ಕೊಳ್ಳೇಗಾಲ ಶಾಸಕ ಮಹೇಶ್ ಬಿಜೆಪಿ ಸೇರ್ಪಡೆ ಹಿಂದಿದೆ ಬಿ.ವೈ. ವಿಜಯೇಂದ್ರ ರಾಜಕೀಯ ಭವಿಷ್ಯ?
ಬೆಂಗಳೂರು, ಆ. 06: ಕೊಳ್ಳೇಗಾಲ ಶಾಸಕ ಎನ್. ಮಹೇಶ್ ನಿರೀಕ್ಷೆಯಂತೆ ಬಿಜೆಪಿ ಸೇರಿದ್ದಾರೆ. ಬಹುಜನ ಸಮಾಜವಾದಿ ಪಾರ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮಹೇಶ್, ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಆ ಬಳಿದ ನಡೆದ ಬೆಳವಣಿಗೆಗಳಲ್ಲಿ ಸಮ್ಮಿಶ್ರ ಸರ್ಕಾರದ ಪತನ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ತಮ್ಮ ತಟಸ್ಥ ನಿಲುವಿನ ಮೂಲಕ ಬಿಜೆಪಿಗೆ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ಬಿಎಸ್‌ಪಿಯಿಂದ ಉಚ್ಛಾಟಿಸಲಾಗಿತ್ತು. ಆ ಬಳಿಕ ಮಹೇಶ್ ಬಿಜೆಪಿ ಸೇರುತ್ತಾರೆ ಎಂಬ ಮಾಹಿತಿಯಿತ್ತು. ಅದರಂತೆ ಈಗ ಬಿಜೆಪಿ ಸೇರಿದ್ದಾರೆ. ಆದರೆ ಒಂದಕ್ಕೊಂದು ವಿರುದ್ಧ ಸಿದ್ಧಾಂತದ ಪಕ್ಷಗಳಲ್ಲಿ ಕೆಲಸ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಆ ಸವಾಲನ್ನು ಶಾಸಕ ಎನ್. ಮಹೇಶ್ ಆಯ್ದುಕೊಂಡಿದ್ದಾರೆ.
ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ತಾವು ಬಿಜೆಪಿ ಸೇರುತ್ತಿರುವುದು ಯಾಕೆ ಎಂಬುದನ್ನು ಬಹಿರಂಗವಾಗಿಯೆ ಶಾಸಕ ಎನ್. ಮಹೇಶ್ ಹೇಳಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಆ ಬಳಿಕ ಮಾತನಾಡಿದ ಶಾಸಕ ಎನ್. ಮಹೇಶ್, ನಾನು ಬಿಜೆಪಿ ಸೇರುತ್ತಿರುವುದರ ಹಿಂದಿನ ಪ್ರಮುಖ ಕಾರಣ ಅಭಿವೃದ್ಧಿ. ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸೇರುತ್ತಿದ್ದೇನೆ. ಸ್ವತಃ ಏಳು ಬೀಳುಗಳನ್ನು ಕಂಡಿದ್ದ ಬಿಜೆಪಿ, ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. ಹೀಗಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದಿದ್ದಾರೆ.
ಆದರೆ ಎನ್. ಮಹೇಶ್ ಅವರು ಬಿಜೆಪಿ ಸೇರುತ್ತಿರುವುದರ ಉದ್ದೇಶವೇ ಬೇರೆಯಿದೆ. ಜೊತೆಗೆ ಅವರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿರುವುದರ ಹಿಂದೆಯೂ ಬಹಳಷ್ಟು ಕಾರಣಗಳಿವೆ. ಅಷ್ಟಕ್ಕೂ ತಾವು ವಿರೋಧಿಸಿಕೊಂಡು ಬಂದಿದ್ದ ಬಿಜೆಪಿಯನ್ನು ಶಾಸಕ ಮಹೇಶ್ ಸೇರುತ್ತಿರುವುದರ ಹಿಂದಿನ ಅಸಲಿ ಕಾರಣ ಬೇರೆಯೆ ಇದೆ. ಮಹೇಶ್ ಸೇರ್ಪಡೆ ಹಿಂದೆ ವಿಜಯೇಂದ್ರ ರಾಜಕೀಯ ಭವಿಷ್ಯವೂ ಅಡಗಿದೆ ಎನ್ನಲಾಗುತ್ತಿದೆ. ಜೊತೆಗೆ ಶೀಘ್ರದಲ್ಲಿಯೇ ಎನ್. ಮಹೇಶ್ ಮಂತ್ರಿಯಾಗುತ್ತಾರಾ? ಮುಂದಿದೆ ಮಾಹಿತಿ!

