‌ಆರ್‌ಟಿಸಿ ಬಸ್‌ಗಳು, 33 ಜೀಪ್ ಹಾಗೂ 79 ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ.
ರೈಲಿಗೆ ಡಿಮ್ಯಾಂಡ್
ಚುನಾವಣಾ ಕಾರ್ಯಕ್ಕೆ ಹೆಚ್ಚು ಬಸ್‌ಗಳು ನಿಯೋಜನೆಗೊಂಡ ಪರಿಣಾಮ ಸಾಕಷ್ಟು ಜನ ರೈಲುಗಳ ಮೊರೆ ಹೋದರು. ಕೆಲವರು ಟಿಕೆಟ್ ಬುಕ್ ಮಾಡಿಕೊಂಡು ರೈಲು ಮೂಲಕ ಊರು ತಲುಪಿದರು.
ಜಿಲ್ಲೆಯಲ್ಲಿ ಮತದಾರರ ವಿವರ
ಪುರುಷ ಮತದಾದರರು 10,26,324, ಮಹಿಳಾ ಮತದಾರರು 10,65,714, ಇತರೆ 184. ಜಿಲ್ಲೆಯ ಒಟ್ಟಾರೆ ಮತದಾರರು 20,92,222.












Click it and Unblock the Notifications