'ಆಫರ್ ಲೆಟರ್ ನೋಡಿ ಫೇಕ್ ಎಂದೇ ಭಾವಿಸಿದ್ದೆ': ಗೂಗಲ್ ಉದ್ಯೋಗ ಗಿಟ್ಟಿಸಿಕೊಂಡ ಯುವತಿಯ ಸ್ಪೂರ್ತಿದಾಯಕ ಕಥೆ

ನವದೆಹಲಿ: ವಿಶ್ವದ ಪ್ರಖ್ಯಾತ ಟೆಕ್ ದೈತ್ಯ 'ಗೂಗಲ್' ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಪ್ರಪಂಚದಾದ್ಯಂತ ಇರುವ ಬಹುತೇಕ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಅತಿದೊಡ್ಡ ಕನಸು. ದೆಹಲಿ ಮೂಲದ ಯುವತಿಯೊಬ್ಬರಿಗೆ ತಿಂಗಳುಗಳ ಕಠಿಣ ಪರಿಶ್ರಮ, ಅನಿಶ್ಚಿತತೆ ಹಾಗೂ ಆತಂಕದ ಬಳಿಕ ಈ ಕನಸು ನನಸಾಗಿದೆ. ಶಾಲಿನಿ ಎಂಬ ಯುವತಿ 'ಎಕ್ಸ್' ಖಾತೆಯಲ್ಲಿ ತಮ್ಮ ಈ ಸ್ಫೂರ್ತಿದಾಯಕ ಜರ್ನಿಯನ್ನು ಹಂಚಿಕೊಂಡಿದ್ದಾರೆ.

ತಮಗೆ ಗೂಗಲ್‌ನಿಂದ ಆಫರ್ ಲೆಟರ್ ಬಂದಾಗ, ಅದೊಂದು ಫೇಕ್ ಇಮೇಲ್ ಎಂದು ಭಾವಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕ ಟೆಕ್ಕಿಗಳಿಗೆ ಸ್ಫೂರ್ತಿ ನೀಡುತ್ತಿದೆ.

Techie

ಗೂಗಲ್ ಕ್ಲೌಡ್ ಇಂಟರ್ನ್‌ಶಿಪ್‌ ಮತ್ತು ಟೆಕ್ಕಿಯ ಕಠಿಣ ಶ್ರಮ

ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ಶಾಲಿನಿ ಅವರು, ಗೂಗಲ್ ಇಂಟರ್ನ್ ಆಗಿ ಸೇರ್ಪಡೆಗೊಂಡು ಅಂತಿಮವಾಗಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಹೊರಹೊಮ್ಮಿದ ರೋಲರ್-ಕೋಸ್ಟರ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ. "ಬಹಳಷ್ಟು ಏಳು-ಬೀಳುಗಳ ನಂತರ, ಅಂತಿಮವಾಗಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್ ಸೇರಿಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

2025ರಲ್ಲಿ ಗೂಗಲ್ ಕ್ಲೌಡ್ ವಿಭಾಗದಲ್ಲಿ ಇಂಟರ್ನ್‌ಶಿಪ್ ಆರಂಭಿಸಿದ ಅವರು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಹಗಲಿರುಳು ಶ್ರಮಿಸಿದ್ದಾರೆ. "ಕೆಲವು ದಿನಗಳಂತೂ ಬೆಳಿಗ್ಗೆ 9:30ರಿಂದ ರಾತ್ರಿ 9:30ರವರೆಗೆ ಕೆಲಸ ಮಾಡುತ್ತಿದ್ದೆ. ವಾರಾಂತ್ಯದ ರಜೆಗಳಲ್ಲೂ ನಾನು ಕೆಲಸ ಮಾಡಿದ್ದೇನೆ" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿದ್ದ ಅವರ ಸ್ನೇಹಿತರು ಕೆಫೆಗಳಿಗೆ ಭೇಟಿ ನೀಡುತ್ತಾ, ಊರು ಸುತ್ತುತ್ತಾ ಮೋಜು ಮಾಡುತ್ತಿದ್ದರೆ, ಇವರು ಮಾತ್ರ ತಮ್ಮ ಸಂಪೂರ್ಣ ಸಮಯವನ್ನು ಕಚೇರಿಯ ಕೆಲಸಕ್ಕಾಗಿ ಮೀಸಲಿಟ್ಟಿದ್ದರು.