ಬಿಜೆಪಿಗೆ ಸೇರಿಸಿಕೊಳ್ಳಲು ಮೊದಲ ಕಾರಣ!
ಸೈದ್ಧಾಂತಿಕವಾಗಿ ತಾವು ವಿರೋಧಿಸಿಕೊಂಡು ಬಂದಿದ್ದ ಬಿಜೆಪಿಗೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಸೇರಿದ್ದಾರೆ. ಅವರ ಬಿಜೆಪಿ ಸೇರ್ಪಡೆ ಅಚ್ಚರಿಗೆ ಕಾರಣವಾಗಿದ್ದರೂ, ಅದರ ಹಿಂದೆ ಅನೇಕ ಕಾರಣಗಳಿವೆ. ಎನ್. ಮಹೇಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿಗೆ ಇರುವ ಮೊದಲ ಕಾರಣ ಅವರ ಸಮುದಾಯ. ಎನ್. ಮಹೇಶ್ ಪರಿಶಿಷ್ಟ ಬಲಗೈ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಪ್ರತಿನಿಧ್ಯ ಕೊಡುವ ಕೊಡುವ ನಿಟ್ಟಿನಲ್ಲಿ ಮಹೇಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಬಿಜೆಪಿಯಲ್ಲಿ ದಲಿತ ಎಡಗೈ ಸುದಾಯಕ್ಕೆ ಮಾತ್ರ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿದೆ ಎಂಬ ಮಾತಿದೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ಆನೆಕಲ್ ನಾರಾಯಣಸ್ವಾಮಿ ಹಾಗೂ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗಿರುವ ಗೋವಿಂದ ಕಾರಜೋಳ ಇಬ್ಬರೂ ದಲಿತ ಎಡಗೈ ಸಮುದಾಯಕ್ಕೆ ಸೇರಿದ್ದಾರೆ.

ಮಹೇಶ್‌ಗಾಗಿ ಮಂತ್ರಿಸ್ಥಾನ ವಂಚಿತರಾದ ದಲಿತ ಶಾಸಕರು?
ಹೀಗಾಗಿ ಸಂಪುಟದಲ್ಲಿ ದಲಿತ ಬಲಗೈ ಸಮುದಾಯಕ್ಕೆೆ ಸೇರಿದವರಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಇದೆ. ಬಿಜೆಪಿ ಶಾಸಕರಾದ ನೆಹರೂ ಓಲೇಕಾರ್, ಎಂ.ಪಿ. ಕುಮಾರಸ್ವಾಮಿ ಮತ್ತು ಹರ್ಷವರ್ಧನ ಇವರೆಲ್ಲರೂ ದಲಿತ ಬಲಗೈ ಸಮುದಾಯಕ್ಕೆೆ ಸೇರಿದವರಾಗಿದ್ದಾರೆ. ಇದೇ ಜಾತಿ ಲೆಕ್ಕಾಚಾರದಲ್ಲಿ ಮೂವರೂ ಸಂಪುಟ ಸೇರಲು ಪ್ರಯತ್ನ ನಡೆಸಿದ್ದರು. ಆದರೆ ಶಾಸಕ ಎನ್. ಮಹೇಶ್ ಕಾರಣದಿಂದ ಅವರು ಮಂತ್ರಿಸ್ಥಾನದ ಅವಕಾಶ ವಂಚಿತರಾಗಿದ್ದಾರೆ ಎನ್ನಲಾಗಿದೆ.
