Ramzan 2024:ದಕ್ಷಿಣ ಕನ್ನಡದಲ್ಲಿ ಇಂದೇ ಸರ್ಕಾರಿ ರಜೆ; ಪರೀಕ್ಷೆ ಬರೆಯೋ ವಿದ್ಯಾರ್ಥಿಗಳೇ ತಪ್ಪದೇ ಗಮನಿಸಿ!
ಮಂಗಳೂರು, ಏಪ್ರಿಲ್ 10: ಈದ್ ಉಲ್ ಫಿತರ್ ಅಥವಾ ರಂಜಾನ್ ಹಿನ್ನೆಲೆಯಲ್ಲಿ ಇಂದು ಏಪ್ರಿಲ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸಲಾಗಿದೆ.
ನಿಗದಿತ ಪರೀಕ್ಷೆಗಳು ಬಿಟ್ಟು, ಉಳಿದಂತೆ ಇತರ ಸರಕಾರಿ ಕಚೇರಿಗಳು ಮುಚ್ಚಿರುತ್ತವೆ. ಏಪ್ರಿಲ್ 11ರಂದು ಕರ್ತವ್ಯದ ದಿನವಾಗಿರುತ್ತದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರ ಮನವಿಯಂತೆ ಸರಕಾರದ ಅಧೀನ ಕಾರ್ಯದರ್ಶಿ ವಿಜಯ ಕುಮಾರ್ ಎಚ್.ಬಿ. ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯಿಸುವಂತೆ ಖುತುಬ್-ಎ-ರಂಜಾನ್ ಹಬ್ಬದ ರಜೆಯನ್ನು ಜಿಲ್ಲಾಧಿಕಾರಿಗಳು ಸ್ಥಳೀಯ ಪರಿಸ್ಥಿತಿಗಳಿಗನುಸಾರವಾಗಿ ದಿನಾಂಕ: 11.04.2024ರ ಬದಲಿಗೆ ದಿನಾಂಕ: 10.04.2024ರಂದು ಸಾರ್ವತ್ರಿಕ ರಜೆ ಘೋಷಿಸಲು ತಮ್ಮ ಹಂತದಲ್ಲಿಯೇ ನಿಯಮಾನುಸಾರ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ವಿಜಯ ಕುಮಾರ್ ಎಚ್.ಬಿ ತಿಳಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಖುತುಬ್-ಎ-ರಂಜಾನ್ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 09-04-2024 ರಂದು ಚಂದ್ರ ದರ್ಶನವಾಗಿರುವುದರಿಂದ ದಿನಾಂಕ: 11.04.2024 ರ ಬದಲಾಗಿ ದಿನಾಂಕ: 10.04.2024 ರ ಬುಧವಾರರಂದು ರಜೆ ಘೋಷಿಸಲು ಇರುವ ಸಾರ್ವಜನಿಕ ಬೇಡಿಕೆಯ ಹಿನ್ನಲೆಯಲ್ಲಿ 2024 ನೇ ಸಾಲಿನ ಖುತುಬ್-ಎ-ರಂಜಾನ್ ಹಬ್ಬದ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲಾದ್ಯಂತ ದಿನಾಂಕ: 11.04.2024 ರ ಗುರುವಾರದಂದು ರದ್ದುಗೊಳಿಸಲಾಗಿದೆ. ಬದಲಿಗೆ ದಿನಾಂಕ: 10.04.2024 ರ ಬುಧವಾರ ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ.
ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಗಮನಿಸಬೇಕಾದ ವಿಷಯವೆಂದರೆ 10.04.2024 ರಂದು ಪೂರ್ವ ನಿಯೋಜಿತಗೊಂಡಿರುವ ಶಾಲಾ ಕಾಲೇಜುಗಳ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ. ಹಾಗೂ ದಿನಾಂಕ: 11.04.2024 ರ ಗುರುವಾರ ರಂದು ಕರ್ತವ್ಯದ ದಿನವೆಂದು ಪರಿಗಣಿಸಲು ಜಿಲ್ಲಾಡಳಿತ ಸೂಚಿಸಿದೆ.












Click it and Unblock the Notifications