ಉದ್ಯೋಗದ ಅನಿಶ್ಚಿತತೆ ನಡುವೆಯೂ ಭರವಸೆ ಕಳೆದುಕೊಳ್ಳದ ಯುವತಿ

ಇಂಟರ್ನ್‌ಶಿಪ್ ಸಮಯದಲ್ಲಿ ಉದ್ಯೋಗಿಗಳ ನೇಮಕಾತಿ ಕುರಿತು ಸಾಕಷ್ಟು ಅನಿಶ್ಚಿತತೆಗಳಿದ್ದವು ಎಂದು ಶಾಲಿನಿ ವಿವರಿಸಿದ್ದಾರೆ. ಪೂರ್ಣಾವಧಿ ಉದ್ಯೋಗ ನೇಮಕಾತಿಯ ಕುರಿತು ಯಾವುದೇ ಖಚಿತತೆ ಇಲ್ಲದ ಕಾರಣ, ಪರ್ಯಾಯ ಉದ್ಯೋಗಾವಕಾಶಗಳನ್ನು ಹುಡುಕಿಕೊಳ್ಳುವಂತೆ ಇಂಟರ್ನ್‌ಗಳಿಗೆ ಸೂಚಿಸಲಾಗಿತ್ತು. ಆದರೂ ಧೃತಿಗೆಡದ ಶಾಲಿನಿ, "ನಾನು ನನ್ನ ಶೇಕಡಾ 100ರಷ್ಟು ಶ್ರಮವನ್ನು ಹಾಕಿದೆ, ಏಕೆಂದರೆ ನನಗೆ ಮಾಡಲು ಸಾಧ್ಯವಿದ್ದುದು ಅಷ್ಟೇ" ಎಂದು ಬರೆದಿದ್ದಾರೆ. ಇಂಟರ್ನ್‌ಶಿಪ್ ಮುಗಿದ ಮೇಲೂ ಈ ಅನಿಶ್ಚಿತತೆ ಕೊನೆಯಾಗಲಿಲ್ಲ.

ಗೂಗಲ್ ಉದ್ಯೋಗದ ನಿರೀಕ್ಷೆ

ಗೂಗಲ್ ಕ್ಲೌಡ್ ಇಂಟರ್ನ್‌ಗಳು ತಮ್ಮ ಪ್ರೀ-ಪ್ಲೇಸ್‌ಮೆಂಟ್ ಆಫರ್‌ಗಳನ್ನು ಪಡೆಯಲು ಬರೋಬ್ಬರಿ 5 ತಿಂಗಳು ಕಾಯಬೇಕಾಯಿತು. "ಆ ರಾತ್ರಿಗಳು ಎಷ್ಟು ಕಷ್ಟಕರವಾಗಿದ್ದವು ಎಂದು ಕೇಳಬೇಡಿ. ನಾನು ಯಾವಾಗಲೂ ಆತಂಕದಲ್ಲಿರುತ್ತಿದ್ದೆ" ಎಂದು ಶಾಲಿನಿ ಹೇಳಿದ್ದಾರೆ. ಈ ಕಾಯುವಿಕೆಯ ಅವಧಿಯಲ್ಲಿ, ಅವರು ಡಾಯ್ಚ ಬ್ಯಾಂಕ್‌ನಿಂದ ಉದ್ಯೋಗದ ಆಫರ್ ಪಡೆದಿದ್ದರು ಹಾಗೂ ಸ್ಟಾರ್ಟ್‌ಅಪ್ ಒಂದರಲ್ಲಿ ವಿಂಟರ್ ಇಂಟರ್ನ್‌ಶಿಪ್ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದರು.