ಕೊಳ್ಳೇಗಾಲ ಶಾಸಕ ಎನ್. ಮಹೇಶ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮೊದಲೇ ನಿಶ್ಚಯ ಮಾಡಲಾಗಿತ್ತು. ಇದೇ ಲೆಕ್ಕಾಚಾರದ ಹಿನ್ನೆೆಲೆಯಲ್ಲಿಯೇ ಕಳೆದ ಬುಧವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಮಂತ್ರಿಸ್ಥಾನ ಕೊಡುವುದನ್ನು ಕೈ ಬಿಡಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ಪುಷ್ಟಿಕೊಡುವಂತೆ ಬಿಜೆಪಿ ಸೇರ್ಪಡೆ ಕಾರ್ಯರಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರೂ ಭರವಸೆ ಕೊಟ್ಟಿದ್ದಾರೆ. ಯಡಿಯೂರಪ್ಪ ಹೇಳಿರುವ ಮಾತಿನಿಂದ ಎನ್. ಮಹೇಶ್ ಅವರು ಬೊಮ್ಮಾಯಿ ಸಂಪುಟ ಸೇರುವುದು ಪಕ್ಕಾಗಿದೆ. ಯಡಿಯೂರಪ್ಪ ಹೇಳಿದ್ದೇನು?

ಮಹೇಶ್‌ಗೆ ಮಂತ್ರಿ ಪದವಿ ಸುಳಿವು ಕೊಟ್ಟ ಯಡಿಯೂರಪ್ಪ!
ನಾಡಿನ ಉದ್ದಗಲದಲ್ಲಿಯೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರಿದ್ದಾರೆ. ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆಯಿಂದ ಎಲ್ಲರೂ ಪಕ್ಷದತ್ತ ವಾಲುತ್ತಾರೆ. ಪರಿಶಿಷ್ಠರನ್ನು ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು. ನಮ್ಮ ಪಕ್ಷ ದಲಿತರ ಹಿಂದೆ ಇದೆ ಎಂಬ ಸಂದೇಶ ಹೋಗಬೇಕು. ಶಾಸಕ ಎನ್. ಮಹೇಶ್ ಎಲ್ಲರ ಪ್ರೀತಿ ಗಳಿಸಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ಮತ್ತೊಂದು ಮಹತ್ವ ಅಂಶ ಉಲ್ಲೇಖಿಸಿದ್ದಾರೆ.
ದಲಿತ ನಾಯಕ ಎನ್. ಮಹೇಶ್ ಬಿಜೆಪಿ ಸೇರಿದ್ದಾರೆಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತಿದೆ. ಈ ವಿಚಾರವನ್ನು ಬೊಮ್ಮಾಯಿ ಗಮನದಲ್ಲಿ ಇಟ್ಟುಕೊಳ್ಳುತ್ತಾರೆ. ಮಹೇಶ್ ಸೇರ್ಪಡೆಯಿಂದ ನಮಗೆ ಆನೆ ಬಲ ಬಂದಂತಾಗಿದೆ. ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಎನ್. ಮಹೇಶ್‌ಗೆ ಸಚಿವ ಸ್ಥಾನ ಕೊಡುವ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಜಾತಿಯೊಂದಿಗೆ ಪ್ರಾದೇಶಿಕ ಪ್ರಾತಿನಿಧ್ಯವೂ ಕೂಡ ಮಹೇಶ್ ಅವರಿಗೆ ಮಂತ್ರಿಸ್ಥಾನ ಕೊಡಲು ಕಾರಣ ಎನ್ನಲಾಗುತ್ತಿದೆ. ಅದರೊಂದಿಗೆ ರಾಷ್ಟ್ರಮಟ್ಟದಲ್ಲಿ ಒಂದು ಸಂದೇಶ ರವಾನೆ ಮಾಡುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.

