ಪ್ರಮೋದ್ ಪರ ಪ್ರತಿಭಟನೆ, ರಾಜಕೀಯ ಒತ್ತಡಕ್ಕೆ ಮಣಿದ ಸರ್ಕಾರ?

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಮಾರ್ಚ್ 07 : ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ವರ್ಗಾವಣೆ ಪ್ರಕರಣ ಪುನಃ ವಿವಾದ ಹುಟ್ಟು ಹಾಕಿದೆ. ಪ್ರಮೋದ್ ಕುಮಾರ್ ವರ್ಗಾವಣೆ ಖಂಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ 8 ಮಂದಿ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಉಳಾಯಿಬೆಟ್ಟು ಕೋಮು ಗಲಭೆಯಲ್ಲಿ ತಲೆ ಮರೆಸಿಕೊಂಡು ತಿರುಗುತಿದ್ದ ಆರೋಪಿ ಅಬೂಬಕ್ಕರ್ ಸಿದ್ದಿಕ್ ಎಂಬಾತನನ್ನು ಪ್ರಮೋದ್ ಕುಮಾರ್ ಬಂಧಿಸಿದ್ದರು. ಆತನನ್ನು ಬಿಡುವಂತೆ ರಾಜಕೀಯ ಒತ್ತಡ ಬಂದಿದ್ದರೂ ಕಿವಿಗೊಡದೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. [ಅತ್ಯಾಚಾರ ಆರೋಪಿ ಅಬೂಬಕರ್ ನನ್ನು ಬಂಧಿಸಿದ್ದು ತಪ್ಪಾ ಸಚಿವರೇ?]

Pramod Kumar

ಆದರೆ, ರಾಜಕೀಯ ಒತ್ತಡ ಹೆಚ್ಚಿದಾಗ ಅಂದಿನ ಪೊಲೀಸ್ ಆಯುಕ್ತ ಮುರುಗನ್ ಅವರು ಪ್ರಮೋದ್ ಅವರನ್ನು ರಜೆ ಮೇಲೆ ಹೋಗುವಂತೆ ಸೂಚಿಸಿದ್ದರು. ಈ ಕ್ರಮದ ವಿರುದ್ಧ ಠಾಣೆಯ ಸಿಬ್ಬಂದಿ 2015ರ ಡಿಸೆಂಬರ್ 8 ರಂದು ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. [ಎಂ.ಚಂದ್ರಶೇಖರ್ ಮಂಗಳೂರು ನೂತನ ಪೊಲೀಸ್ ಆಯುಕ್ತ]

ಈ ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಕೈ ಜೋಡಿಸಿದ್ದು, ಹೆದ್ದಾರಿ ಬಂದ್ ಮಾಡುವ ಹಂತಕ್ಕೆ ಪ್ರತಿಭಟನೆ ಮುಂದುವರೆದಿತ್ತು. ಆಗ ಆಯುಕ್ತ ಮುರುಗನ್ ಸ್ಥಳಕ್ಕೆ ಬಂದು ಪ್ರಮೋದ್ ಅವರನ್ನು ಠಾಣೆಗೆ ಕರೆಸಿ, ವರ್ಗಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

ಪ್ರತಿಭಟನೆ ಮಾಡಿದವರಿಗೆ ನೋಟಿಸ್ : ಸಿಬ್ಬಂದಿ ಪ್ರತಿಭಟನೆ ನಡೆಸಿದ ಕೆಲವು ದಿನಗಳ ನಂತರ ಶಿಸ್ತು ಕ್ರಮದ ಮಾತುಗಳು ಕೇಳಿ ಬಂದಿದ್ದವು. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 4 ಮಂದಿ ಹೋಂಗಾರ್ಡ್ ಗಳನ್ನು ಪ್ರತಿಭಟನೆಯಲ್ಲಿ ಭಾಗಿಯಾದ ಕಾರಣಕ್ಕೆ ಮಾತ್ರ ಇಲಾಖೆಗೆ ವಾಪಸ್ ಕಳಿಸಲಾಗಿತ್ತು.[ಪೊಲೀಸ್ ಇಲಾಖೆಯಲ್ಲಿ ಬಡ್ತಿ, ವರ್ಗಾವಣೆ : ಇಲ್ಲಿದೆ ಪಟ್ಟಿ]