"ಆದರೆ ಎಲ್ಲೋ ಒಂದು ಕಡೆ, ಗೂಗಲ್ ಉದ್ಯೋಗ ಸಿಗಬಹುದೆಂಬ ಸಣ್ಣ ಭರವಸೆ ಇತ್ತು. ಏಕೆಂದರೆ ಗೂಗಲ್ ಎಂದರೆ ಗೂಗಲ್ ತಾನೇ" ಎಂದು ಅವರು ತಮ್ಮ ಕನಸಿನ ಬಗ್ಗೆ ವಿವರಿಸಿದ್ದಾರೆ. ಆತಂಕ ಹೆಚ್ಚಾದಾಗಲೆಲ್ಲಾ ಮೊಬೈಲ್ ನೋಡುವುದನ್ನು ಬಿಟ್ಟು, ಹೊರಗೆ ಹೆಚ್ಚು ಸಮಯ ಕಳೆಯುತ್ತಿದ್ದರು.

ನಕಲಿ ಎಂದು ಭಾವಿಸಿದ್ದ ಗೂಗಲ್ ಆಫರ್ ಲೆಟರ್

ಅಂತಿಮವಾಗಿ ಅವರು ನಿರೀಕ್ಷಿಸದ ಕ್ಷಣದಲ್ಲಿ ಆ ಸಿಹಿಸುದ್ದಿ ಬಂತು. ಸರೋಜಿನ್ ನಗರದಲ್ಲಿ ಶಾಪಿಂಗ್ ಮಾಡುತ್ತಿದ್ದಾಗ, ಫೋನ್‌ಪೇ ಮೂಲಕ ಹಣ ಪಾವತಿಸಲು ಮೊಬೈಲ್ ತೆಗೆದಿದ್ದಾರೆ. ಆಗಷ್ಟೇ ಗೂಗಲ್ ಆಫರ್ ಲೆಟರ್ ಎಂಬ ಹೆಸರಿನಿಂದ ಇಮೇಲ್ ಬಂದಿರುವುದನ್ನು ನೋಡಿದರು. "ಯಾವುದೇ ದೃಢೀಕರಣ ಮೇಲ್ ಕಳುಹಿಸದೆ, ನೇರವಾಗಿ ಆಫರ್ ಲೆಟರ್ ಕಳುಹಿಸಿದ್ದರು. ಮೊದಲಿಗೆ ಇದು ಖಂಡಿತ ಫೇಕ್ ಇರಬೇಕು ಎಂದುಕೊಂಡೆ. ಸೆಂಡರ್ ಯಾರು, ಡೊಮೈನ್ ಯಾವುದು ಎಂಬುದನ್ನೆಲ್ಲಾ ಪರಿಶೀಲಿಸಿದೆ. ಅದು ನಿಜವಾಗಿಯೂ @google.com ನಿಂದಲೇ ಬಂದಿತ್ತು! ಅದು ಅಸಲಿ ಆಫರ್ ಲೆಟರ್ ಆಗಿತ್ತು" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದು ಅಸಲಿ ಎಂದು ಅರಿವಾದಾಗ, ತಮ್ಮ ಕಣ್ಣುಗಳಲ್ಲಿ ಆನಂದಭಾಷ್ಪ ತುಂಬಿತ್ತು ಎಂದು ಈ ಯುವ ಟೆಕ್ಕಿ ಸ್ಮರಿಸಿದ್ದಾರೆ. "ಈಗ ಹಿಂತಿರುಗಿ ನೋಡಿದಾಗ, ನಾನು ಕೆಲಸ ಮಾಡಿದ ಪ್ರತಿಯೊಂದು ವೀಕೆಂಡ್, ಪ್ರತಿಯೊಂದು ನಿದ್ದೆಯಿಲ್ಲದ ರಾತ್ರಿಗಳು ಹಾಗೂ ನಾನು ಎದುರಿಸಿದ ಆತಂಕ ಎಲ್ಲವೂ ಸಾರ್ಥಕವಾಯಿತು. ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಶಾಲಿನಿ ಭಾವುಕರಾಗಿ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+