ದಕ್ಷಿಣ ಕನ್ನಡದಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯ: ಕಾಂಗ್ರೆಸ್ ಸರ್ಕಾರ ಹೊಣೆ ಎಂದ ಶಾಸಕರು
ಮಂಗಳೂರು, ಏಪ್ರಿಲ್ 09: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯವಾಗಿರುವುದು ಆತಂಕಕಾರಿ ಸಂಗತಿ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮೃದು ಧೋರಣೆಯಿಂದಲೇ ಅವರೆಲ್ಲಾ ಬಹಿರಂಗವಾಗಿ ಓಡಾಡಲು ಪ್ರಾರಂಭ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ರಾಜ್ಯ ಸರ್ಕಾರ ವಿರುದ್ಧ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದಾಗ, ಆ ಎಲ್ಲಾ ನಕ್ಸಲ್ ಚಟುವಟಿಯನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿತ್ತು. ಉಡುಪಿ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಭಾಗದಲ್ಲಿದ್ದ ನಕ್ಸಲ್ ಚಟುವಟಿಕೆಗಳು ಸಂಪೂರ್ಣವಾಗಿ ಮಾಯವಾಗಿತ್ತು. ಆದರೆ ಇವತ್ತಿನ ಸರ್ಕಾರದ ಧೋರಣೆಯ ಕಾರಣಕ್ಕೆ ಮಂಗಳೂರಿನಲ್ಲಿ ಮತ್ತೆ ನಕ್ಸಲ್ ಓಡಾಟದ ವರದಿಗಳನ್ನು ನಾವು ನೋಡುತ್ತಿದ್ದೆವು ಎಂದರು.

ಇದು ಸಮಾಜಕ್ಕೆ ದೊಡ್ಡ ಅಪಾಯ. ಸರ್ಕಾರ ಈ ಬಗ್ಗೆ ತಕ್ಷಣ ಗಮನ ಹರಿಸಿ, ಗೃಹ ಇಲಾಖೆ ಬಹಳ ದೊಡ್ಡ ಮಟ್ಟ ಸಭೆಯನ್ನು ಕೂಡಲೇ ಆಯೋಜನೆ ಮಾಡಬೇಕು. ಈ ನಕ್ಸಲ್ ಚಟುವಟಿಯನ್ನು ಹತ್ತಿಕ್ಕುವ ಎಲ್ಲಾ ಸರ್ವ ಪ್ರಯತ್ನವನ್ನು ಮಾಡಬೇಕು ಎಂದು ಆಗ್ರಹಿಸಿದರು.
ಸಾಮಾನ್ಯವಾಗಿ ನಕ್ಸಲರನ್ನು ಒಂದು ಚುನಾವಣೆ ಒಂದು ಘಟನೆಗೆ ಸೀಮಿತ ಮಾಡಬಾರದು. ಇದು ಸಮಾಜಕ್ಕೆ ಅಂಟಿರುವ ದೊಡ್ಡ ಕಳಂಕ. ಇದನ್ನು ಬುಡ ಸಮೇತ ಕಿತ್ತು ಹಾಕಬೇಕು. ಈಗ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಕಂಡು ಬರುತ್ತಿದೆ. ಈ ನಕ್ಸಲ್ ಚಟುವಟಿಕೆ ಬೇರೆ ಬೇರೆ ರೂಪದಲ್ಲಿ ನಡೆಯುತ್ತದೆ. ಆರಂಭದಲ್ಲಿ ಹಣ ವಸೂಲಿಗಿಳಿಯುತ್ತಾರೆ. ಹಫ್ತಾ ವಸೂಲಿಗಿಳಿಯುತ್ತಾರೆ. ಯಾರು ಅವರ ಮಾತನ್ನು ಒಪ್ಪದವರ ಮೇಲೆ ಹಲ್ಲೆ ಮಾಡುತ್ತಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.












Click it and Unblock the Notifications