ಮಹೇಶ್ ಸೇರ್ಪಡೆ ಹಿಂದೆ ಯಡಿಯೂರಪ್ಪ ಲೆಕ್ಕಾಚಾರ?
ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಚಾಮರಾಜನಗರ ಹಾಗೂ ಮೈಸೂರು ಭಾಗದಲ್ಲಿ ಸಂಪುಟದಲ್ಲಿ ಯಾರಿಗೂ ಸ್ಥಾನ ನೀಡಿಲ್ಲ. ಹೀಗಾಗಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರಿಗೆ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಪ್ರಾದೇಶಿಕವಾಗಿ ಹಾಗೂ ದಲಿತ ಬಲಗೈ ಸಮುದಾಯದ ಲೆಕ್ಕಾಚಾರದಲ್ಲಿಯೂ ನ್ಯಾಯ ಒದಗಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರಲ್ಲಿದೆ. ಹೀಗಾಗಿ ಮಹೇಶ್ ಅವರಿಗೆ ಮಂತ್ರಿಸ್ಥಾನದ ಭರವಸೆ ಕೊಟ್ಟು ಯಡಿಯೂರಪ್ಪ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕೊಳ್ಳೇಗಾಲ ಶಾಸಕ ಎನ್. ಮಹೇಶ್‌ರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ತನ್ನದೇ ಲೆಕ್ಕಾಚಾರ ಇಟ್ಟುಕೊಟಕೊಂಡಿದೆ. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರೂ ತಮ್ಮದೇ ಲೆಕ್ಕಾಚಾರ ಹೊಂದಿದ್ದಾರೆ. ಅದಕ್ಕೆ ಪುತ್ರ ವಿಜಯೇಂದ್ರ ಅವರು ರಾಜಕೀಯ ಭವಿಷ್ಯವೂ ಒಂದು ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ವಿಭಿನ್ನ ಲೆಕ್ಕಾಚಾರಗಳೇನು? ಮುಂದಿವೆ.

ಮಹೇಶ್ ಸೇರ್ಪಡೆಯಿಂದ ವಿಜಯೇಂದ್ರಗೆ ಸಹಾಯ?
ಒಬ್ಬ ಶಾಸಕ ಬಿಜೆಪಿ ಸೇರುವುದರ ಹಿಂದೆ ಎರಡು ವಿಭಿನ್ನ ಲೆಕ್ಕಾಚಾರಗಳನ್ನು ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ತಯಾರಿ ನಡೆಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಇಚ್ಚೆಯನ್ನು ವಿಜಯೇಂದ್ರ ಗುರುವಾರ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ, ಅದರಲ್ಲೂ ವರುಣಾ ಕ್ಷೇತ್ರದಲ್ಲಿನ ದಲಿತ ಮತಗಳನ್ನು ಸೆಳೆಯುವುದು ಮಾಜಿ ಸಿಎಂ ಯಡಿಯೂರಪ್ಪ ಲೆಕ್ಕಾಚಾರ. ಅದು ನೇರವಾಗಿ ಪುತ್ರ ಬಿ.ವೈ. ವಿಜಯೇಂದ್ರಗೆ ಸಹಾಯವಾಗುತ್ತದೆ ಎಂಬುದು ಯಡಿಯೂರಪ್ಪ ದೂರದೃಷ್ಟಿ ಎನ್ನಲಾಗುತ್ತಿದೆ. ಹೀಗಾಗಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರಿಗೆ ಮಂತ್ರಿಸ್ಥಾನದ ಭರವಸೆ ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಇನ್ನು ಹೈಕಮಾಂಡ್ ಲೆಕ್ಕಾಚಾರ ಬೇರೆಯದ್ದಿದೆ.

ಸೇರ್ಪಡೆ ಹಿಂದೆ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು?
