ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಸ್ಥಾನದ ಉಳಿವಿಗಾಗಿ ದಿಟ್ಟ ನಿರ್ಧಾರ ಕೈಗೊಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 26: ದಕ್ಷಿಣ ಕನ್ನಡ ಜಿಲ್ಲೆಯ ಜನರ ಶ್ರದ್ಧಾ ಭಕ್ತಿಯ ಆರಾಧ್ಯ ಕೇಂದ್ರ ಕಾರಿಂಜ ದೇವಸ್ಥಾನಕ್ಕೆ ಮಾರಕವಾಗಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಶಾಶ್ವತ ಬೀಗ ಜಡಿಯಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿದ್ದು, ಅಕ್ರಮ ಗಣಿಗಾರಿಕೆಗೆ ಬೀಗ ಹಾಕಿ ಅಕ್ರಮ ಎಸಗಿದವರ ವಿರುದ್ಧ ಲಕ್ಷಾಂತರ ರೂಪಾಯಿ ದಂಡ ಹಾಕಿದ್ದಾರೆ. ಪ್ರಭಾವಿಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿಗಳು ಕೈಗೊಂಡ ದಿಟ್ಟ ನಿರ್ಧಾರಕ್ಕೆ ಕ್ಷೇತ್ರದ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನ. ಪ್ರಕೃತಿಯ ಮಧ್ಯೆ ಬೃಹದಾದ ಬಂಡೆಯ ಮೇಲೆ ನೆಲೆ ನಿಂತ ಆ ಈಶ್ವರನ ಸನ್ನಿಧಾನಕ್ಕೆ ಕಲ್ಲು ಗಣಿಗಾರಿಕೆಯಿಂದ ಸಂಚಕಾರ ಉಂಟಾಗಿತ್ತು. ಇದೀಗ ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಕ್ರಮವಾಗಿ ನಡೆಯುತ್ತಿದ್ದ ಮೂರು ಗಣಿಗಾರಿಕೆಗಳಿಗೂ ಬೀಗ ಜಡಿದಿದೆ.

Dakshina Kannada DC Stopped Illegal Stone Mining near Karinjeshwara Temple

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನ ಕರಾವಳಿಯ ಅತ್ಯಂತ ಪ್ರಸಿದ್ಧ ಹಾಗೂ ಪುರಾತನ ದೇವಸ್ಥಾನಗಳಲ್ಲಿ ಒಂದು. ಪ್ರಕೃತಿಯ ಮಡಿಲಲ್ಲಿ ಬೃಹದಾಕಾರವಾಗಿ ನಿಂತಿರುವ ಕಲ್ಲಿನ ಮೇಲೆ ಇರುವ ಈ ಕಾರಣಿಕ ದೇವಸ್ಥಾನದ ಆಸುಪಾಸಿನಲ್ಲಿ ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆ ನಡೆಯುತಿತ್ತು. ದೇಗುಲದ ನಾಲ್ಕು ಸುತ್ತಲೂ ಕಲ್ಲು ಗಣಿಗಾರಿಕೆಯ ಸ್ಫೋಟದಿಂದ ದೇಗುಲ ಬಿರುಕು ಬಿಟ್ಟಿತ್ತು.

ಸ್ಫೋಟದ ಸಂದರ್ಭದಲ್ಲಿ ಭಗವಂತನ ವಿಗ್ರಹವೇ ಕಂಪನ ಆದಂತಾಗುತ್ತಿತ್ತು. ಹೀಗಾಗಿ ಕಾವಳ ಮೂಡೂರು ಗ್ರಾಮ ಮತ್ತು ಕಾವಳ ಪಡೂರು ಗ್ರಾಮಗಳಲ್ಲಿದ್ದ ಈ ಕಲ್ಲು ಗಣಿಗಾರಿಕೆ ವಿರುದ್ದ ಸ್ಥಳೀಯರು, ದೇವಸ್ಥಾನದ ಭಕ್ತಾದಿಗಳು ಬೃಹತ್ ಪ್ರತಿಭಟನೆ, ಹೋರಾಟ ನಡೆಸಿದ್ದರು. ಇದೀಗ ದೂರಿನ ಹಿನ್ನೆಲೆಯಲ್ಲಿ 3 ಕಪ್ಪು ಕಲ್ಲು ಗಣಿಗಾರಿಕೆಗೆ ಜಿಲ್ಲಾಡಳಿತ ಬೀಗ ಜಡಿದಿದೆ.