ಇಲಾಖೆ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಇಬ್ಬರು ಸಮರ್ಪಕ ವಿವರಣೆ ಸಲ್ಲಿಸಿದ್ದರು. ಅವರನ್ನು ಇಲಾಖೆಯಲ್ಲಿ ಮುಂದುವರಿಸಲಾಗಿದೆ. ಇನ್ನಿಬ್ಬರು ಮಾತ್ರ ಇನ್ನೂ ಉತ್ತರ ನೀಡಿಲ್ಲ ಎಂದು ಗೃಹ ರಕ್ಷಕ ದಳದ ಮೂಲಗಳು ತಿಳಿಸಿವೆ. ಈ ಇಬ್ಬರು ಈಗ ಬೇರೆ ಕಡೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದಾರೆ.

ಪ್ರಮೋದ್ ಕುಮಾರ್ ವರ್ಗಾವಣೆ : ಠಾಣೆಯಲ್ಲಿ ಒಒಡಿ ಕರ್ತವ್ಯದಲ್ಲಿದ್ದ ಕಾವೂರು ಠಾಣೆಯ ಎಸ್ಎಸ್ಐ ಕುಶಾಲಪ್ಪ, ಉರ್ವ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಂಜನ್ ಹಾಗೂ ಕಾನ್ಸ್‌ಟೇಬಲ್ ಚಿದಾನಂದ ಅವರನ್ನು ಪೊಲೀಸ್ ಆಯುಕ್ತ ಮುರುಗನ್ ಅವರು ಹಳೇ ಠಾಣೆಗೆ ಹಿಂದಿರುಗುವಂತೆ ಆದೇಶಿಸಿದ್ದರು. ನಂತರ ಪ್ರಮೋದ್ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.

8 ಜನರ ವಿರುದ್ಧ ಶಿಸ್ತು ಕ್ರಮ : ಸದ್ಯ, ಪ್ರಮೋದ್ ಕುಮಾರ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ 8 ಮಂದಿ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಘಟನೆ ಬಗ್ಗೆ ವರದಿಯನ್ನು ಕಳುಹಿಸಲಾಗಿದೆ.

ತರಾತುರಿ ಯಾಕೆ? : ಘಟನೆ ಕುರಿತಂತೆ ಅಂದು ಪೊಲೀಸ್ ಆಯುಕ್ತರಾಗಿದ್ದ ಮುರುಗನ್ ಅವರು ಪ್ರಾಥಮಿಕ ವರದಿಯೊಂದನ್ನು ತಯಾರಿಸಿದ್ದರು. ಅದರಲ್ಲಿ ಠಾಣೆಯ 16 ಮಂದಿ ಪೊಲೀಸರ ಹೆಸರು ಪಟ್ಟಿ ಮಾಡಲಾಗಿತ್ತು. ಆದರೆ, ಬಳಿಕ ಪ್ರಕ್ರಿಯೆಗಳು ನಡೆದಿರಲಿಲ್ಲ.

ಈಗ ಸರ್ಕಾರವೇ ವರದಿ ಕೇಳಿದೆ. ಇದರ ಹಿಂದೆ ಆಡಳಿತ ಪಕ್ಷದ ಶಾಸಕರ ಹಾಗೂ ಸ್ಥಳೀಯ ಕೆಲವು ನಾಯಕರ ಕೈ ವಾಡವಿದೆ ಎನ್ನುವುದು ಪೊಲೀಸ್ ವಲಯದಲ್ಲಿನ ಮಾತು. ಅಂದಹಾಗೆ ಎಂ.ಚಂದ್ರಶೇಖರ್ ಅವರು ಈಗಿನ ಮಂಗಳೂರು ನಗರ ಪೊಲೀಸ್ ಆಯುಕ್ತರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru rural station officials on December 8, 2015 protest against their own department over the alleged action taken against the Pramod Kumar circle inspector of the same police station. Now Mangaluru city police commissioner recommended for disciplinary action against 8 police officers.
Please Wait while comments are loading...