ಮೂಲತಃ ಬಿಎಸ್‌ಪಿಗೆ ಸೇರಿದ್ದ ಶಾಸಕ ಎನ್. ಮಹೇಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಎಸ್‌ಪಿ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಬಿಜೆಪಿ ಸ್ಪಷ್ಟ ಸಂದೇಶ ರವಾನೆ ಮಾಡುತ್ತಿದೆ. ಬಿಜೆಪಿ ಪರಿಶಿಷ್ಟ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡುತ್ತದೆ. ವಿರೋಧ ಪಕ್ಷಗಳು ಆರೋಪ ಮಾಡುವಂತೆ ಬಿಜೆಪಿ ಮೀಸಲಾತಿ ವಿರೋಧಿ ಅಥವಾ ಪರಿಶಿಷ್ಟ ಸಮುದಾಯದ ವಿರೋಧಿ ಅಲ್ಲ. ನಿಜವಾಗಿಯೂ ಪರಿಶಿಷ್ಟ ಪರ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಪಕ್ಷಗಳಲ್ಲಿಯೇ ಪರಿಶಿಷ್ಟರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಸಂದೇಶ ಕೊಡಲು ಹೈಕಮಾಂಡ್ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನಲಾಗಿದೆ.
ಹೀಗಾಗಿ ಎನ್. ಮಹೇಶ್ ಬಿಜೆಪಿ ಸೇರ್ಪಡೆ ಹಿಂದೆ ಯಡಿಯೂರಪ್ಪ ಲೆಕ್ಕಾಚಾರ ಹಾಗೂ ಹೈಕಮಾಂಡ್ ಗುರಿ ಎರಡೂ ಬೇರೆ ಬೇರೆ ಎನ್ನಲಾಗುತ್ತಿದೆ. ಆದರೆ ಮಹೇಶ್ ಸೇರ್ಪಡೆಯಿಂದ ಬಿಜೆಪಿಗೆ ಸಮಸ್ಯೆಯೂ ಎದುರಾಗಿದೆ. ಅದು ಮುಂದಿದೆ.
Recommended Video

ಪ್ರಭಾವ ಹೊಂದಿದ್ದಾರೆ ಎಂದ ಮಾತ್ರಕ್ಕೆ..!
ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ಪ್ರಭಾವ ಹೊಂದಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಬಿಜೆಪಿಗೆ ಕರೆತಂದು ಮಂತ್ರಿ ಮಾಡುವುದು ಎಷ್ಟು ಸರಿ ಎಂದು ಮೂಲ ಬಿಜೆಪಿ ಕಾರ್ಯಕರ್ತರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಾಸಕ ಎನ್. ಮಹೇಶ್ ಸೇರ್ಪಡೆಗೆ ಚಾಮರಾಜನಗರ ಹಾಗೂ ಮೈಸೂರು ಭಾಗದ ಸ್ಥಳೀಯ ದಲಿತ ನಾಯಕರು ಹಾಗೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾಹಿತಿಯಿದೆ. ಆ ಭಾಗದಲ್ಲಿ ದಲಿತ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಿರುವುದರಿಂದ ಅವರನ್ನು ಪಕ್ಷದ ಕಡೆಗೆ ಸೆಳೆಯಲು ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಎನ್. ಮಹೇಶ್‌ರನ್ನು ಸೇರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ದಶಕಗಳ ಕಾಲ ಪಕ್ಷಕ್ಕಾಗಿ ದುಡುದವರನ್ನು ಬಿಟ್ಟು ಹೀಗೆ ಏಕಾಏಕಿ ಕರೆತಂದು ಮಂತ್ರಿ ಮಾಡುವುದಕ್ಕೆ ಮೂಲ ಬಿಜೆಪಿ ಕಾರ್ಯತರ್ಕರ ಅಸಮಾಧಾನ ಇದ್ದೆ ಇದೆ. ಹೀಗಾಗಿ ಎನ್. ಮಹೇಶ್ ಸೇರ್ಪಡೆಯಿಂದ ಉಂಟಾಗುವ ಅಸಮಾಧಾನವನ್ನು ಬಿಜೆಪಿ ಹೇಗೆ ತಣಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications