"ಯುರೋಪ್‌ಗೆ ಮರುಕ, ಭಾರತಕ್ಕೆ ಅವಮಾನವೇ?"; ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಪೋಲೆಂಡ್ ಮಹಿಳೆ ತರಾಟೆ

ಭಾರತದಲ್ಲಿ ನೆಲೆಸಿರುವ ಪೋಲೆಂಡ್ ಮೂಲದ ಮಹಿಳೆಯೊಬ್ಬರು ಪಾಶ್ಚಿಮಾತ್ಯ ಮಾಧ್ಯಮಗಳ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಹವಾಮಾನ ವೈಪರೀತ್ಯ ಅಥವಾ ಬಿಸಿಗಾಳಿಯಂತಹ ಜಾಗತಿಕ ಬಿಕ್ಕಟ್ಟುಗಳು ಎದುರಾದಾಗ, ಯುರೋಪ್ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಬಗ್ಗೆ ಅತೀವ ಸಹಾನುಭೂತಿ ತೋರುವ ವಿದೇಶಿ ಮಾಧ್ಯಮಗಳು, ಅದೇ ಪರಿಸ್ಥಿತಿ ಭಾರತದಲ್ಲಿ ಎದುರಾದಾಗ ಮಾತ್ರ 'ಹಿಂದುಳಿದ ದೇಶ' ಎಂದು ಅಣಕಿಸುತ್ತವೆ ಎಂಬುದನ್ನು ತಮ್ಮ ವೈರಲ್ ವಿಡಿಯೋ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸೀರೆಯಲ್ಲಿ ಕಂಗೊಳಿಸುತ್ತಾ, ಹಣೆಗೆ ಬಿಂದಿ ಇಟ್ಟುಕೊಂಡು ನೋಡಲು ಭಾರತೀಯ ನಾರಿಯಂತೆ ತಯಾರಾಗಿರುವ ಆಗ್ನೆಸ್ಕಾ ಹಡಾಲಾ ಎಂಬ ಪೋಲಿಷ್ ಮಹಿಳೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Agnieszka Hadala

ಯುರೋಪ್ ಬಿಸಿಗಾಳಿಗೆ ಪಾಶ್ಚಿಮಾತ್ಯ ಮಾಧ್ಯಮಗಳ ಅನುಕಂಪ

ಪ್ರಸ್ತುತ ಯುರೋಪ್ ಖಂಡದಲ್ಲಿ ವಿಪರೀತ ಬಿಸಿಗಾಳಿ ಬೀಸುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. "ನಾನು ಪ್ರಸ್ತುತ ಪೋಲೆಂಡ್‌ನ ಗುಡ್ಡಗಾಡು ಪ್ರದೇಶದಲ್ಲಿದ್ದೇನೆ, ಇಲ್ಲಿ ತಂಪಾದ ವಾತಾವರಣ ಇರಬೇಕಿತ್ತು. ಆದರೂ ಇಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದು ನಮಗೆ ಅತ್ಯಂತ ಕಠಿಣ ಹಾಗೂ ಕ್ರೂರ ಪರಿಸ್ಥಿತಿಯಾಗಿದೆ" ಎಂದು ಆಗ್ನೆಸ್ಕಾ ವಿವರಿಸಿದ್ದಾರೆ.

ಫ್ರಾನ್ಸ್ ಹಾಗೂ ಯುರೋಪ್‌ನ ಇತರೆಡೆ ವಿಪರೀತ ಸೆಕೆಗೆ ಈವರೆಗೆ 1,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಯುರೋಪ್ ಸಂಕಷ್ಟವನ್ನು ಪಾಶ್ಚಿಮಾತ್ಯ ಮಾಧ್ಯಮಗಳು 'ದೊಡ್ಡ ದುರಂತ' ಎಂದು ಬಿಂಬಿಸಿ ಸಹಾನುಭೂತಿ ವ್ಯಕ್ತಪಡಿಸುತ್ತಿವೆ.

ಇತ್ತೀಚಿನ ಬಿಬಿಸಿ ವರದಿಯ ಪ್ರಕಾರ, ಪೋಲೆಂಡ್‌ನಲ್ಲಿ ತಾಪಮಾನ 40.5 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಬಿಸಿಗಾಳಿಯ ಹೊಡೆತಕ್ಕೆ ಶಾಲೆಗಳನ್ನು ಮುಚ್ಚಲಾಗಿದೆ. ರಸ್ತೆಗಳು, ರೈಲ್ವೆ ಹಳಿಗಳು ಕರಗುತ್ತಿವೆ. ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಅಲ್ಲಿನ ಮನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಕನಿಷ್ಠ ಎಸಿ ಅಥವಾ ಭಾರತದಲ್ಲಿರುವಂತೆ ಸಾಮಾನ್ಯ ಫ್ಯಾನ್‌ಗಳ ವ್ಯವಸ್ಥೆಯೂ ಇಲ್ಲ ಎನ್ನುವುದನ್ನು ಅವರು ಉಲ್ಲೇಖಿಸಿದ್ದಾರೆ.

