Yaduveer Wadiyar: ನೀವು ಗೆದ್ದು ಬರುತ್ತೀರಿ: ಯದುವೀರ್ ಒಡೆಯರ್ಗೆ ಪ್ರಧಾನಿ ನರೇಂದ್ರ ಮೋದಿ ಪತ್ರ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು "ನೀವು ಗೆದ್ದು ಪಾರ್ಲಿಮೆಂಟ್ ಗೆ ಬರುತ್ತೀರಿ" ಎಂದು ಶುಭ ಹಾರೈಸಿದ್ದಾರೆ.
ಮೈಸೂರಿನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮೈಸೂರು-ಕೊಡಗು ಕ್ಷೇತ್ರ ಪ್ರತಿಷ್ಠೆ ಕಣವಾಗಿ ಪರಿವರ್ತನೆಗೊಂಡಿದೆ. ಪ್ರಚಾರದ ಭರಾಟೆಯೂ ಜೋರಾಗಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

ಯದುವೀರ್ ಅವರಿಗೆ ಮೋದಿ ಪತ್ರ ಬರೆದು ಶುಭ ಹಾರೈಸಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. "ನನ್ನ ಸಹೋದ್ಯೋಗಿ ಯದುವೀರ್ ಅವರೇ" ಎಂದು ಪತ್ರ ಆರಂಭಿಸಿರುವ ಮೋದಿ ಅವರು "ನೀವು ಗೆದ್ದು ಪಾರ್ಲಿಮೆಂಟ್ ಗೆ ಬಂದೇ ಬರುತ್ತೀರಿ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಜನರ ಆಶೀರ್ವಾದದಿಂದ ನೀವು ಸಂಸತ್ತಿಗೆ ಬರುತ್ತೀರಿ ಎಂಬ ವಿಶ್ವಾಸ ನನಗಿದೆ. ಈ ಪತ್ರ ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತೆ ಎಂದು ಭಾವಿಸುವೆ. ನಿಮ್ಮಂತಹ ತಂಡದ ಸದಸ್ಯರು ನನಗೆ ದೊಡ್ಡ ಆಸ್ತಿ" ಎಂದು ಪ್ರಧಾನಿ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
"ನೇರವಾಗಿ ಜನರ ಸೇವೆ ಮಾಡುವ ಮೂಲಕ ಮೈಸೂರಿನ ಒಡೆಯರ ಶ್ರೀಮಂತ ಪರಂಪರೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. ಸುಸ್ಥಿರ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ನಿಮ್ಮ ಸಮರ್ಪಣೆಯು ಸ್ಪಷ್ಟವಾಗಿದೆ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.
"ಪ್ರತಿಯೊಬ್ಬರಿಗೂ ಉತ್ತಮ ಜೀವನವನ್ನು ಖಚಿತಪಡಿಸಿಕೊಳ್ಳಲು ಈ ಚುನಾವಣೆಯು ನಮ್ಮ ಧ್ಯೇಯದಲ್ಲಿ ನಿರ್ಣಾಯಕವಾಗಿರುತ್ತದೆ. ಬಿಜೆಪಿ ಪಡೆಯುವ ಪ್ರತಿ ಮತವು ಸ್ಥಿರ ಸರ್ಕಾರ ರಚಿಸುವತ್ತ ಸಾಗುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಪಯಣಕ್ಕೆ ವೇಗ ನೀಡುತ್ತದೆ" ಎಂದು ತಿಳಿಸಿದ್ದಾರೆ.
"ಒಂದು ತಂಡವಾಗಿ, ನಿಮ್ಮ ಕ್ಷೇತ್ರ ಮತ್ತು ದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಜನತೆಗೆ ಇದು ಮಾಮೂಲಿ ಚುನಾವಣೆಯಲ್ಲ ಎಂದು ಹೇಳ ಬಯಸುತ್ತೇನೆ" ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಬಿರುಸಿನ ಪ್ರಚಾರ
ಮೈಸೂರಿನಲ್ಲಿ ಯದುವೀರ್ ಒಡೆಯರ್ ಅವರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಸುಮಲತಾ ಕೂಡ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಮೂಲಕ ಬಿಜೆಪಿಗೆ ಬಲ ತುಂಬಿದ್ದಾರೆ. ಕಾಂಗ್ರೆಸ್ ಕೂಡ ಭರ್ಜರಿ ಪ್ರಚಾರ ಮಾಡುತ್ತಿದ್ದು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.












Click it and Unblock the Notifications