Dakshina Kannada DC Stopped Illegal Stone Mining near Karinjeshwara Temple

ಒಂದು ಕಲ್ಲು ಕ್ವಾರಿಯಲ್ಲಿ ಪರವಾನಗಿದಾರ ತನ್ನ ಪರವಾನಗಿಯ ವ್ಯಾಪ್ತಿ ಮೀರಿ ಸುಮಾರು 3.28 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಜಿಲ್ಲಾಡಳಿತದ ತನಿಖೆ ಸಂದರ್ಭದಲ್ಲಿ ಗೊತ್ತಾಗಿದೆ. ಹೀಗಾಗಿ 8,12,87,198 ರೂ. ದಂಡ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಚಿಸಿದ್ದು, ದಂಡ ಪಾವತಿಸದ ಕಾರಣ ಆ ಗಣಿಗಾರಿಕೆಯನ್ನು ಬಂದ್ ಮಾಡಲಾಗಿದೆ.

ಅನಧಿಕೃತ ಗಣಿಗಾರಿಕೆ ನಡೆಸಿರುವ ಮಾಲಿಕರ ವಿರುದ್ಧ ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಹ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಪರವಾನಗಿದಾರ ಗೋಮಾಳ ಜಾಗವನ್ನು ಅತಿಕ್ರಮಿಸಿ ಗಣಿಗಾರಿಕೆ ನಡೆಸುತ್ತಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಗುತ್ತಿಗೆದಾರ ಮೃತಪಟ್ಟಿದ್ದರೂ, ಅದೇ ಗಣಿಗಾರಿಕೆ ಪ್ರದೇಶದಲ್ಲಿ ಅನಧಿಕೃತವಾಗಿ ಬೇರೆ ವ್ಯಕ್ತಿ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿದೆ.

Dakshina Kannada DC Stopped Illegal Stone Mining near Karinjeshwara Temple

ಸದ್ಯ ದೇವಸ್ಥಾನದ ಆಸುಪಾಸು ಕಾರ್ಯಚರಿಸುತ್ತಿದ್ದ ಮೂರು ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ದೇವಸ್ಥಾನಕ್ಕೆ ಯಾವುದೇ ಧಕ್ಕೆ ಬಾರದ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಎಚ್ಚರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ವಹಿಸಿದೆ.

Recommended Video

ಕೋರ್ಟ್ ಆದೇಶ ಫಾಲೋ ಮಾಡಿ ಇಲ್ಲ ಅಂದ್ರೆ ಪೊಲೀಸ್ complaint ಕೊಡ್ಬೇಕಾಗತ್ತೆ! | Oneindia Kannada

ಈ ಹಿಂದೆ ದೇವಸ್ಥಾನದ ಭಕ್ತರು ಮತ್ತು ಹಿಂದೂ ಜಾಗರಣ ವೇದಿಕೆ ಕಾರಿಂಜದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತವಾಗಬೇಕೆಂದು ಬೃಹತ್ ಪ್ರತಿಭಟನೆ ನಡೆಸಿದ್ದರು. ಮಂಗಳೂರಿನಲ್ಲೂ ಸಾಧು- ಸಂತರು ಈ ಬಗ್ಗೆ ಧ್ವನಿ ಎತ್ತಿದ್ದರು. ಈ ಹಿನ್ನಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಥಳ ಪರಿಶೀಲನೆ ಮಾಡಿದ್ದರು. ಅಕ್ರಮ ಕಂಡು ಬಂದ ಹಿನ್ನಲೆಯಲ್ಲಿ ಇದೀಗ ಜಿಲ್ಲಾಧಿಕಾರಿ ಖಡಕ್ ಆದೇಶ ಮಾಡಿದ್ದಾರೆ.

English summary
Dakshina Kannada DC Dr. Rajendra KV stopped Illegal Stone Mining near Karinjeshwara Temple in Bantwal taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X