ಭಾರತದ ಹವಾಮಾನ ವೈಪರಿತ್ಯವಾದಾಗ ಅಪಹಾಸ್ಯವೇಕೆ?

ಪಾಶ್ಚಿಮಾತ್ಯ ರಾಷ್ಟ್ರಗಳ ಇಂತಹ ದುಸ್ಥಿತಿಯನ್ನು ಭಾರತದ ಪರಿಸ್ಥಿತಿಗೆ ನೇರವಾಗಿ ಹೋಲಿಸಿರುವ ಆಗ್ನೆಸ್ಕಾ ಹಡಾಲಾ, "ಭಾರತದಲ್ಲಿ 35 ಡಿಗ್ರಿ ಸೆಲ್ಸಿಯಸ್ ಎಂದರೆ ಅದು ಬಹುತೇಕ ಕಡೆಗಳಲ್ಲಿ ಆಹ್ಲಾದಕರ ಹವಾಮಾನ ಎನಿಸಿಕೊಳ್ಳುತ್ತದೆ. ಭಾರತದಲ್ಲಿ ಬೇಸಿಗೆಯಲ್ಲಿ 40 ರಿಂದ 50 ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ದಾಖಲಾಗುವುದು ಸಾಮಾನ್ಯ.

ಆದರೆ ಭಾರತದಲ್ಲಿ ಸೆಕೆಯ ಪ್ರಮಾಣ ಹೆಚ್ಚಾದಾಗ, ವಿದೇಶಿ ಮಾಧ್ಯಮಗಳು ಭಾರತವನ್ನು 'ಹಿಂದುಳಿದ ರಾಷ್ಟ್ರ' ಅಥವಾ 'ವ್ಯವಸ್ಥೆಯ ವೈಫಲ್ಯ' ಎಂದು ಟೀಕಿಸಲು ಮುಗಿಬೀಳುತ್ತವೆ. ಭಾರತ ಸಂಕಷ್ಟದಲ್ಲಿದ್ದಾಗ ಅದನ್ನು ಆಡಳಿತದ ವೈಫಲ್ಯ ಎಂದು ಜರಿಯುವವರು, ಇಂದು ಯುರೋಪ್ ಕಷ್ಟದಲ್ಲಿದ್ದಾಗ ಆ ಶೀರ್ಷಿಕೆಯನ್ನ ಏಕೆ ನೀಡುತ್ತಿಲ್ಲ? ಇದೇ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದ್ದರೆ ಪಾಶ್ಚಿಮಾತ್ಯ ಮಾಧ್ಯಮಗಳು ಈ ಹೊತ್ತಿಗೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡುಮಾಡುತ್ತಿದ್ದವು" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಮುಂಬೈ ವರ್ಸೋವಾ ಬೀಚ್ ವಿಡಿಯೋ

ಮುಂಬೈನ ವರ್ಸೋವಾ ಬೀಚ್‌ನಲ್ಲಿ ಒಮ್ಮೆ ವಿದ್ಯುತ್ ಕಡಿತಗೊಂಡಾಗ ಸೆಕೆ ತಾಳಲಾರದೆ ಭಾರತೀಯರು ಮಲಗಿದ್ದ ದೃಶ್ಯಗಳನ್ನು ಇದೇ ಪಾಶ್ಚಿಮಾತ್ಯ ಮಾಧ್ಯಮಗಳು ಮೀಮ್ ಮಾಡಿ, ತಮಾಷೆ ಮಾಡಿದ್ದವು. "ಭಾರತೀಯರನ್ನು ಅಂದು ಅಪಹಾಸ್ಯ ಮಾಡಲಾಗಿತ್ತು. ಆದರೆ ಇಂದು ಯುರೋಪಿನ ಹಲವೆಡೆ ಜನರು ಸೆಕೆ ತಾಳಲಾರದೆ ಬೀಚ್ ಹಾಗೂ ಪಾರ್ಕ್‌ಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಇದು ಅವರಿಗೆ ಉಳಿದಿರುವ ಅತ್ಯಂತ ಅಗ್ಗದ ಹವಾನಿಯಂತ್ರಣ ವ್ಯವಸ್ಥೆಯಾಗಿದೆ. ಆದರೆ ಈಗ ಜಗತ್ತು ಅವರನ್ನು ನೋಡಿ ನಗುತ್ತಿಲ್ಲ, ಬದಲಾಗಿ ಮರುಗುತ್ತಿದೆ. ಪ್ರತಿಯೊಬ್ಬ ಮನುಷ್ಯನಿಗೂ ಈ ಸಹಾನುಭೂತಿ ಸಿಗಬೇಕು, ಕೇವಲ ಯುರೋಪಿಯನ್ನರಿಗಷ್ಟೇ ಅಲ್ಲ" ಎಂದು ಅವರು ತಿರುಗೇಟು ನೀಡಿದ್ದಾರೆ.

