ಏ. 25ರಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್ 23: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಚುನಾವಣೆ ನಡೆಯಲಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಅಂದು ಮತದಾನ ನಡೆಯಲಿದ್ದು, ಮತದಾನಕ್ಕೆ ತೆರಳುವ ಜನರಿಗಾಗಿ ವಿಶೇಷ ರೈಲುಗಳನ್ನು ಬೆಂಗಳೂರಿನಿಂದ ಓಡಿಸಲಾಗುತ್ತಿದೆ.
ಏಪ್ರಿಲ್ 26ರಂದು ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಮತದಾನ ಮಾಡಲು ರಾಜಧಾನಿ ಬೆಂಗಳೂರು ನಗರದಿಂದ ಸಾವಿರಾರು ಜನರು ಕರಾವಳಿ ಭಾಗಕ್ಕೆ ಸಂಚಾರ ನಡೆಸುತ್ತಿದ್ದಾರೆ.

ಮತದಾನಕ್ಕೆ ತೆರಳು ಜನರ ಅನುಕೂಲಕ್ಕಾಗಿ ಏಪ್ರಿಲ್ 25ರಂದು ಕುಂದಾಪುರ ಮತ್ತು ಮಂಗಳೂರಿಗೆ ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ಓಡಿಸುತ್ತಿದೆ. ಮತದಾನಕ್ಕೆ ತೆರಳುವ ಜನರು ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಬೆಳೆಸಬಹುದು.
ರೈಲುಗಳ ವೇಳಾಪಟ್ಟಿ: ಏಪ್ರಿಲ್ 25ರಂದು ಬೆಂಗಳೂರು-ಮಂಗಳೂರು ರೈಲು ಸಂಚಾರ ನಡೆಸಲಿದೆ. ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ 18:00 ಗಂಟೆಗೆ ಹೊರಡುವ ರೈಲು ಏಪ್ರಿಲ್ 26ರಂದು 10 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪಲಿದೆ.
ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಡುವ ರೈಲು ಕೆಆರ್ ಪುರ, ಬಂಗಾರಪೇಟೆ, ಸೇಲಂ, ಇರೋಡ್ ಜಂಕ್ಷನ್, ತಿರುಪ್ಪೂರ್, ಕೊಯಮತ್ತೂರ್, ಪಾಲಕ್ಕಾಡ್, ತಿರೂರ್, ಕೊಯಿಕ್ಕೋಡ್, ತಲಸ್ಸೇರಿ, ಕಣ್ಣೂರು, ಕಾಸರಗೋಡು ಮೂಲಕ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ.
SMVT - Mangaluru spl train on 25th from Bengaluru pic.twitter.com/8hO0SRgqWW
— Karnataka Rail Users (@KARailway) April 23, 2024
ಬೆಂಗಳೂರು-ಕುಂದಾಪುರ ರೈಲು: ಬೆಂಗಳೂರು ನಗರದ ಯಶವಂತಪುರ ನಿಲ್ದಾಣದಿಂದ ಏಪ್ರಿಲ್ 25ರಂದು ಯಶವಂತಪುರ-ಕುಂದಾಪುರ ನಡುವಿನ ರೈಲು ಸಂಚಾರ ಆರಂಭಿಸಲಿದೆ. ಯಶವಂತಪುರದಿಂದ 23:20ಕ್ಕೆ ಹೊರಡುವ ರೈಲು ಏಪ್ರಿಲ್ 26ರಂದು 10:45ಕ್ಕೆ ಕುಂದಾಪುರಕ್ಕೆ ತಲುಪಲಿದೆ.
ಯಶವಂತಪುರದಿಂದ ಹೊರಡುವ ರೈಲು ನೆಲಮಂಗಲ, ಕುಣಿಗಲ್, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು ಮೂಲಕ ಕುಂದಾಪುರ ತಲುಪಲಿದೆ.
ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ಹೆಚ್ಚು ರೈಲುಗಳು ಬೇಕು ಎಂಬ ಬೇಡಿಕೆ ಇದೆ. ಹಬ್ಬದ ಸಮಯದಲ್ಲಿ, ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಪೂರ್ಣ ಭರ್ತಿಯಾಗಿರುತ್ತದೆ.
ಈಗ ಮತದಾನದ ದಿನ ಬೆಂಗಳೂರು ನಗರದಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಜನರು ಹೆಚ್ಚು. ಈಗಾಗಲೇ ಬಸ್‌ಗಳಲ್ಲಿ ಸೀಟುಗಳು ಭರ್ತಿಯಾಗಿವೆ. ಜನರು ಮತದಾನ ಮಾಡಲು ಹೋಗಬೇಕಾದರೆ ಹೆಚ್ಚುವರಿ ಬಸ್, ರೈಲುಗಳ ಅಗತ್ಯವಿದೆ.












Click it and Unblock the Notifications