ಜಾಗತಿಕ ಹವಾಮಾನ ವಾಸ್ತವ

ಹವಾಮಾನ ವೈಪರೀತ್ಯ ಎಂಬುದು ಜಾಗತಿಕ ವಾಸ್ತವ. ಯಾವ ದೇಶವೂ ಇದರಿಂದ ಮುಕ್ತವಾಗಿಲ್ಲ. ಆದರೂ ಭಾರತ ಮಾತ್ರ ಎಲ್ಲದರಲ್ಲೂ ಪರಿಪೂರ್ಣವಾಗಿರಬೇಕು ಎಂದು ನಿರೀಕ್ಷಿಸುವುದು ತಪ್ಪು ಎಂದಿರುವ ಆಗ್ನೆಸ್ಕಾ, ಜನಸಂಖ್ಯೆಯ ಸವಾಲುಗಳನ್ನು ವಿವರಿಸಿದ್ದಾರೆ.

ಭಾರತದಲ್ಲಿನ ಬಡತನ, ಮೂಲಸೌಕರ್ಯಗಳ ಕೊರತೆಗಳ ಬಗ್ಗೆ ನನಗೂ ಅರಿವಿದೆ. ಆದರೆ, ಕೇವಲ ಇಬ್ಬರು ಸದಸ್ಯರಿರುವ ಸಣ್ಣ ಕುಟುಂಬವನ್ನು ನಿಭಾಯಿಸುವುದು ಮತ್ತು ನೂರಾರು ಜನರಿರುವ ದೊಡ್ಡ ಮನೆಯನ್ನು ಮುನ್ನಡೆಸುವುದು ಎರಡೂ ಒಂದೇ ಅಲ್ಲ. ಬರೋಬ್ಬರಿ 1.4 ಬಿಲಿಯನ್ (140 ಕೋಟಿ) ಜನಸಂಖ್ಯೆ ಇರುವ ಭಾರತದ ಸವಾಲುಗಳು ಸಣ್ಣ ಯುರೋಪಿಯನ್ ರಾಷ್ಟ್ರಗಳಿಗಿಂತ ತೀರಾ ಭಿನ್ನವಾಗಿರುತ್ತವೆ.

ಹೀಗಿದ್ದರೂ, ಕಳೆದ ಒಂದು ದಶಕದಲ್ಲಿ ಭಾರತ ವಿಶ್ವದ ಅತಿದೊಡ್ಡ ಮೆಟ್ರೋ ಜಾಲ, ಬೃಹತ್ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಕೈಗೆಟುಕುವ ದರದ ಸಾರ್ವಜನಿಕ ಮೂಲಸೌಕರ್ಯಗಳನ್ನು ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸಿದೆ. ತಪ್ಪುಗಳಿದ್ದಾಗ ಟೀಕಿಸಬೇಕಾದ ಕಡೆ ಟೀಕಿಸಿ, ಆದರೆ ಭಾರತದ ಸಾಧನೆಗಳನ್ನು ಅದೇ ಹೆಮ್ಮೆಯಿಂದ ಹಾಗೂ ವಿಶ್ವಾಸದಿಂದ ಸಂಭ್ರಮಿಸಿ. ನಮಗೆ ನಮ್ಮ ದೇಶದ ಮೇಲೆ ಗೌರವವಿಲ್ಲದಿದ್ದರೆ ಬೇರೆ ಯಾರೂ ನಮ್ಮನ್ನು ಗೌರವಿಸುವುದಿಲ್ಲ ಎಂದು ಈ ಪೋಲಿಷ್ ಮಹಿಳೆ ಜಗತ್ತಿಗೆ ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+